Weekend Travel: ಇದೇ ವಾರಾಂತ್ಯ ಮೈಸೂರು ಚುಂಚನಕಟ್ಟೆಯಲ್ಲಿ ಅದ್ಧೂರಿ ಜಲಪಾತೋತ್ಸವ
ಮೈಸೂರು, ನವೆಂಬರ್ 28: ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ, ಮೈಸೂರು ಇವರ ಸಂಯುಕ್ತಾಶ್ರದಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 01ರಂದು ಚುಂಚನಕಟ್ಟೆ ಜಲಪಾತೋತ್ಸವವನ್ನು ಆಯೋಜಿಸಲಾಗಿದೆ. ಈ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಜಲಪಾತೋತ್ಸವಕ್ಕೆ ತೆರಳುವ ರಸ್ತೆಯನ್ನು ಸ್ವಚ್ಛಗೊಳಿಸುವ ಕಾರ್ಯದ ಜೊತೆಗೆ ವೇದಿಕೆ ನಿರ್ಮಾಣ ಸೇರಿದಂತೆ ಹಲವು ಕೆಲಸ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗುತ್ತಿದೆ.
ಜಲಪಾತೋತ್ಸವದ ಸಂಬಂಧ ಉಪವಿಭಾಗಾಧಿಕಾರಿ ಹೆಚ್.ವಿ.ವಿಜಯಕುಮಾರ್ ಅವರು ಚುಂಚನಕಟ್ಟೆಯ ಪ್ರವಾಸಿಮಂದಿರದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕಾರ್ಯಕ್ರಮ ನಡೆಯುವ ಶ್ರೀರಾಮ ದೇವಾಲಯದ ಆವರಣ ಮತ್ತು ಬಸವನ ವೃತದಲ್ಲಿ ಸ್ವಚ್ಛತೆ ಕಾಪಾಡಿ ವಿದ್ಯುತ್ ದೀಪಾಲಂಕಾರವನ್ನು ಮಾಡುವುದರ ಜೊತೆಗೆ ಕುಡಿಯುವ ನೀರು ಹಾಗೂ ಸೂಕ್ತ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.

ಕಾರ್ಯಕ್ರಮ ತಡ ರಾತ್ರಿಯವರೆಗೂ ನಡೆಯುವುದರಿಂದ ಕೆಎಸ್‌ಆರ್‌ಟಿಸಿಯವರು ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಈ ಸಂಬಂಧ ನನಗೆ ವರದಿ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಸಮನ್ವಯತೆಯಿಂದ ಕೆಲಸ ನಿರ್ವಹಿಸಿ ಕಾರ್ಯಕ್ರಮದ ಯಶಸ್ವಿಗೆ ದುಡಿಯಬೇಕೆಂದು ಸಲಹೆ ನೀಡಿದರು. ಪ್ರಮುಖವಾಗಿ ವ್ಯವಸ್ಥಿತವಾದ ಪಾಕಿಂಗ್ ಸೌಲಭ್ಯ ಕಲ್ಪಿಸಿ ಈ ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಕುಪ್ಪೆ ಗ್ರಾಮ ಪಂಚಾಯತಿಯವರು ಹೆಚ್ಚುವರಿ ನಲ್ಲಿಗಳನ್ನು ಅಳವಡಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಿ ಇದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆದೇಶಿಸಿದರು.
ಚುಂಚನಕಟ್ಟೆ ಮುಖ್ಯ ವೃತ್ತದಿಂದ ದೇವಾಲಯದವರೆಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಿ ಎಂದರಲ್ಲದೆ, ಪಿಡಿಓ ಸ್ಥಳದಲ್ಲಿಯೇ ಎರಡು ದಿನ ಮೊಕ್ಕಾಂ ಮಾಡಿ ಉಸ್ತುವಾರಿ ವಹಿಸಬೇಕು. ಯಾವುದೇ ಸಮಸ್ಯೆ ದೂರುಗಳು ಇದ್ದರೂ ನನಗೂ ಮತ್ತು ಎರಡು ತಾಲೂಕುಗಳ ತಹಶೀಲ್ದಾರರ ಗಮನಕ್ಕೆ ತರಬೇಕೆಂದು ಹೇಳಿದರಲ್ಲದೆ, ಜಲಪಾತೋತ್ಸವ ನಡೆಯುವ ಎರಡು ದಿನಗಳ ಕಾಲ ಚುಂಚನಕಟ್ಟೆಯಲ್ಲಿ ಮದ್ಯ ಮಾರಾಟ ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದಾಗಿ ತಿಳಿಸಿದರು. ಇದೇ ವೇಳೆ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಜಲಪಾತೋತ್ಸವದ ಉದ್ಘಾಟನಾ ಸಮಾರಂಭವನ್ನು ನವೆಂಬರ್ 30ರಂದು ಸಂಜೆ 6.30 ಗಂಟೆಗೆ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಕೃಷ್ಣ ರಾಜನಗರ ವಿಧಾನಸಭಾ ಶಾಸಕ ರವಿಶಂಕರ್.ಡಿ ಉಪಸ್ಥಿತರಿರಲಿದ್ದಾರೆ.
ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ ಎಸ್.ತಂಗಡಗಿ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಕುಮಾರ್.ಸಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷರಾದ ಎ.ಬಿ ರಮೇಶ್ ಬಂಡಿ ಸಿದ್ದೇಗೌಡ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಹಾಗೂ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಶಾಸಕರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಬೋಸ್, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವಿರ್ ಸೇಠ್, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ದೃವನಾರಾಯಣ್, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಡಿ ಹರೀಶ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ಹೆಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಯತಿಂದ್ರ.ಎಸ್ ಮತ್ತು ವಿವೇಕಾನಂದ.ಎಸ್ ಉಪಸ್ಥಿತರಿರಲಿದ್ದಾರೆ.












Click it and Unblock the Notifications