ಬಳ್ಳಾರಿ; ಮೆಣಸಿನಕಾಯಿ ಬದಲು ಪರ್ಯಾಯ ಬೆಳೆ ಬೆಳೆಯಿರಿ
ಬಳ್ಳಾರಿ, ಸೆಪ್ಟೆಂಬರ್ 03; ಈ ವರ್ಷದ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಿದೆ. ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಮುಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗಬಹುದಾದ ನೀರಿನ ಪ್ರಮಾಣವನ್ನು ಅಂದಾಜಿಸಿ ನವೆಂಬರ್ 30ರವರೆಗೆ ವಿವಿಧ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
119ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿವಿಧ ಕಾಲುವೆಗಳಿಗೆ ನವೆಂಬರ್ 30ರವರೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎಲ್. ಬಸವರಾಜ್ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿರುತ್ತದೆ. ಇತ್ತೀಚೆಗೆ ನಡೆದ ತುಂಗಭದ್ರಾ ಯೋಜನೆಯ 119ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್ 30ರವರೆಗೆ ಕಾಲುವೆಗೆ ನೀರನ್ನು ಒದಗಿಸಲಾಗುವುದೆಂದು ನಿರ್ಧರಿಸಲಾಗಿದೆ. ಆದ್ದರಿಂದ ಜಿಲ್ಲೆಯ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆಯೊಂದನ್ನು ನೀಡಿದೆ.
ಪರ್ಯಾಯ ಬೆಳೆಯನ್ನು ಬೆಳೆಯಿರಿ; ತೋಟಗಾರಿಕೆ ಇಲಾಖೆ ರೈತರಿಗೆ ಮೆಣಸಿನಕಾಯಿ ಬೆಳೆಯ ಬದಲು ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯಿರಿ ಎಂದು ಸಲಹೆಯನ್ನು ನೀಡಿದೆ.
ರೈತರು ಬೆಂಡೆ, ಹೀರೆಕಾಯಿ, ಸೌತೆಕಾಯಿ, ಸೋರೆಕಾಯಿ, ಹಾಗಲಕಾಯಿ, ಬೀನ್ಸ್ ಮತ್ತು ಸೊಪ್ಪು ಬೆಳೆಗಳಾದ ಮೆಂತ್ಯ ಮತ್ತು ಕೊತ್ತಂಬರಿ ಬೆಳೆಗಳನ್ನು ಪರ್ಯಾಯವಾಗಿ ಬೆಳೆಯಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ರೈತರು ಸಹಕರಿಸಬೇಕು ಎಂದು ಈಗಾಗಲೇ ಪ್ರಕಟಣೆ ಮೂಲಕ ಕೋರಲಾಗಿದೆ.
ಪ್ರಸಕ್ತ ಅಂದಾಜಿಸಿದ ನೀರಿನ ಪ್ರಮಾಣವು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದ ಮೇಲೆ ಅವಲಂಭಿತವಾಗಿದ್ದು, ಮುಂದೆ ಒಳ ಹರಿವಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ ಪರಿಷ್ಕೃತವಾಗಿ ವೇಳಾಪಟ್ಟಿ ಹೊರಡಿಸಲಾಗುವುದು ಎಂದು ಸಹ ಸ್ಪಷ್ಟಪಡಿಸಲಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆಗಸ್ಟ್ 3ರಿಂದ ನವೆಂಬರ 30 ರವರೆಗೆ 4100 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆಗಸ್ಟ್ 3ರಿಂದ ನವೆಂಬರ್ 30 ರವರೆಗೆ 1300 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆಗಸ್ಟ್ 3ರಿಂದ ನವೆಂಬರ್ 30ರವರೆಗೆ 850 ಕ್ಯೂಸೆಕ್‌ನಂತೆ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ರಾಯ ಬಸವಣ್ಣ ಕಾಲುವೆಗೆ ಜೂನ್ 1 ರಿಂದ 270 ಕ್ಯೂಸೆಕ್‌ನಂತೆ ಹರಿಸಲಾಗುತ್ತಿದೆ. ನವೆಂಬರ್ 30ರವರೆಗೆ ಮುಂದುವರೆಸಲಾಗುವುದು ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆಗಸ್ಟ್ 3ರಿಂದ ನವೆಂಬರ್ 30ರವರೆಗೆ 25 ಕ್ಯೂಸೆಕ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಈಗಾಗಲೇ ಪ್ರಕಟಣೆ ತಿಳಿಸಿದೆ.











Click it and Unblock the Notifications