ಗುಂಡ್ಲುಪೇಟೆ: ಸಾವಯವ ಸಂತೆ ತೆರೆದು ಅರ್ಥಪೂರ್ಣವಾಗಿ ವಿವಾಹವಾದ ರೈತ.!
ಚಾಮರಾಜನಗರ, ಅಕ್ಟೋಬರ್, 28: ವ್ಯಕ್ತಿಯೋರ್ವ ಸಾವಯವ ಸಂತೆ ತೆರೆದು ಶೇಷವಾಗಿ, ಅರ್ಥಪೂರ್ಣವಾಗಿ ವಿವಾಹ ಆದ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಹಾಗಾದರೆ ಆ ವಧು-ವರ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಗುಂಡ್ಲುಪೇಟೆ ತಾಲೂಕಿನ ಕೆಲಸೂರುಪುರದ ವಸಂತಕುಮಾರ್(ಅಕ್ಷಯ್) ಭಾನುವಾರ (ಅಕ್ಟೋಬರ್ 27) ಯಾವುದೇ ಶಾಸ್ತ್ರ- ಸಂಪ್ರದಾಯಗಳಿಲ್ಲದೇ, ಸಾವಯವ ಸಂತೆ ಏರ್ಪಡಿಸಿ, ವಿಶೇಷ ವಚನ ಕಲ್ಯಾಣ ಮಹೋತ್ಸವದ ಮೂಲಕ ರಾಧಿಕ(ಪಾರ್ವತಿ)ಅವರ ಜೊತೆ ಬಾಳ ಪಯಣ ಆರಂಭಿಸಿದರು.

ಗುಂಡ್ಲುಪೇಟೆ ಜೆಎಸ್‍ಎಸ್ ಅನುಭವ ಮಂಟಪದಲ್ಲಿ ನಡೆದ ಈ ವಿಶೇಷ ಮದುವೆಯಲ್ಲಿ ಸಂತೆಯೇ ಕೇಂದ್ರ ಬಿಂದು ಆಗಿತ್ತು. ಕಲ್ಯಾಣ ಮಂಟಪದ ಪ್ರವೇಶ ದ್ವಾರದಲ್ಲಿ ನೈಸರ್ಗಿಕ ಕೃಷಿಕರು ಸಾವಯವ ಮಳಿಗೆ ತೆರೆದಿದ್ದರು. ವಚನ ಕಲ್ಯಾಣ ಮಹೋತ್ಸವಕ್ಕೆ ಬಂದಿದ್ದ ವಧು-ವರನ ಕಡೆಯವರು ಸಾವಯವ ಪದಾರ್ಥಗಳನ್ನು ಖರೀದಿಸಿ ರೈತರನ್ನು ಪ್ರೋತ್ಸಾಹಿಸಿದರು. ಸ್ಥಳದಲ್ಲಿ ಹಾಜರಿದ್ದ ಸಾವಯವ ಕೃಷಿಕರು ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಡುವ ಮೂಲಕ ಕೃಷಿ ಜ್ಞಾನದ ಪ್ರಸಾರವೂ ಆಯಿತು.
ವಚನ ಗಾಯನ, ಸಹಜ ಶಿವಯೋಗ ಮತ್ತು ಸಾವಯವ ಕೃಷಿಯ ಮಹತ್ವ ಮದುವೆ ಮೆರಗು ಹೆಚ್ಚಿಸಿತು. ಶರಣ ತತ್ವ ಚಿಂತಕರಾದ ಬಸವಯೋಗಿ ಪ್ರಭು ಸ್ವಾಮೀಜಿ, ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಮತ್ತು ಬಸವ ತತ್ವ ಪ್ರಚಾರಕರಾದ ಚೌಡಹಳ್ಳಿ ನಿಂಗರಾಜಪ್ಪರ ನೇತೃತ್ವದಲ್ಲಿ ಲಿಂಗಪೂಜೆ, ವಚನಗಾಯನ ನಂತರ ಮಾಂಗಲ್ಯಧಾರಣೆ ನೆರವೇರಿಸಲಾಯಿತು.
ಜೀವನ ಸಂಗಮ ಪೋರ್ಟಲ್ ಆರಂಭ: ರಾಜ್ಯದ ಅವಿವಾಹಿತ ಯುವಕರಿಗೆ ವಿವಾಹ ಭಾಗ್ಯ ಕಲ್ಪಿಸುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲಾಡಳಿತ "ಜೀವನ ಸಂಗಮ" ಪೋರ್ಟಲ್ ಅನ್ನು ಆರಂಭಿಸಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಜೀವನ ಸಂಗಮ ಎಂಬ ಪೋರ್ಟಲ್ ಆರಂಭಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಇದರ ಸದುಪಯೋಗವನ್ನು ಯಾರೆಲ್ಲಾ ಪಡೆದುಕೊಳ್ಳಬಹುದಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಉತ್ತರ ಕನ್ನಡ ಜಿಲ್ಲೆಯಲ್ಲಿನ ಅವಿವಾಹಿತ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆಯ್ಕೆ ಮಾಡುಕೊಳ್ಳಲು ಮತ್ತು ಹೆಚ್‌ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧವನ್ನು ಬೆಸೆದು ಅವರು ವಿವಾಹ ಆಗಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
ಈ ಪೋರ್ಟಲ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ಸಂಪೂರ್ಣ ಬದ್ಧವಾಗಿದ್ದು, ಎಲ್ಲಾ ದತ್ತಾಂಶವನ್ನು ಗೌಪ್ಯವಾಗಿ ಇರಿಸಿ, ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ-ಯುವತಿಯರಿಗೆ ಮಾತ್ರ ಈ ವಿವಾಹ ನೋಂದಣಿ ವೇದಿಕೆ ಕಲ್ಪಿಸಲಾಗಿದ್ದು, ಜಿಲ್ಲೆಯ ನಿವಾಸಿಗಳು ಮಾತ್ರ ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications