Tirupati Tirumala: ಮಹಾರಾಷ್ಟ್ರದಿಂದ ತಿರುಪತಿಗೆ ಸೈಕಲ್ ತುಳಿದು ಬಂದ ಅಜ್ಜ!
ದೇವರ ಮೇಲಿನ ಭಕ್ತಿ ಏನೆಲ್ಲಾ ಮಾಡಿಸಿಬಿಡುತ್ತದೆ ಅನ್ನೋದಕ್ಕೆ ಇಲ್ಲೊಂದು ಪ್ರತ್ಯಕ್ಷ ನಿದರ್ಶನವಿದೆ. 62ನೇ ವಯಸ್ಸಿನ ಅಜ್ಜರೊಬ್ಬರು ಸೈಕಲ್ ತುಳಿದು ಕಿಲೋಮೀಟರ್ ಗಟ್ಟಲೆ ಕ್ರಮಿಸುವ ಮೂಲಕ ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿ ಎಂಥಹದ್ದು ಎಂದು ತೋರಿಸಿದ್ದಾರೆ.
ಹೌದು.... ಮಹಾರಾಷ್ಟ್ರದ ವೃದ್ಧರೊಬ್ಬರು ಸೈಕಲ್ ನಲ್ಲಿ ಪ್ರಯಾಣಿಸಿ ತಿರುಮಲ ಶ್ರೀಗಳ ದರ್ಶನ ಪಡೆದಿದ್ದಾರೆ. ಸುಮಾರು 800 ಕಿಲೋಮೀಟರ್ ಸಂಚರಿಸಿ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದ ಶ್ರೀವಾರಿ ಭಕ್ತ ಸಂಜಯ್ ಗಂಗಾಧರ ನರುಂಡೆ ಅವರು ಇದೇ ಫೆಬ್ರವರಿ 4ರಂದು ಸಾಂಗ್ಲಿಯ ವಿನಾಯಕ ದೇವಸ್ಥಾನದಿಂದ ಸೈಕಲ್‌ನಲ್ಲಿ ಹೊರಟಿದ್ದರು. ಹತ್ತು ದಿನಗಳಲ್ಲಿ 800 ಕಿ.ಮೀ. ಪ್ರಯಾಣ ಮಾಡಿ ತಿರುಮಲ ತಲುಪಿದ್ದಾರೆ. ಅಂದರೆ ಫೆಬ್ರವರಿ 14ರಂದು ಸಂಜಯ್ ಗಂಗಾಧರ ನರುಂಡೆ ಅವರು ತಿರುಪತಿಯಲ್ಲಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದಾರೆ.

ತಿಮ್ಮಪ್ಪನ ಮೇಲಿನ ಇವರ ಅಪಾರ ಭಕ್ತಿಯನ್ನು ಕಂಡು ಸ್ಥಳೀಯರ ಆಶ್ಚರ್ಯಗೊಂಡಿದ್ದಾರೆ. ಅಷ್ಟಕ್ಕೂ ಇವರು ಇದೇ ಮೊದಲ ಬಾರಿಗೆ ಸೈಕಲ್‌ನಲ್ಲಿ ತಿರುಮಲಕ್ಕೆ ಬರುತ್ತಿಲ್ಲ. 2000ನೇ ಇಸವಿಯಿಂದಲೂ ಸೈಕಲ್ ನಲ್ಲಿ ತಿರುಪತಿಗೆ ತೆರಳುತ್ತಿದ್ದಾರೆ. ಇಲ್ಲಿವರೆಗೆ 14ನೇ ಬಾರಿಗೆ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದೇನೆ ಎಂದು ಅವರೇ ಸ್ವತ: ಹೇಳಿಕೊಂಡಿದ್ದಾರೆ.
ಸಂಜಯ್ ಗಂಗಾಧರ ನರುಂಡೆ ಅವರು ಪರಿಸರ ಪ್ರೇಮಿ. ಇತ್ತೀಚೆಗೆ ವಾಯುಮಾಲಿನ್ಯದಿಂದಾಗಿ ಪರಿಸರ ಹಾಳಾಗುತ್ತಿರುವುದು ಅವರ ಮನಸ್ಸಿಗೆ ಬೇಸರ ತಂದಿದೆ. ಇದರಿಂದಾಗಿ ಪರಿಸರಕ್ಕೆ ಹಾನಿಯನ್ನುಂಟು ಮಾಡಲು ಇಚ್ಚಿಸದ ಅವರು ನಿತ್ಯ ಸೈಕಲ್ ಮೂಲಕವೇ ಪ್ರಯಾಣಿಸಿ ತಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ.

ಮಾತ್ರವಲ್ಲದೆ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪರಿಸರ ಕಾಪಾಡಬೇಕು ಎಂಬುದು ಈ ಅಜ್ಜನ ಆಶಯ. ಹೀಗಾಗಿ ಶಕ್ತಿ ಇರುವವರೆಗೆ ಸೈಕಲ್ ತುಳಿದು ಬಾಲಾಜಿ ದರ್ಶನ ಮಾಡುತ್ತೇನೆ ಎನ್ನುತ್ತಾರೆ ಅಜ್ಜ. 62ರ ಹರೆಯದಲ್ಲೂ ಮಹಾರಾಷ್ಟ್ರದಿಂದ 800 ಕಿ.ಮೀ ಸೈಕಲ್ ತುಳಿದು ತಿರುಮಲಕ್ಕೆ ಬಂದಿರುವುದು ಶ್ಲಾಘನೀಯ ಎಂದು ಸ್ಥಳೀಯರು ಕೊಂಡಾಡಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ತಿರುಮಲ ಬೆಟ್ಟದ ಮೇಲೆ ವಿಷ್ಣುವನ್ನು ಪೂಜಿಸುವ ಪ್ರಸಿದ್ಧ ವೆಂಕಟೇಶ್ವರನ ದೇವಾಲಯವಿದೆ. ಈ ದೇವಾಲಯವು ತಿರುಪತಿ ಬಾಲಾಜಿ ದೇವಾಲಯವೆಂದೇ ಪ್ರಸಿದ್ಧಿ. ಭಗವಾನ್ ಶ್ರೀ ವೆಂಕಟೇಶ್ವರನು ತನ್ನ ಪತ್ನಿ ಪದ್ಮಾವತಿಯೊಂದಿಗೆ (ಲಕ್ಷ್ಮಿ ದೇವಿ) ತಿರುಮಲದಲ್ಲಿ ನೆಲೆಸಿದ್ದಾನೆ ಎಂಬುದು ಲಕ್ಷಾಂತರ ಭಕ್ತರ ನಂಬಿಕೆ. ದೇಶ - ವಿದೇಶಗಳಲ್ಲೂ ತನ್ನ ಭಕ್ತ ಸಮೂಹವನ್ನು ಹೊಂದಿರುವ ತಿರುಪತಿ ಬಾಲಾಜಿ ದೇವಾಲಯದ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಕಷ್ಟು ರಹಸ್ಯಗಳಿವೆ.

ಬೇಡಿದ್ದನ್ನು ನೀಡುವ ತಿಮ್ಮಪ್ಪನಿಗೆ ಅಪಾರ ಭಕ್ತರ ಸಂಖ್ಯೆ ಇದೆ. ಮಾತ್ರವಲ್ಲದೆ ತಿರುಪತಿ ಬಾಲಾಜಿ ದೇವಾಲಯವು ಇಂದು ಭೂಮಿಯ ಮೇಲಿನ ಅತ್ಯಂತ ಜನಪ್ರಿಯ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ನೀವು ಈ ದೇವಾಲಯಕ್ಕೆ ಭೇಟಿ ನೀಡಿದರೂ ಲಕ್ಷಾಂತರ ಭಕ್ತರ ಸಮೂಹವನ್ನು ನೋಡಬಹುದು.
ಹಾಗೂ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆಯ ಅಭ್ಯಾಸವಾಗಿದೆ. ಈ ರೀತಿಯಾಗಿ ಲಕ್ಷಾಂತರ ಭಕ್ತರು ತಮ್ಮ ದಾನವನ್ನು ನೀಡಲು ಇಲ್ಲಿನ ದೇವಾಲಯಕ್ಕೆ ಆಗಮಿಸುತ್ತಾರೆ.












Click it and Unblock the Notifications