ಚಿಕ್ಕಬಳ್ಳಾಪುರ ವಿದ್ಯುತ್ ಕಣ್ಣಾಮುಚ್ಚಾಲೆ: ನೀರಿಲ್ಲದೆ ಒಣಗುತ್ತಿದೆ ಬೆಳೆ, ಲಕ್ಷಾಂತರ ರೂಪಾಯಿ ಬಂಡವಾಳ ವ್ಯರ್ಥ- ರೈತ ಕಂಗಾಲು
ಚಿಕ್ಕಬಳ್ಳಾಪುರ ಮಾರ್ಚ್ 15: ಕಳೆದ ಎರಡು ವರ್ಷಗಳಿಂದ ಮಳೆ ಕೈ ಕೊಟ್ಟ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಈ ಹಿನ್ನೆಲೆ ರೈತರಿಗೆ ಕೆಲ ಕಡೆ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದಾಗಿ ಬೆಳೆ ಬೆಳೆಯಲು ಆಗುತ್ತಿಲ್ಲ.
ಮತ್ತೊಂದೆಡೆ ಮಾರುಕಟ್ಟೆಯಲ್ಲಿ ತರಕಾರಿಗೆ ಉತ್ತಮ ಬೆಲೆ ಇದೆ. ಜಿಲ್ಲೆಯಲ್ಲಿ ವಿದ್ಯುತ್ ನಿರಂತರವಾಗಿ ಕೈ ಕೊಡುತ್ತಿದೆ. ಇದರಿಂದಾಗಿ ನೀರಿದ್ದರೂ ಜಮೀನಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ರೈತರಿಗೆ ಬಂದಿದೆ. ಬೆಳೆ ಕಳೆದುಕೊಳುವ ಆತಂಕದಲ್ಲಿ ರೈತ ಸಮುದಾಯ ಕಂಗಾಲಾಗಿದೆ.

ಹೌದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಜನರು ಹೈರಾಣಾಗಿದ್ದಾರೆ. ಕುಡಿಯುವ ನೀರು ಮತ್ತು ತೋಟದ ಬೆಳೆಗಳಿಗೆ ನೀರು ಹರಿಸಲು ಆಸಮರ್ಪಕ ವಿದ್ಯುತ್ ಸರಬರಾಜಿನಿಂದ ಜನರು ಪರದಾಡುವಂತಾಗಿದೆ. ವೋಲ್ವೇಜ್ ಸಮಸ್ಯೆಯಿಂದ ನೀರನ್ನು ಮೇಲೆತ್ತಲಾಗದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಲಕ್ಷಾಂತರ ರೂ. ಸುರಿದು ಬೆಳೆದಿರುವ ಬೆಳೆಗಳನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗದೆ ಒಣಗಿಹೋಗುವ ಪರಿಸ್ಥಿತಿ ಸೃಷ್ಟಿಯಾಗಿದ್ದು. ಇನ್ನೆರಡು ತಿಂಗಳ ಕಾಲ ರೈತಾಪಿ ವರ್ಗ ಪಡಿಪಾಟಲು ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಹಗಲು ಮತ್ತು ರಾತ್ರಿ ವೇಳೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಲೆಕ್ಕಕ್ಕೆ 7 ಗಂಟೆ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಲಾಗುತ್ತಿದೆ. ಆದರೆ, ಸರಿಯಾಗಿ 5 ಗಂಟೆಯೂ ಸಮರ್ಪಕ ವಿದ್ಯುತ್ ಪೂರೈಸದ ಕಾರಣ ಬೋರ್‌ವೆಲ್‌ಗಳಿಂದ ನೀರನ್ನು ಮೇಲೆತ್ತಲಾಗದೆ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿರುವ ಬೆಳೆಗಳು ಹಾಳಾಗುತ್ತಿವೆ. ನೀರಿನ ಸಮಸ್ಯೆ ಹಿನ್ನೆಲೆ ರೈತರು ಲಕ್ಷಾಂತರ ರೂ. ನಷ್ಟಕ್ಕೆ ಒಳಗಾಗುವ ಸ್ಥಿತಿ ರೈತರದ್ದಾಗಿದೆ.

ವೋಲ್ವೇಜ್ ಸಮಸ್ಯೆ: ಜಿಲ್ಲೆಯ ಕೆಲವು ಕಡೆ 800
ಅಡಿಯಿಂದ 1200 ಅಡಿವರೆಗೂ ಬೋರ್ ವೆಲ್‌ಗಳನ್ನು ಕೊರೆಸಲಾಗಿದೆ. ಅಲ್ಲಿಂದ ನೀರನ್ನು ಮೇಲೆತ್ತಲು ಒಳ್ಳೆಯ ವೋಲ್ಟೇಜ್ ವಿದ್ಯುತ್ ಇರಬೇಕು. ಆದರೆ, ಸದ್ಯ ಕಡಿಮೆ ವೋಲ್ವೇಜ್ ವಿದ್ಯುತ್ ಸರಬರಾಜಿನಿಂದ ನೀರನ್ನು ಮೇಲೆತ್ತಲು ಆಗುತ್ತಿಲ್ಲ. ಒಂದೆಡೆ ಈ ಬಾರಿ ತೀವ್ರ ಮಳೆ ಕೊರತೆಯಿಂದ ಅಂತರ್ಜಲ ಮಟ್ಟವೂ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಸಾಕಷ್ಟು ಬೋರ್ ವೆಲ್ ಗಳು ವಿಫಲವಾಗುತ್ತಿವೆ. ಅಷ್ಟೋ ಇಷ್ಟೋ ನೀರು ಇರುವ ಬೋರ್‌ವೆಲ್ ಗಳಿಂದ ನೀರನ್ನು ಮೇಲೆತ್ತಲು ಅಸಮರ್ಪಕ ವಿದ್ಯುತ್ ನಿಂದ ಸಾಧ್ಯವಾಗುತ್ತಿಲ್ಲ.
ಬೇಕಾಬಿಟ್ಟಿ ವಿದ್ಯುತ್ ಪೂರೈಕೆ:-
ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಪಂಪ್ ಸೆಟ್‌ಗಳು ಹಾಳಾಗುತ್ತಿದ್ದು ರಿಪೇರಿಗಾಗಿ ಸಾವಿರಾರು ರೂ. ಖರ್ಚು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗಿಷ್ಟ ಬಂದ ಹೊತ್ತಿನಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಬೆಳೆಗಳಿಗೆ ನೀರನ್ನು ಹರಿಸಲು ರಾತ್ರಿ ಎನ್ನದೆ, ಹಗಲೇನ್ನದೆ ಪರಿತಪಿಸುತ್ತಿದ್ದು, ಪ್ರತಿ ನಿತ್ಯ ರೈತರು 7ಗಂಟೆ ವಿದ್ಯುತ್ ಸರಬರಾಜು ಮಾಡುತ್ತಾರೆ ಎಂಬ ಆಸೆಯಿಂದ ಎದುರು ನೋಡುವುದು ಬಿಟ್ಟರೆ ಸರಕಾರದ ಮಾತು ಕೇವಲ ಭರವಸೆಯಾಗೇ ಉಳಿದುಕೊಂಡಿದೆ.

ಇದರಿಂದ ಸಾಕಷ್ಟು ರೈತರು ತೋಟಗಳನ್ನು ಬಿಟ್ಟು ಬಿಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಈಗಾಗಲೇ ಸಾಕಷ್ಟು ಮಂದಿ ಲಕ್ಷಾಂತರ ರೂ. ಸುರಿದು ಬೆಳೆದ ಬೆಳೆಗಳನ್ನು ವಿಧಿಯಿಲ್ಲದೆ ಉತ್ತು ಹಾಕುವಂತಾಗಿದೆ.
ಹಾಳಾಗುತ್ತಿವೆ ಪಂಪ್‌ಸೆಟ್‌ಗಳು:
ತೋಟ ಗಳಿರಲಿ ಕುಡಿಯುವ ನೀರನ್ನು ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಇದೆ. ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುವ ವೇಳೆ ಅತಿ ಹೆಚ್ಚಿನ ಒತ್ತಡ ಇರುವ ಕಾರಣ ಪಂಪ್‌ಸೆಟ್ ಗಳು ಕೆಟ್ಟು ಹೋಗುತ್ತಿದ್ದು ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸರಿಯಾಗಿ ವಿದ್ಯುತ್ ಫೀಡರ್ ಮತ್ತು ಲೇನ್ ಗಳನ್ನು ನಿರ್ವಹಣೆ ಮಾಡದ ಕಾರಣ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ವಿಭಾಗಗಳಲ್ಲಿ ಪರಿಸ್ಥಿತಿ ತೀರ ನಿಕೃಷ್ಟವಾಗಿದ್ದು ರೈತರು ಮಾಡುವ ಮನವಿಗೆ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ರೈತರು ದೂರುತ್ತಾರೆ.
ಜಿಲ್ಲೆಯಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಗುಲಾಬಿ, ನಾನಾ ತಳಿಯ ಹೂಗಳು ಹಾಗೂ ತರಕಾರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಒಳ್ಳೆಯ ಬೆಲೆ ನಿರೀಕ್ಷೆಯಲ್ಲಿ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಕಿರುವ ಬಂಡವಾಳ ಮಣ್ಣು ಪಾಲಾಗುತ್ತಿದೆ. ಹೀಗಾಗಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಇಡ್ರಹಳ್ಳಿ ರೈತರು, ನಾವು ಬೋರ್‌ವೆಲ್ ಗಳನ್ನು 800 ಅಡಿ ಕೊರೆಸಿದ್ದೇವೆ. ಅಲ್ಲಿಂದ ನೀರನ್ನು ಮೇಲೆತ್ತಲು ಒಳ್ಳೆಯ ವೋಲ್ವೇಜ್ ಬೇಕು. ಆದರೆ, ನಮ್ಮ ವ್ಯಾಪ್ತಿಯಲ್ಲಿ ಸರಿಯಾದ ವೋಲ್ವೇಜ್ ಇರುವ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ನಮ್ಮ ಪಂಪ್ ಸೆಟ್‌ಳು ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರಿದ್ದರೂ ನೀರನ್ನು ಮೇಲತ್ತಲಾಗದೆ ಬೆಳೆಗಳೆಲ್ಲ ಒಣಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೊತೆಗೆ ರೈತ ಸಂಘ ತಾಲೂಕು ಅಧ್ಯಕ್ಷ ಸೋಮಶೇಖರ್ ಅವರು ಮಾತನಾಡಿ, 'ಜಿಲ್ಲೆ ಸೇರಿದಂತೆ ತಾಲೂಕಿನ ಕೆಲ ಭಾಗಗಳಲ್ಲಿ ಸರಿಯಾದ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಬೆಳೆಗಳಿಗೆ ನೀರನ್ನು ಹರಿಸಲಾಗದೆ ಒಣಗಿ ಹೋಗು ತ್ತಿವೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 7 ಗಂಟೆ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಹೇಳುತ್ತಾರೆ ಆದರೆ, ಗುಣಮಟ್ಟದ ವಿದ್ಯುತ್ ಹಾಗೂ 7 ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿಲ್ಲ' ಎಂದರು.












Click it and Unblock the Notifications