Get Updates
Get notified of breaking news, exclusive insights, and must-see stories!

ಕೊಡಗಿನ ಚೇಲಾವರ ಜಲಪಾತ ಮೃತ್ಯುಕೂಪವಾಗಿದ್ದೇಗೆ ? ಕಾರಣ ಏನು ಗೊತ್ತಾ?

ಮಡಿಕೇರಿ, ಆಗಸ್ಟ್ 08: ಕೊಡಗಿನಲ್ಲಿ ಧಾರಾಕಾರವಾಗಿ ಸುರಿದು ಜನ ನಲುಗುವಂತೆ ಮಾಡಿದ್ದ ವರುಣ ತುಸು ಬಿಡುವು ನೀಡಿದ್ದರಿಂದ ಜನ ನೆಮ್ಮದಿಯುಸಿರು ಬಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮಳೆಗೆ ಹೆದರಿ ಬೆಚ್ಚಗೆ ಮನೆಯಲ್ಲಿ ಕುಳಿತ ಕೆಲವರು ಬೆಟ್ಟಗುಡ್ಡ ಹತ್ತಿ, ಕಿಲೋಮೀಟರ್ ಗಟ್ಟಲೆ ನಡೆದು ಜಲಬೆಡಗಿಯರನ್ನು ನೋಡುವ ಉತ್ಸಾಹ ತೋರುತ್ತಿದ್ದಾರೆ. ಇತ್ತೀಚೆಗೆ ಹಠಕ್ಕೆ ಬಿದ್ದಂತೆ ಸುರಿಯುತ್ತಿದ್ದ ಮಳೆಯ ನಡುವೆ ಜಲಪಾತಗಳತ್ತ ಹೋಗಲು ಸಾಧ್ಯವಾಗದವರು ಈಗ ಮೈಕೊಡವಿಕೊಂಡು ಜಲಪಾತಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಸದ್ಯ ಮಳೆಗಾಲದ ದಿನವಾದರೂ ವರುಣ ಒಂದಷ್ಟು ಬಿಡುವು ನೀಡಿರುವುದರಿಂದ ಜಲಪಾತ ವೀಕ್ಷಣೆಗೆ ಸಕಾಲವಾಗಿದ್ದು, ಜಲಪಾತಗಳನ್ನು ನೋಡಲು ಹಲವರು ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಜಲಪಾತಗಳಿದ್ದು, ಒಂದಕ್ಕಿಂತ ಮತ್ತೊಂದು ವಿಭಿನ್ನ ಮತ್ತು ವಿಶಿಷ್ಟವಾಗಿವೆ. ಹೀಗಾಗಿ ಕೆಲವು ರಸ್ತೆ ಸಂಪರ್ಕ ಹೊಂದಿರುವ ಜಲಪಾತಗಳತ್ತ ಹೆಚ್ಚಿನ ಜನರು ತೆರಳುತ್ತಿದ್ದಾರೆ. ಅದರಂತೆ ಚೇಲಾವರ ಜಲಪಾತದತ್ತ ಹೋಗುವವರು ಕಂಡು ಬರುತ್ತಿದ್ದಾರೆ.

Travel News Why Kodagu Chelavara Falls Dangerous For Tourists

ನಿಜ ಹೇಳಬೇಕೆಂದರೆ ಚೇಲಾವರ ಜಲಪಾತದ ವೀಕ್ಷಣೆಗೆ ಇದೇ ಸೂಕ್ತ ಕಾಲ ಎಂದರೆ ತಪ್ಪಾಗಲಾರದು. ಈ ಸಮಯದಲ್ಲಿ ಜಲಪಾತದ ಭೋರ್ಗರೆತ ಕಣ್ಮನ ತಣಿಸುವುದಷ್ಟೇ ಅಲ್ಲದೆ ಖುಷಿಕೊಡುತ್ತದೆ. ಸದ್ಯ ಜಲಪಾತಗಳು ರುದ್ರರಮಣೀಯ ದೃಶ್ಯಗಳನ್ನು ಹೊರಹಾಕುತ್ತಿದ್ದು, ಜಲಪಾತವನ್ನು ನೋಡಿಕೊಂಡು ಹಿಂತಿರುಗಿದರೆ ಅಷ್ಟೇ ಸಾಕು ಆ ಸುಂದರ ದೃಶ್ಯಗಳು ನೆನಪಾಗಿ ಉಳಿಯುತ್ತವೆ.

ಚೇಲಾವರ ಜಲಪಾತವೆಂದರೆ ಭಯವೇಕೆ?

ಇದುವರೆಗೆ ಚೇಲಾವರ ಜಲಪಾತ ತನ್ನ ಸುಂದರತೆಯಿಂದ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ಇಲ್ಲಿ ನಡೆದ ದುರಂತಗಳಿಂದ ಕುಖ್ಯಾತಿ ಪಡೆದಿದೆ ಎಂದರೆ ತಪ್ಪಾಗಲಾರದು. ಆಗೊಮ್ಮೆ ಈಗೊಮ್ಮೆ ಇಲ್ಲಿನ ನೀರಲ್ಲಿ ಪ್ರವಾಸಿಗರು ಮುಳುಗಿ ಸಾಯುವುದು ಸುದ್ದಿಯಾಗುತ್ತಿದ್ದು ಇದರಿಂದ ಜನರು ಕೂಡ ಭಯಪಡುತ್ತಿದ್ದಾರೆ. ಆ ಜಲಪಾತದತ್ತ ಹೋಗುವುದೇ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ.

ಹಾಗಾದರೆ ಇಲ್ಲಿಗೆ ಹೋದವರೆಲ್ಲರೂ ಪ್ರಾಣ ಕಳೆದುಕೊಳ್ಳುತ್ತಾರಾ? ಇದು ಪ್ರಾಣ ತೆಗೆಯುವ ಜಲಪಾತನಾ? ಇಷ್ಟಕ್ಕೂ ಇಲ್ಲಿ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುವುದೇಕೆ? ಎಂಬಿತ್ಯಾದಿ ಪ್ರಶ್ನೆಗಳು ನಮ್ಮ ಮುಂದೆ ಗಿರಕಿ ಹೊಡೆಯುತ್ತಲೇ ಇರುತ್ತದೆ. ಇದಕ್ಕೆ ಉತ್ತರ ಹೇಳುವುದಕ್ಕೆ ಮುನ್ನ ಚೇಲಾವರ ಜಲಪಾತದ ಕುರಿತಂತೆ ಒಂದಿಷ್ಟು ಮಾಹಿತಿಯನ್ನು ನೀಡಲೇ ಬೇಕಾಗುತ್ತದೆ.

ಚೇಲಾವರ ಜಲಪಾತದತ್ತ ತೆರಳುವುದೇಗೆ?

ನಾಪೋಕ್ಲು ಬಳಿಯಿರುವ ಚೇಲಾವರ ಜಲಪಾತವು ಮಡಿಕೇರಿಯಿಂದ ಸುಮಾರು ಮೂವತ್ತೆರಡು ಕಿ.ಮೀ. ದೂರದಲ್ಲಿದೆ. ಬಸ್ ನಲ್ಲಿ ಹೋಗುವವರು ಮಡಿಕೇರಿಯಿಂದ ಖಾಸಗಿ ಬಸ್ನಲ್ಲಿ ಪ್ರಯಾಣಿಸಿ ಚೆಯ್ಯಂಡಾಣೆಯಲ್ಲಿಳಿದುಕೊಂಡು ಅಲ್ಲಿಂದ ಎರಡು ಕಿ.ಮೀ. ದೂರವಿರುವ ಚೇಲಾವರದತ್ತ ಹೆಜ್ಜೆ ಹಾಕಬಹುದು. ಸ್ವಂತ ವಾಹನದಲ್ಲಿ ಹೋಗುವವರಿಗೆ ಯಾವುದೇ ತೊಂದರೆಯಿಲ್ಲ. ಚೇಲಾವರದ ಅಂಕುಡೊಂಕಾದ ರಸ್ತೆಯಲ್ಲಿ ನಡೆಯುತ್ತಾ ಸುತ್ತಲೂ ಕಾಣಸಿಗುವ ರಮಣೀಯ ದೃಶ್ಯಗಳನ್ನು ನೋಡುತ್ತಾ ಸಾಗಿದರೆ ಜಲಪಾತವನ್ನು ತಲುಪುದು ಗೊತ್ತೇ ಆಗುವುದಿಲ್ಲ.

ಸುತ್ತಲೂ ಪರ್ವತ ಶ್ರೇಣಿಗನ್ನೊಳಗೊಂಡ ದಟ್ಟಕಾನನದ ತೂಂಗ್ ಕೊಲ್ಲಿ ತಲುಪಿದಾಗ ತುಸು ಸಮಾಧಾನವಾಗುತ್ತದೆ. ಇಲ್ಲಿಂದ ಎಡ ಬದಿಯ ಕಣಿವೆಯಲ್ಲಿ ಹೆಜ್ಜೆಹಾಕಿದಾಗ ಜಲಪಾತದ ಭೋರ್ಗರೆತ ಕಿವಿಗೆ ಬಡಿಯತೊಡಗಿತ್ತು. ಮುಂದೆ ಕಪ್ಪಗಿನ ಹೆಬ್ಬಂಡೆಯೊಂದರ ಮೇಲಿನಿಂದ ಧುಮುಕುವ ಜಲಧಾರೆ ಕಂಡಾಗ ಎಲ್ಲಿಲ್ಲದ ಸಂತೋಷವಾಗುತ್ತದೆ. ಇಲ್ಲಿನ ಕಾಫಿ ತೋಟದ ರಸ್ತೆಯಲ್ಲಿ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದಾಗಿದೆ.

Travel News Why Kodagu Chelavara Falls Dangerous For Tourists

ವಿಶಾಲ ಹೆಬ್ಬಂಡೆಗಳ ಮೇಲೆ ನರ್ತನ

ತಡಿಯಂಡಮೋಳ್ ಪರ್ವತ ಶ್ರೇಣಿಯ ಚೋಮನ ಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ನಿರ್ಮಿತವಾಗಿರುವ ಜಲಧಾರೆಯನ್ನು ಏಮೆಪಾರೆ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ. ಬಹುಶಃ ಇಲ್ಲಿನ ಹೆಬ್ಬಂಡೆ ಮೇಲ್ನೋಟಕ್ಕೆ ಆಮೆಯಂತೆ ಕಂಡು ಬರುವುದರಿಂದ ಒಟ್ಟಾಗಿ ಕೊಡವಭಾಷೆಯಲ್ಲಿ ಏಮೆಪಾರೆ ಎಂದು ಕರೆದಿರಬಹುದೇನೋ? ಹೆಬ್ಬಂಡೆಯ ಮೇಲೆ ಸುಮಾರು ನೂರು ಅಡಿಯಷ್ಟು ಎತ್ತರದಿಂದ ಹಾಲುಸುರಿದಂತೆ ಕಾಣುವ ಈ ಜಲಧಾರೆಯನ್ನು ವೀಕ್ಷಿಸುವುದೇ ಮಜಾ.

ಇಲ್ಲಿ ಕಾಫಿ ತೋಟದ ನಡುವೆ ಮತ್ತೊಂದು ಜಲಪಾತವಿದೆ ಇದರ ಬಳಿಗೆ ಹೋಗಬೇಕಾದರೆ ಕಾಫಿ ತೋಟದ ಮಾಲೀಕರ ಅಪ್ಪಣೆ ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೆ ತೋಟದಲ್ಲಿರುವ ಜಿಗಣೆಗಳಿಂದ ತಪ್ಪಿಕೊಂಡು ಹೋಗುವುದು ಸವಾಲ್ ಆಗುತ್ತದೆ. ಅವುಗಳನ್ನು ತಪ್ಪಿಸಿಕೊಂಡು ನಡೆಯುವುದು ತ್ರಾಸವಾದರೂ ಜಲಪಾತದ ಬಳಿಗೆ ತಲುಪಿದರೆ ಖುಷಿ ಕೊಡುತ್ತದೆ.

ಇಲ್ಲಿವೆ ಮಿನಿ ಜಲಪಾತಗಳು

ಇಗ್ಗುತಪ್ಪ ಬೆಟ್ಟದಿಂದ ಹರಿದು ಬರುವ ಬಲಿಯಟ್ರನದಿಯಿಂದ ನಿರ್ಮಿತವಾಗಿರುವ ಈ ಮಿನಿಜಲಪಾತ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಹದ್ದು. ಸುಮಾರು ಐವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಮೂರು ಹಂತಗಳಲ್ಲಿ ತನ್ನ ಬೆಡಗನ್ನು ಪ್ರದರ್ಶಿಸುತ್ತಾ ನೋಡುಗರ ಮನಸೆಳೆಯುತ್ತದೆ. ಈ ಜಲಪಾತದತ್ತ ಹೆಚ್ಚಿನವರಿಗೆ ತೆರಳಲು ಅವಕಾಶವಿಲ್ಲ.

ಮುಖ್ಯ ಜಲಪಾತ ಮಾತ್ರ ಸುಂದರವಾಗಿದ್ದು, ಮಳೆಗಾಲದಲ್ಲಿ ಇದರ ರುದ್ರ ನರ್ತನ ಮೈನಡುಗಿಸುತ್ತದೆ. ಮಳೆ ಬಿಡುವುಕೊಟ್ಟಾಗ ನೀರು ಶ್ವೇತಧಾರೆಯಾಗಿ ಧುಮ್ಮಿಕ್ಕುವ ದೃಶ್ಯ ರೋಮಾಂಚಕವಾಗಿರುತ್ತದೆ. ವಿಶಾಲಹೆಬ್ಬಂಡೆ ಮೇಲೆ ಧುಮ್ಮಿಕ್ಕಿ ಬಳಿದ ಪುಟ್ಟ ಜಲಧಾರೆಗಳಾಗಿ ಹರಿದು ಹೋಗುತ್ತದೆ. ಈ ಜಲಪಾತದ ರುದ್ರರಮಣೀಯತೆಯನ್ನು ದೂರದಿಂದಲೇ ನೋಡಿಕೊಂಡು ಪ್ರವಾಸಿಗರು ಹಿಂತಿರುಗಿದ್ದರೆ ಇವತ್ತು ಈ ಜಲಪಾತಕ್ಕೆ ಕುಖ್ಯಾತಿ ಬರುತ್ತಿರಲಿಲ್ಲ.

ಜಲಪಾತಕ್ಕೆ ಅಂಟಿರುವ ಕಳಂಕ ತೊಡೆಯೋಣ

ಬೇಸಿಗೆಯ ದಿನಗಳಲ್ಲಿ ಜಲಧಾರೆ ಧುಮ್ಮಿಕ್ಕುವ ಸ್ಥಳಕ್ಕೆ ಕೆಲವರು ಇಳಿದು ಮೇಲಿಂದ ಧುಮ್ಮಿಕ್ಕು ಜಲಧಾರೆಗೆ ತಲೆಕೊಟ್ಟು ಸ್ನಾನ ಮಾಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಜಲಪಾತದ ಸನಿಹಕ್ಕೆ ತೆರಳುವವರು ಸುಳಿಗೆ ಸಿಲುಕಿ ಮುಳುಗಿ ಸಾವನ್ನಪ್ಪುತ್ತಾರೆ. ಇಲ್ಲಿ ಅಪಾಯವಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರೂ ಕೆಲವರು ಅದನ್ನು ಲೆಕ್ಕಿಸದೆ ಜನರ ಕಣ್ತಪ್ಪಿಸಿ ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಕೇವಲ ಜಲಪಾತದ ಸೌಂದರ್ಯವನ್ನಷ್ಟೆ ನೋಡಿ ಬಂದರೆ ಯಾವುದೇ ಪ್ರಾಣ ಹಾನಿ ಸಂಭವಿಸುವುದಿಲ್ಲ. ಆದರೆ ಜನರೇ ದುರಂತಗಳನ್ನು ಮೈಮೇಲೆ ಎಳೆದುಕೊಂಡು ಪ್ರಾಣ ಕಳೆದುಕೊಳ್ಳುತ್ತಾರೆ. ಇದರಿಂದ ಅಯ್ಯೋ ಚೇಲಾವರ ಜಲಪಾತದತ್ತ ಹೋಗ್ತಿರಾ? ಬೇಡಪ್ಪಾ ಎಂದು ಮನೆಯವರು ತಡೆಯುವಂತಾಗಿದೆ. ಇನ್ನಾದರೂ ಜಲಪಾತದ ಬಳಿಗೆ ತೆರಳುವವರು ಕೇವಲ ಜಲಪಾತವನ್ನಷ್ಟೆ ನೋಡಿ ಹಿಂತಿರುಗಿದರೆ ಜಲಪಾತಕ್ಕೆ ಅಂಟಿರುವ ಕಳಂಕವನ್ನು ತೊಡೆಯಲು ಸಾಧ್ಯವಾಗಬಹುದೇನೋ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+