ಹೆಂಡತಿ, ಮಕ್ಕಳನ್ನು ಅನಾಥ ಮಾಡಿದ ಕೆ.ಆರ್ ಪೇಟೆ ರೈತ
ಮಂಡ್ಯ, ಡಿಸೆಂಬರ್, 03: ರೈತರ ಪಾಲಿಗೆ ಸಾಲ ಶೂಲವಾಗುತ್ತಿದೆ. ಪರಿಣಾಮ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸಾಲ ಬಾಧೆಗೆ ಜೀವ ಕಳೆದುಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಗ್ರಾಮದ ನಿವಾಸಿ ಮಂಜಯ್ಯ (26) ಎಂಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ತಾಯಿ ಪುಟ್ಟಗೌರಮ್ಮ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]

ತಂದೆ ತೀರಿದ ಬಳಿಕ ಮಂಜಯ್ಯ ತಮಗಿದ್ದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ತಂದೆಯ ಹೆಸರಿನಲ್ಲಿರುವ 20ಗುಂಟೆ ಜಮೀನು ಮತ್ತು ರಾಮಯ್ಯ ಎಂಬುವವರ 2 ಎಕರೆ ಜಮೀನನ್ನು ಗುತ್ತಿಗೆ ಪಡೆದು ಅದರಲ್ಲಿ ಕೃಷಿ ಮಾಡುತ್ತಿದ್ದರು.
ಈ ನಡುವೆ ಸೀಮೆ ಹಸು ಖರೀದಿ ಮತ್ತು ಕೃಷಿಗೆಂದು ಸಾರಂಗಿ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್, ಸ್ವಸಹಾಯ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಕೈಸಾಲ ಮಾಡಿದ್ದರು. ಮಳೆ ಕೈಕೊಟ್ಟು ಜಮೀನಿನಲ್ಲಿ ಬೆಳೆ ಬೆಳೆಯಲಾಗದ ಕಾರಣ ಚಿಂತೆಗೀಡಾಗಿದ್ದರು.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ಬಹಳ ದಿನಗಳಿಂದ ಸಾಲಗಾರರ ಕಾಟವೂ ಹೆಚ್ಚಾಗಿದ್ದು, ಸಾಲ ನೀಡುವಂತೆ ಒತ್ತಾಯಿಸುತ್ತಿದ್ದರು. ಇದೆಲ್ಲದರಿಂದ ನೊಂದ ಮಂಜಯ್ಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತನಿಗೆ ಪತ್ನಿ ಹೇಮಲತ ಹಾಗೂ 1ವರ್ಷದ ಹೆಣ್ಣು ಮಗು ಇದೆ.












Click it and Unblock the Notifications