ರೈತರ ಖಾತೆಗೆ 1 ರುಪಾಯಿ ಪರಿಹಾರ ಸುದ್ದಿಗೆ ನಯಾಪೈಸೆ ಬೆಲೆಯಿಲ್ಲ: ಸಿಎಂ
ಹುಬ್ಬಳ್ಳಿ, ಜೂನ್ 11: 'ಆಧಾರ ಕಾರ್ಡ್ ಲಿಂಕ್ ಮಾಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಧಾರವಾಡ ತಾಲೂಕಿನ ಕೆಲ ರೈತರ ಬ್ಯಾಂಕ್ ಖಾತೆಗಳಿಗೆ ಒಂದು ರುಪಾಯಿ ಹಾಕಲಾಗಿದ್ದು, ಇದು ಬೆಳೆ ಪರಿಹಾರದ ಒಟ್ಟು ಮೊತ್ತವಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ 1 ರುಪಾಯಿ ಬೆಳೆ ಪರಿಹಾರ ನೀಡಿದ ಸರಕಾರ ಎಂದು ಎಲ್ಲೆಡೆ ಬಂದ ಸುದ್ದಿಗೆ ಹಾಗೂ ಪ್ರತಿ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಸಂಪೂರ್ಣ ತಿಳಿದುಕೊಂಡು ಮಾತಾಡಲಿ ಎಂದರು.
[ರೈತರಿಗೆ ರಾಜ್ಯ ಸರಕಾರದಿಂದ ಮಹಾಮೋಸ : ಮೈಸೂರಿನಲ್ಲಿ ಎಚ್ಡಿಕೆ]

ಮಹಾದಾಯಿ, ಕಳಸಾ-ಬಂಡೂರಿ ವಿಷಯದಲ್ಲಿ ನ್ಯಾಯಾಧೀಕರಣದ ಸಲಹೆಯಂತೆ ಅಂತರ ರಾಜ್ಯ ನದಿ ನೀರು ಹಂಚಿಕೆ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬೇಕು. ಇದಕ್ಕಾಗಿ ರಾಜ್ಯದ ಸಂಸದರು ಒಗ್ಗಟ್ಟಿನಿಂದ ಪ್ರಧಾನಿ ಮೇಲೆ ಒತ್ತಡ ಹೇರಬೇಕು. ನಾನೂ ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಆದರೆ, ನನ್ನ ಯಾವ ಪತ್ರಕ್ಕೂ ಅವರು ಪ್ರತಿಕ್ರಿಯೆ ನೀಡದೆ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪ್ರಧಾನಿ ಮನಸ್ಸು ಮಾಡಿದರೆ ಮಹಾದಾಯಿ ಸಮಸ್ಯೆ ಬಗೆ ಹರಿಯಲಿದೆ ಎಂದು ಸ್ಪಷ್ಟಪಡಿಸಿದರು.
[ಹುಬ್ಬಳ್ಳಿಯಲ್ಲಿ ಬೆಳೆ ಹಾನಿಗೆ ಸರ್ಕಾರ ನೀಡಿದ ಪರಿಹಾರ ಬರೋಬ್ಬರಿ 1 ರೂ.!]
ಇಂಧನ ಇಲಾಖೆಯಲ್ಲಿ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಪ್ರಕರಣ ಇದ್ದ ಹಾಗೆ. ಅವರು ಆರೋಪ ಮಾಡುವ ಬದಲು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.












Click it and Unblock the Notifications