Get Updates
Get notified of breaking news, exclusive insights, and must-see stories!

ಮೈಸೂರಿನ ಪ್ರವಾಸಿ ಸ್ಥಳಗಳಲ್ಲಿ ತಲಕಾಡು ಬಲು ವಿಶೇಷ ಯಾಕೆ ಗೊತ್ತಾ..?

ಮೈಸೂರು, ಜನವರಿ 16: ಮೈಸೂರು ಜಿಲ್ಲೆಗೆ ಸೇರಿರುವ ತಲಕಾಡು ಐತಿಹಾಸಿಕ ಸ್ಥಳವಾಗಿ, ಸುಂದರ ಪ್ರವಾಸಿ ತಾಣವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ. ಕಾರಣ ಸಮುದ್ರತೀರದ ಮರಳಿನಲ್ಲಿ ಹೆಜ್ಜೆ ಹಾಕುತ್ತಾ ಖುಷಿಪಡಲು ಸಾಧ್ಯವಾಗದವರು ಇಲ್ಲಿನ ಮರಳಿನಲ್ಲಿ ಆಟವಾಡಿ ಖುಷಿಪಡುತ್ತಾರೆ. ಹೀಗಾಗಿ ವೀಕೆಂಡ್ ಕಳೆಯಲು ಪ್ರವಾಸಿಗರು ಇತ್ತ ಬರುವುದು ಮಾಮೂಲಾಗಿದೆ.

ಮೈಸೂರು ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ತಲಕಾಡು ವಿಭಿನ್ನ ಮತ್ತು ವಿಶಿಷ್ಟ ಕ್ಷೇತ್ರವಾಗಿದೆ. ಮೇಲ್ನೋಟಕ್ಕೆ ಇದು ಪೌರಾಣಿಕ ಮತ್ತು ಐತಿಹಾಸಿಕ ಸ್ಥಳವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ನಿಸರ್ಗ ಸುಂದರತೆ ಇಲ್ಲಿನ ಆಕರ್ಷಣೆಯಾಗಿದೆ. ಇಲ್ಲಿಗೆ ಯಾರೇ ಬಂದರೂ ಅವರೊಮ್ಮೆ ಇಲ್ಲಿನ ನಿಸರ್ಗದತ್ತ ಕಣ್ಣು ಹಾಯಿಸಿದರೆ ಇಲ್ಲಿಂದ ಕಂಡು ಬರುವ ಪ್ರಕೃತಿ ಚೆಲುವಿನ ನೋಟ ಮೈಮನನವಿರೇಳಿಸುತ್ತದೆ.

Travel News: Here Is The Specialty Of Talakadu Mysuru District

ಸುತ್ತಲೂ ಹಸಿರಿನಿಂದ ಕಂಗೊಳಿಸುವ ನಿಸರ್ಗಸಿರಿ, ಮರಳ ರಾಶಿ ನಡುವಿನ ದೇವಾಲಯಗಳು, ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿಯ ಚೆಲುವು ಮನಪುಳಕಗೊಳಿಸುತ್ತದೆ. ಕಾವೇರಿಯು ಇಲ್ಲಿ ಶಿವ ಕ್ಷೇತ್ರ ಮತ್ತು ವಿಷ್ಣುಕ್ಷೇತ್ರವನ್ನು ಸೃಷ್ಟಿಸಿದ್ದು ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುವುದು ತಲಕಾಡಿನ ಸುಂದರತೆಗೆ ಸಾಕ್ಷಿಯಾಗಿದೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಇಲ್ಲಿ ಒಂದಷ್ಟು ಹೊತ್ತು ಸಮಯ ಕಳೆಯಲು ಇಷ್ಟಪಡುತ್ತಾರೆ.

ಗಂಗರಿಂದ ಮೈಸೂರು ಅರಸರ ತನಕ

ತಲಕಾಡು ಐತಿಹಾಸಿಕ ತಾಣವಾಗಿದೆ. ಇಲ್ಲಿನ ಇತಿಹಾಸ ಶ್ರೀಮಂತವಾಗಿದೆ. ಬಹಳಷ್ಟು ರಾಜಮನೆತನಗಳು ಇಲ್ಲಿ ಆಡಳಿತ ನಡೆಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಪಶ್ಚಿಮದ ಗಂಗರು ಕ್ರಿ.ಶ. ಸುಮಾರು ಆರನೇ ಶತಮಾನದಿಂದ ಹತ್ತನೇ ಶತಮಾನದ ಕೊನೆವರೆಗೂ ತಲಕಾಡನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ನಡೆಸಿ ತಲಕಾಡು ಗಂಗರೆಂದೇ ಹೆಸರುವಾಸಿಯಾದರು.

ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಲಕಾಡು ಹಾಗೂ ಸುತ್ತಮುತ್ತಲ ಪ್ರಾಂತ್ಯಗಳನ್ನು ಚೋಳ ಚಕ್ರವರ್ತಿ ರಾಜರಾಜ ಚೋಳನು ತನ್ನ ವಶಕ್ಕೆ ತೆಗೆದುಕೊಂಡನು ಎಂದು ಹೇಳಲಾಗುತ್ತಿದೆ. ಆ ನಂತರ ಸುಮಾರು 130ವರ್ಷಗಳ ಕಾಲಚೋಳರು ಆಳ್ವಿಕೆ ನಡೆಸಿದರೆಂದೂ 1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ಯುದ್ಧದಲ್ಲಿ ಸೋಲಿಸಿ ಅಧಿಪತ್ಯ ಸ್ಥಾಪಿಸಿದ ತಲಕಾಡುಗೊಂಡ ಎಂಬ ಬಿರುದು ಪಡೆದನೆಂದೂ ಆ ನಂತರ ಮೈಸೂರು ಒಡೆಯರ್ ಆಳ್ವಿಕೆ ನಡೆಸಿದರೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

Travel News: Here Is The Specialty Of Talakadu Mysuru District

ಅಚ್ಚರಿಗೊಂಡ ತಲ ಮತ್ತು ಕಾಡ ಬೇಡರು

ತಲಕಾಡನ್ನು ಸಿದ್ಧಾರಣ್ಯಕ್ಷೇತ್ರ, ಗಜಾರಣ್ಯಕ್ಷೇತ್ರ, ತಲವನಪುರ, ರಾಜಪುರ, ರಾಜರಾಜಪುರ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಗಂಗರಸರ ಸಾಮ್ರಾಜ್ಯದ ರಾಜಧಾನಿಯಾಗಿ ಅಪಾರ ಕೀರ್ತಿಗಳಿಸಿದ್ದರೆ, ತದನಂತರ ಹೊಯ್ಸಳರ ಕಾಲದಲ್ಲಿಯೂ ಹತ್ತು ಹಲವು ವೈಶಿಷ್ಟ್ಯತೆಯನ್ನು ಹೊಂದಿ ವೈಭವದಿಂದ ಮೆರೆದಿತ್ತು. ಈ ಪ್ರದೇಶವನ್ನು ಕೇವಲ ಗಂಗರು, ಚೋಳರು ಮಾತ್ರವಲ್ಲದೆ ರಾಷ್ಟ್ರಕೂಟರು, ವಿಜಯನಗರದರಸರು, ಮೈಸೂರಿನ ಒಡೆಯರು ಸೇರಿದಂತೆ ಹಲವು ರಾಜವಂಶಸ್ಥರು ಆಳಿರುವುದು ವಿಶೇಷವಾಗಿದೆ.

ವಸಿಷ್ಟಕುಲದ ಸೋಮದತ್ತನೆಂಬ ಋಷಿ ಮುನಿ ಮತ್ತು ಶಿಷ್ಯರು ಮರಣಾ ಸಿದ್ಧಾರಣ್ಯ ಕ್ಷೇತ್ರದಲ್ಲೇ ಆನೆಗಳಾಗಿ ಜನ್ಮತಾಳಿದ್ದು, ಪ್ರತಿದಿನ ಗೋಕರ್ಣ ತೀರ್ಥದಲ್ಲಿ ಮಿಂದು ಕಮಲಪುಷ್ಪಗಳನ್ನು ಸೊಂಡಿಲಿನಿಂದ ತೆಗೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿದ್ದ ಶಾಲ್ಮಲ ವೃಕ್ಷ (ಬೂರಗದಮರ)ದ ಪೊದೆಯೊಂದಕ್ಕೆ ನಿತ್ಯ ಪೂಜೆ ಮಾಡುತ್ತಿದ್ದವಂತೆ.

ಇಂತಹ ಅಪರೂಪದ ದೃಶ್ಯವನ್ನು ನೋಡಿದ ತಲ ಮತ್ತು ಕಾಡ ಎಂಬ ಬೇಡರು ಕುತೂಹಲಗೊಳ್ಳುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಬಳಿಯಿದ್ದ ಕೊಡಲಿಗಳಿಂದ ಬೂರಗದ ಮರದ ಪೊದೆಯನ್ನು ಕತ್ತರಿಸಿದಾಗ ಕೊಡಲಿ ತಾಗಿ ಅಲ್ಲಿದ್ದ ಲಿಂಗದಿಂದ ರಕ್ತ ಚಿಮ್ಮುತ್ತದೆ. ಇದರಿಂದ ಹೆದರಿಂದ ಅವರು ತಮಗೇನು ಮಾಡಬೇಕೆಂದು ತೋಚದೆ ನಡುಗುತ್ತಿರುತ್ತಾರೆ.

Travel News: Here Is The Specialty Of Talakadu Mysuru District

ವೈದ್ಯನಾಥೇಶ್ವರನಾಗಿ ನೆಲೆ ನಿಂತಿದ್ದೇಗೆ?

ಈ ವೇಳೆ ಅಶರೀರವಾಣಿಯೊಂದು ಕೇಳಿಬರುತ್ತದೆ. ಆಶರೀರ ವಾಣಿಯು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚುವಂತೆ ಹೇಳುತ್ತದೆ. ಅದರಂತೆ ಅವರು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚುತ್ತಾರೆ. ಆಗ ರಕ್ತ ಚಿಮ್ಮುವುದು ನಿಂತು ಹಾಲು ಚಿಮ್ಮುತ್ತದೆ. ಇದನ್ನು ಕುಡಿದ ತಲ ಮತ್ತು ಕಾಡರು ಹಾಗೂ ಆನೆ ಜನ್ಮ ತಾಳಿದ ಸೋಮದತ್ತ ಋಷಿ ಮತ್ತು ಅವನ ಶಿಷ್ಯರು ಮೋಕ್ಷ ಪಡೆಯುತ್ತಾರೆ.

ಅಂದಿನಿಂದ ತಲ-ಕಾಡರೆಂಬ ಬೇಡರಿಂದಾಗಿ ತಲವನಪುರ ತಲಕಾಡು ಎಂದು ಹೆಸರಾದರೆ. ಆನೆ ಜನ್ಮತಾಳಿ ಇಲ್ಲಿ ಮುಕ್ತಿಹೊಂದಿದ ಸೋಮದತ್ತ ಋಷಿಯಿಂದ ಸಿದ್ಧಾರಣ್ಯ ಕ್ಷೇತ್ರವು ಗಜಾರಣ್ಯ ಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆಯಲ್ಲದೆ, ಇಲ್ಲಿರುವ ಪರಶಿವನು ತನಗೆ ತಾನೇ ವೈದ್ಯ ಮಾಡಿಕೊಂಡು ವೈದ್ಯನಾಥೇಶ್ವರನಾಗಿ ಇಲ್ಲಿ ನೆಲೆ ನಿಂತಿದ್ದಾನೆ ಎಂಬ ನಂಬಿಕೆಯೂ ಜನರಲ್ಲಿದೆ.

ಮರಳ ರಾಶಿಗಳು ಪ್ರಕೃತಿಯ ಸೋಜಿಗ

ತಲಕಾಡು ಮರಳ ರಾಶಿಯಿಂದ ಹೆಸರುವಾಸಿಯಾಗಿದೆ. ಇದು ಇಲ್ಲಿನ ಆಕರ್ಷಣೆಯೂ ಹೌದು. ಇಲ್ಲಿ ಹರಿದು ಹೋಗುವ ಕಾವೇರಿ ನದಿ ದಂಡೆಯಿಂದ ಸುಮಾರು ಮೂರು ಕಿ.ಮೀ. ಒಳಭಾಗದವರೆಗೆ ನಿರ್ಮಾಣವಾಗಿರುವ ನಲವತ್ತು ಅಡಿಗಿಂತಲೂ ಎತ್ತರವಾಗಿರುವ ಮರಳಿನ ದಿಬ್ಬಗಳು ಈ ಕ್ಷೇತ್ರದ ವಿಶೇಷತೆಯನ್ನು ಸಾರುತ್ತಾ ದೂರದಿಂದ ಬರುವ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಮೇಲ್ನೋಟಕ್ಕೆ ಮರಳ ರಾಶಿಗಳು ಪ್ರಕೃತಿಯ ಸೋಜಿಗವಾಗಿ ಕಂಡು ಬರುತ್ತದೆ.

Travel News: Here Is The Specialty Of Talakadu Mysuru District

ಇಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ಎಂಬ ನಾಲ್ಕು ಶಿವದೇವಾಲಯಗಳನ್ನು ಸುತ್ತಲಿನಿಂದಲೂ ಮರಳು ಆವರಿಸಿಕೊಳ್ಳುತ್ತದೆ. ಹೀಗಾಗಿ ಈ ದೇವಾಲಯಗಳು ಮರಳಿನಲ್ಲಿ ಹುದುಗಿ ಹೋಗುತ್ತವೆ. ಪಂಚಲಿಂಗದರ್ಶನ ಸಂದರ್ಭ ಮರಳು ತೆಗೆದು ದೇವಾಲಯಗಳಲ್ಲಿ ಪೂಜಾಕಾರ್ಯ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿನ ನಾಲ್ಕು ದೇವಾಲಯಗಳಲ್ಲದೆ ಮುಡುಕುತೊರೆಯ ಮಲ್ಲಿಕಾರ್ಜುನ ದೇವಾಲಯದ ಮಲ್ಲಿಕಾರ್ಜುನೇಶ್ವರ ಲಿಂಗವೂ ಸೇರಿಕೊಂಡಿದೆ.

ನಿರ್ಲಕ್ಷ್ಯಕ್ಕೊಳಗಾದ ತಲಕಾಡು ತಾಣ

ಒಂದು ಕಾಲದಲ್ಲಿ ವೈಭವದಿಂದ ಮೆರೆದ ತಲಕಾಡು ಪಂಚಲಿಂಗದರ್ಶನ ಸಂದರ್ಭ ಮಾತ್ರ ಹೆಚ್ಚಿನವರಿಗೆ ನೆನಪಾಗುತ್ತದೆ. ಉಳಿದಂತೆ ಹಲವು ಐಹಿತ್ಯಗಳ ಮಹತ್ವ ಹೊಂದಿರುವ ಈ ತಾಣ ಅಪರಿಚಿತವಾಗಿಯೇ ಉಳಿದು ಬಿಡುತ್ತದೆ. ಪ್ರವಾಸೋದ್ಯಮ ದೃಷ್ಟಿಯಿಂದ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬಹುದು ಆದರೆ ಅದ್ಯಾಕೋ ನಿರ್ಲಕ್ಷ್ಯ ಎದ್ದು ಕಾಡುತ್ತದೆ. ಆದರೂ ಪ್ರವಾಸಿಗರು ಇಲ್ಲಿ ನಿಸರ್ಗ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಮೈಸೂರಿನಿಂದ ಸುಮಾರು ಅರುವತ್ತು ಕಿ.ಮೀ. ದೂರದಲ್ಲಿರುವ ತಲಕಾಡು ತಿ.ನರಸೀಪುರ ತಾಲೂಕಿಗೆ ಸೇರಿದೆ. ಭಕ್ತರಿಗೆ ಪವಿತ್ರ ತಾಣವಾಗಿ ಪ್ರವಾಸಿಗರಿಗೆ ಚೆಲುವಿನ ತಾಣವಾಗಿ ಎಲ್ಲರನ್ನೂ ಆಕರ್ಷಿಸುವುದು ಇಲ್ಲಿನ ವಿಶೇಷವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+