ಬೇಡಿದ್ದನ್ನು ಸಿದ್ದಿಸುವ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟ: ಈ ತಾಣ ಇರುವುದೆಲ್ಲಿ? ತಲುಪುದು ಹೇಗೆ?

ಮೈಸೂರು, ಆಗಸ್ಟ್‌ 09: ಮೈಸೂರಿಗೆ ಆಗಮಿಸುವ ಪ್ರವಾಸಿಗರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗಷ್ಟೇ ಭೇಟಿ ನೀಡಿ ಹಿಂತಿರುಗಿ ಬಿಡುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿಯೂ ನಿಸರ್ಗ ಚೆಲುವಿನ ತಾಣಗಳಿದ್ದು ಇವುಗಳೆಲ್ಲವೂ ಜಂಜಾಟದ ಬದುಕಿಗೆ ತುಸು ನೆಮ್ಮದಿ ನೀಡುವ ತಾಣಗಳಾಗಿವೆ. ಇಂತಹ ತಾಣಗಳ ಪೈಕಿ ಮೈಸೂರು ಜಿಲ್ಲೆಯ ತಿ.ನರಸೀಪುರಕ್ಕೆ ಸಮೀಪವಿರುವ ಒಡ್ಡುಗಲ್ಲ್ಲು ರಂಗಸ್ವಾಮಿ ಬೆಟ್ಟವೂ ಒಂದಾಗಿದ್ದು, ಇದು ಆಸ್ತಿಕ ಮತ್ತು ನಾಸ್ತಿಕರೆಲ್ಲರಿಗೂ ಮುದನೀಡುವ ತಾಣವಾಗಿದೆ.

ಒಡ್ಡುಗಲ್ಲ್ಲು ರಂಗಸ್ವಾಮಿ ಬೆಟ್ಟಕ್ಕೆ ದೈವಿಕ ಮಹತ್ವವೂ ಇರುವುದರಿಂದ ಇಲ್ಲಿಗೆ ಪ್ರವಾಸಿಗರು ಮೋಜು ಮಸ್ತಿಯ ಉದ್ದೇಶವನ್ನಿಟ್ಟುಕೊಳ್ಳದೆ ಪ್ರಾಂಜಲ ಮನಸ್ಸಿನಿಂದ ಆಗಮಿಸಿ ಒಡ್ಡುಗಲ್ಲ್ಲು ರಂಗಸ್ವಾಮಿಯನ್ನು ನೆನೆಯುತ್ತಾ ಬೆಟ್ಟವೇರಿ ದೇವರ ದರ್ಶನ ಪಡೆಯುವುದರೊಂದಿಗೆ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಇದ್ದು ಹೋದರೆ ಮಾನಸಿಕ ಶಾಂತಿ ಲಭಿಸುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇದು ಸಿದ್ಧಪುರುಷರ ನೆಲೆಯಾಗಿದ್ದು, ಭಕ್ತಿಯಿಂದ ಬೇಡಿದ್ದು ಸಿದ್ದಿಸುತ್ತದೆ ಎಂಬ ಮಾತುಗಳನ್ನು ಹಿರಿಯರು ಹೇಳುತ್ತಾರೆ.

Travel News What Is The Specialty Of Shri Vadgal Ranganathaswami Hills

ತಿ.ನರಸೀಪುರದಿಂದ ಒಂಬತ್ತು ಕಿ.ಮೀ, ದೂರದಲ್ಲಿ ಬನ್ನೂರುಗೆ ಸಮೀಪವಿರುವ ಒಡ್ಡುಗಲ್ಲ್ಲು ರಂಗಸ್ವಾಮಿ ಬೆಟ್ಟ ಹಲವು ಐಹಿತ್ಯ ಹೊಂದಿರುವ ತಾಣವಾಗಿದೆ. ಇಲ್ಲಿ ನಿಸರ್ಗದ ಸುಂದರತೆ ಸದಾ ಲಾಸ್ಯವಾಡುತ್ತಿರುತ್ತದೆ. ಹೀಗಾಗಿಯೇ ಹೆಚ್ಚಿವರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಭಕ್ತರಾಗಿ ಬರುವವರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆ ಬೃಹತ್ ಬಂಡೆಕಲ್ಲುಗಳಾಗಿವೆ. ಈ ಬಂಡೆಕಲ್ಲುಗಳ ನಡುವಿನ ಗುಹೆ, ಸುರಂಗಗಳೇ ಹಿಂದಿನ ಕಾಲದ ಸಿದ್ಧಪುರುಷರ ನೆಲೆಯಾಗಿತ್ತು. ಇಲ್ಲಿದ್ದುಕೊಂಡೇ ತಪಸ್ಸು ಮಾಡಿ ಸಿದ್ದಿಪಡೆಯುತ್ತಿದ್ದರು ಎನ್ನಲಾಗುತ್ತಿದೆ.

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟಕ್ಕೆ ಹಲವು ಹೆಸರಿದೆ

ಒಡ್ಡುಗಲ್ಲ್ಲು ರಂಗಸ್ವಾಮಿ ಬೆಟ್ಟವನ್ನು ಇವತ್ತಿಗೂ ಸಿದ್ದಿಗಿರಿ, ಸಿದ್ದನಬೆಟ್ಟ ಎಂದುನ ಕರೆಯುವುದುಂಟು. ಹಿಂದಿನ ಕಾಲದಲ್ಲಿ ಈ ಬೆಟ್ಟದ ತಪ್ಪಲಿನಲ್ಲಿ ನೆಲೆಸಿದ್ದ ಸಿದ್ದಿಪುರುಷರು ತಪಸ್ಸು ಮಾಡಿ ಸಿದ್ದಿಯನ್ನು ಪಡೆದಿದ್ದರಿಂದ ಈ ಬೆಟ್ಟಕ್ಕೆ ಸಿದ್ದಿಗಿರಿ, ಸಿದ್ದನಬೆಟ್ಟವಾಗಿದೆ. ಈ ಬೆಟ್ಟದ ಸಮೀಪದಲ್ಲಿರುವ ಇವತ್ತಿನ ಚಿದ್ರಳ್ಳಿಯಲ್ಲಿ ಹಿಂದೆ ಸಿದ್ದರು ನೆಲೆಸಿದ್ದರೆಂದೂ ಆಗ ಆ ಊರನ್ನು ಸಿದ್ದರಹಳ್ಳಿ ಎಂದು ಕರೆಯಲಾಗುತ್ತಿತ್ತು. ಆದರೆ ಕಾಲ ಕ್ರಮೇಣ ಸಿದ್ದರಹಳ್ಳಿ ಹೆಸರು ಹೋಗಿ ಚಿದರವಳ್ಳಿ ಆಯಿತು ಇದೀಗ ಅದು ಚಿದ್ರಳ್ಳಿಯಾಗಿದೆ.

ಇನ್ನು ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವು ಇತರೆ ಬೆಟ್ಟಗಳಂತೆ ಬಹಳ ಎತ್ತರದಲ್ಲಿಲ್ಲ. ಹೀಗಾಗಿ ಇಲ್ಲಿರುವ ಮೆಟ್ಟಿಲಿನ ಮೂಲಕ ಸುಲಭವಾಗಿ ಬೆಟ್ಟವನ್ನು ಏರಬಹುದಾಗಿದೆ. ಈ ಬೆಟ್ಟದ ವಿಶೇಷತೆಗಳನ್ನು ನೋಡುವುದಾದರೆ ಇದು ಹಿಂದಿನ ಕಾಲದಲ್ಲಿ ಹೆಬ್ಬಂಡೆಗಳ, ಗಿರಿ ಗುಹೆಗಳನ್ನು ಹೊಂದಿದ್ದರಿಂದ ಋಷಿ ಮುನಿಗಳು ತಪಸ್ಸಿಗೆ ಈ ತಾಣವನ್ನು ಇಷ್ಟಪಡುತ್ತಿದ್ದರು. ಬೆಟ್ಟವನ್ನು ಏರುತ್ತಾ ಹೋದಂತೆಲ್ಲ ಬೆಟ್ಟದ ಮೇಲ್ಭಾಗದಲ್ಲಿ ಕುದುರೆ ಬೆನ್ನಿನ ಆಕಾರದ ಸ್ಥಳವಿದ್ದು, ಇದನ್ನು ವಿಭೂತಿ ತಿಟ್ಟು ಎಂದು ಕೂಡ ಕರೆಯಲಾಗುತ್ತಿದೆ. ಈ ಜಾಗವು ಹಿಂದೆ ಸಿದ್ದರಬೀಡಾಗಿತ್ತಂತೆ. ಇದರ ಕುರುಹುವಾಗಿ ಈಗಲೂ ಇಲ್ಲಿ ಸುಟ್ಟ ಇಟ್ಟಿಗೆ, ಹೆಂಚು ಚೂರು, ಮಣ್ಣು ಬೂದಿಗಳು ಕಾಣಿಸುತ್ತವೆ.

Travel News What Is The Specialty Of Shri Vadgal Ranganathaswami Hills

ಹಲವು ವಿಶೇಷತೆ ಹೊಂದಿರುವ ಮೇಗಳಗವಿ

ಈ ಬೆಟ್ಟದ ಬಗ್ಗೆ ತಿಳಿಯುತ್ತಾ ಹೋದಂತೆಲ್ಲ ಒಂದಷ್ಟು ವಿಶೇಷತೆಗಳು ಇದರ ಹಿಂದೆ ಇರುವುದು ಗೋಚರಿಸುತ್ತದೆ. ಅದರಂತೆ ಹಿಂದಿನ ಕಾಲದಲ್ಲಿ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದಿಂದ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಕುಂದೂರು ಬೆಟ್ಟಕ್ಕೆ ಸುರಂಗ ಮಾರ್ಗವಿತ್ತೆಂದೂ ಸಿದ್ದರು ಈ ಸುರಂಗ ಮಾರ್ಗದಲ್ಲಿ ಸಂಚರಿಸುತ್ತಿದ್ದರಂತೆ. ಬೆಟ್ಟದ ಮಧ್ಯಭಾಗದಲ್ಲಿ ಗವಿಯಿದ್ದು ಅದಕ್ಕೆ ಮೇಗಳ ಗವಿ ಎಂಬ ಹೆಸರಿದೆ. ಬೃಹತ್ ಬಂಡೆಯಿಂದ ಸೃಷ್ಠಿಯಾಗಿರುವ ಗವಿಯು ಬಹುದೊಡ್ಡದಾಗಿದೆ. ಇಲ್ಲಿ ಹರಿಯುವ ನೀರನ್ನು ಸಿದ್ದಗಂಗೆ ಅಥವಾ ಅಂತರಗಂಗೆ ಎಂದು ಕರೆಯಲಾಗುತ್ತಿದೆ.

ಈ ಮೇಗಳಗವಿಯಲ್ಲಿ ಗವಿಮಠದ ಶಿವಯೋಗಿಗಳು ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಧ್ಯಾನಾಸಕ್ತರಾದಾಗ ಅವರ ಸುತ್ತಲೂ ಕರಡಿ, ಹುಲಿಗಳಂತಹ ಪ್ರಾಣಿಗಳು ಸುತ್ತುವರಿದು ಕುಳಿತುಕೊಳ್ಳುತ್ತಿದ್ದವಂತೆ. ಇಲ್ಲೊಂದು ಹೆಬ್ಬಂಡೆಯಿದ್ದು ಅದಕ್ಕೆ ಓಕಳಿಕಲ್ಲು ಎಂಬ ಹೆಸರಿದೆ. ಈ ಹೆಬ್ಬಂಡೆಗೆ ಅಭಿಮುಖವಾಗಿ ಕುಳಿತು ಕೂಗಿದರೆ ಪ್ರತಿಧ್ವನಿ ಕೇಳಿ ಬರುತ್ತಿದ್ದು, ಇದಕ್ಕೆ ನಾದಾನುಸಂಧಾನ ಕಲ್ಲೆಂಬ ಮತ್ತೊಂದು ಹೆಸರಿದೆ. ಬೆಟ್ಟದ ಒಂದು ಭಾಗದಲ್ಲಿ ಕೋಡುಗಲ್ಲು ಬಸಪ್ಪನ ಬಂಡೆಯಿದ್ದು, ಇದನ್ನು ಕೆಲವರು ಮಾರಮ್ಮನ ಕಲ್ಲು ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಗ್ರಾಮದ ರಕ್ಷಣೆಗಾಗಿ ಓಡಾಡುವ ಸಿದ್ದೇಶ್ವರಸ್ವಾಮಿ

ಮಳೆಗಾಲದಲ್ಲಿ ಮಳೆ ಸುರಿಯದೆ ಕ್ಷಾಮ ಕಾಣಿಕೊಂಡಾಗ ಊರಿನ ಹಿರಿಯರೆಲ್ಲರೂ ಸೇರಿ ಮನೆ ಮನೆಗೆ ತೆರಳಿ ಪಡಿ ಎತ್ತಿ ಬಸಪ್ಪನಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ನೈವೇದ್ಯ ಸಲ್ಲಿಸಿದರೆ ಮಳೆ ಸುರಿಯುತ್ತಿತ್ತು ಎಂದು ಹೇಳಲಾಗಿದೆ. ಇನ್ನು ಇಲ್ಲಿಂದ ಅಲ್ಲಿಂದ ಮುಂದೆ ಸಾಗಿ ಬೆಟ್ಟದ ಮೇಲ್ಭಾಗವನ್ನು ತಲುಪಿ ಸುತ್ತಲೂ ಕಣ್ಣು ಹಾಯಿಸಿದರೆ ನಿಸರ್ಗದ ಸುಂದರ ನೋಟ ತೆರೆದುಕೊಳ್ಳುತ್ತದೆ.

Travel News What Is The Specialty Of Shri Vadgal Ranganathaswami Hills

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದ ಸಮೀಪವೇ ಸೋಮೇಶ್ವರ ದೇವಾಲಯವಿದೆ. ಈ ದೇವಾಲಯ ಅಪರೂಪದ್ದಾಗಿದೆ. ಇದಲ್ಲದೆ ಈ ಊರಿನ ಸುತ್ತಮುತ್ತ ಸಿದ್ದೇಶ್ವರ ಸ್ವಾಮಿ, ಬೀರೇಶ್ವರ, ಚಿಕ್ಕಮ್ಮ, ದೊಡ್ಡಮ್ಮ ತಾಯಿಯ ದೇವಾಲಯ, ಗಣಪತಿ, ಸತ್ಯನಾರಾಯಣ ಸ್ವಾಮಿಯ ದೇವಾಲಯವೂ ಇದೆ.

ಸಿದ್ದೇಶ್ವರ ಸ್ವಾಮಿಯೇ ಈ ಊರಿನ ಅಧಿದೇವತೆಯಾಗಿದ್ದು, ಈ ದೇವಾಲಯದ ಬಗ್ಗೆ ಅಪಾರ ಭಕ್ತಿ ಹಾಗೂ ನಂಬಿಕೆಯನ್ನು ಜನ ಹೊಂದಿದ್ದಾರೆ. ಅಲ್ಲದೆ, ಸಿದ್ದೇಶ್ವರ ಸ್ವಾಮಿಯು ಕುದುರೆಯನ್ನೇರಿ ಕಲ್ಲು ನೀರು ಕರಗುವ ಹೊತ್ತಿನಲ್ಲಿ ಗ್ರಾಮದ ರಕ್ಷಣೆಗಾಗಿ ಓಡಾಡುತ್ತಾನೆ ಎಂಬ ನಂಬಿಕೆಯೂ ಇದೆ. ಗ್ರಾಮದಲ್ಲಿ ಭಕ್ತರಲ್ಲಿ ತಪ್ಪು ನಡೆದರೆ ಸರ್ಪ ಕಾಣಿಸಿಕೊಳ್ಳುತ್ತಿತ್ತು ಎಂದು ಜನ ಹೇಳುತ್ತಾರೆ.

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದಲ್ಲಿ ನೆಲೆಸಿರುವ ಸಿದ್ದರು ವೀರಶೈವರಾಗಿದ್ದು, ಒಡ್ಡುಗಲ್ಲು ರಂಗನಾಥಸ್ವಾಮಿಯ ಭಕ್ತರಾಗಿದ್ದಾರೆ ಅಲ್ಲದೆ ಇವರು ವೈಷ್ಣವ ಪಂಥಕ್ಕೆ ಸೇರಿದವರಾಗಿದ್ದು, ಈ ತಾಣವು ಶೈವ ಮತ್ತು ವೈಷ್ಣವ ಧರ್ಮದ ಯಾತ್ರಾ ಸ್ಥಳವೆಂದರೂ ತಪ್ಪಾಗಲಾರದು. ಅದು ಏನೇ ಇರಲಿ ಪಟ್ಟಣಗಳ ಗೌಜು ಗದ್ದಲದಲ್ಲಿ ಕಳೆದು ಹೋದವರು ನಿಸರ್ಗ ಮಡಿನ ಈ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ಹೋದರೆ ಮನಸ್ಸು ಹಗುರವಾಗುವುದರಲ್ಲಿ ಸಂದೇಹವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+