Krishi Mela 2022: ನ.3 ರಿಂದ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ
ಬೆಂಗಳೂರು, ನ. 02: ನವೆಂಬರ್ 3 ರಿಂದ ನಾಲ್ಕು ದಿನಗಳ ಕಾಲ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ ಆವರಣದಲ್ಲಿ ಕೃಷಿ ಮೇಳ 2022 ಮತ್ತು ಕೃಷಿ ವಸ್ತು ಪ್ರದರ್ಶನ ನಡೆಯಲಿದೆ. ಈ ಬಾರಿಯ ಕೃಷಿ ಮೇಳವು ಸ್ಟಾಟ್‌ಆಪ್‌ಗಳಿಗೆ ಒತ್ತು ನೀಡಲಾಗಿದೆ.
ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವು ಆಯೋಜಿಸಿರುವ ಈ ನಾಲ್ಕು ದಿನಗಳ ಮೇಳವು ಹಲವಾರು ಬೆಳೆ ಪ್ರಭೇದಗಳು, ಹೊಸ ಉಪಕರಣಗಳು, ಬೆಳೆಗಳ ಪ್ರಾತ್ಯಕ್ಷಿಕೆ, ಸಾಕು ಪ್ರಾಣಿಗಳು ಮತ್ತು ಪ್ರಶಸ್ತಿ ವಿತರಣೆಯನ್ನು ಒಳಗೊಂಡಿರುತ್ತದೆ. ಈ ಬಾರಿಯ ಕೃಷಿ ಮೇಳವು 'ಕೃಷಿಯಲ್ಲಿ ನವೋದ್ಯಮ' ಘೋಷಣೆ ಅಡಿಯಲ್ಲಿ ನಡೆಯುತ್ತಿದೆ.
ಈ ವರ್ಷದ ಕೃಷಿ ಮೇಳವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ರಾಜ್ಯ ಸರ್ಕಾರದ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿವಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಆಯೋಜಿಸಲಾಗಿದೆ.

ಈ ಬಾರಿಯ ಕೃಷಿ ಮೇಳದಲ್ಲಿ ಸ್ಟಾಟ್‌ಆಪ್‌ಗಳಿಗೆ ಒತ್ತು
ಕೃಷಿ ಮೇಳ- 2022-23ರ ನಾಲ್ಕು ದಿನಗಳಲ್ಲಿ ಸುಮಾರು ಹದಿನೈದು ಲಕ್ಷ ಜನರು ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಕೃಷಿ ಮೇಳವು ಕೃಷಿಯಲ್ಲಿ ನವೋದ್ಯಮ ಎಂಬ ಘೋಷಣೆ ಅಡಿಯಲ್ಲಿ ನಡೆಯುತ್ತಿದ್ದು, ಸ್ಟಾಟ್‌ಆಪ್‌ಗಳಿಗೆ ಒತ್ತು ನೀಡಲಾಗಿದೆ.
ಸ್ಟಾಟ್‌ಆಪ್‌ಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು, ಕೃಷಿ ವಲಯದಲ್ಲಿ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಉದ್ಯಮಗಳ ಸಮುದಾಯದ ಮುಖಂಡರು ಭಾಗವಹಿಸುವ ಸಂವಾದಗಳನ್ನು ಮೇಳದಲ್ಲಿ ಆಯೋಜಿಸಲಾಗುತ್ತದೆ.

ಸುಗ್ಗಿಯ ನಂತರದ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳ ಸಂವಾದ
'ರೈತರಿಂದ ರೈತರಿಗೆ ವೇದಿಕೆ' ಅಂಗವಾಗಿ ಮೂರು ಸಂವಾದಗಳು ನಡೆಯಲಿವೆ. ಈ ಸಂವಾದಗಳಲ್ಲಿ ಸುಗ್ಗಿಯ ನಂತರದ ತಂತ್ರಜ್ಞಾನ, ಕೃಷಿ ಮತ್ತು ಸಾವಯವ/ನೈಸರ್ಗಿಕ ಕೃಷಿಯಲ್ಲಿನ ಸ್ಟಾರ್ಟ್‌ಅಪ್‌ಗಳ ಮೇಲೆ ಕೇಂದ್ರೀಕರಿಸುತ್ತವೆ. ಈ ಸಂವಾದಗಳಲ್ಲಿ ರಾಜ್ಯಾದ್ಯಂತ ಇರುವ ಕೃಷಿ ಸ್ಟಾರ್ಟ್‌ಅಪ್‌ಗಳ ಮುಖಂಡರು ಭಾಗವಹಿಸಲಿದ್ದಾರೆ.
ಇದರಲ್ಲಿ ಶಿವಮೊಗ್ಗದ ಸ್ಟಾರ್ಟ್‌ಅಪ್ ಆಗಿರುವ ರೂಟ್ಸ್‌ಗುಡ್ಸ್ ಭಾಗವಹಿಸಲಿದೆ. ಈ ತಂಡವು ರೈತರು ಮತ್ತು ಗ್ರಾಹಕರು ತಮ್ಮ ಬೆಳೆಗಳಿಗೆ ಬೆಲೆಗಳನ್ನು ಮಾತುಕತೆ ಮಾಡಲು ಮತ್ತು ಗುಣಮಟ್ಟದ ಭರವಸೆ ಪರಿಶೀಲನೆಗಳನ್ನು ನಡೆಸಲು ಸಹಾಯ ಮಾಡುವ ವೇದಿಕೆಯನ್ನು ರಚಿಸಿದ್ದಾರೆ.
ಇನ್ನು ಡ್ರೋನ್ ಡೇಟಾದ ಮೂಲಕ ವಿಶ್ಲೇಷಣೆಯನ್ನು ಒದಗಿಸುವ ವಿಶೇಷ ಕೃಷಿ ಸ್ಟಾರ್ಟ್‌ಅಪ್ ಬೀಗಲ್ ಅಗ್ರಿಟೆಕ್ ಕೂಡ ಸಂವಾದದಲ್ಲಿ ಭಾಗವಹಿಸಲಿದೆ.

ಪ್ರಗತಿಪರ ರೈತರಿಗೆ ಪ್ರಶಸ್ತಿಗಳ ವಿತರಣೆ
ಮೇಳದಲ್ಲಿ ಸಾಮಾನ್ಯ ವೇದಿಕೆಗಳನ್ನು ನಿರ್ಮಿಸುವ ಜೊತೆಗೆ, ಈ ವರ್ಷವೂ ಬೃಹತ್ ವೇದಿಕೆಯನ್ನು ಮಾಡಲಾಗಿದೆ. ಇದನ್ನು ನಿರ್ದಿಷ್ಟವಾಗಿ ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ಮೀಸಲಿಡಲಾಗಿದೆ.
ಮೇಳದಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುತ್ತಿದೆ. ಅವುಗಳೆಂದರೆ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ/ ರೈತ ಮಹಿಳೆ ಪ್ರಶಸ್ತಿ, ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ/ ರೈತ ಮಹಿಳೆ ಪ್ರಶಸ್ತಿ, ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ/ ರೈತ ಮಹಿಳೆ ಪ್ರಶಸ್ತಿ ನೀಡಲಾಗುತ್ತದೆ.

ಮೇಳದಲ್ಲಿ ಇರಲಿವೆ ಸುಮಾರು 700 ಮಳಿಗೆಗಳು
ಹಾಸನ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ.ರಾಜೇಗೌಡ ಅವರಿಗೆ ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಗ್ರಾಮ ಪ್ರಗತಿ ಪರ ಕೃಷಿಕ ಎಚ್. ಜಿ. ಗೋಪಾಲಗೌಡ ಅವರಿಗೆ ಎಚ್. ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಗುತ್ತದೆ. ಇದರ ಜೊತೆಗೆ ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ಒಟ್ಟಾರೆಯಾಗಿ, ಮೇಳದಲ್ಲಿ ಸುಮಾರು 700 ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಮೇಳವು ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.












Click it and Unblock the Notifications