Madikeri: ತೆಪ್ಪದಕಂಡಿಯ ಜನರ ಬದುಕಿಗೆ ಆಸರೆ..ಈ ತೂಗು ಸೇತುವೆ!
ಮಡಿಕೇರಿ, ಮೇ 27: ಮುಂಗಾರು ಆರಂಭವಾಗಿ ಮಳೆ ಧೋ ಎಂದು ಸುರಿದು ಹಳ್ಳಕೊಳ್ಳ, ತೊರೆ, ನದಿ ತುಂಬಿ ಹರಿಯುವಾಗಲೆಲ್ಲ. ಮಳೆಗಾಲದ ಆ ದಿನಗಳು ಮತ್ತು ಅನುಭವಿಸಿದ ಸಂಕಷ್ಟಗಳು, ಸಂಭವಿಸಿದ ದುರಂತಗಳು... ಹೀಗೆ ಎಲ್ಲವೂ ಮಲೆನಾಡಿಗರ ಮನಪಟಲದಲ್ಲಿ ತೇಲಿ ಹೋಗುತ್ತಿರುತ್ತದೆ. ಏಕೆಂದರೆ ಮಳೆಯಿಂದ ಹೆಚ್ಚು ಸಂಕಷ್ಟವನ್ನು ಅನುಭವಿಸುವವರೇ ಮಲೆನಾಡಿಗರು ಅದರಲ್ಲೂ ಕುಗ್ರಾಮದಲ್ಲಿ ಬದುಕು ಕಟ್ಟಿಕೊಂಡವರು. ಅವರೆಲ್ಲರೂ ತಮ್ಮೂರಿನಲ್ಲಾಗುವ ಪ್ರತಿ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿ ನಿಂತಿದ್ದಾರೆ.
ಇವತ್ತು ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಅಭಿವೃದ್ಧಿಯಾಗಿವೆ. ಮನೆ ಬಳಿಯ ಚಿಕ್ಕ ತೊರೆಗಳಿಗೂ ಮೋರಿ, ಸೇತುವೆಗಳಾಗಿವೆ. ಆದರೆ ಕೆಲವು ದಶಕಗಳ ಹಿಂದೆ ನದಿಗಳಿಗೆ ಸೇತುವೆಗಳೇ ಇರಲಿಲ್ಲ. ಜನರೇ ಮರ ಮತ್ತು ಹಲಗೆಯಿಂದ ನಿರ್ಮಿಸಿದ ಪಾಲಗಳ ಮೂಲಕ ನದಿ ದಾಟಬೇಕಿತ್ತು. ನೀರು ಉಕ್ಕಿ ಹರಿದರೆ ಸಂಪರ್ಕವೇ ಕಡಿದು ಹೋಗುತ್ತಿತ್ತು. ಕೆಲವು ಕಡೆಗಳಲ್ಲಿ ದೋಣಿ, ತೆಪ್ಪ, ಪಾಂಡಿಯ ಮೂಲಕ ನದಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಬೇಕಾಗಿತ್ತು. ಇದೊಂದು ರೀತಿಯಲ್ಲಿ ಜೀವದೊಂದಿಗೆ ಸರಸವಾಗಿತ್ತು. ಆದರೆ ಅನಿವಾರ್ಯವಾಗಿತ್ತು.

ಇವತ್ತಿಗೂ ಮಲೆನಾಡಿನಲ್ಲಿ ಇಂತಹ ಪರಿಸ್ಥಿತಿ ಹಲವು ಕಡೆ ಇದೆ. ಇಂತಹ ಸಂದರ್ಭದಲ್ಲಿ ಕೊಡಗಿನ ಕುಶಾಲನಗರ ಬಳಿಯ ತೆಪ್ಪದ ಕಂಡಿಯ ಜನ ಅನುಭವಿಸುತ್ತಿದ್ದ ಸಂಕಷ್ಟದ ದಿನಗಳು ನೆನಪಾಗುತ್ತವೆ. ಅವತ್ತು ಅವರದ್ದು ಅಕ್ಷರಶಃ ಹೋರಾಟದ ಬದುಕಾಗಿತ್ತು. ಇತ್ತ ಕೊಡಗು ಅತ್ತ ಮೈಸೂರು ನಡುವೆ ಕಾವೇರಿ ನದಿ ಹರಿದು ಹೋಗುತ್ತಿತ್ತು. ನದಿಯನ್ನು ದಾಟಿ ಹೋಗಲು ಸೇತುವೆ ಇರಲಿಲ್ಲ. ಆಗ ಜನ ತೆಪ್ಪ ಅಥವಾ ಮರದ ತುಂಡುಗಳಿಂದ ಮಾಡಿದ ಪಾಂಡಿಯನ್ನು ಬಳಸುತ್ತಿದ್ದರು. ಬಹುಶಃ ಇಲ್ಲಿನ ಜನರು ತೆಪ್ಪ ಬಳಸುತ್ತಿದ್ದರಿಂದ ತೆಪ್ಪದಕಂಡಿ ಎಂಬ ಹೆಸರು ಬಂದಿರಬಹುದೇನೋ?
ಅವತ್ತು ಸಂಕಷ್ಟದಲ್ಲಿದ್ದ ತೆಪ್ಪದಕಂಡಿ ಜನ
ಮಳೆಗಾಲದಲ್ಲಿ ಕಾವೇರಿ ಉಕ್ಕಿ ಹರಿದಾಗ ತೆಪ್ಪದಲ್ಲಿ ದಾಟುವುದು ಸಾಧ್ಯವಾಗುತ್ತಿರಲಿಲ್ಲ. ಆಗ ಮೈಸೂರು ಮತ್ತು ಕೊಡಗಿನ ಗಡಿಭಾಗ ತೆಪ್ಪದಕಂಡಿಯ ಜನರು ಸಂಪರ್ಕ ಕಳೆದುಕೊಂಡು ಪರದಾಡಬೇಕಿತ್ತು. ನದಿ ದಾಟಿ ದಡ ಸೇರಬೇಕಾದವರು ಹತ್ತಾರು ಕಿ.ಮೀ. ಸುತ್ತಿಬಳಸಿ ತೆರಳಬೇಕಾಗಿತ್ತು. ಬೇಸಿಗೆಯ ದಿನಗಳಲ್ಲಿ ತೆಪ್ಪ, ಪಾಂಡಿಯ ಮೂಲಕ ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳುತ್ತಿದ್ದವರು ಮಳೆಗಾಲ ಆರಂಭವಾಗಿ ಕಾವೇರಿ ಉಕ್ಕಿಹರಿದಾಗ ಆತಂಕಕ್ಕೀಡಾಗಿ ಬಿಡುತ್ತಿದ್ದರು.

ಮೈಸೂರು ಭಾಗದಿಂದ ಕೊಡಗಿನತ್ತ ಕೆಲಸಕ್ಕೆ ತೆರಳಬೇಕಾದ ಜನ ಮತ್ತು ಶಾಲೆಗೆ ತೆರಳಬೇಕಾದ ಮಕ್ಕಳು ನದಿ ದಾಟಲಾಗದೆ ಮನೆಯಲ್ಲೇ ಉಳಿಯುಂತಾಗಿತ್ತು. ನಮಗೊಂದು ಸೇತುವೆ ನಿರ್ಮಿಸಿಕೊಡಿ ಎಂದು ಮನವಿ ಮಾಡುತ್ತಾ ಬರುತ್ತಿದ್ದರೂ ಸರ್ಕಾರದಿಂದ ಯಾವುದೇ ರೀತಿಯ ಭರವಸೆ ದೊರೆಯದಿದ್ದಾಗ ತೆಪ್ಪದಕಂಡಿಯ ಜನ ತಮಗೆ ಬವಣೆ ತಪ್ಪಿದಲ್ಲ ಎಂದು ಗೊಣಗುತ್ತಾ ದಿನಕಳೆಯ ತೊಡಗಿದ್ದರು. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಜನರು ಕೂಲಿಕಾರ್ಮಿಕರಾಗಿದ್ದು, ಮೈಸೂರಿನ ಕೊಪ್ಪದಿಂದ ತೆಪ್ಪದಕಂಡಿ ಮೂಲಕ ಕೊಡಗಿನತ್ತ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು.
ಸೇತುವೆ ನಿರ್ಮಾಣ ಸುಲಭದ್ದಾಗಿರಲಿಲ್ಲ
ಕೊಡಗು ಮತ್ತು ಮೈಸೂರು ಜಿಲ್ಲೆಯನ್ನು ಕಾವೇರಿ ನದಿ ಬೇರ್ಪಡಿಸಿದ್ದು, ನದಿದಾಟಿದರೆ ಕೂಗಳತೆಯ ದೂರ. ಆದರೆ ಸುತ್ತಿಬಳಸಿ ತೆರಳುವುದಾದರೆ ಹತ್ತಾರು ಕಿ.ಮೀ. ಸಾಗಬೇಕಾಗುತ್ತದೆ. ಮೊದಲಿನಿಂದಲೂ ಮರೂರು, ರಾಣಿಗೇಟ್, ದೊಡ್ಡೆಹೊಸೂರು, ದೊಡ್ಡರವೆ ಸೇರಿದಂತೆ ಹಲವು ಗ್ರಾಮಗಳ ಜನರು ಈ ತೆಪ್ಪದಕಂಡಿ ಮೂಲಕವೇ ಸಾಗಬೇಕಾಗಿತ್ತು. ಕೆಲ ವರ್ಷಗಳ ಹಿಂದಿನ ತನಕವೂ ಬಿದಿರಿನ ತೆಪ್ಪ ಬಳಸಿ ಜನ ನದಿದಾಟುತ್ತಿದ್ದರು. ಇಲ್ಲಿ ಕಾಂಕ್ರಿಟ್ನ ಸೇತುವೆ ನಿರ್ಮಿಸುವುದು ಸುಲಭದ ಮಾತಾಗಿರಲಿಲ್ಲ. ಇದಕ್ಕೆ ಕೋಟ್ಯಂತರೂ ಹಣ ಖರ್ಚಾಗುತ್ತಿತ್ತು. ಕೆಲವೇ ಗ್ರಾಮಗಳ ಅನುಕೂಲಕ್ಕಾಗಿ ಅಷ್ಟೊಂದು ಹಣ ಖರ್ಚು ಮಾಡಿ ಸೇತುವೆ ನಿರ್ಮಾಣ ಮಾಡಲು ಸರ್ಕಾರ ತಯಾರಿರಲಿಲ್ಲ.

ಆಗ ಕಡಿಮೆ ಖರ್ಚಿನಲ್ಲಿ ಸಂಪರ್ಕ ನೀಡುವುದು ಹೇಗೆ ಎಂದು ಯೋಚಿಸುತ್ತಿದ್ದವರಿಗೆ ಮೊದಲು ನೆನಪಿಗೆ ಬಂದಿದ್ದು ತೂಗುಸೇತುವೆ. ಅವತ್ತು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸದಾನಂದಗೌಡರಿದ್ದರು. ಅವರ ಪತ್ನಿಯ ತವರು ಕೂಡ ಅದೇ ಭಾಗದಲ್ಲಿದ್ದುದರಿಂದ ಅವರಿಗೆ ಅಲ್ಲಿನ ಸಮಸ್ಯೆಯ ಅರಿವಿತ್ತು ಹೀಗಾಗಿ ಅವರು ವಿಶೇಷ ಆದ್ಯತೆ ನೀಡಿದರು. ಪರಿಣಾಮ ಸುಳ್ಯದ ಇಂಜಿನೀಯರ್ ಗಿರೀಶ್ಭಾರಧ್ವಾಜ್ ಅವರ ನೇತೃತ್ವದಲ್ಲಿ ತೂಗು ಸೇತುವೆ ನಿರ್ಮಾಣ ಮಾಡಲಾಯಿತು. ಈಗ ನದಿ ಉಕ್ಕಿ ಹರಿದರೂ ಜನ ಯಾವುದೇ ಆತಂಕವಿಲ್ಲದೆ ನದಿ ದಾಟಿ ತಮ್ಮ ನಿತ್ಯದ ಕೆಲಸಗಳಿಗೆ ತೆರಳುತ್ತಾರೆ.
ಇದೀಗ ಕಾವೇರಿ ಉಕ್ಕಿ ಹರಿಯುತ್ತಿರುವುದರಿಂದ ಈ ಸುಂದರ ರಮಣೀಯ ದೃಶ್ಯವನ್ನು ನೋಡಲು ತೂಗುಸೇತುವೆ ಕಡೆಗೆ ಬರುತ್ತಿದ್ದಾರೆ. ಕಾವೇರಿ ನಿಸರ್ಗಧಾಮದಿಂದ ದುಬಾರೆಯತ್ತ ತೆರಳುವವರು, ಅಥವಾ ಇದೆರಡು ಸ್ಥಳಗಳಿಂದ ಕೊಪ್ಪದ ಗೋಲ್ಡನ್ ಟೆಂಪಲ್ಗೆ ತೆರಳುವ ಪ್ರವಾಸಿಗರು ಈ ಸೇತುವೆ ಮೂಲಕ ತೆರಳುವುದಾದರೆ ಕೇವಲ 3 ಕಿ.ಮೀ. ದೂರವಷ್ಟೆ. ಇದೀಗ ಈ ತೆಪ್ಪದಕಂಡಿಯ ಜನರು ತಮ್ಮ ಹಿಂದಿನ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಈಗಿನ ನೆಮ್ಮದಿಯ ಬದುಕಿಗೆ ಖುಷಿಪಡುತ್ತಾರೆ.












Click it and Unblock the Notifications