ಕೈ ಕೊಟ್ಟ ಮಳೆ: ಸಿಟ್ಟಿಗೆದ್ದು ಇಂದ್ರ ದೇವನ ವಿರುದ್ಧವೇ ದೂರು ನೀಡಿದ ರೈತ!
ಲಕ್ನೋ, ಜುಲೈ18: ಮಳೆ ಬರಲಿಲ್ಲ ಎಂದರೆ ಸಾಮಾನ್ಯವಾಗಿ ರೈತರು ದೇವರಿಗೆ ಹರಕೆ ಹೊರುವುದು, ಪೂಜೆ ಮಾಡುವುದು ಮಾಡುತ್ತಾರೆ. ಮತ್ತೆ ಕೆಲವೆಡೆ ಕಪ್ಪೆಗಳಿಗೆ ಮದುವೆ ಮಾಡಿಸುವುದು, ಕತ್ತೆಗಳಿಗೆ ಮದುವೆ ಮಾಡಿಸುವ ಆಚರಣೆ ರೂಢಿಯಲ್ಲಿದೆ. ಆದರೆ ಇಲ್ಲೊಬ್ಬ ರೈತ ಮಾತ್ರ ಸರಿಯಾಗಿ ಮಳೆ ಬರದ ಕಾರಣ ರೊಚ್ಚಿಗೆದ್ದು ಇಂದ್ರ ದೇವನ ವಿರುದ್ಧವೇ ಕಂಪ್ಲೇಂಟ್ ಕೊಟ್ಟಿದ್ದಾನೆ. ಮಾತ್ರವಲ್ಲದೆ ಇಂದ್ರ ದೇವನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾನೆ.
ಈ ವಿಲಕ್ಷಣ ಘಟನೆ ನಡೆದಿರುವುದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ. ರೈತನೊಬ್ಬ ಮಳೆ ದೇವರು ಇಂದ್ರನ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾನೆ ಮತ್ತು ಮಳೆ ಕೊರತೆಯಿಂದಾಗಿ ಇಂದ್ರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾನೆ. ದೂರು ಕೊಟ್ಟ ರೈತನನ್ನು ಗೊಂಡಾ ಜಿಲ್ಲೆಯ ಝಾಲಾ ಗ್ರಾಮದ ನಿವಾಸಿ ಸುಮಿತ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. "ಸಮಾಧಾನ ದಿವಸ್" (ದೂರು ಪರಿಹಾರ ದಿನ) ಸಂದರ್ಭದಲ್ಲಿ ಯಾದವ್ ವಿಚಿತ್ರ ದೂರನ್ನು ಸಲ್ಲಿಸಿದ್ದಾನೆ. ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸಲು ಸಂಪೂರ್ಣ ಸಮಾಧಾನ್ ದಿವಸ್ (ಸಂಪೂರ್ಣ ಪರಿಹಾರ ದಿನ)ವನ್ನು ಶನಿವಾರ ಗೊಂಡಾ ಜಿಲ್ಲೆಯಲ್ಲಿ ಆಚರಿಸಲಾಯಿತು.
ಮಳೆ ಕೊರತೆಗೆ ಇಂದ್ರನೇ ಕಾರಣ ಎಂದ ರೈತ
ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿರುವುದು ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ದೂರಿನಲ್ಲಿ ಯಾದವ್ ಹೇಳಿದ್ದಾನೆ. ಈ ಪ್ರದೇಶದಲ್ಲಿ ಕಡಿಮೆ ಮಳೆ ಮತ್ತು ಅನಾವೃಷ್ಟಿಯ ಬಗ್ಗೆ ಭಗವಾನ್ ಇಂದ್ರನನ್ನು ದೂಷಿಸುತ್ತಾ, "ಈ ದೂರಿನ ಮೂಲಕ, ದೂರುದಾರರು ಕಳೆದ ಹಲವು ತಿಂಗಳುಗಳಿಂದ ಮಳೆಯಾಗದಿರುವ ಬಗ್ಗೆ ಗೌರವಾನ್ವಿತ ಅಧಿಕಾರಿಗಳ ಗಮನಕ್ಕೆ ತರಲು ಬಯಸುತ್ತಾರೆ. ಬರಗಾಲದಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯು ಪ್ರಾಣಿಗಳು ಮತ್ತು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಿದೆ. ಇದರಿಂದ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸೂಕ್ತ ಕ್ರಮಕೈಗೊಳ್ಳಲು ಮತ್ತು ಬಾಧ್ಯತೆ ನೀಡುವಂತೆ ಕೋರುತ್ತೇವೆ" ಎಂದು ಬರೆಯಲಾಗಿದೆ.

ಏತನ್ಮಧ್ಯೆ, ಕಂದಾಯ ಅಧಿಕಾರಿ, ಎನ್.ಎನ್. ವರ್ಮಾ ಎಂದು ಗುರುತಿಸಲಾಗಿದ್ದು, ದೂರು ಪತ್ರದ ಮೇಲೆ "ಮಳೆ ದೇವರು" (ಇಂದ್ರ ದೇವ) ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಸ್ಪಷ್ಟವಾಗಿ, ಅವರು ಈ ಪತ್ರವನ್ನು ಓದದೆಯೇ ಮುಂದಿನ ಕ್ರಮಕ್ಕಾಗಿ ಡಿಎಂ ಕಚೇರಿಗೆ ರವಾನಿಸಿದ್ದಾರೆ.
ನಕಲಿ ದೂರು ಎಂದ ಅಧಿಕಾರಿ
ಪತ್ರ ವೈರಲ್ ಆದಾಗ, ವರ್ಮಾ ಅದನ್ನು ಫಾರ್ವರ್ಡ್ ಮಾಡಿಲ್ಲ ಎಂದು ನಿರಾಕರಿಸಿದರು. "ಅಂತಹ ಪತ್ರ ನನಗೆ ಬಂದಿಲ್ಲ. ಆ ದೂರು ಪತ್ರದಲ್ಲಿ ಕಾಣುವುದು ನಕಲಿ ಮುದ್ರೆಯಾಗಿದೆ. ಸಂಪೂರ್ಣ ಸಮಾಧಾನ್ ದಿವಸ್‌ನಲ್ಲಿ ಸ್ವೀಕರಿಸಿದ ದೂರುಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಲಾಗುತ್ತದೆ ಮತ್ತು ಈ ದೂರುಗಳನ್ನು ಬೇರೆ ಯಾವುದೇ ಕಚೇರಿಗಳಿಗೆ ರವಾನಿಸುವುದಿಲ್ಲ. ಆದ್ದರಿಂದ, ಈ ಸಂಪೂರ್ಣ ವಿಷಯವು ಪೂರ್ವ ನಿಯೋಜಿತ ಎಂದು ಕಾಣುತ್ತದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸಲಾಗುವುದು ಎಂದು ವರ್ಮಾ ಹೇಳಿದ್ದಾರೆ.

ಆದರೆ ವೈರಲ್ ಆಗಿರುವ ಪತ್ರದಲ್ಲಿ ಪತ್ರದಲ್ಲಿ ಅವರ ಸಹಿ ಮತ್ತು 'ಮುಂದಿನ ಕ್ರಮಕ್ಕಾಗಿ ಫಾರ್ವರ್ಡ್ ಮಾಡಲಾಗಿದೆ' ಎಂದು ಬರೆಯಲಾಗಿದೆ.












Click it and Unblock the Notifications