ಪ್ರಧಾನಿ ದೇವೇಗೌಡರನ್ನು ಹೆತ್ತವರು ಯಾರು?

Leeladevi R. Prasad
ಭಾನುವಾರ ಮುಕ್ತಾಯವಾದ ಬೆಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ನಾನಾ ನಮೂನೆಯ ಗೋಷ್ಠಿಗಳಿದ್ದವು. ಮೇಲುನೋಟಕ್ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದ ಮಹಿಳಾಗೋಷ್ಠಿಯಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದವರು ರಾಜಕಾರಣಿ ಲೀಲಾದೇವಿ ಆರ್. ಪ್ರಸಾದ್. ತಮ್ಮ ರಾಜಕೀಯ ಜೀವನದ ಒಳಸುಳಿಗಳನ್ನು ಸುರುಳಿಸುರುಳಿಯಾಗಿ ತೆರೆದಿಟ್ಟ ಅವರ ಭಾಷಣದಲ್ಲಿ ಸಿಡಿದ ಪಟಾಕಿಯೆಂದರೆ, "ನಾನು ತ್ಯಾಗ ಮಾಡದಿದ್ದರೆ ದೇವೇಗೌಡರೆಲ್ಲಿ ಪ್ರಧಾನಿಯಾಗುತ್ತಿದ್ದರು?" ಅಂತೂ ಭಾರತಕ್ಕೆ ಒಬ್ಬ ಕನ್ನಡಿಗ ಪ್ರಧಾನಿಯನ್ನು ಹೆತ್ತುಕೊಟ್ಟ ಕೀರ್ತಿ ಮಹಿಳೆಗೆ ಸಂದಿತು. ಗೋಷ್ಠಿಯ ಸಾರಸಂಗ್ರಹವನ್ನು ಓದಿ.

ಕನ್ನಡ ಸಾಹಿತ್ಯ ಸಮ್ಮೇಳನದ ಪರ್ಯಾಯ ವೇದಿಕೆಯಲ್ಲಿ ಮಹಿಳಾಗೋಷ್ಠಿ ಇರುವುದಾಗಿ ಕರ್ನಾಟಕ ಸಾಹಿತ್ಯ ಪರಿಷತ್‌ನ ವೆಬ್‌ಸೈಟ್‌ನಿಂದ ತಿಳಿದುಬಂತು. ಯಾವ ಸ್ಥಳದಲ್ಲಿ ಎನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಎಲ್ಲರಿಂದ ಬಂದ ಮಾಹಿತಿಯೂ ಇಂದಿನ ಮಹಿಳೆಯರ ಸ್ಥಿತಿಯಂತೆಯೇ ಅಸ್ಪಷ್ಟ! ಅಂತೂ ದೂರದೂರಿನಿಂದ ಬಂದಿದ್ದ ಗೆಳೆಯರೊಬ್ಬರಿಂದ ಮಹಿಳಾ ಸಮಾಜದಲ್ಲೆಂದು ಗೊತ್ತಾಯ್ತು. ಸಾಕಷ್ಟು ಮೊದಲೇ ಹೊರಟೆನಾದರೂ ಸ್ವಲ್ಪ ತಡವಾಗಿ ಅಲ್ಲಿದ್ದೆ. ಮುಖ್ಯ ದ್ವಾರದ ದಪ್ಪ ಬೀಗ ಸ್ವಾಗತಿಸಿತು. ಹೌದು, ಎಷ್ಟೇ ಆದರೂ ಅದು ಮಹಿಳಾ ಗೋಷ್ಠಿಗೆ ಮೀಸಲಿಟ್ಟಿದ್ದ ಜಾಗ ತಾನೆ?! ಮೊದಲು ಏನೂ ಗೊತ್ತಿಲ್ಲ ಎಂದ ಕಾವಲುಗಾರ ಪ್ಲೀಸ್ಗೆ ಬೀಗ ತೆಗೆದ, ಒಳಹೋದೆ.

ಮಹಿಳೆಯರು ಮನೆಗೆಲಸ ಮುಗಿಸಿ ಬೆಳಗ್ಗೆ 9.30ಕ್ಕೆ ಗೋಷ್ಠಿಗೆ ಬರಲು ಕಷ್ಟ ಎನ್ನುವ ಕಾರಣವನ್ನೇ ಘೋಷಿಸಿ ಕಾರ್ಯಕ್ರಮ ತಡವಾಗಿ ಪ್ರಾರಂಭವಾಗಿತ್ತು. ಅವಸರವಸರದಲ್ಲಿ ಮನೆ ಜವಾಬ್ದಾರಿ ಮುಗಿಸಿ ಸರಿಯಾದ ಸಮಯಕ್ಕೆ ಹೊರಟಿದ್ದರೂ ಜಾಗವನ್ನು ಹುಡುಕಿ ಬರಲು ತಡವಾಗುತ್ತಿತ್ತು, ಮಹಿಳೆಯರಿಗಿರುವ ಸ್ಥಿತಿಯನ್ನೇ ಸಾರುತ್ತಿತ್ತು ಸ್ಪಷ್ಟತೆಯಿಲ್ಲದ ನಿರ್ದೇಶನ! ಖಾಲಿ ಖಾಲಿ ಇದ್ದ ಸಭಾಂಗಣ ಆಶ್ಚರ್ಯವನ್ನೇನ್ನುಂಟು ಮಾಡಲಿಲ್ಲ. ಎಷ್ಟೇ ಆದರೂ ಮಹಿಳಾ ಗೋಷ್ಠಿ ಎಂದರೆ ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಯುವ ಪರ್ಯಾಯ ಕಾರ್ಯಕ್ರಮ ಎನ್ನುವ ಕಲ್ಪನೆ ಎಲ್ಲರಿಗೂ ಇದೆತಾನೆ?! ನಂತರ ಪುರುಷರಿಂದಲೇ ಸಭಾಂಗಣ ಭರ್ತಿಯಾಗಿದ್ದು ಅಚ್ಚರಿಯೆನಿಸಲಿಲ್ಲ. ವೇದಿಕೆಯ ಮೇಲಿನ ಗಣ್ಯರ ಮಾತುಗಳು ಸಾಗುತ್ತಿತ್ತು ಕೇಳುತ್ತಾ ಕುಳಿತೆ. ಅವರುಗಳು ಹೇಳಿದ್ದು ಹೀಗಿದೆ;

77ನೇ ಸಮ್ಮೇಳನದಲ್ಲಿ ತಮ್ಮ 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಹಿಳೆ ಹಾಗು ಗೋಷ್ಠಿ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಹೇಳಿದ್ದು:

* ಚುನಾವಣೆಗಳನ್ನು ಎದುರಿಸಿದ ಏಕೈಕ ಮಹಿಳೆ ತಾನು ಎನ್ನುವ ಹೆಮ್ಮೆಯಿದೆ.
* ಪರಿಷತ್‌ನ ಸದಸ್ಯತ್ತ್ವಕ್ಕೆ ರಾಜೀನಾಮೆ ಕೊಟ್ಟು ಕನ್ನಡಿಗನನ್ನು ಪ್ರಥಮ ಬಾರಿಗೆ ದೇಶದ ಪ್ರಧಾನಿಯನ್ನಾಗಿಸಿದ ಶ್ರೇಯಸ್ಸು ತಮಗೆ ಸೇರಬೇಕು.
* ಹಾಲು ಮಾರಿ ಬರ್ತೀನಿ ಹಾಲ್ಗಡಗ ತರ್ತೀನಿ; ಮೊಸರು ಮಾರಿ ಬರ್ತೀನಿ ಮೊಸರ್ಗೆಜ್ಜೆ ತರ್ತೀನಿ ಎಂದು ಹಾಡಿದ ಜಾನಪದ ಮಹಿಳೆ ಸ್ತ್ರೀ ಸ್ವಾವಲಂಬನೆಯ ಮಂತ್ರವನ್ನು ಹುಟ್ಟು ಹಾಕಿದ್ದು.
* ಪ್ರಪ್ರಥಮ ಬಾರಿಗೆ ಆನೆಯಮೇಲೆ ಉತ್ಸವಗೊಂಡ ಕೃತಿ ಸಿದ್ಧರಾಮ ಪುರಾಣ ರಚಿಸಿದ್ದು ಮಹಿಳೆ.
* ಅಡ್ಡಡ್ದ ಬರೆದರೆ ಗದ್ಯ ಉದ್ದುದ್ದ ಬರೆದರೆ ಪದ್ಯ ಎನ್ನುವಂತಿದೆ ಇಂದಿನ ಸಾಹಿತ್ಯ ಆದರೆ ಜನಪದ ಸಾಹಿತ್ಯ ಛಂದೋಬದ್ಧವಾದದ್ದು.
* ಸಾಹಿತ್ಯ ಪರಿಷತ್‌ನ 80 ವರ್ಷಗಳಲ್ಲಿ ಒಬ್ಬ ಮಹಿಳೆಯೂ ಅಧ್ಯಕ್ಷಳಾಗಿಲ್ಲ, ಈಗ ಅವಕಾಶ ನೀಡಬೇಕು.
* 77ನೇ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ 4 ಬಾರಿ ಮಾತ್ರ ಮಹಿಳೆ ಸಾರಥ್ಯ ವಹಿಸಿದ್ದದ್ದು. ಪ್ರತೀ 3 ಅವಧಿಗೊಮ್ಮೆಯಾದರೂ ಮಹಿಳೆಯೇ ಸಮ್ಮೇಳನದ ಅಧ್ಯಕ್ಷತೆ ವಹಿಸಬೇಕೆಂದು ನಿರ್ಣಯ ಕೈಗೊಳ್ಳಬೇಕು.

ಮಹಿಳೆ ಮತ್ತು ಸಾಹಿತ್ಯದ ಬಗ್ಗೆ ಶ್ರೀಮತಿ ಹನುಮಾಕ್ಷಿಗೋಗಿ ಹೇಳಿದ್ದು :

* ನೀ ಹುರಿದು ಭಿತ್ತಿದರೆ ನಾ ತರಿದು ಬೆಳೀತೀನಿ ಎನ್ನುವ ಹಠದಲ್ಲೇ ಮಹಿಳಾ ಸಾಹಿತ್ಯ ಮುಂದುವರೀತಿದೆ.
* ಒತ್ತಾಯದಿಂದ ಹೇರಿದ ಗೃಹಿಣಿತ್ವ ಮತ್ತು ಮಾತೃತ್ತ್ವದಿಂದ ಮಹಿಳೆಯರ ಕ್ರಿಯಾಶಕ್ತಿಗೆ ಚಲನಶೀಲತೆ ಇಲ್ಲದಂತಾಗಿದೆ.
* 12ನೇ ಶತಮಾನದಲ್ಲೇ 35 ಜನ ವಚನಕಾರ್ತಿಯರಿಂದ 30 ಸಾವಿರಕ್ಕೂ ಹೆಚ್ಚಿನ ವಚನಗಳು ರಚನೆಯಾಗಿರುವುದು ಮಾಹಿಳಾ ಸಾಹಿತ್ಯದ ಸಾಮರ್ಥ್ಯದ ದಾಖಲೆಯಾಗಿದೆ.
* ಮಹಿಳಾ ಸಾಹಿತ್ಯವನ್ನು ವಸ್ತುನಿಷ್ಠವಾಗಿ ನೋಡುವ ಕಾಲ ಬರಬೇಕು. ಒಂದು ಕಾಲಘಟ್ಟದಲ್ಲಿ ಮಹಿಳೆಯರು ಬರವಣಿಗೆಗೆ ಬಂದದ್ದು ವೈಧವ್ಯದಿಂದ.
* ಮಹಿಳಾವಾದ, ಮಹಿಳಾ ಕೇಂದ್ರಿತ ವಸ್ತು, ಮಹಿಳಾಪರ ವಿಷಯ, ಮಹಿಳೆಯರಿಂದ ರಚಿತವಾದದ್ದು ಎಲ್ಲವೂ ಮಹಿಳಾ ಸಾಹಿತ್ಯ ಎಂದು ಗುರ್ತಿಸಲ್ಪಡಬೇಕು.

ಮಹಿಳೆ ಮತ್ತು ಮತ್ತು ಚಳುವಳಿಯ ಬಗ್ಗೆ ಶ್ರೀಮತಿ ಕೆ.ಎಸ್.ವಿಮಲ ಹೇಳಿದ್ದು :

* ಮಹಿಳಾ ಧ್ವನಿಯನ್ನು ಪುರುಷ ವಿರೋಧಿ ಎಂದೇ ಗುರ್ತಿಸಲಾಗುತ್ತಿದೆ. ಅದು ಸರಿಯಲ್ಲ.
* ಮಹಿಳೆ ಪುರುಷನ ಅನುವರ್ತಿಯಾಗದೆ ಸಹವರ್ತಿಯಾಗಿರಬೇಕೆಂಬುದೇ ಮಹಿಳಾ ಚಳವಳಿಯ ಆಶಯ.
* ಮಹಿಳಾ ಚಳವಳಿಯೆಂದರೆ ಕೇವಲ ಮಹಿಳೆಯರಿಂದ ಮಹಿಳೆಯರಿಗಾಗಿ ಮಾತ್ರವಲ್ಲ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಸಮಾಜದಲ್ಲಿ ಆಗಿರುವ ಯಾವುದೇ ಕ್ರಾಂತಿಯ ಯಶಸ್ಸಿನ ಹಿಂದೆ ಮಹಿಳಾ ಚಳವಳಿಯ ಪಾತ್ರವಿದೆ.
* ಮಹಿಳಾ ಚಳವಳಿಯ ಲಕ್ಷ್ಯ, ಅಧಾರ ರಹಿತ ಹೆಣ್ಣು ಮಕ್ಕಳಿಗೆ ಬದುಕು ಕಟ್ಟಿಕೊಡುವುದಾಗಬೇಕು.
* ಮಹಿಳೆಯರನ್ನು ನೋಡುವ ಮನೋಧರ್ಮದಲ್ಲಿ ಬದಲಾವಣೆ ತರಬೇಕಾದ್ದು ಮಹಿಳಾ ಚಳವಳಿಯ ಉದ್ದೇಶವಾಗಬೇಕು.

ಮಹಿಳೆ ಮತ್ತು ಮೀಸಲಾತಿ ಬಗ್ಗೆ ಶ್ರೀಮತಿ ಎಂ.ಎಸ್.ಶಶಿಕಲಾ ಹೇಳಿದ್ದು :

* ಮಹಿಳೆ ಭೂಮಿಯಂತೆ ಎಲ್ಲರಿಗೂ ಸೇರಿದ್ದು ಆದರೆ ಯಾರಿಗೂ ಸೇರದ್ದು.
* ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆ ದೌರ್ಜನ್ಯ, ದಬ್ಬಾಳಿಕೆಯಲ್ಲಿಯೇ ಮಹಿಳೆಯರು ತುಳಿಯಲ್ಪಟ್ಟಿದ್ದು ಮಹಿಳಾ ಮೀಸಲಾತಿಗೆ ಕೂಗೆಬ್ಬಿಸಿದೆ.
* ಮನುಕುಲವು ಮಹಿಳೆ ಮತ್ತು ಪುರುಷ ಸಮಾಜ ಎಂದು ವಿಘಟೀಕರಣಗೊಂಡಿರುವುದು ಮಹಿಳಾ ಮೀಸಲಾತಿಯ ಅವಶ್ಯಕತೆಯನ್ನು ಹೆಚ್ಚಿಸಿದೆ.
* ಮಹಿಳಾ ಮೀಸಲಾತಿ ಕೇಳುವುದೇ ವಿಪರ್ಯಾಸ ಆದರೆ ಪ್ರಸ್ತುತ ಕೂಡ.
* ಕೊಡಬೇಕಾದ್ದನ್ನು ಕೊಡದೆ ಹತ್ತಿಕ್ಕಿದ್ದರಿಂದ ಮೀಸಲಾತಿಯನ್ನು ಕೇಳಬೇಕಾಗಿ ಬಂದಿದೆ, ಮಹಿಳೆ ಅಬಲೆ ಅಂತ ಅಲ್ಲ.

ಎಲ್ಲಾ ಕಾರ್ಯಕ್ರಮಗಳಲ್ಲೂ ಮಹಿಳಾ ಸಮಾರಂಭ ಪರ್ಯಾಯವಾಗಿಯೇ ಇರುವುದು ಯಾಕೆ? ಮಹಿಳಾ ಗೋಷ್ಠಿಯಲ್ಲುಳಿದು ಇನ್ನ್ಯಾವ ವಿಷಯ ಮಂಡನೆಯಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯವಿರಲಿ ಅಭಿಪ್ರಾಯ ವಿನಿಮಯಕ್ಕಾದರೂ ಅವಕಾಶ ನೀಡದಿರುವುದು ಯಾಕೆ? ವೇದಿಕೆಯ ಮೇಲಿದ್ದವರೆಲ್ಲಾ ಮಹಿಳೆಯರು. ಯಾಕೆ ಮಹಿಳೆಯ ಬಗ್ಗೆ ಪುರುಷ ವೇದಿಕೆಯ ಮೇಲೆ ಮಾತನಾಡಬಾರದೆಂಬ ನಿರ್ಬಂಧವೇನು? ಮಹಿಳಾ ದ್ವನಿಯೆಂದರೆ ಪುರುಷವಿರೋಧಿಯಲ್ಲ ಎಂದು ಮೈಕ್‌ನಲ್ಲಿ ಸಾರಿದರೂ ಪುರುಷ ಸಭಿಕರೊಬ್ಬರೂ ಚಪ್ಪಾಳೆ ಯಾಕೆ ತಟ್ಟಲಿಲ್ಲ?

ಮನೆ, ಉದ್ಯೋಗಗಳ ನಡುವೆ ದೊಂಬರಾಟವಾಡುತ್ತಲೂ ಬ್ಲಾಗ್‌ಗಳನ್ನು ಬರೆಯುತ್ತಲೂ ಹೊಸರೀತಿಯ ಸಾಹಿತ್ಯ ಹುಟ್ಟುಹಾಕುತ್ತಿರುವ ಮಹಿಳೆಯರ ಬಗ್ಗೆ ಯಾಕೆ ಮಾತು ಬರಲಿಲ್ಲ? ಸಂದರ್ಭವು ಕನ್ನಡ ಸಾಹಿತ್ಯ ಸಮ್ಮೇಳನವಾದ್ದರಿಂದ ಸಾಹಿತ್ಯ ಮತ್ತು ಸಮಾಜ ಕಟ್ಟುವಲ್ಲಿನ ಚಳವಳಿಯಲ್ಲಿ ಕನ್ನಡ ಮಹಿಳೆಯ ಪಾತ್ರದ ಔಚಿತ್ಯದ ಬಗ್ಗೆಯೂ ಮಾತನಾಡಬಹುದಿತ್ತಲ್ಲವೇ? ಮತ್ತೊಬ್ಬ ಕನ್ನಡಿಗ ದೇಶದ ಚುಕ್ಕಾಣಿ ಹಿಡಿಯಲು ಇನ್ನೊಬ್ಬ ಮಹಿಳೆಯ ರಾಜೀನಾಮೆಯಾಗಲೇ ಬೇಕೆ? ಇಂತಹ ಮತ್ತಷ್ಟು ಪ್ರಶ್ನೆಗಳನ್ನು ಸೆರಗಲ್ಲಿ ಕಟ್ಟಿಕೊಂಡು ಅಲ್ಲಿಂದ ಹೊರಟೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+