Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ?
ಬೆಳಗಾವಿ, ಸೆಪ್ಟೆಂಬರ್ 24: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಮತ್ತು ಮಹಾರಾಷ್ಟ್ರ ರಾಜ್ಯದ ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಉಭಯ ನಗರಗಳ ನಡುವೆ ವಾರದಲ್ಲಿ ಮೂರು ದಿನಗಳ ಕಾಲ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ಕೇಸರಿ ಬಣ್ಣದ ರೈಲು ಸಂಚಾರವನ್ನು ನಡೆಸುತ್ತಿದೆ. ಈ ರೈಲಿನ ಕುರಿತು ಈಗ ಮತ್ತೊಂದು ಬೇಡಿಕೆಯನ್ನು ಸಲ್ಲಿಸಲಾಗಿದೆ. ಈ ಬೇಡಿಕೆ ಹೆಚ್ಚುವರಿ ನಿಲುಗಡೆಗೆ ಸಂಬಂಧಿಸಿದ್ದಾಗಿದೆ.
ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ಮತ್ತು ಪುಣೆಯಲ್ಲಿ ಪ್ರಸ್ತುತ ನಿಲುಗಡೆಯನ್ನು ಹೊಂದಿದೆ. ರೈಲಿನ ವೇಳಾಪಟ್ಟಿ ಮತ್ತು ದರದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಹೆಚ್ಚುವರಿ ನಿಲುಗಡೆಗಾಗಿ ಕೋರಿಕೆಯನ್ನು ಸಲ್ಲಿಸಲಾಗಿದೆ.

ಕುಡಚಿಯಲ್ಲಿ ನಿಲುಗಡೆ ನೀಡಿ: ಹೊಸದಾಗಿ ಆರಂಭವಾಗಿರುವ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲನ್ನು ಕುಡಚಿಯಲ್ಲಿ ನಿಲುಗಡೆ ಮಾಡಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಕುಡಚಿ ಪಟ್ಟಣದ ಜನರು ಮತ್ತು ಅಲ್ಲಾವುದ್ದೀನ್ ರೋಹಿಲೆ ಈ ಕುರಿತು ಆಗ್ರಹವನ್ನು ಮಾಡಿದ್ದು, ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಕುಡುಚಿ ಮೂಲಕ ಸಾಗುತ್ತದೆ. ಆದರೆ ಪಟ್ಟಣದಲ್ಲಿ ಏಕೆ ನಿಲುಗಡೆ ನೀಡುತ್ತಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಕುಡಚಿ ರೈಲು ನಿಲ್ದಾಣ ಮುಖ್ಯ ಕೇಂದ್ರವಾಗಿದೆ. ಈ ರೈಲು ನಿಲ್ದಾಣದಿಂದ ವಿವಿಧ ಪಟ್ಟಣಗಳಿಗೆ ಜನರು ಸಂಚಾರವನ್ನು ನಡೆಸುತ್ತಾರೆ. ಆದ್ದರಿಂದ ರೈಲು ನಿಲುಗಡೆ ಮಾಡಿದರೆ ಅನುಕೂಲವಾಗಲಿದೆ ಎಂದು ಬೇಡಿಕೆ ಇಡಲಾಗಿದೆ.
ಕುಡಚಿಯಿಂದ ಮುಧೋಳ, ಮಹಾಲಿಂಗಪುರ, ಬನಹಟ್ಟಿ, ತೇರದಾಳ, ರಬಕವಿ, ಸಿದ್ದಾಪುರ, ಯಲ್ಪಾರಟ್ಟಿ, ಕೋಳಿಗುಡ್ಡ, ನಿಲಜಿ ಸೇರಿದಂತೆ ವಿವಿಧ ಕಡೆ ಜನರು ಪ್ರಯಾಣಿಸುತ್ತಾರೆ. ಆದರೆ ಮುಖ್ಯ ರೈಲು ನಿಲ್ದಾಣದಲ್ಲಿಯೇ ಏಕೆ? ವಂದೇ ಭಾರತ್ ರೈಲು ನಿಲ್ಲುತ್ತಿಲ್ಲ ಎಂದು ಪ್ರಶ್ನಿಸಲಾಗಿದೆ.
ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಬೆಳಗಾವಿ ಮೂಲಕ ಸಂಚಾರ ನಡೆಸುತ್ತದೆ. ರೈಲಿಗೆ ಬೆಳಗಾವಿಯಲ್ಲಿ ನಿಲುಗಡೆ ನೀಡಲಾಗಿದೆ. ಆದರೆ ಈಗ ಕುಡಚಿ ಪಟ್ಟಣದ ಜನರು ಬೆಳಗಾವಿಯ ಕುಡಚಿ ನಿಲ್ದಾಣದಲ್ಲಿಯೂ ನಿಲುಗಡೆ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.
ಸದ್ಯ ರೈಲು ನಂಬರ್ 20669 ಹುಬ್ಬಳ್ಳಿ-ಪುಣೆ ನಡುವೆ ವಾರದಲ್ಲಿ ಮೂರು ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ರೈಲು ನಂಬರ್ 20670 ಪುಣೆ-ಹುಬ್ಬಳ್ಳಿ ನಡುವೆ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚಾರವನ್ನು ನಡೆಸುತ್ತಿದೆ. ಇಲಾಖೆ ವೇಳಾಪಟ್ಟಿ ಸಿದ್ಧಪಡಿಸುವಾಗಲೇ ವಂದೇ ಭಾರತ್ ರೈಲಿನ ವೇಗಕ್ಕೆ ಅನುಗುಣವಾಗಿ ನಿಲ್ದಾಣಗಳನ್ನು ಗುರುತಿಸುತ್ತದೆ. ಆದ್ದರಿಂದ ಹೊಸ ನಿಲುಗಡೆಗೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ ಇದೆ.
ಬೆಳಗಾವಿಗೆ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ರೈಲು ಇಲಾಖೆ ಒಪ್ಪಿಗೆ ನೀಡಿದೆ, ಅಲ್ಲದೇ ಪ್ರಾಯೋಗಿಕ ಸಂಚಾರವೂ ಮುಕ್ತಾಯಗೊಂಡಿದೆ. ಆದರೆ ರೈಲು ಸಂಚಾರ ಇನ್ನೂ ಸಹ ಆರಂಭವಾಗಿಲ್ಲ.












Click it and Unblock the Notifications