ಚಾರ್ಮಡಿ ಘಾಟ್ ಬಳಿ ಪ್ರವಾಸಿಗರ ಹುಚ್ಚಾಟ, ತಾಳ್ಮೆ ಕಳೆದುಕೊಂಡ ಸ್ಥಳೀಯರು ಮಾಡಿದ್ದೇನು?
ಚಿಕ್ಕಮಗಳೂರು, ಜುಲೈ, 10: ಜಿನುಗು ಮಳೆಯ ನಡುವೆಯೇ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಕಾಫಿನಾಡಿನ ಪ್ರವಾಸಿ ತಾಣಗಳತ್ತ ಪ್ರತಿನಿತ್ಯವೂ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರವಾಸಿಗರು ರಸ್ತೆಗಳ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.
ಇಂತಹದ್ದೇ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಡಿ ಘಾಟ್‌ನಲ್ಲೂ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಜಲಪಾತಗಳ ಬಳಿಯ ರಸ್ತೆಗಳ ಮಧ್ಯೆ ಕಾರ್ ನಿಲ್ಲಿಸಿಕೊಂಡು ಪ್ರವಾಸಿಗರು ಡ್ಯಾನ್ಸ್ ಮಾಡುವ ಮೂಲಕ ಪುಂಡಾಟ ಮೆರೆಯುತ್ತಿದ್ದಾರೆ. ಆದರೆ ಪ್ರವಾಸಿಗರ ಈ ಹುಚ್ಚಾಟವನ್ನು ಹೇಳೋರಿಲ್ಲ-ಕೇಳೋರಿಲ್ಲ ಎನ್ನುವಂತಾಂಗಿದೆ.

ರಸ್ತೆ ಮಧ್ಯೆಯೇ ಪ್ರವಾಸಿಗರ ಹುಚ್ಚಾಟ
ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಡಿ ಘಾಟ್‌ನಲ್ಲಿ ಪ್ರವಾಸಿಗರು ಪ್ರತಿನಿತ್ಯವೂ ಹುಚ್ಚಾಟವನ್ನು ಮೆರೆಯುತ್ತಲೇ ಇದ್ದಾರೆ. ಈ ಭಾಗದಲ್ಲಿ ಮೊದಲೇ ಕಿರಿದಾದ ರಸ್ತೆಗಳು ಇದ್ದು, ವಾಹನ ಸವಾರರಿಗೆ ಇಕ್ಕಟ್ಟು ಆದಂತಾಗಿದೆ. ಇಂತಹದ್ದರಲ್ಲೂ ಕೆಲವರು ರಸ್ತೆ ಮಧ್ಯೆಯೆ ಕಾರ್‌ಗಳನ್ನು ನಿಲ್ಲಿಸಿ ಪುಂಡಾಟ ಮೆರೆಯುವ ಮೂಲಕ ಇನ್ನುಳಿದ ವಾಹನ ಸವಾರರಿಗೂ ಕಿರಿಕಿರಿ ಆಗುವಂತೆ ಮಾಡುತ್ತಿದ್ದಾರೆ.
ವಾಹನಗಳಿಗೆ ಅಡ್ಡಲಾಗಿ ನಿಂತು ನೃತ್ಯ
ದಟ್ಟ ಮಂಜು ಕವಿದ ದಾರಿಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಡ್ಯಾನ್ಸ್ ಮಾಡುವ ಭರದಲ್ಲಿ ಇನ್ನುಳಿದ ವಾಹನಗಳಿಗೂ ಅಡ್ಡಲಾಗಿ ನಿಲ್ಲುತ್ತಿದ್ದಾರೆ. ಇದರಿಂದ ಅಪಾಘಾತ, ಟ್ರಾಫಿಕ್ ಜಾಮ್‌ಗೂ ಆಹ್ವಾನ ನೀಡಿದಂತಾಗಿದೆ. ಅಷ್ಟೇ ಅಲ್ಲದೆ ಜಲಪಾತಗಳ ಮೇಲೆ ಹತ್ತುವ ದುಸ್ಸಾಹಸಕ್ಕೂ ಕೂಡ ಕೆಲವು ಪ್ರವಾಸಿಗರು ಮುಂದಾಗುತ್ತಿದ್ದಾರೆ. ಈ ಹುಚ್ಚಾಟದಿಂದ ಬೇಸತ್ತ ಸ್ಥಳೀಯರು ಜಲಪಾತಗಳ ಬಳಿ ಪೊಲೀಸರು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.
ಸ್ಟೆಪ್ ಹಾಕಿ ಗಮನ ಸೆಳೆದ ಯುವತಿಯರು
ಮತ್ತೊಂದೆಡೆ ಮುಂಗಾರು ಮಳೆ ಚುರುಕಾದ ಹಿನ್ನೆಲೆ ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ಈ ದೃಶ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಅದೇ ರೀತಿ ಜೋಗದ ಸಿರಿಯ ಮಡಿಲಿನಲ್ಲಿ ಯುವತಿಯರು ಸಕತ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ. ಹಾಲ್ನೊರೆಯಂತೆ ಕಂಗೊಳಿಸುವ ಜೋಗ್ ಫಾಲ್ಸ್ ಮುಂದೆ ಯುವತಿಯರು ಹೆಜ್ಜೆ ಹಾಕಿದ್ದಾರೆ.
ರಾಜ, ರಾಣಿ, ರೋರರ್, ರಾಕೇಟ್ ಮುಂದೆ ಯುವತಿಯರು ರೀಲ್ಸ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಹೌದು.. ಇತ್ತೀಚಿಗೆ ಈ ರೀಲ್ಸ್ ಟ್ರೆಂಡ್ ಆಗಿದ್ದು, ಇದಕ್ಕಾಗಿ, ವಿಶ್ವವಿಖ್ಯಾತ ಜೋಗ ಜಲಪಾತದ ಮುಂದೆ ರೀಲ್ಸ್ ಮೊರೆ ಹೋದ ಯುವತಿಯರು, ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಫಾಲ್ಸ್ ನೋಡಲು ಆಗಮಸಿದ ಪ್ರವಾಸಿಗರ ದಂಡು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಆಸುಪಾಸಿನಲ್ಲಿ ಕಳೆದೊಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ಇದೀಗ ಜೋಗ ಜಲಪಾತದ ಕಳೆಯೂ ಹೆಚ್ಚಾಗಿದೆ. ಅಲ್ಲದೆ ನಿರಂತರ ವರ್ಷಧಾರೆಯಿಂದಾಗಿ ಕಂಗೊಳಿಸುತ್ತಿದೆ. ಈ ಜೋಗ ಜಲಪಾತದ ವಯ್ಯಾರವನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರು ಸಾಗಾರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.
ಇನ್ನು ವಾರಾಂತ್ಯದ ಪ್ರವಾಸಕ್ಕೆ ಬಂದಂತಹ ನೂರಾರು ಪ್ರವಾಸಿಗರು ಜೋಗ್ ಫಾಲ್ಸ್ ಸದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೋಗ-ಕಾರ್ಗಲ್ ಶರಾವತಿ ಹಿನ್ನೀರ ಪ್ರದೇಶದಲ್ಲಿ ನಿರಂತರ ವರ್ಷಧಾರೆ ಹಿನ್ನೆಲೆಯಲ್ಲಿ ಜಲಪಾತದಲ್ಲಿ ಯಥೇಚ್ಛ ನೀರು ಜಲಪಾತವಾಗಿ ಹೊರಹೋಗುತ್ತಿದ್ದು, ಇದನ್ನು ಅಸ್ವಾದಿಸುವುದೇ ಕಣ್ಣಿಗೆ ಹಬ್ಬವಾದಂತಾಗಿದೆ.












Click it and Unblock the Notifications