ಮಾವಿನ ಬೆಳೆಗೆ ಮಾರಕವಾದ ಶೀತ ವಾತಾವರಣ; ರೈತರಲ್ಲಿ ಚಿಂತೆ
ರಾಮನಗರ, ಫೆಬ್ರವರಿ 07; ಕರ್ನಾಟಕದಲ್ಲಿ ಅವಧಿಗೂ ಮೊದಲೇ ಮಾರುಕಟ್ಟೆ ಪ್ರವೇಶ ಮಾಡುವ ಮಾವು ಎಂಬ ಹೆಗ್ಗಳಿಕೆ ರಾಮನಗರ ಜಿಲ್ಲೆಯ ಮಾವಿನ ಹಣ್ಣಿಗಿದೆ. ಆದರೆ ಈ ಬಾರಿಯ ಶೀತ ವಾತವರಣ ಹಾಗೂ ದಟ್ಟ ಮಂಜಿನಿಂದ ಮಾವು ಇಳುವರಿ ಕುಂಠಿತವಾಗುವ ಆತಂಕ ಮೂಡಿದೆ.
ವರ್ಷಾಂತ್ಯದ ತನಕ ಸತತ ಸುರಿದ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದರೆ, ಈಗ ಇಬ್ಬನಿಯ ಪ್ರಭಾವದಿಂದ ಮರಗಳು ಮತ್ತಷ್ಟು ಶೀತಕ್ಕೆ ಸಿಲುಕಿ ಹೂ ಬಿಡುವ ಪ್ರಕ್ರಿಯೆ ಒಂದು ತಿಂಗಳು ತಡವಾಗಿರುವುದರಿಂದ ಮಾವು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.
ಈಗಾಗಲೇ ಮರದಲ್ಲಿ ಚಿಗುರೆಲೆ ಕಾಣಿಸಿಕೊಂಡು, ಹೂವಿನಿಂದ ಸಮೃದ್ಧ ಆಗಬೇಕಿತ್ತು. ಆದರೆ ಬೇಸಿಗೆ ಕಾಲಿಟ್ಟರೂ ಮರಗಳಿಗೆ ಬೇಕಾದ ಉಷ್ಣಾಂಶ ಸಕಾಲದಲ್ಲಿ ಸಿಗಲಿಲ್ಲ. ಮಾವಿಗೆ ಋತುಮಾನ ತಡವಾಗಿ ಆರಂಭವಾಗಿದೆ. ಹಾಗಾಗಿ, ಹೂವು ಬಿಡುವ ಪ್ರಮಾಣವೂ ಕುಂಠಿತಗೊಂಡಿದೆ.
ಮಾವಿನ ಕೆಲವು ತಳಿಗಳು ವರ್ಷ ಪೂರ್ತಿ ಹೂ ಬಿಡುತ್ತವೆ. ಕೆಲವು ವರ್ಷ ಬಿಟ್ಟು ವರ್ಷ ಉತ್ತಮ ಫಸಲು ನೀಡುತ್ತವೆ. ಆದರೆ ಈ ವರ್ಷ ಹವಾಮಾನ ಬದಲಾವಣೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕಳೆದ ವರ್ಷ ಉತ್ತಮ ಬೆಳೆ ಬಂದರೂ ಲಾಕ್‌ಡೌನ್ ಮತ್ತು ಕೋವಿಡ್‌ನಿಂದಾಗಿ ಬೆಲೆ ಸಿಗಲಿಲ್ಲ. ಈ ಬಾರಿ ತುಸು ಆದಾಯ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ಕೈ ಹಿಡಿಯುವ ಸಾಧ್ಯತೆ ಕಾಣಿಸುತ್ತಿಲ್ಲ.

ಮಾವಿನ ಮಿಡಿ ಕಾಣಿಸಬೇಕಿತ್ತು
ಜನವರಿ ಅಂತ್ಯದ ವೇಳೆಗೆ ಅಡಿಕೆ ಗಾತ್ರದಷ್ಟು ಮಾವಿನ ಮಿಡಿ ಕಾಣಿಸಬೇಕಿತ್ತು. ಆದರೆ ಈಗ ಗಿಡಗಳಲ್ಲಿ ಹೂವು ಕಾಣಿಸಿಕೊಳ್ಳುತ್ತಿವೆ. ಇನ್ನೂ ಚಿಗುರು, ಹೂ ಉದುರುವ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ಇಳುವರಿಯೂ ಕುಸಿಯಲಿದೆ. ಮಾರ್ಚ್ ವೇಳೆಗೆ ಅಡ್ಡ ಮಳೆ ಬೀಳುವ ಸಂಭವವೂ ಇದೆ. ಇದು ಮಾವು ಬೆಳೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಣ್ಣುಗಳ ರಾಜ ಮಾವು
ಹಣ್ಣುಗಳ ರಾಜ ಎಂಬ ಖ್ಯಾತಿಯನ್ನು ಪಡೆದಿರುವ ಮಾವಿನ ಬೆಳೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 33 ರಿಂದ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ ಮಾಡುತ್ತಿದ್ದು, ಮಾವು ಬೇಸಾಯವನ್ನೇ ನಂಬಿಕೊಂಡು ಸುಮಾರು 30 ಸಾವಿರ ಮಂದಿ ರೈತರು ಜೀವನ ನಡೆಸುತ್ತಿದ್ದಾರೆ.
ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 1.5 ರಿಂದ 1.8 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿದೆ. ಕಳೆದ ಎರಡು ವರ್ಷಗಳ ಕೊರೊನಾ ಆರ್ಭಟದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಮಾವು ಬೆಳೆಗಾರರು ಈಗ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾದಂತೆ ಕಾಣುತ್ತಿದೆ.

ಶೇ 25 ಇಳುವರಿ ಕುಸಿತದ ಆತಂಕ
ರಾಮನಗರದ ಮಾವು ವಾಡಿಕೆಯಂತೆ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಶೇ 80 ಮರಗಳು ಹೂ ಬಿಡಬೇಕಿತ್ತು. ಆದರೆ ಜನವರಿ ತಿಂಗಳು ಮುಗಿದಿದ್ದರು ಇನ್ನೂ ಶೇ 2 ರಿಂದ 5ರಷ್ಟು ಮಾವಿನ ಮರಗಳು ಮಾತ್ರ ಹೂ ಬಿಟ್ಟಿವೆ. ಅಲ್ಲದೇ ಕೆಲವು ಕಡೆ ಶೀತ ಹೆಚ್ಚಾದ ಕಾರಣ ಚಿಗುರು ಕಾಣಿಸಿಕೊಂಡಿದೆ. ಹಾಗಾಗಿ ಈಗ ಬಿಟ್ಟಿರುವ ಹೂ ಉದುರಿ ಹೋಗುವ ಆತಂಕ ಕಾಡುತ್ತಿದೆ.
"ಪ್ರತಿ ಬಾರಿಗಿಂತ ಈ ಬಾರಿ ಸುಮಾರು ಶೇ 25ರಷ್ಟು ಮಾವು ಇಳುವರಿ ಕುಂಠಿತವಾಗುವ ಆತಂಕ ಮೂಡಿದೆ. ಹೂ ಬಿಡುವ ಪ್ರಕ್ರಿಯೆ ಪ್ರಾರಂಭದಲ್ಲಿರುವ ಕಾರಣ ಮುಂದೆ ಉತ್ತಮ ವಾತಾವರಣ ನಿರ್ಮಾಣವಾದರೆ ಮಾವು ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ. ಹಾಗಾಗಿ ಮಾವು ಅಭಿವೃದ್ಧಿ ಮಂಡಳಿ ಸೂಚಿಸಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೋಬಳಿ ಮತ್ತು ಗ್ರಾಮಗಳ ಮಟ್ಟದಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ" ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ನಿರ್ದೇಶಕ ಮುನೇಗೌಡ.

3 ಕೋಟಿಗೂ ಹೆಚ್ಚು ಬೆಳೆ ಪರಿಹಾರ
ಹವಾಮಾನ ವೈಪರೀತ್ಯ ಸೇರಿದಂತೆ ನಾನಾ ಕಾರಣಗಳಿಂದ ನಷ್ಟ ಅನುಭವಿಸುತ್ತಿರುವ ರೈತ ಈ ಬಾರಿ ಬೆಳೆ ವಿಮೆ ನೋಂದಣಿ ಮಾಡಿಸಲು ಮುಂದಾಗಿದ್ದಾನೆ. ಕಳೆದ ವರ್ಷ ಬೆಳೆ ನಷ್ಟ ಪರಿಹಾರವಾಗಿ ರೈತರ ಖಾತೆಗೆ ಸುಮಾರು 3 ಕೋಟಿ 84 ಲಕ್ಷ ರೂ. ಹಣ ಜಮೆಯಾಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ.
ಕಳೆದ ವರ್ಷ ಸುಮಾರು 1174 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದರು. ಈ ಬಾರಿ ಸುಮಾರು 3 ಸಾವಿರ ಮಂದಿ ರೈತರು ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ. ಬೆಳೆ ವಿಮೆಯಿಂದ ಅತಿವೃಷ್ಟಿ, ಅನಾವೃಷ್ಟಿ, ಹವಾಮಾನದ ವೈಪರೀತ್ಯ ಹಾಗೂ ಬೆಳೆಗೆ ತಗಲುವ ರೋಗಗಳಿಂದ ನಷ್ಟ ಸಂಭವಿಸಿದಾಗ ಬೆಳೆ ವಿಮೆ ರೈತನ ಕೈಹಿಡಿಯಲಿದೆ.












Click it and Unblock the Notifications