ಬಗರ್ ಹುಕುಂ ಭೂಮಿ: ರೈತರಿಗೆ ಅಭಯ ನೀಡಿದ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ, ಅಕ್ಟೋಬರ್ 20: ಬಗರ್ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರು ಸದಾ ಆತಂಕ ಎದುರಿಸಬೇಕಿದೆ. ಸರ್ಕಾರ ಯಾವಾಗ ಅವರನ್ನು ಒಕ್ಕಲೆಬ್ಬಿಸುತ್ತದೆ? ಎಂದು ಅವರು ಚಿಂತೆಗೀಡಾಗಿದ್ದಾರೆ. ಆದರೆ ಈಗ ಸರ್ಕಾರ ರೈತರ ಪರವಾಗಿದೆ, ರೈತರು ಧೃತಿಗೆಡಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರೈತರಿಗೆ ಅಭಯ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, "ಅಕ್ಟೋಬರ್ 21ಕ್ಕೆ ಸಾಗರದಲ್ಲಿ ಅರಣ್ಯ ಭೂಮಿ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಕೆಲಸ ಮಾಡುತ್ತಿದೆ. ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ. ಯಾವುದೇ ರೈತರು ಧೃತಿಗೆಡಬಾರದು. ಸರ್ಕಾರ ರೈತರ ಪರವಾಗಿದೆ" ಎಂದರು.

"ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಉತ್ತಮ ನ್ಯಾಯವಾದಿಗಳನ್ನು ನೇಮಿಸಿ ಐಎ ಹಾಕಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಮತ್ತು ನ್ಯಾಯ ಒದಗಿಸಲು ಎಲ್ಲ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ" ಎಂದು ಸಚಿವರು ಹೇಳಿದರು.
"ರೈತರಿಗೆ ಒಳ್ಳೆಯ ಸುದ್ದಿಯನ್ನೇ ನಿಡುತ್ತೇವೆ. ಕೋರ್ಟ್ ವಿಚಾರ ಸೂಕ್ಷ್ಮವಾಗಿದ್ದು ಹುಷಾರಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಇಂದಿನ ಸಮಸ್ಯೆಯಲ್ಲ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಂತ್ರಸ್ತರು ಧೃತಿಗೆಡಬಾರದು. ಸಂತ್ರಸ್ತರ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲ. ಅದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು. ಮುಳುಗಡೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಹೋರಾಟ ನಡೆಯುತ್ತಿದೆ. ರೈತರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ" ಎಂದರು.
"ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. 2015ರೊಳಗೆ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡುವುದು, ತೊಂದರೆ ನೀಡದಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಹಾಗೂ ಎಲ್ಲ ರೀತಿಯ ಭೂ ಕಬಳಿಕೆ ಪ್ರಕರಣ ನಿರ್ವಹಿಸಲು ಜನಪ್ರತಿಧಿಗಳು, ಅಧಿಕಾರಿಗಳನ್ನು ಒಳಗೊಂಡ ಅರಣ್ಯ ಸಮಿತಿ ರಚನೆ ಮಾಡಲಾಗುವುದು" ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನೋಟಿಸ್ ನೀಡದಂತೆ ಅರಣ್ಯ ಇಲಾಖೆಗೆ ಸೂಚನೆ: ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಲೋಕೋಪಯೋಗಿ ಭವನದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, "2015ನೇ ಸಾಲಿನ ಒಳಗೆ 3 ಎಕರೆ ಒಳಗಿರುವ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುವುದು, ನೋಟಿಸ್ ನೀಡುವುದಾಗಲಿ ಮಾಡಬಾರದು" ಎಂದು ಸೂಚನೆ ನೀಡಿದರು.
"ಕೋರ್ಟ್ ಪ್ರಕರಣ, ಲೋಕಾಯುಕ್ತ ಪ್ರಕರಣಗಳನ್ನು ಹೊರತುಪಡಿಸಿ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡುವಂತಿಲ್ಲ. ಸಣ್ಣ ಹಿಡುವಳಿದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಬಾರದು. 3 ಎಕರೆಗಿಂತ ಹೆಚ್ಚಿನ ಭೂಮಿ ಸಾಗುವಳಿ ಮಾಡುತ್ತಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ" ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
"ಗ್ರಾಮಗಳಲ್ಲಿ ಗ್ರಾಮ ಸಭೆ ಮಾಡಿ ಸಾಗುವಳಿದಾರರು, ಅವರ ಜಮೀನಿನ ಕುರಿತು ಮಾಹಿತಿ ತೆಗೆದುಕೊಳ್ಳಬೇಕು. ಬಗರ್ ಹುಕುಂ ಸಮಸ್ಯೆಗಳನ್ನು ನಿರ್ವಹಿಸಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು" ಎಂದು ಹೇಳಿದರು.












Click it and Unblock the Notifications