ಪ್ರವಾಸಿಗರೇ ಗಮನಿಸಿ..! ಶಿವನ ಸಮುದ್ರದ ಭರಚುಕ್ಕಿ-ಗಗನಚುಕ್ಕಿಯಲ್ಲಿ ಜಲವೈಭವ ಆರಂಭ
ಮೈಸೂರು, ಜುಲೈ 12 : ಈ ಬಾರಿಯ ರಣಬಿಸಿಲು ಜಲಪಾತಗಳನ್ನು ಹೆಬ್ಬಂಡೆಗಳ ಮೇಲೆಯೇ ಬತ್ತಿ ಹೋಗುವಂತೆ ಮಾಡಿತ್ತು. ಬೇಸಿಗೆಯಲ್ಲಿ ಜಲಪಾತಗಳನ್ನು ನೋಡಲು ಹೋದವರು ಕರ್ರಗಿನ ಹೆಬ್ಬಂಡೆಗಳಲ್ಲಿ ಲೀನವಾಗಿ ಹೋದ ಜಲಧಾರೆಗಳನ್ನು ನೋಡಿ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಆದರೀಗ ಒಂದಿಷ್ಟು ಮಳೆ ಸುರಿದ ಕಾರಣ ಕಾವೇರಿನದಿಗೆ ಉಪನದಿಗಳು ಸೇರಿ ಹರಿಯುತ್ತಿರುವ ಕಾರಣ ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲಿ ನಿಧಾನವಾಗಿ ಜಲವೈಭವ ಆರಂಭವಾಗಿದೆ.
ಒಂದೆಡೆ ಮಳೆ ಸುರಿಯುತ್ತಿದೆ.. ಮತ್ತೊಂದೆಡೆ ಜಲಾಶಯ ಭರ್ತಿಯಾಗದಿದ್ದರೂ ಕಬಿನಿ, ಕೆಆರ್ಎಸ್ ಜಲಾಶಯದಿಂದ ಒಂದಷ್ಟು ನೀರು ಹರಿದು ಹೋಗುತ್ತಿದೆ. ಹೀಗಾಗಿ ಕಾವೇರಿ ನದಿಯಿಂದ ನಿರ್ಮಾಣವಾಗಿರುವ ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯ ಹೆಬ್ಬಂಡೆಗಳ ಮೇಲೆ ಜಲಧಾರೆ ಚಿತ್ತಾರ ಬಿಡಿಸಲು ಆರಂಭಿಸಿದ್ದು, ಸದ್ಯ ಹೆಚ್ಚು ನೀರಿಲ್ಲದ ಕಾರಣ ಮಿಂಚು ಸರಿದಂತೆ ಭಾಸವಾಗುತ್ತಿದೆ.

ಬೇಸಿಗೆಯಲ್ಲಿ ವೈಭವ ಕಳೆದುಕೊಂಡು ಮಂಕಾಗಿದ್ದ ಜಲಧಾರೆಗಳಲ್ಲಿ ನಿಧಾನವಾಗಿ ಜೀವಕಳೆ ಬರುತ್ತಿದೆ. ಈಗಾಗಲೇ ಮಲೆನಾಡಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿರುವುದರಿಂದ ಜಲಪಾತಗಳೆಲ್ಲವೂ ಮೈಕೈ ತುಂಬಿಕೊಂಡು ಧುಮ್ಮಿಕ್ಕುತ್ತಿವೆ. ಸದ್ಯಕ್ಕಿವು ಚೆಲುವೆಯರಂತೆ ಬಳುಕುತ್ತಾ ಬಾಗುತ್ತಾ ಬೀಗುತ್ತಾ ಥಕಥೈ ಎನ್ನುತ್ತಿವೆ. ಇದನ್ನು ನೋಡುವ ಸಲುವಾಗಿ ದೂರದಿಂದ ಪ್ರವಾಸಿಗರ ದಂಡು ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ. ಪಶ್ವಿಮ ಘಟ್ಟಗಳಲ್ಲಿ ಜಲಪಾತಗಳಿಗೆ ಕೊರತೆಯಿಲ್ಲ.
ಬೇರೆ ಬೇರೆ ಜಿಲ್ಲೆಗೆ ಸೇರಿದ ಜಲಧಾರೆಗಳು
ಆದರೆ ಮೈಸೂರು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಸರ್ಗ ಪ್ರೇಮಿಗಳನ್ನು ಹೆಚ್ಚಾಗಿ ಸೆಳೆಯುವ ಜಲಪಾತವಿದ್ದರೆ ಅದು ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳಾಗಿವೆ. ಈ ಜಲಪಾತಕ್ಕೆ ಜೀವಕಳೆ ಬರಬೇಕಾದರೆ, ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್ಎಸ್ ತಲುಪಬೇಕು.. ಬಳಿಕ ತಿ.ನರಸೀಪುರ ಬಳಿ ಕಬಿನಿ ಇತರೆ ಉಪನದಿಗಳ ಸಂಗಮವಾಗಬೇಕು. ಆಗ ಕಾವೇರಿ ಇನ್ನಷ್ಟು ಮೈಕೈ ತುಂಬಿಕೊಂಡು ಹರಿಯಲಾರಂಭಿಸುತ್ತಾಳೆ.
ಹೀಗೆ ಹರಿದು ಬರುವ ಕಾವೇರಿ ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಗಮನಸೆಳೆಯುವುದು ವಿಶೇಷವಾಗಿದೆ. ಶಿವನಸಮುದ್ರದಲ್ಲಿರುವ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ.

ಹುಚ್ಚಾಟ ಆಡಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಈ ಜಲಧಾರೆಗಳು ನಯನಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ.
ಇಲ್ಲಿಗೆ ತೆರಳಲು ಹೆಚ್ಚಿನ ಬಸ್ ಸಂಪರ್ಕ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ. ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ. ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಲ್ಲಿ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ.
ಜಲವೈಭವ ಶುರುವಾಗುವುದು ಯಾವಾಗ?
ಶಿವನಸಮುದ್ರದಲ್ಲಿ ಮಾರಮ್ಮನ ದೇವಾಲಯವಿದ್ದು ಕೋಳಿ, ಕುರಿಗಳನ್ನು ಬಲಿಕೊಡಲಾಗುತ್ತದೆ. ಇನ್ನು ಇಲ್ಲಿ ಐತಿಹಾಸಿಕ ದರ್ಗಾವೂ ಇದೆ. ದೂರದಿಂದ ತೆರಳುವ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲ ಹಾಗಾಗಿ ಸಮೀಪದ ಪಟ್ಟಣಗಳಾದ ಕೊಳ್ಳೇಗಾಲ ಅಥವಾ ಮಳವಳ್ಳಿಗೆ ಹೋಗಬೇಕಾಗುತ್ತದೆ. ಸದ್ಯಕ್ಕೆ ಕಾವೇರಿಯಲ್ಲಿ ಹೆಚ್ಚು ನೀರಿಲ್ಲದ ಕಾರಣ ಶಿವನಸಮುದ್ರದಲ್ಲಿ ಆರ್ಭಟ ಹೆಚ್ಚಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಭಾರೀ ಮಳೆಯಾಗಿ ಕೆಆರ್‌ಎಸ್ ಜಲಾಶಯ ಭರ್ತಿಯಾದರೆ, ಇನ್ನೊಂದೆಡೆ ಕಬಿನಿಯೂ ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಬರಲಾಂಭಿಸಿದರೆ ಆಗ ಭರಚುಕ್ಕಿ ಮತ್ತು ಗಗನಚುಕ್ಕಿ ರೌದ್ರಾವತಾರ ತಾಳಲಿದ್ದು ಆಗ ಅದನ್ನು ನೋಡಲು ಎರಡು ಕಣ್ಣುಗಳು ಸಾಲದಾಗುತ್ತದೆ.












Click it and Unblock the Notifications