ಮುಡುಕುತೊರೆ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಈ ಹರಕೆ ಹೊತ್ತರೆ, ನಿಮ್ಮ ಕಾರ್ಯ ಸಿದ್ಧಿ
ಮೈಸೂರು, ಫೆಬ್ರವರಿ 10: ಈಗ ಜಾತ್ರಾ ಕಾಲ..ಎಲ್ಲೆಡೆಯೂ ಜಾತ್ರೆಯ ಸಂಭ್ರಮ ಮನೆಮಾಡಿದೆ. ಅದರಲ್ಲೂ ಮೈಸೂರು ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಜಾತ್ರೆ ಮುಗಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಜಾತ್ರೆಗಳು ಇನ್ನಷ್ಟೆ ನಡೆಯಬೇಕಾಗಿದೆ. ಪ್ರತಿಯೊಂದು ಜಾತ್ರೆಯೂ ಅದರದ್ದೇ ಅದ ವೈಶಿಷ್ಟ್ಯ ಮತ್ತು ಮಹತ್ವವನ್ನು ಹೊಂದಿರುವುದು ಎದ್ದು ಕಾಣಿಸುತ್ತಿದೆ. ಈ ನಡುವೆ ಪ್ರಸಿದ್ದ ಮತ್ತು ಸುಮಾರು 17 ದಿನಗಳ ಕಾಲ ನಡೆಯುವ ಮುಡುಕುತೊರೆ ಜಾತ್ರೆ ನಾಳೆಯಿಂದ(ಫೆ.11ರಿಂದ) ಆರಂಭವಾಗಲಿದ್ದು, ಫೆ.27ರವರೆಗೆ ನಡೆಯಲಿದೆ.
ಜಾತ್ರೆಯಲ್ಲಿ ಅಂಕರಾರ್ಪಣೆ, ಧ್ವಜಾರೋಹಣ, ಚಂದ್ರ ಮಂಡಲಾರೋಹಣ, ಅನಂತಪೀಠಾರೋಪಣ, ಪುಷ್ಪ ಮಂಟಪಾರೋಹಣ, ವೃಷಭಾರೋಹಣ, ಗಿರಿಜಾಕಲ್ಯಾಣ, ಗಜಾರೋಹಣ, ಶ್ರೀಮದ್ದಿನ್ಮ ಬ್ರಹ್ಮರಥೋತ್ಸವ, ಚಿತ್ರರಥೋತ್ಸವ, ಶಯನೋತ್ಸವ, ಅವಭೃತ ತೀರ್ಥಸ್ನಾನ, ಪುಷ್ಪಪಲ್ಲಕಿ ಉತ್ಸವ, ತೆಪ್ಪೋತ್ಸವ, ಮರಿ ತೆಪ್ಪೋತ್ಸವ, ಕೈಲಾಸ ವಾಹನೋತ್ಸವ, ಮಂಟಪೋತ್ಸವ, ಗಿರಿಪ್ರದಕ್ಷಿಣೆ, ಪರ್ವತಪರಿಷೆ, ಬಸವಮಾಲೆ, ಮಹಾಭಿಷೇಕ ಮತ್ತು ಶೆಟ್ಟರ ಸೇವೆ, ದನಗಳ ಜಾತ್ರೆ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ಜಾತ್ರೆಯಲ್ಲಿ ಫೆಬ್ರವರಿ 18ರಂದು ಮಲ್ಲಿಕಾರ್ಜುನ ರಥೋತ್ಸವ ನಡೆಯಲಿದ್ದು,. ಸಾಂಪ್ರದಾಯಿಕ ವಿಧಿವಿಧಾನದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮೊದಲಾದ ಜನಪದೀಯ ತಂಡಗಳು ತಮ್ಮ ಕಲೆಯ ಪ್ರದರ್ಶನದ ಮೂಲಕ ರಥೋತ್ಸವಕ್ಕೆ ಮೆರಗು ನೀಡುತ್ತದೆ.
ಬೆಟ್ಟದ ಮೇಲೆ ನೆಲೆ ನಿಂತ ಮಲ್ಲಿಕಾರ್ಜುನ
ಬ್ರಹ್ಮರಥೋತ್ಸವದಲ್ಲಿ ವಿರಾಜಮಾನನಾಗುವ ಮಲ್ಲಿಕಾರ್ಜುನನ ಬಗ್ಗೆ ಹೇಳಲೇ ಬೇಕಾಗುತ್ತದೆ. ಮಲ್ಲಿಕಾರ್ಜುನ ನೆಲೆನಿಂತ ದೇಗುಲವು ಸುಮಾರು 300 ಅಡಿಯಷ್ಟು ಎತ್ತರದ ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಈ ಬೆಟ್ವನ್ನೇರಲು ನೂರೊಂದು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಗಂಗರ ಕಾಲದ ರಚನೆಯನ್ನು ಹೊಂದಿದ್ದು, ಪುಟ್ಟದಾಗಿ ನಿರ್ಮಾಣಗೊಂಡ ದೇಗುಲ ಬಳಿಕ ವಿಸ್ತರಿಸುತ್ತಾ ಹೋಗಿರಬಹುದೆಂದು ಹೇಳಲಾಗುತ್ತದೆ. ಇದು ಪಶ್ಚಿಮಾಭಿಮುಖವಾಗಿದ್ದು, ಗರ್ಭಗೃಹ, ಶುಕನಾಸಿ, ಅಂತರಾಳ, ನವರಂಗ ಮತ್ತು ದ್ವಾರಮಂಟಪಗಳನ್ನು ಹೊಂದಿದೆ. ನವರಂಗದಲ್ಲಿ ವರ್ತುಲಾಕೃತಿಯ ಸ್ತಂಭಗಳನ್ನು ನಾವು ಕಾಣಬಹುದು.
ಪೌರಾಣಿಕ ಇತಿಹಾಸವನ್ನು ನೋಡಿದ್ದೇ ಆದರೆ ದ್ವಾಪರಯುಗದಲ್ಲಿ ಕೌರವರ ಕುಟಿಲತೆಯಿಂದ ರಾಜ್ಯವನ್ನು ಕಳೆದುಕೊಂಡು ವನವಾಸ ಹೊರಟ ಪಾಂಡವರು ಸೋಮಗಿರಿ (ಮುಡುಕುತೊರೆ) ಬಂದಿದ್ದರಂತೆ ಈ ಸಂದರ್ಭ ಸುತ್ತಲಿನ ಪ್ರಕೃತಿಯ ಸೊಬಗನ್ನು ಕಂಡು ಆಕರ್ಷಿತಗೊಂಡ ಅರ್ಜುನ ಲಿಂಗರೂಪಿಯಾಗಿದ್ದ ಈಶ್ವರನನ್ನು ಕಂಡು ಹರ್ಷಗೊಂಡನಲ್ಲದೆ, ಲಿಂಗಕ್ಕೆ ಮಲ್ಲಿಕಾಪುಷ್ಪಗಳಿಂದ ಪೂಜಿಸಿ ತನ್ನ ಇಷ್ಟಾರ್ಥವನ್ನು ಪಡೆದನಂತೆ ಹೀಗೆ ಮಲ್ಲಿಕಾಪುಷ್ಪದಿಂದ ಪೂಜಿಸಲ್ಪಟ್ಟಿದ್ದರಿಂದ ಈ ದೇಗುಲಕ್ಕೆ ಮಲಿಕಾರ್ಜುನಸ್ವಾಮಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.

ಜಾತ್ರೆಯಲ್ಲಿ ನಡೆಯುತ್ತೆ ಹಲವು ವಿಶೇಷತೆಗಳು
ಜಾತ್ರೆಯ ಸಂದರ್ಭ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯತ್ತದೆ. ಬೆಳಗ್ಗಿನ ಜಾವ ನಡೆಯುವ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಾರೆ. ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿದರೆ, 'ಕಜ್ಜಾಯದ ಮಣೆ ಬಟ್ಟಲು ಉಡಿಸುತೀವಿ' ಎಂದು ಹರಕೆ ಮಾಡಿಕೊಂಡವರು ತಮ್ಮ ಹರಕೆಯನ್ನು ಒಪ್ಪಿಸುತ್ತಾರೆ. ಅದೇ ದಿನ ಪರ್ವತ ಪರಿಷೆಯ ದಿನಾಂಕವನ್ನು ನೆರೆದ ಹಿರಿಯರ ಸಮ್ಮುಖದಲ್ಲಿ ನಿಗದಿಪಡಿಸಲಾಗುತ್ತದೆ. ಪರ್ವತ ಪರಿಷೆ ಎಂಬುವುದು ಈ ಜಾತ್ರೆಯ ವೈಶಿಷ್ಟ್ಯತೆಯಲ್ಲೊಂದಾಗಿದೆ. ಪುರಾಣ ಕಥೆಯ ಪ್ರಕಾರ ಪಾರ್ವತಿಯು ಶಿವನ ವಾಹನ ಬಸವನ ಮೇಲೆ ತನ್ನ ತವರು ಮನೆಯಾದ ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದಳೆಂದೂ ಆ ನಂಬಿಕೆ ಇಂದಿಗೂ ಜನಮನದಲ್ಲಿದೆ.
ಈ ಪರಿಷೆ ಯಾವಾಗ ಆರಂಭವಾಯಿತೆಂಬುವುದು ತಿಳಿದು ಬರುವುದಿಲ್ಲವಾದರೂ ಚಿಕ್ಕದೇವರಾಜ ತನಗೆ ಮಲ್ಲಿಕಾರ್ಜುನನ ಕೃಪೆಯಿಂದ ಒಳ್ಳೆಯದಾದ ಹಿನ್ನಲೆಯಲ್ಲಿ ಪರಿಷೆ ಮಾಡಿಸಿದ್ದನೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಶಿವರಾತ್ರಿ ಸಂದರ್ಭ ಬಸವನೊಂದಿಗೆ ಭಕ್ತರು ಪರಿಷೆ ಹೊರಡುತ್ತಾರೆ. ಕಾಲ್ನಡಿಗೆಯಲ್ಲಿಯೇ ಮದ್ದೂರು, ಚನ್ನಪಟ್ಟಣ, ಬೆಂಗಳೂರು, ನಂದ್ಯಾಲ ಮೂಲಕ ಶ್ರೀಶೈಲವನ್ನು ಯುಗಾದಿ ಸಂದರ್ಭ ತಲುಪುತ್ತಾರೆ ಅಲ್ಲಿ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ವೃತ ತೆಗೆಯಲಾಗುತ್ತದೆ. ಮತ್ತೆ ಒಂದು ತಿಂಗಳಿಗೆ ಕಾಲ್ನಡಿಗೆಯಲ್ಲಿಯೇ ಮುಡುಕುತೊರೆಗೆ ಹಿಂತಿರುಗುತ್ತಾರೆ. ಅಲ್ಲದೆ ಪರಿಷೆ ಯಶಸ್ವಿಯಾದುದಕ್ಕೆ ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಇದನ್ನು ಚಿಕ್ಕ ಜಾತ್ರೆ ಎಂದು ಕರೆಯುತ್ತಾರೆ.
ಮುಡುಕುತೊರೆ ಹೆಸರು ಬಂದಿದ್ದು ಹೇಗೆ?
ಇನ್ನು ಜಾತ್ರೆ ನಡೆಯುವ ಮುಡುಕುತೊರೆ ಕ್ಷೇತ್ರವು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದಾದ ತಿ.ನರಸೀಪುರದಿಂದ 19 ಕಿ.ಮೀ ದೂರದಲ್ಲಿದೆ. ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಹುಶಃ ಮುಡುಕುತೊರೆ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ. ಜಾತ್ರೆಯಲ್ಲಿ ಅದರಲ್ಲೂ ಬ್ರಹ್ಮರಥೋತ್ಸವದಲ್ಲಿ ಮಲ್ಲಿಕಾರ್ಜುನನೇ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ನೀಡಿ ಇಷ್ಟಾರ್ಥ ನೆರವೇರಿಸುವುದು ಇಲ್ಲಿನ ವಿಶೇಷ. ಹೀಗಾಗಿಯೇ ರಥೋತ್ಸವಕ್ಕೆ ಸಹಸ್ರಾರು ಮಂದಿ ನೆರೆಯುತ್ತಾರೆ.

ಒಟ್ಟಾರೆ ಹೇಳಬೇಕೆಂದರೆ ಮುಡುಕುತೊರೆ ಜಾತ್ರೆ ಮೈಸೂರು ಭಾಗದಲ್ಲಿ ಪ್ರಸಿದ್ಧವಾಗಿದ್ದು, ಸುತ್ತಮುತ್ತಲ ರೈತರು ಸೇರಿದಂತೆ ಜನರು ಜಾತ್ರೆಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿ ಮಲ್ಲಿಕಾರ್ಜುನನ ದರ್ಶನ ಮಾಡಿಕೊಂಡು ಹಿಂತಿರುಗುತ್ತಾರೆ. ಇಲ್ಲಿ ನಡೆಯುವ ದನಗಳ ಜಾತ್ರೆಯೂ ಪ್ರಸಿದ್ಧಿಯಾಗಿದ್ದು, ರೈತರು ತಮ್ಮ ಜಾನುವಾರುಗಳೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದು ಏನೇ ಇರಲಿ ಹಳ್ಳಿಸೊಗಡಿನ ಈ ಜಾತ್ರೆ ತನ್ನದೇ ಮಹತ್ವವನ್ನು ಹೊಂದಿದ್ದು, ಸದಾ ಪಟ್ಟಣದ ಗೌಜು ಗದ್ದಲದಲ್ಲಿದ್ದವರು ಜಾತ್ರೆಗೆ ಹೋಗಿ ಬನ್ನಿ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications