ಮಂಗಳೂರು-ವಿಜಯಪುರ ಡೈಲಿ ರೈಲು 3 ತಿಂಗಳು ವಿಸ್ತರಣೆ
ಬೆಂಗಳೂರು, ಸೆಪ್ಟೆಂಬರ್ 22; ನೈಋತ್ಯ ರೈಲ್ವೆ ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲಾದ ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ ಮಾಡಿದೆ. ಆದರೆ ಈ ರೈಲು ಕಾಯಂಗೊಳಿಸಬೇಕು ಎಂದು ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.
ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಮಾಡದೇ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದೆ. ಆದ್ದರಿಂದ ಈಗಿರುವ ವೇಳಾಪಟ್ಟಿಯಲ್ಲಿ ರೈಲು ಮುಂದಿನ ಆದೇಶದ ತನಕ ಓಡಲಿದೆ.

ರೈಲು ಸಂಖ್ಯೆ 07377 ವಿಜಯಪುರ- ಮಂಗಳೂರು ಜಂಕ್ಷನ್ ಡೈಲಿ ವಿಶೇಷ ರೈಲನ್ನು ಸೆಪ್ಟೆಂಬರ್ 30ರ ತನಕ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 1 ರಿಂದ ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 1ರ ವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 2 ರಿಂದ ಜನವರಿ 1, 2024ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಾಯಂಗೊಳಿಸಲು ಬೇಡಿಕೆ; ಮಂಗಳೂರು-ವಿಜಯಪುರ ರೈಲು ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲು ಸೇವೆ. ರೈಲು ವಿಜಯಪುರದಿಂದ ಹೊರಟು ಬಾಗಲಕೋಟೆ, ಗದಗ, ಹಾವೇರಿ, ಬ್ಯಾಡಗಿ, ಹರಿಹರ, ದಾವಣಗೆರೆ, ಹಾಸನ, ಸಕಲೇಶಪುರ, ಕುಕ್ಕೆ ಸುಬ್ರಮಣ್ಯ ಮಾರ್ಗವಾಗಿ ಮಂಗಳೂರು ತನಕ ಸಂಚಾರ ನಡೆಸುತ್ತದೆ.
ಆರೋಗ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳ ಭೇಟಿಗಾಗಿ ಹಲವಾರು ಜನರು ಈ ರೈಲಿನಲ್ಲಿ ಸಂಚಾರ ನಡೆಸುತ್ತಾರೆ. ರೈಲು ಸೇವೆ ಆರಂಭವಾದ ದಿನದಿಂದ ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ಆದರೆ ಈ ರೈಲು ತತ್ಕಾಲ್ ಬೋರ್ಡ್‌ನಲ್ಲಿ ಓಡುವ ಕಾರಣ ದರಗಳು ಅಧಿಕವಾಗಿದೆ. ಆದ್ದರಿಂದ ರೈಲು ಕಾಯಂಗೊಳಿಸಬೇಕು ಎಂಬ ಬೇಡಿಕೆ ಇದೆ.
ವಿಜಯಪುರ-ಮಂಗಳೂರು ರೈಲು ಡಿಸೆಂಬರ್ 1, 2021ರಂದು ವಿಜಯಪುರದಿಂದ ಮತ್ತು ಡಿಸೆಂಬರ್ 2ರಿಂದ ಮಂಗಳೂರಿನಿಂದ ಸಂಚಾರ ಆರಂಭಿಸಿತು. ಬಳಿಕ ಕೋವಿಡ್ ಕಾಲದಲ್ಲಿ ಎಲ್ಲಾ ರೈಲುಗಳಂತೆ ಈ ರೈಲು ಸೇವೆ ಸ್ಥಗಿತವಾಯಿತು. ಬಳಿಕ ಮತ್ತೆ ಪ್ರಯಾಣಿಕರ ಬೇಡಿಕೆಯಂತೆ ರೈಲು ಆರಂಭಿಸಲಾಯಿತು. ಆದರೆ ಇಂದಿಗೂ ಸಹ ತತ್ಕಾಲ್ ಬೋರ್ಡ್‌ನಲ್ಲಿಯೇ ಓಡಿಸಲಾಗುತ್ತಿದೆ.
ಮಾಹಿತಿ ಹಕ್ಕು ಅಡಿ ಕೇಳಲಾದ ಪ್ರಶ್ನೆಗೆ ರೈಲ್ವೆ ಇಲಾಖೆ ಉತ್ತರ ಕೊಟ್ಟಿದೆ. ಮಂಗಳೂರು-ವಿಜಯಪುರ ರೈಲನ್ನು ಕಾಯಂಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಹೇಳಿದೆ. ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ವಿಜಯಪುರ ಮತ್ತು ದಕ್ಷಿಣ ಕನ್ನಡ ರೈಲು ಪ್ರಯಾಣಿಕರ ವೇದಿಕೆ ಮತ್ತು ದಕ್ಷಿಣ ಕನ್ನಡ ಮತ್ತು ವಿಜಯಪುರದ ಸಂಸದರು ರೈಲ್ವೆ ಇಲಾಖೆಗೆ ರೈಲು ಕಾಯಂಗೊಳಿಸಿ ಎಂದು ಒತ್ತಡ ಹಾಕಿದ್ದಾರೆ.
ಈ ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು. ರೈಲು ಸೇವೆ ಕಾಯಂಗೊಳಿಸಬೇಕು, ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂಬ ಕೂಗು ಇದೆ. ಆದರೆ ಯಾವುದೇ ಬೇಡಿಕೆಗೆ ಸ್ಪಂದಿಸದ ರೈಲ್ವೆ ಇಲಾಖೆ ರೈಲು ಸೇವೆಯನ್ನು ಡಿಸೆಂಬರ್ 31ರ ತನಕ ವಿಸ್ತರಣೆಯನ್ನು ಮಾತ್ರ ಮಾಡಿದೆ.
ಈ ರೈಲು ವಿಜಯಪುರದಿಂದ ಸಂಜೆ 6.35ಕ್ಕೆ ಹೊರಟು ಹುಬ್ಬಳ್ಳಿಗೆ 11.55ಕ್ಕೆ ತಲುಪುತ್ತದೆ. ಮರುದಿನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸುತ್ತದೆ. ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಡುವ ರೈಲು ಮರುದಿನ ಮುಂಜಾನೆ 3.35ಕ್ಕೆ ಹುಬ್ಬಳ್ಳಿಗೆ, ಬಳಿಕ 9.35ಕ್ಕೆ ವಿಜಯಪುರ ತಲುಪುತ್ತದೆ.
ಪ್ರಯಾಣಿಕರ ಈ ವೇಳಾಪಟ್ಟಿ ಬದಲಾವಣೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ರೈಲು ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು, 9.30ಕ್ಕೆ ಹುಬ್ಬಳ್ಳಿ, ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ತಲುಪಬೇಕು. ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು, ಮುಂಜಾನೆ 5ಕ್ಕೆ ಹುಬ್ಬಳ್ಳಿ, 10.30ಕ್ಕೆ ವಿಜಯಪುರ ತಲುಪುವಂತೆ ಆಗಬೇಕು ಎಂಬುದು ಬೇಡಿಕೆಯಾಗಿದೆ.












Click it and Unblock the Notifications