Udupi: ಕೃಷ್ಣನಗರಿಯಲ್ಲಿನ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿವು: ತಲುಪುವ ಸುಲಭ ಮಾರ್ಗಗಳ ವಿವರ ತಿಳಿಯಿರಿ
ಉಡುಪಿ, ಜೂನ್ 04: ಉಡುಪಿ ಜಿಲ್ಲೆಯನ್ನು ಪ್ರವಾಸಿಗಳ ಹಬ್ ಅಥವಾ ಪ್ರವಾಸಿಗಳ ಸ್ವರ್ಗ ಎಂದು ಕರೆಯುತ್ತಾರೆ. ಉಡುಪಿಯಲ್ಲಿ ಸಾಕಷ್ಟು ದೇವಾಲಯಗಳು, ಪ್ರವಾಸಿ ಬೀಚ್‌ಗಳು ಇದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಕರಾವಳಿಯಲ್ಲಿ ಇರುವಂತಹ ಅತ್ಯಂತ ಸೇಫ್ ಬೀಚ್ ಯಾವುದೆಂದರೆ ಅದು ಮಲ್ಪೆ ಬೀಚ್. ಮನಸ್ಸಿಗೆ ಶಾಂತಿ ನೀಡುವ ಸ್ಥಳವೆಂದರೆ ಉಡುಪಿ ಮಠ. ಹೀಗೆ ಹತ್ತಾರು ಪ್ರಸಿದ್ಧ ಪ್ರವಾಸಿ ತಾಣಗಳು ಉಡುಪಿ ಜಿಲ್ಲೆಯಲ್ಲಿದ್ದು, ಈ ಬಗ್ಗೆ ವಿವರ ಇಲ್ಲಿದೆ.

ಕೃಷ್ಣ ಮಠ
ಶ್ರೀಕೃಷ್ಣ ಮಠ ಉಡುಪಿ ನಗರ ಭಾಗದಲ್ಲಿದೆ. ಇದು ಅತ್ಯಂತ ಪುರಾತನ ದೇವಾಲಯ, ಇದು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತದೆ. ಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ಅತ್ಯಂತ ವೈಭಯುತವಾಗಿ ನಡೆಯುತ್ತದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯದಲ್ಲಿ ದೇಶ ವಿದೇಶಗಳಿಂದ ಕೃಷ್ಣ ಭಕ್ತರು ಆಗಮಿಸುತ್ತಾರೆ. ಬೇಸಿಗೆ ರಜೆಯಲ್ಲಿ ಇಲ್ಲಿಗೆ ಪ್ರವಾಸಿಗರು ಕ್ಕಿಕಿರಿದು ಬರುತ್ತಾರೆ. ಇದು ಕುಟುಂಬ ಸಮೇತ ಭೇಟಿ ಕೊಡುವ ಅದ್ಭುತ ದೇವಾಲಯ

ಮಲ್ಪೆ ಬೀಚ್
ಇದು ಮಲ್ಪೆ ನಗರದಿಂದ 6 ಕಿ.ಮೀ ದೂರದಲ್ಲಿದೆ. ಈ ಬೀಚ್ ಕರಾವಳಿಯಲ್ಲಿ ಅತ್ಯಂತ ಸೇಫ್ ಬೀಚ್ ಎಂದು ಕರೆಸಿಕೊಂಡಿದೆ. ಡಿಸೆಂಬರ್ ನಿಂದ ಮೇ ಅತ್ಯಂದವರೆಗೆ ಪ್ರವಾಸಿಗರಿಗಾಗಿ ವಾಟರ್ ಗೇಮ್ಸ್‌ಗಳು ತೆರೆದಿರುತ್ತದೆ. ಮಲ್ಪೆ ಬೀಚ್ ನೋಡಲು ಮಾತ್ರವಲ್ಲದೇ ನೀರಿನಲ್ಲಿ ಆಡಲು ಕೂಡ ತುಂಬಾನೇ ಸೇಫ್. ಹೀಗಾಗಿ ಇಲ್ಲಿಗೆ ಕುಟುಂಬ ಸಮೇತ ಭೇಟಿ ನೀಡಬಹುದಾದ ಬೀಚ್ ಇದಾಗಿದೆ.
ಸೈಂಟ್ ಮೇರಿಸ್ ದ್ವೀಪ
ಮಲ್ಪೆ ಬೀಚ್ ನಿಂದ ಒಂದು ಘಂಟೆ ಬೋಟ್ ಮೂಲಕ ಜರ್ನಿ ಮಾಡಿದ್ರೆ ಸೈಂಟ್ ಮೇರಿಸ್ ದ್ವೀಪ ಸಿಗುತ್ತದೆ. ಅದ್ಭುತ ದ್ವೀಪ ಆಗಿದ್ದು ಪ್ರವಾಸಿಗರ ಸ್ವರ್ಗ ಎಂದರೆ ತಪ್ಪಾಗಲಾರದು. ಈ ದ್ವೀಪಕ್ಕೆ ಬೋಟ್ ಮೂಲಕ ಹೋಗುವುದೇ ಒಂದು ಖುಷಿ.

ಕಾಪು ಲೈಟ್ ಹೌಸ್
ಮಂಗಳೂರಿನಿಂದ ಉಡುಪಿ ಬರುವವರಿಗೆ, ಪಡುಬಿದಿರೆ ಬೀಚ್ ಬಳಿಕ ಸಿಗುವುದೇ ಕಾಪು ಲೈಟ್ ಹೌಸ್. ಉಡುಪಿ ಬೀಚ್ ಗಳಲ್ಲಿ ಅತ್ಯಂತ ಆಕರ್ಷಣೀಯ ಬೀಚ್ ಮತ್ತು ಲೈಟ್ ಹೌಸ್ ಇರುವ ಪ್ರವಾಸಿ ತಾಣ ಕಾಪು ಲೈಟ್ ಹೌಸ್ ಸಾಕಷ್ಟು ಪ್ರವಾಸಿಗರು ತಮ್ಮ ವೀಕೆಂಡ್ಗಳನ್ನು ಕಳೆಯಲು ಈ ಲೈಟ್ಔಸಿಗೆ ಬರುತ್ತಾರೆ ತುಂಬಾನೇ ಆಕರ್ಷಿಣಿಯ ಬೀಚ್ ಗಳಲ್ಲಿ ಕಾಪು ಬೀಚು ಒಂದು.

ಕೊಲ್ಲೂರು ಮೂಕಾಂಬಿಕಾ ದೇವಾಲಯ
ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಎಲ್ಲಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಸೌಪರ್ಣಿಕಾ ನದಿಯ ದಡದಲ್ಲಿರುವ ಕೊಡಚಾದ್ರಿ ಬೆಟ್ಟಗಳ ಬುಡದಲ್ಲಿ ನೆಲೆಗೊಂಡಿರುವ ಮೂಕಾಂಬಿಕಾ ದೇವಿ ದೇವಾಲಯವನ್ನು ದೈವಿಕ ಸೂಚನೆಗಳನ್ನು ಅನುಸರಿಸಿ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದರು.
ಕೊಲ್ಲೂರು ಬೆಂಗಳೂರಿನಿಂದ 430 ಕಿ.ಮೀ ಮತ್ತು ಮಂಗಳೂರಿನಿಂದ 130 ಕಿ.ಮೀ ದೂರದಲ್ಲಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೈಂದೂರಿನಲ್ಲಿರುವ ಮೂಕಂಬಿಕಾ ರಸ್ತೆ ರೈಲು ನಿಲ್ದಾಣವು ಕೊಲ್ಲೂರಿನಿಂದ ಹತ್ತಿರದ ರೈಲು ನಿಲ್ದಾಣವಾಗಿದೆ. (30 ಕಿ.ಮೀ) ಮಂಗಳೂರು ನಗರದಿಂದ ಕೊಲ್ಲೂರು ತಲುಪಲು ನಿಯಮಿತ ಖಾಸಗಿ ಬಸ್ ಸೇವೆ ಲಭ್ಯವಿದೆ. ಕೊಲ್ಲೂರು ತಲುಪಲು ಹತ್ತಿರದ ಪಟ್ಟಣಗಳಾದ ಕುಂದಾಪುರ (36 ಕಿ.ಮೀ) ಅಥವಾ ಬೈಂದೂರಿನಿಂದ ಟ್ಯಾಕ್ಸಿ ಬುಕ್ ಮಾಡಬಹುದು.
ಒತ್ತಿನೆಣೆ ಬೀಚ್
ಒತ್ತಿನೆಣೆ ಕಡಲತೀರವು ಕರ್ನಾಟಕ ಕರಾವಳಿ ಬಾಗದಲ್ಲಿ ಇದೆ. ಈ ಸಮುದ್ರ ಬೈಂದೂರ ತಾಲೂಕಿನಲ್ಲಿ ಇದೆ. ಒತ್ತಿನೆಣೆ ಸಮುದ್ರವನ್ನು ಸೋಮೆಶ್ವರ ಸಮುದ್ರವೆಂದು ಕರೆಯುತ್ತಾರೆ. ಈ ಪ್ರದೇಶದ ವಿಶೇಷಯೇನೆಂದರೆ ಪಶ್ಛಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರ ಪೂರ್ವಾ ದಿಕ್ಕಿನಲ್ಲಿ ಸುಮನ ನದಿ ಹರಿಯುತ್ತದೆ ಮತ್ತೆ ಇವೇರೆಡರ ಮಿಲನದ ಸ್ಥಳದಲ್ಲಿ ಸುಂದರವಾದ ದ್ವೀಪ ನಿರ್ಮಾಣವಾಗಿದೆ.
ಆ ದ್ವೀಪವನ್ನು ಒತ್ತಿನೆಣೆ ದ್ವೀಪ ಎಂದು ಕರೆಯುತ್ತಾರೆ. ಸೋಮೆಶ್ವರ ದೇವಸ್ಥಾನವು ಸಮುದ್ರದ ಪಕ್ಕದಲ್ಲೆ ಇದೆ. ಸಮುದ್ರದಿಂದ ಸ್ವಲ್ಪ ದೂರದಲ್ಲಿ ಅತಿಥಿ ಗೃಹವಿದ್ದು ಆ ಗೃಹವು ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಆ ಬೆಟ್ಟದ ಮೇಲಿನಿಂದ ಕಡಲತೀರವನ್ನು ನೋಡಿದರೆ ಅವರೆಡರ ಮಿಲನವು ಸಂಪೂರ್ಣವಾಗಿ ನೋಡಬಹುದು.
ಕಮಲಶಿಲೆ ದೇವಸ್ಥಾನ
ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ 35 ಕಿ.ಮೀ ದೂರದಲ್ಲಿದೆ. ಇದು ಎತ್ತರದ ಪರ್ವತಗಳು ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದೆ. ಅದರ ಬದಿಗಳಲ್ಲಿ ಹರಿಯುವ ಕುಬ್ಜಾ ನದಿಯು ಕಮಲಶಿಲೆಯ ಸುಂದರವಾದ ನೋಟವನ್ನು ಪೂರ್ಣಗೊಳಿಸುತ್ತದೆ. ಕಮಲಶಿಲೆಯ ಅತ್ಯಂತ ಪ್ರಸಿದ್ಧವಾದ ಆಕರ್ಷಣೆಯೆಂದರೆ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಾಲಯವು ಹಳ್ಳಿಯ ಮಧ್ಯಭಾಗದಲ್ಲಿದೆ.
ಆಗುಂಬೆ ಸನ್ ಸೆಟ್
ಆಗುಂಬೆ ಪಶ್ಚಿಮ ಘಟ್ಟದ ಒಂದು ಸಣ್ಣ ಹಳ್ಳಿ. ಬೆಂಗಳೂರಿನಿಂದ 350 ಕಿ.ಮೀ ದೂರವಿರುವ ಆಗುಂಬೆ ಮೇಘಾಲಯದ ಚಿರಪುಂಜಿ ನಂತರ ದೇಶದ ಎರಡನೇ ಅತಿ ಹೆಚ್ಚು ಮಳೆಯಾಗುವ ತಾಣವಾಗಿದೆ. ಹಾಗಾಗಿ ಆಗುಂಬೆಯನ್ನು ಕರ್ನಾಟಕದ ಚಿರಾಪುಂಜಿ ಎಂದೂ ಕರೆಯಲಾಗುತ್ತದೆ .ಆಗುಂಬೆಯಿಂದ ಸೂರ್ಯಾಸ್ತದ ನೋಟವು ಅತ್ಯಂತ ವಿಖ್ಯಾತವಾಗಿದ್ದು ದೂರದೂರದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸೂರ್ಯಾಸ್ತದ ಸಮಯದಲ್ಲಿ ಭೇಟಿ ನೀಡಿ ಈ ಕಾರಣಕ್ಕೇ ಮೀಸಲಾದ ಸನ್ ಸೆಟ್ ಬಾಕ್ಸ್ ಸುಂದರ ಸೂರ್ಯಾಸ್ತ ನೋಡಬಹುದಾಗಿದೆ.
ಕೂಡ್ಲೂ ತೀರ್ಥ
ಉಡುಪಿ-ಆಗುಂಬೆ ರಸ್ತೆಯ ಹೆಬ್ರಿ ಬಳಿಯಿರುವ ಕೂಡ್ಲು ತೀರ್ಥ ಜಲಪಾತವು ನೋಡುಗರನ್ನು ಮೋಡಿ ಮಾಡುವ ಜಲಪಾತ ಎಂದೇ ಹೇಳಬಹುದು. ಪಶ್ಚಿಮ ಘಟ್ಟಗಳ ದಟ್ಟವ ಕಾನನದ ಮಧ್ಯೆ ಹರಿಯುವ ಸೀತಾನದಿಯಿಂದ ಉಂಟಾಗಿರುವ ಈ ಕೂಡ್ಲು ತೀರ್ಥ ಜಲಪಾತ ನೋಡಲು ಅಷ್ಟೇ ರಮಣೀಯ.ಸುಮಾರು 300 ಅಡಿಗಳಷ್ಟು ಎತ್ತರದಿಂದ ಕೂಡ್ಲು ತೀರ್ಥ ಜಲಪಾತ ಧುಮುಕುತ್ತಿದೆ. ಈ ಹಿನ್ನೆಲೆಯಲ್ಲಿ ಜಲಪಾತದ ಕೆಳಗೆ ನೈಸರ್ಗಿಕವಾಗಿಯೇ ಕೊಳದ ರಚನೆಯಾಗಿದೆ.
ದಟ್ಟ ಕಾಡಿನ ಮಧ್ಯದಲ್ಲಿರುವ ಕಾಲುದಾರಿಯಲ್ಲಿ ಸುಮಾರು 1.5 ಕಿ ಮೀ ದೂರ ಸಾಗಬೇಕಾಗುತ್ತದೆ. ಎತ್ತರ ತಗ್ಗಿನ ಭೂಪ್ರದೇಶವಾಗಿರುವ ಕಾರಣ ಹಾದಿ ಸ್ವಲ್ಪ ಕಠಿಣವೆನಿಸಿದರೂ ಜಲಪಾತ ಬಳಿ ತಲುಪಿದಾಗ ಆಗುವ ಆನಂದ ದಣಿವನ್ನು ದೂರ ಮಾಡುವುದು ಮಾತ್ರ ಸುಳ್ಳಲ್ಲ.












Click it and Unblock the Notifications