Chikkaballapur: ರೈತರಿಗೆ ದುಬಾರಿಯಾದ ರೇಷ್ಮೆ ಚಾಕಿ ಹುಳು!
ಚಿಕ್ಕಬಳ್ಳಾಪುರ ಜೂನ್ 25: ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ ರೇಷ್ಮೆ ಬೆಳೆಗಾರರು ಇದೀಗ ದಿಢೀರನೇ ರೇಷ್ಮೆ ಹುಳು ಸಾಕಲು ಮುಂದಾಗಿದ್ದಾರೆ. ಇದರಿಂದ ಆರಂಭಿಕ ಹಂತದ ರೇಷ್ಮೆ ಚಾಕಿ ಹುಳಕ್ಕೆ ಭಾರಿ ಬೇಡಿಕೆ ಶುರುವಾಗಿದ್ದು, ಬೆಲೆಯೂ ದುಬಾರಿಯಾಗಿದೆ.
ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭೂಮಿ ತಂಪೆರಿದಂತೆ ಉತ್ತಮ ಮಳೆಯಾಗಿದೆ. ವಾತಾವರಣದಲ್ಲಿ ಕೂಡ ಬಿಸಿಲಿನ ತಾಪಮಾನ ತಗ್ಗಿದೆ. ಹೀಗಾಗಿ ಬಿರುಬೇಸಿಗೆಯಲ್ಲಿ ರೇಷ್ಮೆ ಹುಳ ಸಾಕಾಣಿಕೆಯಿಂದ ದೂರ ಉಳಿದಿದ್ದ ರೈತರು ಇದೀಗ ರೇಷ್ಮೆ ಬೆಳೆಯಲು ಆಸಕ್ತಿ ತೋರಿದ್ದಾರೆ.

ಚಾಕಿ ಹುಳಕ್ಕೆ ಹೆಚ್ಚಿದ ಬೇಡಿಕೆ: ಕಳೆದ ಬೇಸಿಗೆಯಲ್ಲಿ ಗರಿಷ್ಠ ಮಟ್ಟದಲ್ಲಿ ಬಿಸಿಲಿನ ತಾಪಮಾನ ದಾಖಲಾಗಿತ್ತು. ಇದರಿಂದ ರೇಷ್ಮೆ ಬೆಳೆಗಾರರು ರೇಷ್ಮೆ ಹುಳ ಸಾಕಲು ಹಿಂದೆ ಸರಿದಿದ್ದರು. ಅಲ್ಲದೇ ರೇಷ್ಮೆ ಮೊಟ್ಟೆ ಬಿತ್ತನೆ ಕೋಠಿಗಳಲ್ಲಿ ಬಿತ್ತನೆ ಗೂಡಿನ ಅಭಾವದಿಂದ ರೇಷ್ಮೆ ಮೊಟ್ಟೆ ಉತ್ಪಾದನೆಯ ಕೆಲಸ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿತ್ತು. ರೇಷ್ಮೆ ಚಾಕಿ ಹುಳಕ್ಕೆ ಬೇಡಿಕೆ ಇಲ್ಲದಿದ್ದರಿಂದ ಖಾಸಗಿ ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರಗಳು ಸಹ ಬಾಗಿಲು ಮುಚ್ಚಿದ್ದವು.
ಆದರೆ ಇದೀಗ ರೇಷ್ಮೆ ಚಾಕಿ ಹುಳಕ್ಕೆ ರೈತರಿಂದ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಬೇಡಿಕೆಗೆ ತಕ್ಕಂತೆ ಆರಂಭಿಕ ಹಂತದ ಚಾಕಿ ಹುಳಗಳನ್ನು ಬೆಳೆಗಾರರಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರದ ಮಾಲೀಕರೊಬ್ಬರು ತಿಳಿಸಿದ್ದಾರೆ.
ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ:
ಸದ್ಯ ಈಗಿನ ಪರಿಸ್ಥಿತಿಯಲ್ಲಿ ಬಿತ್ತನೆ ಗೂಡಿದ ದರ ದುಬಾರಿಯಾಗಿರುವ ಪರಿಣಾಮ ರೇಷ್ಮೆ ಮೊಟ್ಟೆಯ ಉತ್ಪಾದನೆಗೆ ಹೆಚ್ಚು ವೆಚ್ಚ ತಗಲುತ್ತಿದೆ. ಇದರ ಹೊಡೆತ ನೇರವಾಗಿ ರೈತರಿಗೆ ಬೀಳ ತೊಡಗಿದೆ. ಒಂದೆಡೆ ರೇಷ್ಮೆ ಚಾಕಿ ಹುಳ ಸಿಗದಿರುವುದು, ಮತ್ತೊಂದು ಕಡೆ ಚಾಕಿ ಹುಳದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.

ನೂರು ಮೊಟ್ಟೆ ಹುಳ 7,200 ರೂ.:
ಕೆಲ ತಿಂಗಳ ಹಿಂದೆಯಷ್ಟೇ ನೂರು ಮೊಟ್ಟೆಯ ಎರಡನೇ ಜ್ವರದ ರೇಷ್ಮೆ ಹುಳು 5,000 ರಿಂದ 5,500 ರೂ.ವರೆಗೆ ಬೆಲೆ ಇತ್ತು. ಪ್ರಸ್ತುತ 2 ಸಾವಿರ ರೂ.ವರೆಗೆ ಹೆಚ್ಚಳಗೊಂಡಿದ್ದು, ಎರಡು ಜ್ವರದ ನೂರು ಮೊಟ್ಟೆಯ ಹುಳಕ್ಕೆ 7000 ರೂ. ಆಗಿದ್ದು, ರೇಷ್ಮೆ ಬೆಳೆ ಬೆಳೆಯಲು ಆರಂಭದಲ್ಲಿಯೇ ದುಬಾರಿ ವೆಚ್ಚ ಮಾಡುವಂತಾಗಿದೆ.
ಮುಂಗಡ ಹಣ ಪಾವತಿ:
ಪ್ರಸ್ತುತ ರೇಷ್ಮೆ ಚಾಕಿ ಹುಳಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ರೈತರು ಖಾಸಗಿ ಚಾಕಿ ಸಾಕಾಣಿಕೆ ಕೇಂದ್ರಗಳ ಮಾಲೀಕರಿಗೆ ಮುಂಗಡ ಹಣವನ್ನು ಪಾವತಿಸಿ, ರೇಷ್ಮೆ ಹುಳ ಪಡೆಯಲು ಕಾಯುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಸೊಪ್ಪಿನ ದರ ಇಳಿಕೆ:
ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರಗಳಲ್ಲಿ ಈಗ ಸಮಯಕ್ಕೆ ಸರಿಯಾಗಿ ರೈತರಿಗೆ ರೇಷ್ಮೆ ಹುಳ ಸಿಗುತ್ತಿಲ್ಲ. ಇದರಿಂದ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆ ಇಲ್ಲವಾಗಿದ್ದು, ಬಹುತೇಕ ಕಡೆ ಹಿಪ್ಪುನೇರಳೆ ಸೊಪ್ಪು ತೋಟಗಳಲ್ಲಿಯೇ ಕೊಳೆಯುತ್ತಿದೆ. ಕೆಲವು ಕಡೆ ಸೊಪ್ಪನ್ನು ರೈತರು ಜಾನುವಾರುಗಳ ಮೇವಿಗೆ ಬಳಕೆ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ರೇಷ್ಮೆ ಚಾಕಿ ಸಾಕಾಣಿಕೆ ಕೇಂದ್ರದ ಮಾಲೀಕ ಯಲುವಹಳ್ಳಿ ಮಂಜುನಾಥ್, ಮಳೆ ಬಿದ್ದ ನಂತರ ರೇಷ್ಮೆ ಚಾಕಿ ಹುಳಕ್ಕೆ ರೈತರಿಂದ ಹೆಚ್ಚು ಬೇಡಿಕೆ ಶುರುವಾಗಿದೆ. ಬೇಡಿಕೆಗೆ ತಕ್ಕಂತೆ ರೈತರಿಗೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದರು.
ರೇಷ್ಮೆ ಹುಳ ಸಾಕಿ ಏಳು ತಿಂಗಳಾಗಿದೆ. ಉತ್ತಮ ಮಳೆಯಾಗಿರುವುದರಿಂದ ಪ್ರಸ್ತುತ ವಾತಾವರಣ ತಂಪಾಗಿರುವುದರಿಂದ ರೇಷ್ಮೆ ಹುಳ ಸಾಕಲು ಮುಂದಾಗಿದ್ದೇನೆ. ಆದರೆ ಈಗ ಸರಿಯಾದ ಸಮಯದಲ್ಲಿ ರೇಷ್ಮೆ ಚಾಕಿ ಹುಳ ಸಿಗುತ್ತಿಲ್ಲ. ಬೆಲೆಯೂ ಏರಿಕೆಯಾಗಿರುವುದರಿಂದ ಆರಂಭದಲ್ಲಿಯೇ ರೇಷ್ಮೆ ಹುಳಕ್ಕಾಗಿ ದುಬಾರಿ ವೆಚ್ಚ ಮಾಡುವಂತಾಗಿದೆ ಎಂದು ರೇಷ್ಮೆ ಬೆಳೆಗಾರ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.












Click it and Unblock the Notifications