ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ವಸೂಲಿ ಕೇಂದ್ರವಾಗದಿರಲಿ ಪ್ರವಾಸಿ ತಾಣ
ಮೈಸೂರು, ಅಕ್ಟೋಬರ್ 12: ಅಕ್ಟೋಬರ್ ತಿಂಗಳು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಹೊರಡುವ ಸಮಯವಾಗಿದೆ. ಈ ವೇಳೆಯಲ್ಲಿ ಮಕ್ಕಳಿಗೆ ದಸರಾ ರಜೆ ನೀಡುವುದರಿಂದ ಸಂಸಾರ ಸಮೇತವಾಗಿ ಹಾಗೂ ಶಾಲಾ ಕಾಲೇಜುಗಳಿಂದಲೂ ಪ್ರವಾಸಕ್ಕೆ ಹೊರಡುವುದು ಸಾಮಾನ್ಯವಾಗಿದೆ. ಹೀಗೆ ತೆರಳುವ ಪ್ರವಾಸಿಗರಿಗೂ ತಾವು ತೆರಳಿದ ಪ್ರವಾಸಿ ಸ್ಥಳಗಳಲ್ಲಿನ ವಾತಾವರಣವೂ ಖುಷಿ ಕೊಡುವಂತಿದ್ದರೆ ಪ್ರವಾಸ ತೆರಳಿದ್ದು ಸಾರ್ಥಕ ಎನಿಸುತ್ತದೆ.
ದಸರಾ ರಜಾ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ದಂಡು ದಂಡಾಗಿ ಪ್ರವಾಸಿಗರು ತೆರಳುತ್ತಿದ್ದು ಹೀಗೆ ತೆರಳುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಒಂದು ರೀತಿಯ ಪ್ರವಾಸಿ ಸ್ನೇಹಿ ವಾತಾವರಣ ಸೃಷ್ಟಿ ಮಾಡುವುದು ಕೂಡ ಸಂಬಂಧಿತ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಇವತ್ತು ಬಹುತೇಕ ಪ್ರವಾಸಿ ತಾಣಗಳು ಸುಲಿಗೆಯ ಕೇಂದ್ರಗಳಾಗಿರುವುದು ಎದ್ದು ಕಾಣಿಸುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಪ್ರವಾಸಿ ತಾಣಗಳನ್ನು ಅರಸಿ ಹೊರಡುವವರ ಸಂಖ್ಯೆ ಹೆಚ್ಚಾಗಿದೆ. ಮೊದಲೆಲ್ಲ ಶಾಲಾ, ಕಾಲೇಜು ಮಕ್ಕಳಷ್ಟೆ ಪ್ರವಾಸ ತೆರಳುತ್ತಿದ್ದರು. ಈಗ ಹಾಗಿಲ್ಲ ಐಟಿ, ಬಿಟಿ ಕಂಪನಿಗಳಲ್ಲದೆ, ಫ್ಯಾಮಿಲಿ ಟ್ರಿಪ್, ಜಾಲಿ ಟ್ರಿಪ್ ಹೀಗೆ ವಿವಿಧ ಹೆಸರುಗಳಲ್ಲಿ ಎಲ್ಲರೂ ವೀಕೆಂಡ್ ಅಥವಾ ರಜಾ ದಿನಗಳಲ್ಲಿ ಪ್ರವಾಸಿ ತಾಣಗಳತ್ತ ತೆರಳುವುದು ಮಾಮೂಲಿಯಾಗಿದೆ.
ಪ್ರವಾಸಿ ತಾಣ ವಸೂಲಿ ಕೇಂದ್ರವಾಗದಿರಲಿ
ಯಾವುದೇ ಪ್ರವಾಸಿ ತಾಣಗಳಾಗಿರಲಿ ದೂರದಿಂದ ಪ್ರವಾಸಿಗರಿಗೆ ಗೌರವ ನೀಡಿ ಅವರಿಗೆ ಖುಷಿ ಕೊಡುವಂತೆ, ಮತ್ತೊಮ್ಮೆ ಅವರು ಬರುವಂತೆ ಸ್ಥಳೀಯರು ನಡೆದುಕೊಳ್ಳ ಬೇಕಾಗುತ್ತದೆ. ಆದರೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಸುಲಿಗೆಗಳು ಹೆಚ್ಚಾಗುತ್ತಿವೆ. ನಿಗದಿತ ಬೆಲೆಗಿಂತಲೂ ಹೆಚ್ಚಿನ ಹಣ ವಸೂಲಿ ಮಾಡುವುದು ನಡೆಯುತ್ತಿದೆ. ಅಷ್ಟೇ ಅಲ್ಲದೆ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸುವುದು ಕೂಡ ಜಾಸ್ತಿಯಾಗಿದೆ.
ಬಹಳಷ್ಟು ವಹಿವಾಟುಗಳು ಪ್ರವಾಸಿಗರನ್ನು ನಂಬಿ ನಡೆಯುತ್ತದೆ. ಇಂತಹ ಸಂದರ್ಭಗಳಲ್ಲಿ ವ್ಯಾಪಾರಸ್ಥರು, ಆಟೋ, ಕ್ಯಾಬ್ ಚಾಲಕರು ಕೂಡ ದುಪ್ಪಟ್ಟು ಹಣ ವಸೂಲಿ ಮಾಡುವುದೆಷ್ಟು ಸರಿ? ಎಂಬ ಪ್ರಶ‍್ನೆಗಳು ಹುಟ್ಟಿಕೊಳ್ಳುತ್ತಿವೆ. ಯಾವುದೇ ಪ್ರವಾಸಿ ತಾಣಗಳಾಗಲಿ ಅದು ಅಭಿವೃದ್ಧಿಯಾಗುತ್ತಿದ್ದಂತೆಯೇ ಹೊರಗಿನಿಂದ ಬರುವ ಪ್ರವಾಸಿಗರನ್ನು ಸ್ಥಳೀಯರು ಕೇವಲ ವ್ಯಾಪಾರಿ ಮನೋಭಾವದಿಂದ ನೋಡುವುದು ಹೆಚ್ಚಾಗುತ್ತದೆ,

ಪ್ರವಾಸಿ ಸ್ನೇಹಿ ಪರಿಸರ ನಿರ್ಮಿಸಿ
ಇಂತಹ ಸ್ಥಳಗಳಲ್ಲಿ ಮೋಸ ವಂಚನೆಗಳು, ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಹತ್ತಿಕ್ಕದಿದ್ದರೆ ಪ್ರವಾಸಿಗರು ಅತ್ತ ಬರಲು ಭಯಪಡುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ. ಇದರಿಂದ ಪ್ರವಾಸಿ ತಾಣಗಳಿಗೂ ಕೆಟ್ಟ ಹೆಸರು ಬರುತ್ತದೆ. ಇದನ್ನು ತಪ್ಪಿಸಬೇಕಾದರೆ ಪ್ರವಾಸಿ ಸ್ನೇಹಿ ಪರಿಸರ ನಿರ್ಮಾಣ ಮಾಡುವ ಜವಬ್ದಾರಿಯನ್ನು ಸಂಬಂಧಿಸಿದವರು ಹೊರಬೇಕಾಗುತ್ತದೆ.
ಕೊರೊನಾ ನಂತರ ಕಳೆದೊಂದು ವರ್ಷದಿಂದ ನಿಧಾನವಾಗಿ ಪ್ರವಾಸೋದ್ಯಮ ಎಲ್ಲಡೆ ಚೇತರಿಸುತ್ತಿದೆ. ಹೀಗಿರುವಾಗ ಖುಷಿಯಿಂದ ಆಗಮಿಸುವ ಪ್ರವಾಸಿಗರಿಗೆ ದುಬಾರಿ ಬೆಲೆ ವಿಧಿಸಿ ಹಗಲು ದರೋಡೆ ಮಾಡುವುದು, ಸಂಬಾರ ಪದಾರ್ಥಗಳು, ತಿಂಡಿ ತಿನಿಸುಗಳು, ಹೋಟೆಲ್ ರೂಂಗಳು ಹೀಗೆ ಎಲ್ಲದಕ್ಕೂ ನಿಗದಿತ ದರ ವಿಧಿಸದೆ ತಮಗಿಷ್ಟ ಬಂದ ದರವನ್ನು ಪ್ರವಾಸಿಗರಿಂದ ವಸೂಲಿ ಮಾಡುವುದು ಎಷ್ಟು ಸರಿ? ಎಂಬುದು ಪ್ರವಾಸಿಗರ ಅಳಲಾಗಿದೆ.
ಸಂಬಂಧಿಸಿದವರು ಗಮನಹರಿಸಬೇಕು
ಇನ್ನಾದರೂ ಸುಲಿಗೆ, ವಂಚನೆ ನಡೆಯುವ ಪ್ರವಾಸಿ ತಾಣಗಳಲ್ಲಿ ಅಲ್ಲಿನ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ಗಮನಹರಿಸಿ ಪ್ರವಾಸಿಗರಿಗೆ ಅನುಕೂಲ ವಾತಾವರಣ ನಿರ್ಮಿಸಿಕೊಡುವ ಕೆಲಸ ಮಾಡಬೇಕಿದೆ. ಪ್ರವಾಸಿಗರ ಮೇಲೆ ಹಲ್ಲೆ, ಸುಲಿಗೆ ತಡೆಗೆ ಗಮನಹರಿಸಬೇಕಿದೆ. ಆಗ ಮಾತ್ರ ಪ್ರವಾಸೋದ್ಯಮ ಇನ್ನಷ್ಟು ಪ್ರಗತಿ ಕಾಣಲು ಅನುಕೂಲವಾಗುವುದರೊಂದಿಗೆ ತಾವು ನೀಡಿದ ಪ್ರವಾಸಿ ತಾಣದ ಸುಂದರ ಕ್ಷಣಗಳು ಪ್ರವಾಸಿಗರ ಮನದಲ್ಲಿ ಉಳಿಯಲು ಸಾಧ್ಯವಾಗುತ್ತದೆ.












Click it and Unblock the Notifications