ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭತ್ತ, ಅಡಿಕೆ ಕೃಷಿಗೆ ಸೈಕ್ಲೋನ್ ಎಫೆಕ್ಟ್: ಕರಾವಳಿಯಲ್ಲಿ ಕೋಟ್ಯಂತರ ರೂ. ನಷ್ಟ!

|
Google Oneindia Kannada News

ಮಂಗಳೂರು, ಅಕ್ಟೋಬರ್ 18: ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೃಷಿಗೆ ದೊಡ್ಡ ಹೊಡೆತ ಬಿದ್ದಿದೆ. ಕರಾವಳಿಯಲ್ಲಿ ಮುಂಗಾರು ಕೃಷಿ ಮಾಡಿದ ರೈತ ಈ ಮಳೆಯಿಂದ ಕಂಗಾಲಾಗಿದ್ದಾನೆ.

ಸಾಮಾನ್ಯವಾಗಿ ಈ ಭಾಗದಲ್ಲಿ ಜೂನ್‌ ಮತ್ತು ಜುಲೈ ತಿಂಗಳ ಮೊದಲ ವಾರದಲ್ಲಿ ನಾಟಿಯಾದ ಭತ್ತ ಕೃಷಿ ಅಕ್ಟೋಬರ್ ವೇಳೆ ಕಟಾವಿಗೆ ಬರುತ್ತದೆ. ಜುಲೈ ಮಧ್ಯಭಾಗದಲ್ಲಿ ನಾಟಿಯಾದ ಭತ್ತ ಈಗ ಟಿಸಿಲೊಡೆದು ತೆನೆ ಬಾಗಲು ಆರಂಭವಾಗುತ್ತದೆ. ಈ ಸಮಯದಲ್ಲಿ ಹನಿ ಮಳೆ ಬಂದರೂ ಭತ್ತಕ್ಕೆ ಆಪತ್ತು. ಕಳೆದ ನಾಲ್ಕು ದಿನಗಳಿಂದ ಕರಾವಳಿ ಭಾಗದಲ್ಲಿ ಸೈಕ್ಲೋನ್‌ನಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದ ಕಟಾವಿಗೆ ಸಿದ್ಧವಾಗಿರುವ ಸಾವಿರಾರು ಎಕರೆ ಭತ್ತ ನೆಲ ಕಚ್ಚಿದೆ.

ಟಿಸಿಲೊಡೆದ ಭತ್ತದ ತೆನೆಗೆ ನೀರು ಬಿದ್ದು ಹಾನಿಯಾಗುತ್ತಿದ್ದು, ಕೆಲವೆಡೆ ಕಟಾವು ಆಗಿದ್ದರೂ ವಿಲೇವಾರಿ ಮಾಡಲಾಗದೆ ಗದ್ದೆ, ಅಂಗಳಗಳಲ್ಲಿ ರಾಶಿ ಬಿದ್ದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 11,747 ಹೆಕ್ಟೇರ್ ಭತ್ತ ಕೃಷಿ, ಉಡುಪಿ ಜಿಲ್ಲೆಯಲ್ಲಿ 35,726 ಹೆಕ್ಟೇರ್ ಕೃಷಿ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 12.40 ಲಕ್ಷ ಹೆಕ್ಟೇರ್‌ ಭತ್ತ ಕೃಷಿ ಮಾಡಲಾಗಿದೆ.

Mangaluru: Crores of Losses On Paddy And Arecanut Farming in Coastal Karnataka Due To Cyclone Effect

ಕರಾವಳಿಯಲ್ಲಿ ಶೇ.30ಕ್ಕೂ ಅಧಿಕ ಭತ್ತ ಗದ್ದೆಗಳು ಕಟಾವಿಗೆ ಸಿದ್ಧಗೊಂಡಿವೆ. ಸೈಕ್ಲೋನ್‌ನಿಂದ ಏಕಾಏಕಿ ಮಳೆ ಬಂದು ತೋಡು, ಹಳ್ಳ ನೀರು ತುಂಬಿ ಭತ್ತದ ಗದ್ದೆಗಳಿಗೆ ನುಗ್ಗಿವೆ. ಮಳೆ ಇದೇ ರೀತಿ ಮುಂದುವರಿದರೆ ಗದ್ದೆಯಲ್ಲೇ ಭತ್ತದ ತೆನೆ ಮೊಳಕೆ ಬರುವ ಆತಂಕ ಕೃಷಿಕರಿಗೆ ಎದುರಾಗಿದೆ.

ಉತ್ಪಾದನಾ ವೆಚ್ಚ ದುಬಾರಿ
ಎರಡು ದಶಕಗಳಿಂದ ಕರಾವಳಿ ಭಾಗದಲ್ಲಿ ಭತ್ತ ಕೃಷಿ ಅವನತಿಯತ್ತ ಸಾಗುತ್ತಿದ್ದು, ಎಷ್ಟೋ ಗದ್ದೆಗಳು ಹಡಿಲು ಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ದುಬಾರಿ, ಸರಕಾರದಿಂದ ಸರಿಯಾದ ಪ್ರೋತ್ಸಾಹ ಸಿಗದಿರುವುದು. ಇದರಿಂದ ಹೆಚ್ಚಿನವರು ಭತ್ತದ ಬೆಳೆಯಿಂದ ವಿಮುಖರಾಗಿ ವಾಣಿಜ್ಯ ಬೆಳೆಯತ್ತ ಹೋಗುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕರಾವಳಿಯಲ್ಲಿ ಉತ್ಪಾದನೆಯಾಗುವ ಕುಚ್ಚಲಕ್ಕಿ ಭತ್ತಕ್ಕೆ ಕೊರತೆಯಾಗಲಿದೆ.

ಹಡಿಲು ಭೂಮಿಯಲ್ಲಿ ಕೃಷಿ:
ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಹಡಿಲು ಭೂಮಿಯಲ್ಲಿ ಕೃಷಿ ಪ್ರಮಾಣ ಹೆಚ್ಚಾಗಿದೆ. ಆದರೆ ಈ ಬಾರಿಯ ಸೈಕ್ಲೋನ್‌ನಿಂದ ಹಡಿಲು ಭೂಮಿಯಲ್ಲಿ ಮಾಡಿದ ಕೃಷಿಗೂ ನಷ್ಟ ಉಂಟಾಗಿದ್ದು, ಇದರಿಂದ ಆಸಕ್ತಿ ಮತ್ತಷ್ಟು ಕುಂದುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ, ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಓಸ್ವಾಲ್ಡ್ ಫರ್ನಾಂಡಿಸ್.

Mangaluru: Crores of Losses On Paddy And Arecanut Farming in Coastal Karnataka Due To Cyclone Effect

ನೆರೆಗೆ ಕೊಚ್ಚಿ ಹೋದ ಅಡಕೆ
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಸಿದ್ಧಕಟ್ಟೆ, ಬಂಟ್ವಾಳ, ಧರ್ಮಸ್ಥಳ, ಮಡಂತ್ಯಾರು, ಮಂಗಳೂರು ವ್ಯಾಪ್ತಿಯಲ್ಲಿ ತೋಡು, ಹಳ್ಳಗಳು ತುಂಬಿ ಹರಿದಿವೆ. ತೋಟದಲ್ಲಿ ಬಿದ್ದ ಅಡಕೆ ನೆರೆಗೆ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈತ ಸಂಘದ ಅಧ್ಯಕ್ಷ ಓಸ್ವಾಲ್ಡ್ ಫರ್ನಾಂಡಿಸ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಮುಂಗಾರು ಆರಂಭವಾಗುವ ಜೂನ್‌- ಜುಲೈನಲ್ಲಿ ಅಡಕೆಗೆ ಕೊಳೆ ರೋಗ ಬರುತ್ತದೆ. ಆದರೆ ಈ ಬಾರಿ ಕರಾವಳಿ ತೀರದಲ್ಲಿ ಅಡಕೆಗೆ ಹಳದಿ ರೋಗ ಬಾಧೆ ಜತೆಗೆ ಕೊಳೆ ರೋಗ ಬಾಧಿಸಿದೆ. ಈಗ ಮತ್ತೆ ಮಳೆಯಾಗುತ್ತಿದ್ದು, ಮತ್ತಷ್ಟು ಕೊಳೆ ರೋಗದ ಆತಂಕ ಎದುರಾಗಿದೆ.

ಬೆಂಬಲ ಬೆಲೆ ಘೋಷಿಸಲಿ
ಕರಾವಳಿಯಲ್ಲಿ ಮುಂಗಾರು ಭತ್ತ ಕೃಷಿಯ ಕಟಾವು ಆರಂಭಗೊಂಡಿದೆ. ಇನ್ನೊಂದೆಡೆ ಚಂಡಮಾರುತದಿಂದ ಭತ್ತ ಕೃಷಿಕರು ಕಂಗಾಲಾಗಿದ್ದಾರೆ. ಕೂಡಲೇ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ಬಾಳ್ತಿಲ ಒತ್ತಾಯಿಸಿದ್ದಾರೆ.

ಬೆಂಬಲ ಬೆಲೆ ಘೋಷಣೆಯಾಗದ ಕಾರಣ ಮಧ್ಯವರ್ತಿಗಳು ಕಡಿಮೆ ದರದಲ್ಲಿ ರೈತರಿಂದ ಭತ್ತ ಖರೀದಿಸುತ್ತಿದ್ದಾರೆ. 2020-21ರಲ್ಲಿ ರಾಜ್ಯ ಸರಕಾರ ಭತ್ತಕ್ಕೆ 1,850 ರೂ. ಬೆಂಬಲ ಘೋಷಿಸಿತ್ತು. ಆದರೆ ಈ ವರ್ಷ ಇನ್ನೂ ಘೋಷಣೆ ಮಾಡದಿರುವುದರಿಂದ ಮಧ್ಯವರ್ತಿಗಳು ಕ್ವಿಂಟಾಲ್‌ಗೆ 1,500-1,600 ರೂ.ನಂತೆ ಭತ್ತ ಖರೀದಿಸುತ್ತಿದ್ದಾರೆ. ಕೇರಳದಲ್ಲಿ ಪ್ರಸ್ತುತ ವರ್ಷ ಭತ್ತದ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,748 ರೂ. ಆಗಿದ್ದು, ರಾಜ್ಯದಲ್ಲಿ ಭತ್ತಕ್ಕೆ ಸಮರ್ಪಕ ಬೆಲೆ ಸಿಗುತ್ತಿಲ್ಲ ಎಂಬ ಕೂಗು ರೈತರದ್ದಾಗಿದೆ.

English summary
Mangaluru: Crores of Losses on paddy and Arecanut farming in Coastal Karnataka due to Cyclone effect. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X