ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಂಟು ಎದೆ ತಾವ್ ವಸಿ ಲೂಜು

By Staff
|
Google Oneindia Kannada News

In search of a fitting tailor-humor, bhaskar
*ನಾ ಭಾಸ್ಕರ, ನ್ಯೂಜಿಲೆಂಡ್

ಅವಿರತವಾಗಿ ಹರಿಯುತ್ತಲೇಇದ್ದ ಹಲಸೂರು ಟ್ರಾಫಿಕ್ಕಿನ ನದಿಯನ್ನು ದಾಟಲು ಹವಣಿಸುತ್ತಿದ್ದ ಬಚ್ಚಪ್ಪ ಎರಡು ಮೂರು ಬಾರಿ ಅನುಮಾನಿಸುತ್ತಲೇ ಇಳಿದವನು ಬಸ್ಸು ಲಾರಿಗಳು ಯಾವ ಮುಲಾಜೂ ಇಲ್ಲದೆ ಅವನ ಮೈಮೇಲೇ ಬರುವಂತೆ ಕಂಡಾಗ ಹೆದರಿ ಮತ್ತೆ ಫುಟ್‍ಪಾತಿನ ದಡ ಸೇರಿಕೊಂಡಿದ್ದ.

"ಇದೇನ್ ಈ ಬೆಂಗ್ಳೂರಗಿರೋರೆಲ್ಲ ರೋಡ್‍ಮ್ಯಾಗೇ ಇದ್ದಂಗವ್ರಲ್ಲಪೋ! ಈಟೊಂದ್ ಗಾಡಿಗ್ಳು ಒಂದೇ ದೋ ಅಂತ ಅದೆಲ್ಗೊಂಟವೊ?"

"ಇವತ್ ಮುಂದ್ಕಾರು ಒಯ್ತಾ ಅವೆ ಕಣ್ಲೇ, ನಾನ್ ಓದ್ಸಲಿ ಬಂದಿದ್ದಾಗ್ ಯಾವ್ದೋ ಪಡ್ಡೆ ಉಡ್ಗುರ್ ಪಾರ್ಟಿ ಮೆರ್ವಣ್ಗೆ ಅಂತ ರೋಡ್ ಅಡ್ಡ ಆಕ್ಬುಟ್ಟೂ, ಎಲ್ಲ್ ನೋಡುದ್ರೂ ಎಣಕ್ ಸಾಮ್ರಾಣಿ ಬುಡೋವಂಗ್ ಒಗೆ ಬುಟ್ಕಂಡ್ ನಿಂತ್ಬುಟ್ಟಿದ್ವು ಗಾಡಿಗ್ಳು" ಎನ್ನುತ್ತ ರಾಮಣ್ಣ ಸಿಗ್ನಲ್ಲಿಗೆ ನಿಲ್ಲತೊಡಗಿದ್ದ ಟ್ರಾಫಿಕ್ಕಿನ ಮಧ್ಯೆ ದಾರಿ ಮಾಡಿಕೊಂಡು ರಸ್ತೆ ದಾಟತೊಡಗಿದ. ಬಚ್ಚಪ್ಪ ಅವಸರವಸರವಾಗಿ ಹಿಂಬಾಲಿಸಿದ. ಅಷ್ಟರಲ್ಲಿ ಬಲಗಡೆಯಿಂದ ಯಾವನೋ ಕುಸೇಲನ್ ಶಿಷ್ಯ ಬೈಕನ್ನು ಸಂದು ಕಂಡಲ್ಲಿ ನುಸುಳಿಸುತ್ತ ವ್ರೂಂ ವ್ರೂಂ ಎನ್ನಿಸುತ್ತ ಅವನನ್ನು ಗುಮ್ಮುವಂತೆ ನುಗ್ಗಿದಾಗ ರೊಚ್ಚಿಗೆದ್ದ ಬಚ್ಚಪ್ಪ,

"ಯೈ ನಿಲ್ಸಲೇ ನಿಮ್ಮ್.., ಜಾಡ್ಸ್ ಒದ್ಬುಟ್ಟೇನು, ಎತ್ತುಚ್ಚೆ ಉಯ್ದಂಗ್ ನೀವ್ ಗಾಡಿಗ್ಳೋರ್ ಇಂಗ್ ಒಂದೇಸಮ ಬತ್ತಾನೇ ಇದ್ರೆ ಮನ್ಸ್ರು ಈಕಡೀಂದಾಕಡೀಕ್ ಓಗದ್ ಎಂಗಲೇ?" ಎನ್ನುತ್ತ ಅವನನ್ನು ಕೆಕ್ಕರಿಸಿ ನೋಡಿದ ಬಚ್ಚಪ್ಪ ಹೆಗಲ ಮೇಲಿನ ಟವಲನ್ನು ಮಾತಿಗಿಂತ ಜೋರಾಗಿ ಒಮ್ಮೆ ಝಾಡಿಸಿದ. ಎದುರುಬೊಗಳಲು ತಯಾರಾಗುತ್ತಿದ್ದ ಮರಿ ರಜನಿ ಬಚ್ಚಪ್ಪನ ಕೆಂಡಾವತಾರ ಕಂಡು ಗಲಿಬಿಲಿಗೊಂಡು ತನ್ನ ಕಪ್ಪು ಕನ್ನಡಕವನ್ನು ರೊಯ್ಯನೆ ತೆಗೆದು ಅದನ್ನೊಮ್ಮೆ ಮುನಿಸಿನಿಂದ ನೋಡಿ ಮತ್ತೆ ತೊಟ್ಟುಕೊಂಡ. ಜನಸಂದಣಿಯಲ್ಲಿ ಕಣ್ಮರೆಯಾಗುತ್ತಿದ್ದ ರಾಮಣ್ಣನ ಹಳದಿ ಟವಲನ್ನು ಹಿಂಬಾಲಿಸುವ ತರಾತುರಿ ತೋರಿದ ಬಚ್ಚಪ್ಪ.

ಬಚ್ಚಪ್ಪ ರಾಮಣ್ಣನಿಗೆ ದೂರದ ಸಂಬಂಧಿಯಾದರೂ ಬಲು ಹತ್ತಿರದ ಬಂಟನಾಗಿದ್ದ. ರಾಮಣ್ಣನ ಯಾವುದೇ ಕಾರ್ಯ ಕೈಗೊಳ್ಳಲಿ, ಎಲ್ಲಿಗೇ ಪ್ರಯಾಣ ಬೆಳೆಸಲಿ ಹನುಮಂತನಂತೆ ಬಚ್ಚಪ್ಪ ಹಿಂದೆಯೇ ಇರುತ್ತಿದ್ದ. ಇಬ್ಬರಿಗೂ ಮುಂಬರಲಿದ್ದ ವಿದೇಶ ಪ್ರವಾಸದ ಸಂಭ್ರಮ. ನ್ಯೂಜಿಲೆಂಡಿನಲ್ಲಿದ್ದ ರಾಮಣ್ಣನ ಭಾಮೈದ ಮುದ್ದುಕೃಷ್ಣ ಇವರನ್ನು ಅಲ್ಲಿಗೆ ಕರೆಸಲು ವೀಸಾದ ವ್ಯವಸ್ಠೆ ಮಾಡಿದ್ದ. ಇವರಿಬ್ಬರ ಬಳಿ ಜಮೀನನ್ನು ಸೈಟುಗಳಾಗಿ ಮಾರಿ ಬಂದ ಬಂಡಿ ಹಣ ಇಂಥ ಹತ್ತಾರು ವಿದೇಶಿ ಪ್ರವಾಸ ಮಾಡಿದರೂ ಕರಗದಷ್ಟು ಕೊಳೆಯುತ್ತಿತ್ತು. ಹೋಗಲು ವಿಮಾನದ ಟಿಕೆಟ್ಟುಗಳನ್ನೂ ಕೊಂಡಾಗಿತ್ತು. ವಿದೇಶಕ್ಕೆ ತಕ್ಕ ದಿರಿಸು ಹೊಲೆಸಿಕೊಳ್ಳಲು ಬೆಂಗಳೂರಿಗೆ ಬಂದು ಹಲಸೂರಿನಲ್ಲಿ ರಾಮಣ್ಣನಿಗೆ ಪರಿಚಯವಿದ್ದ ಟೈಲರ್ ಅಂಗಡಿಯನ್ನು ಅರಸಿ ಹೊರಟಿದ್ದರು.

ಬೆಂಗಳೂರಿನ ಟ್ರಾಫಿಕ್ಕಿನ ಬಿಸಿಗೆ ಬೆಂದ ಬಚ್ಚಪ್ಪ "ಈ ರಾಮಾಯ್ಣ ಬ್ಯಾಡ ಅಂತಾನೆ ನಾನ್ ಯೋಳಿದ್ದು ನಮ್ಮೂರ್ ರಾಮೋಜಿ ತಾವೇ ಒಲ್ಸ್ಬುಡಮ ಬಟ್ಟೆಯ ಅಂತ" ಎಂದು ಚಡಪಡಿಸಿದ, ಹೊಗೆಯ ಸಮುದ್ರದಲ್ಲಿ ಉಸಿರು ಹಿಡಿದು ಮುಳುಗಿ ತೇಲಿ ಒದ್ದಾಡಿ ಸಾಕಾಗಿ.

"ಅದೇ ನಿನ್ತಮ್ಮುನ್ ಮದಿವ್ಗ್ ಒಲ್ಸ್ಕಂಡಿದ್ಯಲ್ಲಪ ಪ್ಯಾಂಟು ಅವುಂತಾವ, ಒಳ್ಳೆ ನಮ್ಮ ದಾಕ್ಸಿ ತ್ವಾಟುದ್ ಬೆದುರ್ ಬೊಂಬೆಗ್ ಆಕಿರ ಪ್ಯಾಂಟಿದ್ದಂಗೈತದು. ನೀನ್ ಅದ್ನಾಕ್ಕಂಡಿದ್ರೆ ಪ್ಯಾಂಟ್ ಆಕ್ಕಂಡಿದ್ಯೋ ಪಂಚೆ ಉಟ್ಗಂಡಿದ್ಯೋ ಅನ್ನದೇ ಗೊತ್ತಾಗಕಿಲ್ಲ" ಎಂದು ರಾಮೋಜಿಯ ದರ್ಜಿಕಲೆಯ ದಕ್ಷತೆಯನ್ನು ಉಪೇಕ್ಷಿಸಿದ ರಾಮಣ್ಣ.

"ನೀನ್ ಅವುನ್ಗೆ ಬಟ್ಟೆ ಯೇಷ್ಟ್ ಆಗ್ಬಾರ್ದು ಅಂತ ಗುರಾಯಿಸ್ದೆ, ಅವ್ನು ಇರದ್ನೆಲ್ಲ ಆಕಿ ಒಲುದ್ನಪ್ಪ" ಬಚ್ಚಪ್ಪ ರಾಮೋಜಿಯ ರಕ್ಷಣೆಗೆ ನಿಂತ.

"ಲೈ, ಬಟ್ಟೆ ಯೇಷ್ಟ್ ಮಾಡ್ಬ್ಯಾಡ ಅಂದ್ರೆ ಮಿಕ್ಕಿದ್ರಲ್ ಬ್ಯಾಗೋ ತಲ್ದಿಂಬೋ ಒಲ್ಕೊಡೂಂತ, ಇಲೀ ಸೈಜ್ ಪ್ಯಾಂಟ್ನ ಆನೆ ಸೈಜ್ಗ್ ಒಲಿ ಅಂತಲ್ಲ. ನಾನ್ ಬಡ್ಕಂಡೆ, ಅಷ್ಟ್ ಸಡ್ಲ ಒಲ್ಸ್ಬ್ಯಾಡ್ ಕಣ್ಲೆ ಅಂತ..."

"ಇಲ್ಲಾ.. ಆ ಜ್ಯೋತಿಲಕ್ಸ್ಮಿ ಆಕ್ಕಣ್ತಿದ್ಲಲ್ಲ ಅಂಗ್ ಒಲ್ಸ್ಕಮಣಪ...ಆಮ್ಯಾಕ್ ಅದ್ನ ಆಕ್ಕಣಕ್ ಒಂದಿನ ತಗ್ಯಕ್ ಒಂದಿನ..."

"ಲೇ ಬಚ್ಚೇಗೌಡ, ಆ ರಾಮೋಜಿ ನಿನ್ ಪ್ಯಾಂಟ್ ಒಲ್ದಿರೊ ಉಟ್ಟು ಸೊಂಟುದ್ ತಾವ್ ಕಟ್ಗಣೋ ಬೆಲ್ಟು ಎದೆ ತಾವ್ ಬಂದೈತಲ ಲೈ. ಅದ್ನಾಕ್ಕಂಡಿದ್ದಾಗ್ ನೀನೇನಾರ ಒಂದುಕ್ಕೋಬೇಕಾದ್ರೆ ಪಷ್ಟು ಸಲ್ಟು ಬಿಚ್ಚ್ಬೇಕಾಯ್ತದೆ ನೋಡಪ.."

"ಥೂ ನಂಗ್ ಇದ್ಕೇ ರೇಗದು. ಯಾವನಿಗ್ ಬೇಕಾಗಿತ್ತಪ ಈ ಪ್ಯಾಂಟ್ ಸಾವಾಸ? ನೀನ್ 'ಪ್ಯಾಟೆಗೋಗಕ್ ಒಂದಿರ್ಲಿ ಒಲ್ಸ್ಕಳಲೇ' ಅಂದೆ ಅಂತ್ ಒಲ್ಸ್ಕಂಡ್ರೆ ಇವಗ್ ಅದ್ನ್ ನೋಡ್ದಾಗೆಲ್ಲ ಒಳ್ಳೆ ಸೀಳ್ ನಾಯ್ ಊಳಿಟ್ಟಂಗೆ ನಗ್ತಿಯ. ಅದ್ಕೆ ಇದ್ರ್ ತಂಟೇನೇ ಬ್ಯಾಡ ಅಂತಿನಿ - ನೀಜ್‍ಲೆಂಡ್ಗೂ ಇಂಗೇ ಪಂಚೆ ಸಲ್ಟು ಆಕ್ಕಂಡೇ ಓಗ್ಬರಮ ನಡಿ ಏನಿವಗ?"

"ಅಲ್ಲ್ ಪಂಚೆ ಉಟ್ಗಂಡ್ ಓಡಾಡುದ್ರೆ ಸಳೀಗ್ ಜೀವ ಬತ್ತೋಯ್ತವಂತೆ ಕಣ್ಲೇ" ಬಚ್ಚಪ್ಪನ ಕಡೆ ಕೀಟಲೆಯ ಕಣ್ಣುಕುಣಿಸಿದ ರಾಮಣ್ಣ

"ಇದ್ ಬ್ಯಾಸ್ಗೆ ಕಾಲ, ಅದ್ಯಾಕ್ ಸಳಿ ಆದಾತೂ?" ಬಚ್ಚಪ್ಪ ರಾಮಣ್ಣನಿಗೆ ತನ್ನ ತೀಕ್ಷ್ಣ ತರ್ಕಶಕ್ತಿಯ ಬಿಸಿ ತಟ್ಟಿಸಿದ.

"ಇಲ್ಲ್ ಬ್ಯಾಸ್ಗೆ ಇದ್ದಾಗ್ ಅಲ್ಲಿ ಸಳಿಗಾಲ್ವಂತೆ ಕಣ. ಇಲ್ಲಿ ಬೂಮಿ ಕಾವ್ಲಿ ಬೇಯಂಗಿದ್ದಾಗ್ ಅಲ್ಲಿ ಮಂಜ್ ಬೀಳ್ತದಂತೆ" ಎಂದು ವಿವರಿಸಿದ ರಾಮಣ್ಣ.

"ಯೇ, ನಂಗ್ ಗೊತ್ತಾಗಕಿಲ್ಲ ಅಂತ ಸುಮ್ಕ್ ಇಲ್ಲುದ್ದೆಲ್ಲಾ ಯೋಳ್ತ್ಯ. ನಮ್ಗ್ ಬ್ಯಾಸ್ಗೆ ಕೊಡೋ ಸೂರ್ಯ ಅದೆಂಗ್ಗ್ ಅವ್ರುಗ್ ಮಾತ್ರ ಸಳಿಗಾಲ ಕೊಟ್ಬುಟ್ಟಾನೂ?"

"ಲೈ, ಗೊತ್ತಿಲ್ಲುದ್ನ್ ಕೇಳ್ ತಿಳ್ಕಬೆಕು ಅಂತರೆ ದ್ವಡೋರು. ಇಸ್ಕೂಲ್ಗ್ ಚಕ್ಕರ್ ವಡಿದಲೆ ನ್ಯಟ್ಗೋಗ್ ಕಲ್ತಿದ್ರೆ ಒಂದೀಟ್ ತಿಳ್ಕಂಡಿರಿವೆ"

"ಔದೇಳು, ನಮ್ಮ್ ಐನೋರ್ ಉಡ್ಗ ದೊಡ್ಡೆಮ್ಮೆ ಪ್ಯಾಸ್ ಮಾಡ್ಕ ಬಂದಿಲ್ವೆ? ಎಕರೇಗ್ ಏಟ್ ಪಲ್ಲ ರಾಗಿ ಆದಾವ್ಲ ಅಂದ್ರೆ ಗೊತ್ತಿಲ್ಲಂತೆ ಮುಕ್ಕಣ್ಣಂಗೆ"

"ಲೇ ಬಡ್ಡೆತದೇ, ಬೂಮಿ ಮ್ಯಾಗಿನರ್ದ ಬ್ಯಾಸ್ಗೇಲ್ ಇದ್ರೆ ಕ್ಯಳ್ಗಿನರ್ದ ಸಳಿಗಾಲ್ದಲ್ಲಿರ್ತೈತೆ. ಇದು ನೇಮ. ನಾ ಯೋಳ್ತಿನಿ, ಅಮಿಕ್ಕಂಡ್ ಕೇಳ್ ತಿಳ್ಕ........ಅಂದಂಗೆ, ಇಮಾನ್ದಗ್ ಕುಂತಿದ್ದಾಗ ಇಂಗೇ ನಂಗೆಲ್ಲ ಗೊತ್ತೈತೆ ಅಂತ್ ಎಂಗಂದ್ರಂಗೆ ಆಡಂಗಿಲ್ಲ ಗೊತ್ತಾಯ್ತ? ಅಲ್ಲ್ ಯಾರ್ಗೂ ಕನ್ನಡ ಬರಕಿಲ್ಲ, ಬರಿ ಇಂಗ್ಲೀಸೆಯ. ಎನರ ಬೇಕಿದ್ರೆ ನನ್ನ ಕ್ಯೋಳು, ನಾನೇಳಿ ತರುಸ್ತಿನಿ"

"ನಿಂಗ್ ಇಂಗ್ಲೀಸ್ ಬತ್ತದ?"

"ಬರಕಿಲ್ಲ. ಆದ್ರೆ ಏನೇನ್ ಕೇಳ್ಬೇಕಾಯ್ತದೋ ಅವ್ಕೆಲ್ಲ ಚೀಟಿ ಬರ್ಸ್ ಮಡ್ಗಿವ್ನಿ. ನೀರ್ ಕ್ಯೋಳಕ್ಕೆ, ಟೀವೀ ಆಕಕ್ಕೆ, ಇತ್ತ್ಲ್ ಕಡೆ ಓಗದುಕ್ಕೆ, ಎಲ್ಲಾದ್ಕೂನೂ... "

"ಓ, ಅದ್ಕೂನೂ? ಔದೂ, ಆಟೋಂದ್ ಜನ ಆಕಾಸ್ದಾಗ್ ಇತ್ತ್ಲು ಕಡೆ ಓದ್ರೆ ಅದೆಲ್ಲ ಎಲ್ಲಿಗೋಯ್ತದೋ..."

"ಎಲ್ಲಾ ಒಂದ್ ಕಡೆ ಬ್ಯಾಗ್ನಗ್ ಮಡ್ಗಿರ್ತಾರಂತೆ ಕಣ್ಲ"

"ಸಿವಾ, ಆ ಬ್ಯಾಗೇನಾರ ಜಾರಿ ಕ್ಯಳುಕ್ ಬೀಳ್ಬೇಕ್ ನೋಡೂ.... ಸುಮ್ಕ್ ನಮ್ಮ್ ರೈಲ್ನೋರ್ ಬುಟ್ಟಂಗೆ ಅಲ್ಲಲ್ಲೆ ಬುಟ್ರಾಗಕುಲ್ವೆ?"

"ಲೈ, ಅವ್ರ್ ಯವಾರಕ್ ಅವ್ರ್ ಏನಾರ ಯವಸ್ತೆ ಮಾಡ್ಕಂಡಿರ್ತರೆ, ನಿಂಗ್ಯಾಕ್ಲ ಅದ್ರ್ ತಕ್ರಾಲು? ಸುಮ್ಕ್ ನಾನ್ಯೋಳ್ದಂಗ್ ನಡ್ಕಳದ್ ಕಲ್ತ್ಕ" ಎನ್ನುತ್ತ ಬಚ್ಚಪ್ಪನ ನಿಷ್ಕಲ್ಮಷ ಮನಸ್ಸಿನಲ್ಲಿ ಉದ್ಭವಿಸಿದ್ದ ಕಲ್ಮಷದ ಪ್ರಶ್ನೆಗಳಿಂದ ದಣಿಯುತ್ತಿದ್ದ ರಾಮಣ್ಣ ಫುಟ್‍ಪಾತಿನ ಅಂಚಿಗಿದ್ದ ಬೀಡಾ ಅಂಗಡಿಯ ಕಡೆ ತಿರುಗಿ "ಬೀಡ ಆಕಮಾ?" ಎಂದ

"ಊಂ..ಗುಲ್ಕನ್ ಆಕ್ಸು"

"ಒಹೊಹೊ, ಮುಗಲ್ರ್ ದರ್ಬಾರಗ್ ಉಟ್ಟ್‍ಬೆಳ್ದ್ ನನ್ಮಗ ನೀನು, ಗುಲ್ಕನ್ ಇಲ್ದಿದ್ರ್ ಆಗಕಿಲ್ಲ ನೋಡು. ಸಿಗ್ರೇಟ್ ಸೇದೀಯಾ?"

"ತಕ ಸೇದವ"

"ಯಾವ್ದು?"

"ಇಲ್ಷಿಲ್ಟ್ರು.."

ರಾಮಣ್ಣ ಅಂಗಡಿಯವನ ಕಡೆ ನೋಡಿದ.

"ಸಿಗರೇಟ್ ಎಂಥ ಕೊಡ್ಲಿ?" ಇನ್ನಷ್ಟು ಕಿವಿಗೊಟ್ಟು ಕೇಳಿದ ಬೆಳ್ತಂಗಡಿಯ ಅಂಗಡಿಯವ, ಬಚ್ಚಪ್ಪನ ಆಕ್ಸೆಂಟ್ ಅರ್ಥವಾಗದೆ

"ಯೇ, ಇಲ್ಷಿಲ್ಟ್ರಪೋ.." ಬಚ್ಚಪ್ಪ ಪ್ಯಾಕೆಟ್ಟನ್ನು ಮುಟ್ಟಿ ತೋರಿಸಿದ

"ಓ, ವಿಲ್ಸ್ ಫಿಲ್ಟ್ರಾ...ಹಿಹ್ಹಿ?" ಅಂಗಡಿಯವನು ಹಲ್ಲುಕಿರಿದ

"ಊಂಕಣ್ ತತ್ತಾರ್ಲೇ" ಬಚ್ಚಪ್ಪ ಸಿಡಿಮಿಡಿದ, ಅಂಗಡಿಯವನ ನಗೆ ತನ್ನ ಬಗ್ಗೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಿ.

ಇಬ್ಬರೂ ಸ್ಪೀಟ್ ಬೀಡ ಜಗಿಯುತ್ತ ಇಲ್ಷಿಲ್ಟರಿನ ಹೊಗೆ ಹೀರುತ್ತ ಸೊಂಟದ ಬೆಲ್ಟು ಎದೆಯ ಮಟ್ಟಕ್ಕೆ ಬರದಂತೆ ಪ್ಯಾಂಟೂ, ಜೇಬು ಮಂಡಿಯ ಮಟ್ಟಕ್ಕೆ ಬರದಂತೆ ಕೋಟೂ ಹೊಲೆಯಬಲ್ಲ ಅಪರೂಪದ ಕಲೆಯುಳ್ಳ ಹಲಸೂರಿನ ಕೃಷ್ಣೋಜಿ ಟೈಲರ್ ಅಂಗಡಿಯನ್ನು ಹುಡುಕಿಕೊಂಡು ಹೊರಟರು.


(ಈ ಸರಣಿಯಲ್ಲಿ ಮುಂಚೆ:
ಅದೂ-ಇದೂ 1 - ನಮ್ಮ್ ಮುದ್ದುನ್ ಎಸ್ರು ಮಣ್ಣ್ ಮಾಡವ್ರಂತೆ ಕಣ್ಲ
ಅದೂ-ಇದೂ 2- ಸೀಸ ರಡಿ ಆಯ್ತಪ್ಪೋ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X