ಶಿವಮೊಗ್ಗ; ಮಾ.17 ರಿಂದ ಕೃಷಿ, ತೋಟಗಾರಿಕೆ ಮೇಳ
ಶಿವಮೊಗ್ಗದಲ್ಲಿ ಮಾ.17 ರಿಂದ 20ರ ತನಕ ಕೃಷಿ ಮತ್ತು ತೋಟಗಾರಿಕಾ ಮೇಳ 2023 ಆಯೋಜನೆ ಮಾಡಲಾಗಿದೆ.
ಶಿವಮೊಗ್ಗ, ಫೆಬ್ರವರಿ 22; ಶಿವಮೊಗ್ಗದ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಮಾ.17 ರಿಂದ 20ರ ತನಕ ಕೃಷಿ ಮತ್ತು ತೋಟಗಾರಿಕಾ ಮೇಳ 2023 ಆಯೋಜನೆ ಮಾಡಲಾಗಿದೆ. ರೈತರು, ಕೃಷಿ ಕ್ಷೇತ್ರದ ಆಸಕ್ತರು ಪಾಲ್ಗೊಳ್ಳಬಹುದಾಗಿದೆ.
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 'ಸುಸ್ಥಿರ ಆದಾಯಕ್ಕಾಗಿ-ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ' ಎಂಬ ಘೋಷವಾಕ್ಯದಡಿ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳ ಆಯೋಜನೆ ಮಾಡಿದೆ.

ಈ ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನೂತನ ತಳಿ ಮತ್ತು ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣಗಳು ಹಾಗೂ ಜೈವಿಕ ಪರಿಕರಗಳ ಪ್ರದರ್ಶನ, ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮಗಳು, ಕೃಷಿ ಸಂಬಂಧಿತ ವಿಚಾರ ಗೋಷ್ಠಿ ಮತ್ತು ತಾಂತ್ರಿಕ ಸಮಾವೇಶವನ್ನು ಏರ್ಪಡಿಸಲಾಗಿರುತ್ತದೆ.
ನಾಲ್ಕು ದಿನಗಳ ಕಾಲ ನಡೆಯುವ ಮೇಳ ಹಲವು ಆಕರ್ಷಣೆಗಳನ್ನು ಒಳಗೊಂಡಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲೆಗಳ ಯಶಸ್ವಿ ಪ್ರಗತಿಪರ ಕೃಷಿಕರಿಗೆ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮೇಳದ ವಿಶೇಷತೆಗಳು; ಕೃಷಿ ಮತ್ತು ತೋಟಗಾರಿಕೆ ಮೇಳ 2023ರ ವಿಶೇಷತೆಗಳಲ್ಲಿ ಹೈಟೆಕ್ ತೋಟಗಾರಿಕೆ-ಹೈಡ್ರೋಪ್ಲೊನಿಕ್ ಕೃಷಿ, ಪುಷ್ಪ ಕೃಷಿ, ತಾರಸಿ ತೋಟ ಮತ್ತು ಲಂಬ ತೋಟ, ಸಂರಕ್ಷಿತ ಕೃಷಿ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯ ವರ್ಧಿತ ಕೃಷಿ ಉತ್ಪನ್ನಗಳು, ಹವಾಮಾನ ಆಧಾರಿತ ಕೃಷಿಯ ಪ್ರಾತ್ಯಕ್ಷಿಕೆಗಳ ಪ್ರದರ್ಶನವಿರುತ್ತದೆ ಮತ್ತು ಈ ಮೇಳದಲ್ಲಿ ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳು ಇರಲಿವೆ.
ಆಸಕ್ತರು ಮತ್ತು ರೈತರು ಹೆಚ್ಚಿನ ಮಾಹಿತಿಗಾಗಿ ಡಾ. ಎಸ್. ಯು. ಪಾಟೀಲ್-9448154542 ಮತ್ತು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ. ಸಿ. ಹನುಮಂತಸ್ವಾಮಿ 9480838976 ಇವರನ್ನು ಸಂಪರ್ಕಿಸಬಹುದು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇಶಕರಾದ ಡಾ. ಬಿ. ಹೇಮ್ಲಾ ನಾಯಕ್ ಮಳಿಗೆ ಕಾಯ್ದಿರಿಸಲು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣದ www.https://uahs.edu.in ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ತೋಟಗಾರಿಕಾ ಮೇಳ; ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಬುಧವಾರ ರಾಷ್ಟ್ರೀಯ ತೋಟಗಾರಿಕೆ ಮೇಳ 2023ಕ್ಕೆ ಚಾಲನೆ ಸಿಕ್ಕಿದೆ. 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ತೋಟಗಾರಿಕೆ ಮೇಳ 2023 ಫೆಬ್ರವರಿ 22 ರಿಂದ 25ರ ತನಕ ನಡೆಯಲಿದೆ.












Click it and Unblock the Notifications