Cauvery Dispute: ಅಭಿಷೇಕ್ ಅಂಬರೀಶ್ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಕ್ರಿಯೆ ಹೀಗಿತ್ತು
ಮಂಡ್ಯ, ಸೆಪ್ಟೆಂಬರ್, 22: ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶದ ನೀಡಿದ್ದು, ಈ ಆದೇಶದ ವಿರುದ್ಧ ಈಗಾಗಲೇ ರಾಜ್ಯದೆಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಈ ವಿಚಾರವಾಗಿ ಇಂದು ಮಂಡ್ಯದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ನಟ ಅಭಿಷೇಕ್ ಅಂಬರೀಶ್ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಭಾಗಿಯಾಗಿದ್ದರು. ಹಾಗಾದರೆ ಈ ಬಗ್ಗೆ ಭಿಷೇಕ್ ಅಂಬರೀಶ್ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಏನು ಹೇಳಿದ್ದಾರೆ ಎಂದು ತಿಳಿಯಿರಿ.
ಮಂಡ್ಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಹಲವಾರು ದಶಕಗಳಿಂದ ಕಾವೇರಿ ಸಮಸ್ಯೆ ಹಾಗೇ ಉಳಿದಿದೆ. ಆದ್ಯತೆ ಮೇರೆಗೆ ಕುಡಿಯುವ ನೀರು ಕೊಡಬೇಕು. ನಂತರ ವ್ಯವಸಾಯಕ್ಕೆ, ಬಳಿಕ ಕೈಗಾರಿಕಾ ಮತ್ತು ಇತರೆ ಬಳಕೆಗೆ ಎಂದು ಹೇಳಿದ್ದಾರೆ.

ಪ್ರತಿವರ್ಷ ತಮಿಳುನಾಡಿಗೆ 419 ಟಿಎಂಸಿ ನೀರು, ಕರ್ನಾಟಕಕ್ಕೆ 270 ಟಿಎಂಸಿ ನೀರು ನಿಗದಿ ಮಾಡಲಾಗಿದೆ. ಆದರೆ ಮಳೆ ಕಡಿಮೆ ಆದ ಸಂಧರ್ಭದಲ್ಲಿ ಸಂಕಷ್ಟ ಸೂತ್ರ ರಚಿಸಬೇಕಿತ್ತು. ಈ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಅದರಲ್ಲೂ ಈ ಬಾರಿ ಡ್ಯಾಂನಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಇದರಿಂದ ಬೆಳೆ ಒಣಗುವುದು ಒಂದೆಡೆ ಆದರೆ ಮನುಷ್ಯನೇ ಒಣಗಿ ಹೋಗುತ್ತಿದ್ದಾನೆ. ಮನುಷ್ಯನ ಅಸ್ಥಿತ್ವವೇ ಈಗ ಪ್ರಶ್ನೆ ಆಗಿದೆ ಎಂದರು.
ನ್ಯಾಯಾಧೀಶರು ಆದೇಶ ನೀಡುವ ಮುನ್ನ ನಮ್ಮ ನೋವನ್ನು ಕೇಳಬೇಕಿತ್ತು. ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲಾಗಿದೆ. ಈಗ ಮತ್ತೆ 5 ಸಾವಿ ಕ್ಯೂಸೆಕ್ 15 ದಿನ ಹರಿಸಲು ಸೂಚನೆ ನೀಡಿದ್ದಾರೆ. ಆದೇಶದಂತೆ ನೀರು ಹರಿದರೆ ಡ್ಯಾಂನಲ್ಲಿ ನೀರು ಉಳಿಯುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ಸರಿಯಾಗಿ ಮನವರಿಕೆ ಮಾಡಿ ನಮ್ಮ ರೈತರ ಹಿತ ಕಾಯಬೇಕು ಎಂದರು.
ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಂತ್ರಿಗಳ ಜೊತೆ ನಾನು ಮಾತಮಾತನಾಡಿ ಸಂಕಷ್ಟ ಸೂತ್ರಕ್ಕಾಗಿ ಒತ್ತಾಯಿಸುತ್ತೇನೆ ಎಂದರು. ಇನ್ನು ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಮಳೆ ಬಿದ್ದಾಗ ಹೆಚ್ಚುವರಿ ನೀರು ಸಂಗ್ರಹಿಸಿದ್ರೆ ಇಂತಹ ಕಷ್ಟ ಕಾಲದಲ್ಲಿ ಹರಿಸಬಹುದು. ಎರಡು ರಾಜ್ಯಗಳಿಗೂ ಮೇಕೆದಾಟು ಯೋಜನೆ ಸಹಕಾರಿಯಾಗುತ್ತದೆ. ಆಗ ನಮ್ಮ ರೈತರು ಸುಖಾಸಮ್ಮನೆ ರಸ್ತೆಗೆ ಬರುವುದಿಲ್ಲ ಎಂದರು.
ರೈತರು ಬೀದಿಗೆ ಇಳಿದಿದ್ದಾರೆ ಎಂದರೆ ಅವರಿಗೆ ಕಷ್ಟ ಇದೆ ಎಂದರ್ಥ. ಇವತ್ತಿನ ಕ್ಯಾಬಿನೆಟ್‌ನಲ್ಲಿ ರೈತರ ಪರ ನಿರ್ಧಾರವಾಗಲಿ. ರೈತರ ಪರವಾಗಿ ಶ್ರೀ ಮಠ ಯಾವಾಗಲೂ ಇರುತ್ತದೆ. ನಮ್ಮನ್ನ ಯಾರು ಕರೆಯದೆ ಇದ್ದರೂ ಬಂದಿದ್ದೇವೆ, ಇದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ದೇವೇಗೌಡರು, ಎಸ್.ಎಂ.ಕೃಷ್ಣ ಬರಬೇಕು. ಕಾನೂನಾತ್ಮಕವಾಗಿ ಯಾವೆಲ್ಲಾ ಕ್ರಮ ತೆಗೆದುಕೊಳ್ಳಬಹದೋ ಅದನ್ನು ಮಾಡಬೇಕು. ರಾಜ್ಯ ಸರ್ಕಾರ ನಮ್ಮವರಿಗೆ ತೊಂದರೆ ಕೊಟ್ಟು ನೀರು ಹರಿಸಬಾರದು ಎಂದರು.
ಪ್ರತಿಭಟನೆಗೆ ಅಭಿಷೇಕ್ ಅಂಬರೀಷ್ ಸಾಥ್
ಇನ್ನು ಮಂಡ್ಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅಭಿಷೇಕ್ ಅಂಬರೀಷ್ ಸಾಥ್ ನೀಡಿದ್ದಾರೆ. ಇನ್ನು ಅವರು ಪ್ರತಿಭಟನೆಗೂ ಮುನ್ನ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು, ನಾನು ಯುವಕನಾಗಿದ್ದೀನಿ, ಯಾವುದೇ ರಾಜಕೀಯ ದೃಷ್ಟಿಯಿಂದ ಇಲ್ಲಿ ಬಂದಿಲ್ಲ. ನಾನು ಚಿಕ್ಕದ್ದಿನಿಂದಾಗಲೂ ಕಾವೇರಿ ಹೋರಾಟ ನೋಡಿ ಬೆಳೆದವನು. ಅಪ್ಪಾಜಿ, ಅಮ್ಮ ಎಲ್ಲರೂ ಕಾವೇರಿ ಪರ ಹೋರಾಟ ಮಾಡಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುವ ಕೆಲಸವನ್ನು ಅಮ್ಮ ಮಾಡುತ್ತಾರೆ. ನಮ್ಮ ನೀರು ಬಿಟ್ಟರೆ ಮುಂದೆ ಕುಡಿಯುವ ನೀರಿಗೂ ತೊಂದರೆ ಆಗುತ್ತದೆ. ನಮ್ಮ ಜನಕ್ಕೆ ನ್ಯಾಯ ಸಿಗಬೇಕು. ಈ ವಿಚಾರದಲ್ಲಿ ಯಾವಾಗಲೂ ಕನ್ನಡ ಚಿತ್ರರಂಗದ ಸಾಥ್ ನೀಡುತ್ತದೆ ಎಂದರು.
ಶೀಘ್ರದಲ್ಲೇ ಅದಕ್ಕೆ ಒಂದು ವೇದಿಕೆ ಸಿದ್ದವಾಗಲಿದೆ. ನಮ್ಮ ಬಳಿ ನೀರು ಇದ್ದರೆ ತಮಿಳುನಾಡಿನವರು ನೀರು ಕೇಳಲಿ. ನಮ್ಮ ಬಳಿಯೇ ನೀರು ಇಲ್ಲದಿದ್ದಾಗ ಅವರಿಗೆ ನೀರು ಕೋಡುವುದು ಹೇಗೆ? ಎರಡೂ ರಾಜ್ಯ ಸರ್ಕಾರಗಳು ಕುಳಿತುಕೊಂಡು ಈ ಬಗ್ಗೆ ಮಾತನಾಡಬೇಕು. ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಅಭಿಷೇಕ್ ಅಂಬರೀಶ್ ಹೇಳಿದರು.












Click it and Unblock the Notifications