Vande Bharat Express: ಬೆಂಗಳೂರು-ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರ ಆರಂಭ, ಸಮಯಗಳ ವಿವರ ತಿಳಿಯಿರಿ
ಬೆಂಗಳೂರು: ಹುಬ್ಬಳ್ಳಿ, ನವೆಂಬರ್, 08: ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದ ವಂದೇ ಭಾರತ್ ರೈಲು ಸೇವೆಯನ್ನು ಈಗ ಬೆಳಗಾವಿಗೂ ವಿಸ್ತರಿಸಲು ಚಿಂತನೆ ನಡೆದಿದ್ದು, ಪೂರ್ವ ತಯಾರಿಯೂ ಕೂಡ ನಡೆದಿತ್ತು. ಇದೀಗ ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ಇಂಟರ್‌ಸಿಟಿ ಸೆಮಿ ಹೈಸ್ಪೀಡ್ ರೈಲು ಇಂದು (ನವೆಂಬರ್ 21) ಪ್ರಾಯೋಗಿಕ ಸಂಚಾರ ಪ್ರಾರಂಭಿಸಿದೆ.
ಈ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಚಾಲನೆ ಇಂದಿನಿಂದ ಆರಂಭವಾಗಿದ್ದು, ಚೆನ್ನೈನಿಂದ 8 ಬೋಗಿಗಳ ರೈಲು ಸೆಟ್ ಅನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ.

ಸೋಮವಾರ ಸಂಜೆ ಈ ವಂದೇ ಭಾರತ್ ವಿಶೇಷ ರೈಲು (ಸಂಖ್ಯೆ 06031) ಚೆನ್ನೈನಿಂದ ಹೊರಟು ರಾತ್ರಿ 10 ಗಂಟೆ ಸುಮಾರಿಗೆ ಎಸ್‌ಎಂವಿಟಿ ಬೆಂಗಳೂರಿಗೆ ಆಗಮಿಸಿತು.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲು ಓಡಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದರೆ, ಮಂಗಳವಾರ ಹುಬ್ಬಳ್ಳಿ-ಧಾರವಾಡ ಮೂಲಕ ಕೆಎಸ್‌ಆರ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರಕ್ಕೆ ನಿಯೋಜಿಸಲು ಉದ್ದೇಶಿಸಲಾಗಿತ್ತು. ಬೆಂಗಳೂರಿನ ಹೆಚ್ಚುವರಿ ವಿಭಾಗೀಯ ರೈಲ್ವೇ ಮ್ಯಾನೇಜರ್ ಕುಸುಮಾ ಹರಿಪ್ರಸಾದ್ ಅವರು ಚೆನ್ನೈನಿಂದ ರೈಲು ಸೆಟ್ ಅನ್ನು ಪ್ರಾಯೋಗಿಕ ಚಾಲನೆಯಲ್ಲಿ ಓಡಿಸಲಾಗುವುದು ಎಂದು ತಿಳಿಸಿದ್ದರು.
ಈ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 5:45ಕ್ಕೆ ಹೊರಟು ಮಧ್ಯಾಹ್ನ 1:30ಕ್ಕೆ ಬೆಳಗಾವಿ ತಲುಪುತ್ತದೆ. ಹಾಗೂ ಅದು ಬೆಳಗಾವಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 10:10ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಆಗಮಿಸಲಿದೆ. ನಂತರ ಯಶವಂತಪುರದಿಂದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌ಗೆ ರಾತ್ರಿಯ ವಂದೇ ಭಾರತ್ ವಿಶೇಷ ರೈಲು ಸೆಟ್ ಅನ್ನು ಓಡಿಸಲಾಗುವುದು. ಮಂಗಳವಾರ ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಟು ಬುಧವಾರ ಬೆಳಗ್ಗೆ 4:30ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗಾವಿಗೆ 7 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ (610.6 ಕಿಲೋ ಮೀಟರ್). ಪ್ರಸ್ತುತ ವೇಗದ ರೈಲಿಗಿಂತ ಎರಡು ಗಂಟೆಗಳಿಗಿಂತ ಹೆಚ್ಚು ವೇಗ ಆಗಿರುತ್ತದೆ. ಹಿಂತಿರುಗುವ ದಿಕ್ಕಿನಲ್ಲಿ, ಇದು 8 ಗಂಟೆ 10 ನಿಮಿಷಗಳಲ್ಲಿ ಅದೇ ದೂರವನ್ನು ಕ್ರಮಿಸುತ್ತದೆ.
ದರಗಳ ವಿವರ ಹೀಗಿದೆ
ಕೆಎಸ್‌ಆರ್ ಬೆಂಗಳೂರು ಮತ್ತು ಬೆಳಗಾವಿ ನಡುವಿನ ಚೇರ್ ಕಾರ್ ದರವು ಸುಮಾರು 1,500 ರೂಪಾಯಿ ಆಗಿರಬಹುದು ಮತ್ತು ಕಾರ್ಯನಿರ್ವಾಹಕ ವರ್ಗದ ದರವು ಸುಮಾರು 3,000 ರೂಪಾಯಿ ಆಗಿರುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕರ ಬೇಡಿಕೆಗೆ ಮಣಿದ ರೈಲ್ವೆ ಇಲಾಖೆ
ಇನ್ನು ಬೆಂಗಳೂರ -ಹುಬ್ಬಳ್ಳಿ -ಧಾರವಾಡ ನಡುವೆ ಜೂನ್ 27ರಿಂದ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಿದೆ. ಆದರೆ ಬೆಳಗಾವಿಯವರೆಗೆ ವಿಸ್ತರಿಸುವ ಬೇಡಿಕೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಬೇಡಿಕೆಗೆ ಮಣಿದ ರೈಲ್ವೇ ಇಲಾಖೆ ಕೊನೆಗೂ ಬೆಳಗಾವಿಗೆ ಸಂಚಾರ ಪ್ರಾರಂಭಿಸುವ ಚಿಂತನೆ ನಡೆಸಿತ್ತು.
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಯೋಜನೆ 2022ರ ಆರಂಭದಲ್ಲೇ ರೂಪುಗೊಂಡಿತ್ತು. ಅಂದಿನಿಂದಲೇ ಈ ಭಾಗದ ರೈಲ್ವೇ ಹೋರಾಟಗಾರರು, ಸಂಘ ಸಂಸ್ಥೆಯವರು ಬೆಳಗಾವಿಗೂ ವಿಸ್ತರಿಸುವಂತೆ ಒತ್ತಾಯಿಸುತ್ತಾ ಬಂದಿದ್ದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಆಗಮಿಸಿದ್ದ ವೇಳೆ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಿಸುವ ಭರವಸೆ ನೀಡಿದ್ದರು. ಆದರೆ, ಈ ಬೇಡಿಕೆ ಈಡೇರಿರಲಿಲ್ಲ.
ವಂದೇ ಭಾರತ್ ರೈಲು ಘೋಷಣೆಯಾದ ದಿನದಿಂದಲೇ ರೈಲನ್ನು ಬೆಳಗಾವಿಗೆ ವಿಸ್ತರಿಸುವಂತೆ ಈ ಭಾಗದ ಜನಪ್ರತಿನಿಧಿಗಳು, ಸಂಸದರು, ಸಾರ್ವಜನಿಕರು ಸತತ ಮನವಿ ಸಲ್ಲಿಸುತ್ತಲೇ ಇದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ನಡೆದಿದೆ. ಇನ್ನು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಸಹ ಒತ್ತಾಯ ಮಾಡಿದ್ದರು.












Click it and Unblock the Notifications