ಕಾಡಾನೆ ಆಯ್ತು, ಬಂಡೀಪುರ ರೈತರಿಗೀಗ ಕಾಡುಹಂದಿಯ ಕಾಟ!
ಚಾಮರಾಜನಗರ, ಜೂನ್ 28: ಇದುವರೆಗೆ ಕಾಡಾನೆಗಳ ಭಯದಲ್ಲಿ ಕಾಲ ಕಳೆಯುತ್ತಿದ್ದ ಚಾಮರಾಜನಗರ ಜಿಲ್ಲೆಯ ಬಂಡೀಪುರ ರೈತರು ಇದೀಗ ಕಾಡು ಹಂದಿಗಳ ದಾಳಿಯಿಂದ ಆತಂಕಗೊಂಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜನರ ಮೇಲೆಯೇ ದಾಳಿ ಮಾಡುವ ಕಾಡು ಹಂದಿಗಳು ಬೆಳೆಯನ್ನೆಲ್ಲ ತಿಂದು, ನಾಶಮಾಡುತ್ತಿವೆ.
ಕೆಲದಿನಗಳ ಹಿಂದೆ ಬಂಡೀಪುರ ಕಾಡಂಚಿನ ಮಂಗಲ ಗ್ರಾಮದ ರಾಚಮ್ಮ(72) ಎಂಬ ವೃದ್ಧೆಯ ಮೇಲೆ ಕಾಡುಹಂದಿ ದಾಳಿ ಮಾಡಿದ್ದು ಈಗ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ದೇವರಹಳ್ಳಿ ಗ್ರಾಮದ ಕಾಡಂಚಿನ ಜಮೀನುಗಳಲ್ಲಿ ಕಾಡುಹಂದಿಗಳು ರೈತರ ಜಮೀನಿಗೆ ನುಗ್ಗುತ್ತಿದ್ದು, ರೈತರು ಕಷ್ಟಪಟ್ಟು ಬೆಳೆಸಿದ ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡುತ್ತಿವೆ. ಕಳೆದ ಕೆಲವು ವರ್ಷಗಳಿಂದ ಬರದಲ್ಲಿ ಬೆಂದಿದ್ದ ರೈತರು ಈ ಬಾರಿ ಉತ್ತಮವಾಗಿ ಮಳೆಯಾದ್ದರಿಂದ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಂತೆ ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ದೇವರಹಳ್ಳಿ ಗ್ರಾಮದ ಸಿದ್ದಪ್ಪ, ಮಹದೇವಪ್ಪ, ರಾಜಪ್ಪ, ಕೆಂಪಣ್ಣ, ಗಿರೀಶ್ ಎಂಬುವರು ತಮ್ಮ ಜಮೀನಿನಲ್ಲಿ ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬೆಳೆದಿದ್ದರು.

ಬೆಳೆ ಉತ್ತಮವಾಗಿ ಬೆಳೆದಿದ್ದು ಫಸಲಿಗೆ ಬರುತ್ತಿದ್ದಂತೆಯೇ ಜಮೀನಿಗೆ ನುಗ್ಗಿರುವ ಕಾಡುಹಂದಿಗಳು ಬೆಳೆಯನ್ನು ಸಂಪೂರ್ಣ ನಾಶಗೊಳಿಸಿವೆ. ಇದರಿಂದ ಈ ರೈತರು ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಕಾಡುಹಂದಿಯಿಂದಾದ ಬೆಳೆ ನಷ್ಟಕ್ಕೆ ಯಾವುದೇ ಪರಿಹಾರ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕಾಡುಹಂದಿಗಳನ್ನು ಓಡಿಸಲು ಪಟಾಕಿಯನ್ನೂ ನೀಡಲು ನಿರಾಕರಿಸುತ್ತಿದ್ದಾರೆ. ಕಾಡುಹಂದಿಗಳನ್ನು ನಿಯಂತ್ರಣ ಮಾಡವ ಇಲ್ಲವೇ ಕೊಲ್ಲಲು ಅನುಮತಿಯನ್ನೂ ನೀಡುತ್ತಿಲ್ಲ. ಇದರಿಂದ ರೈತರ ಬೆಳೆಗಳು ನಾಶವಾಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕಾಡಂಚಿನ ರೈತರ ಗೋಳು ಹೇಳತೀರದ್ದಾಗಿದ್ದು, ಕಾಡು ಹಂದಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕಡಿವಾಣ ಹಾಕದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications