ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆಗಿಳಿದ ರೈತರು
ಶ್ರೀರಂಗಪಟ್ಟಣ, ಆಗಸ್ಟ್, 23: ಕೃಷ್ಣರಾಜಸಾಗರ ಜಲಾಶಯ (KRS) ದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತರು ಕಾವೇರಿ ನದಿಗೆ ಇಳಿದು ಪ್ರತಿಭಟಿಸಿದರು.
ಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟ ಬಳಿ ರೈತ ಸಂಘ, ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಕಾವೇರಿ ನದಿಗೆ ಇಳಿದು ಪ್ರತಿಪಟಿಸಿದರು. ಮುಖಂಡ ಕೆ.ಎಸ್.ನಂಜುಂಡೇಗೌಡ, ಬಿ.ಸಿ ಕೃಷ್ಣೇಗೌಡ, ಮೇಳಾಪುರ ಜಯರಾಮ, ಹನುಮಂತ ನಗರದ ಸ್ವಾಮಿ, ಹೊಸೂರಿನ ಶಿವರಾಜ್, ಹನಿಯಂಬಾಡಿ ನಾಗರಾಜ್, ಮಹದೇವ, ಹೊಸ ಉಂಡವಾಡಿ ಪುಟ್ಟೇಗೌಡ, ಪಾಲಹಳ್ಳಿ ರಾಮಚಂದ್ರ, ಕೂಡ್ಲುಕುಪ್ಪೆ ಸ್ವಾಮಿಗೌಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಹಾಗೆಯೇ ಪುಟ್ಟೇಗೌಡ, ಬಲ್ಲೇನಹಳ್ಳಿ ಕೃಷ್ಣೆಗೌಡ, ಬಲ್ಲೇನಹಳ್ಳಿ ಮಹೇಶ್, ಧರಸಗುಪ್ಪೆ ಮಹೇಶ, ಚಂದಗಾಲು ಶಿವರಾಮ್, ಚಿಂದಗಿರಿ ಕೊಪ್ಪಲು ರಾಮಚಂದ್ರ ಸೇರಿದಂತೆ ಹಲವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಕಣಿವೆ ಜಲಾಶಯಗಳಿಂದ ನೀರು ಬಿಡುವ ಮುನ್ನ ಎಚ್ಚೆತ್ತುಕೊಂಡು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗದೆ, ಏಕಾಏಕಿ ನೀರು ಬಿಟ್ಟು, ಜಲಾಶಯಗಳನ್ನು ಬರಿದು ಮಾಡಿ, ಕುಡಿಯುವ ನೀರಿಗೂ ತತ್ವಾರ ತಂದು ಇದೀಗ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸಕ್ಕೆ ಮುಂದಾಗಿದೆ. ಅಲ್ಲದೆ ಮಂಡ್ಯ ಜಿಲ್ಲೆಯ ಶಾಸಕರು, ಸಂಸದರು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನ್ಯಾಯಾಲಯಕ್ಕೆ ಹೋಗಲಿ ಎಂದು ಉಡಾಫೆ ಆಗಿ ಮಾತನಾಡಿರುವುದಿ ಸರಿಯಲ್ಲ. ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಇನ್ನು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಭಟನಾ ನಿರತ ರೈತರು ನದಿಯಲ್ಲಿ ಜಾರದಂತೆ ಹಗ್ಗದ ಸಹಾಯದಿಂದ ಸುತ್ತುವರಿದು ರಕ್ಷಣೆ ನೀಡಿದರು.












Click it and Unblock the Notifications