Budget 2025: ಕೇಂದ್ರ ಬಜೆಟ್, ಯುವಕರನ್ನು ಕೃಷಿಯತ್ತ ಸೆಳೆಯಲು ಹೊಸ ಯೋಜನೆ
ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬಜೆಟ್ ಭಾಷಣದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ಬಜೆಟ್ ಭಾಷಣದಲ್ಲಿಯೇ ಸಚಿವರು ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಪ್ರಧಾನ್ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಘೋಷಣೆ ಮಾಡಿದರು. ದೇಶದ 100 ಜಿಲ್ಲೆಗಳನ್ನು ಕೇಂದ್ರಿಕರಿಸಿ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಈ ಯೋಜನೆಯಿಂದ ಸುಮಾರು 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ, ಯೋಜನೆ ಯುವಕರನ್ನು ಕೃಷಿಯತ್ತ ಸೆಳೆಯಲಿದೆ ಎಂದು ಸಚಿವರು ಹೇಳಿದರು.

ಯೋಜನೆ ಕುರಿತು ವಿವರಣೆ ನೀಡಿದ ಸಚಿವರು, "ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ನಮ್ಮ ಸರ್ಕಾರ ರಾಜ್ಯಗಳೊಂದಿಗೆ ಸಹಭಾಗಿತ್ವದಲ್ಲಿ ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಕೈಗೊಳ್ಳಲಿದೆ" ಎಂದರು.
"ಯೋಜನೆಗಳ ಸಮನ್ವಯ ಮತ್ತು ವಿಶೇಷ ಕ್ರಮಗಳ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ಮಾನದಂಡಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಇದು ಸಾಂಸ್ಕೃತಿಕ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ" ಎಂದು ಹೇಳಿದರು.
ಈ ಯೋಜನೆಯಡಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು, ವಿವಿಧ ಮಾದರಿ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ, ಕೋಲ್ಡ್ ಸ್ಟೋರೇಜ್‌ಗಳ ಸ್ಥಾಪನೆ, ನೀರಾವರಿ ಸೌಲಭ್ಯ ಉತ್ತಮ ಪಡಿಸುವುದು ಸೇರಿದೆ.
ಭಾಷಣದಲ್ಲಿ ಸಚಿವರು ಬಜೆಟ್‌ನಲ್ಲಿ 10 ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಇದರ ಭಾಗವಾಗಿಯೇ ಯುವಕರನ್ನು ಕೃಷಿಯತ್ತ ಸೆಳೆಯಲು ಯೋಜನೆಯನ್ನು ಘೋಷಣೆ ಮಾಡಿದರು.
ಭಾಷಣದಲ್ಲಿ ಸಚಿವರು ಅಸ್ಸಾಂನಲ್ಲಿ ಯೂರಿಯಾ ಘಟಕ ಸ್ಥಾಪನೆ ಮಾಡಲಾಗುತ್ತದೆ. ಈ ಘಟಕ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಿದೆ. ಪೂರ್ವ ವಲಯದಲ್ಲಿರುವ ಮೂರು ಯೂರಿಯಾ ಉತ್ಪಾದನಾ ಘಟಕವನ್ನು ಪುನಃ ಆರಂಭಿಸಲಾಗುತ್ತದೆ ಎಂದರು.
ಮುಂದಿನ 5 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೃಷಿ, ಕೈಗಾರಿಕೆ, ಗಣಿಗಾರಿಕೆ, ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ಬಜೆಟ್ ಭಾಷಣದಲ್ಲಿ ಹಣ್ಣಿನ ಬೆಳೆಗಳು, ತರಕಾರಿಗಳ ಉತ್ಪಾದನೆ ಹೆಚ್ಚಿಸಲು ಸಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಬಜೆಟ್ ಭಾಷಣದಲ್ಲಿ ಬಿಹಾರದ ಮುಖ್ಯ ಬೆಳೆಯಾದ ಮಖಾನಾವನ್ನು ದಕ್ಷಿಣ ಭಾರತದ ರಾಜ್ಯಗಳಿಗೆ ಪರಿಚಯಿಸುವುದು ಮತ್ತು ಇಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸಲು ಸಹ ಹೊಸ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಬಿಹಾರದಲ್ಲಿ ಮಖಾನಾ ಬೋರ್ಡ್ ಸ್ಥಾಪನೆ ಮಾಡಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.












Click it and Unblock the Notifications