ಎಸ್ಎಸ್ಎಲ್‌ಸಿ, ಪಿಯುಸಿ ಬಳಿಕ ಮುಂದೇನು? ಒನ್‌ಇಂಡಿಯಾ ಕನ್ನಡ ವೃತ್ತಿ ಮಾರ್ಗದರ್ಶಿ
ಬೆಂಗಳೂರು, ಜು. 22: ಎಸ್ಎಸ್ಎಲ್‌ಸಿ ಪಾಸ್ ಆದಮೇಲೆ ಏನು ಮಾಡಬೇಕು? ಇದು ಎಲ್ಲರಲ್ಲೂ ಮೂಡುವ ಪ್ರಶ್ನೆ. ಮಾಹಿತಿ ಕೊರತೆಯಿಂದ ಬಹುತೇಕರು ಸಾಂಪ್ರದಾಯಿಕ ಡಿಪ್ಲೋಮಾ, ಐಟಿಐ, ಕಲಾ ವಿಭಾಗ, ವಿಜ್ಞಾನ, ವಾಣಿಜ್ಯ ಹಾಗೂ ವ್ಯವಹಾರ ಕೋರ್ಸ್ ಸೇರುತ್ತಾರೆ. ಇವತ್ತಿನ ಬದಲಾದ ಕಾಲದಲ್ಲಿ ಜಾಣ್ಮೆಯಿಂದ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಂಡರೆ ಒಳ್ಳೆಯ ಉದ್ಯೋಗ ಗಳಿಸಬಹುದು. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪಾಸ್ ಆದವರಿಗೆ ಅಂತಹ ವಿನೂತನ ಕೋರ್ಸ್ ಗಳ ವಿವರವನ್ನು ಒನ್ಇಂಡಿಯಾ ಕನ್ನಡ ಇಲ್ಲಿ ಪರಿಚಯಿಸುತ್ತಿದೆ.
ನಾನಾ ಕ್ಷೇತ್ರದಲ್ಲಿ ಸುವರ್ಣ ಅವಕಾಶ:
ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಉತ್ತೀರ್ಣರಾದವರು ಹೊಸ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಡಿಜಿಟಲ್ ಮೀಡಿಯಾ, ಡಿಜಿಟಲ್ ಮಾರ್ಕೆಂಟಿಂಗ್, ವೆಬ್ ಡಿಸೈನಿಂಗ್, ಆಹಾರ ಉತ್ಪಾದನೆ, ಕೃಷಿ, ಕೈಗಾರಿಕೆ, ಸೇವಾ ವಲಯಕ್ಕೆ ಸಂಬಂಧಿಸಿದ ಸಾಕಷ್ಟು ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಅವನ್ನು ಆನ್‌ಲೈನ್‌ನಲ್ಲೂ ಕಲಿಯಬಹುದು. ಕಾಲೇಜಿಗೆ ಹೋಗಿ ಕಲಿಯಬಹುದು. ಶ್ರದ್ಧೆಯಿಂದ ವಿನೂತನ ವೃತ್ತಿಪರ ಕೋರ್ಸ್ ಮಾಡುವುದರಿಂದ ಮುಂದಿನ ಐದು ವರ್ಷದೊಳಗೆ ಒಳ್ಳೆಯ ಉದ್ಯೋಗ ಕಂಡುಕೊಳ್ಳಲು ಅವಕಾಶವಿದೆ. ಅಂಥ ಕೋರ್ಸ್‌ಗಳನ್ನು ವಿವರ ನೀಡುವ ಮುನ್ನ ಕೆಲವು ಸತ್ಯಗಳು ನಿಮಗೆ ಗೊತ್ತಿರಲಿ.

ಸರ್ಕಾರಿ ಕೆಲಸ ಗಗನ ಕುಸುಮ:
ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯುಳ್ಳ ಮಕ್ಕಳಿಗೆ ಶಿಕ್ಷಣವೇ ಬದುಕು. ಅದುವೇ ದಾರಿದೀಪ. ಇವತ್ತು ಸರ್ಕಾರಿ ಕೆಲಸ ನಂಬಿ ಎರಡೆರಡು ಪದವಿ ಪಡೆದರೂ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಗಿಟ್ಟಿಸುವುದು ಕಷ್ಟವೇ. ಕೊರೊನಾ ಸಂಕಷ್ಟ, ದೇಶದ ಆರ್ಥಿಕ ಪರಿಸ್ಥಿತಿ ನೋಡಿದರೆ ಸರ್ಕಾರಿ ಕೆಲಸ ನಂಬಿ ಕೂತರೆ ಕಷ್ಟ. ರಾಜ್ಯದಲ್ಲಿ ಕರ್ನಾಟಕ ಆಡಳಿತ ಸುಧಾರಣೆ ಆಯೋಗ -2 ನೀಡಿರುವ ವರದಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಸರ್ಕಾರದ ಉದ್ಯೋಗ ಕಡಿತ ಮಾಡುವಂತೆ ಶಿಫಾರಸು ಮಾಡಿದೆ. ಹೀಗಾಗಿ ಸರ್ಕಾರಿ ಉದ್ಯೋಗ ನಂಬಿ ಕೂರುವಂತಿಲ್ಲ. ಹೀಗಾಗಿ ಇವತ್ತು ಸಮಾಜದಲ್ಲಿ ಅಗತ್ಯ ಇರುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಉದ್ಯೋಗ ಅಥವಾ ಸ್ವಯಂ ಉದ್ಯೋಗ ಕಂಡುಕೊಳ್ಳಬಹುದು.

ಇದು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ:
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವರ್ಷ 6.61 ಲಕ್ಷ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಪ್ರತಿ ವರ್ಷ ನಾಲ್ಕು ಲಕ್ಷದಷ್ಟು ವಿದ್ಯಾರ್ಥಿಗಳು ಪಾಸ್ ಆಗುತ್ತಿದ್ದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಪಡಿಸಿದ್ದರಿಂದ ಎಲ್ಲರನ್ನೂ ಉತ್ತೀರ್ಣ ಮಾಡಲಾಗಿದೆ. ಒಂದಡೆ ವೈದ್ಯಕೀಯ, ಇಂಜಿನಿಯರಿಂಗ್ ಪದವಿ ಕೋರ್ಸ್‌ಗಳ ಶುಲ್ಕ ಹೆಚ್ಚಾಗಲಿದೆ. ಪದವಿ ಕೋರ್ಸ್‌ಗಳ ಶುಲ್ಕವೂ ಜಾಸ್ತಿಯಾಗಬಹುದು. ಇಷ್ಟು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಡಲು ಸರ್ಕಾರವೇ ತಿಣುಕಾಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪಿಯುಸಿ ವಿದ್ಯಾರ್ಥಿಗಳು ಕೂಡ ವೃತ್ತಿಪರ ಅಡ್ವಾನ್ಸ್ ಕೋರ್ಸ್ ಕಲಿತು ಉದ್ಯೋಗ ಪಡೆದುಕೊಳ್ಳಲು ಸಾಕಷ್ಟು ಅವಕಾಶವಿದೆ.

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಚಿತ್ರಣ:
ರಾಜ್ಯದಲ್ಲಿ ಈ ವರ್ಷ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದವರು 8.76 ಲಕ್ಷ ವಿದ್ಯಾರ್ಥಿಗಳು.ಪ್ರತಿ ವರ್ಷ ಶೇ. 30 ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷ ಅನುತ್ತಿರ್ಣರಾಗುತ್ತಿದ್ದರು. ಹೀಗಾಗಿ ಈ ವರ್ಷ ಪಿಯುಸಿ ಓದಲು ಕಾಲೇಜುಗಳಲ್ಲಿ ಸೀಟು ಸಿಗುವುದೇ ದುಸ್ತರ ಎಂಬಂತಾಗಿದೆ. ಇನ್ನು ಪಿಯುಸಿ, ಪದವಿ ಸ್ನಾತಕೋತ್ತರ ಪದವಿ ಓದುವ ಮುನ್ನವೇ ಸಮಾಜಕ್ಕೆ ತುರ್ತು ಅಗತ್ಯ ಇರುವ ಕೋರ್ಸ್‌ಗಳಲ್ಲಿ ಬಹು ಬೇಡಿಕೆ ಇರುವ ಕೋರ್ಸ್‌ಗಳನ್ನು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಈ ಮೂಲಕ ಉದ್ಯೋಗ ಕಂಡುಕೊಳ್ಳುವ ಜತೆಗೆ ಜ್ಞಾನಾರ್ಜನೆಗಾಗಿ ಉನ್ನತ ಶಿಕ್ಷಣ ಕೂಡ ಪಡೆಯಬಹುದು. ಇಲ್ಲವೇ ಆಯ್ಕೆ ಮಾಡಿಕೊಂಡ ಉದ್ಯೋಗದ ಅನುಭವದ ಮೇಲೆ ಸ್ವ ಉದ್ಯಮ ಸ್ಥಾಪನೆಗೂ ವಿಫುಲ ಅವಕಾಶ ಇರುವ ಕೋರ್ಸ್‌ಗಳಿವೆ. ಪ್ರತಿ ಕೋರ್ಸ್‌ನ ಸಮಗ್ರ ವಿವರ ಒನ್ಇಂಡಿಯಾ ಕನ್ನಡ ನೀಡಲಿದೆ.












Click it and Unblock the Notifications