ಮಂಡ್ಯ-ತುಮಕೂರು ಹೊಸ ರೈಲು ಮಾರ್ಗ: ಯೋಜನೆ ವಿವರಗಳು
ಮಂಡ್ಯ, ಸೆಪ್ಟೆಂಬರ್ 19: ಕರ್ನಾಟಕದ ಹೊಸ ರೈಲು ಮಾರ್ಗಕ್ಕಾಗಿ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಪತ್ರವನ್ನು ಬರೆಯಲಾಗಿದೆ. ಮೈಸೂರು-ಪಾಂಡವಪುರ ಮೂಲಕ ಈ ರೈಲು ಮಾರ್ಗ ತುಮಕೂರಿಗೆ ಸಂಪರ್ಕ ಕಲ್ಪಿಸಲಿದೆ. ರೈಲ್ವೆ ಇಲಾಖೆ ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆಯನ್ನು ನಡೆಸಿದ ಬಳಿಕ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.
ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಈ ಕುರಿತು ವಿ. ಸೋಮಣ್ಣಗೆ ಪತ್ರವನ್ನು ಬರೆದಿದ್ದಾರೆ. ಹೊಸ ರೈಲು ಮಾರ್ಗ ನಿರ್ಮಾಣ ಮಾಡುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣಗೆ ಪತ್ರ ಮುಖೇನ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸಚಿವರು ಪತ್ರದಲ್ಲಿ, ಮೈಸೂರಿನಿಂದ ಪಾಂಡವಪುರದವರೆಗೆ ಈಗಾಗಲೇ ದಿನನಿತ್ಯ ಹಲವು ರೈಲುಗಳು ಸಂಚರಿಸುತ್ತಿದ್ದು, ಅಲ್ಲಿಂದ ಮೇಲುಕೋಟೆ, ನಾಗಮಂಗಲ, ಬಿ. ಜಿ. ನಗರ ಮಾರ್ಗವಾಗಿ ತುಮಕೂರಿಗೆ ಸುಮಾರು 120 ಕಿ. ಮೀ. ಹೊಸ ರೈಲು ಮಾರ್ಗ ನಿರ್ಮಾಣ ಮಾಡಿದರೆ ಪ್ರಯಾಣಿಕರಿಗೆ ಅತ್ಯಂತ ಉಪಯೋಗವಾಗಲಿದೆ ಎಂದು ವಿವರಿಸಿದ್ದಾರೆ.
ಪಾಂಡವಪುರ ಹಾಗೂ ತುಮಕೂರು ಮಾರ್ಗವಾಗಿ ಮೇಲುಕೋಟೆ, ಹಾಗೂ ಬಿ. ಜಿ. ನಗರದಂತ ಧಾರ್ಮಿಕ ಸ್ಥಳಗಳು ಬರುವುದರಿಂದ ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಹೊಸ ಮಾರ್ಗದಿಂದ ಅನುಕೂಲವಾಗಲಿದೆ. 4 ಪ್ರಮುಖ ತಾಲೂಕುಗಳು ಈ ಮಾರ್ಗದ ವ್ಯಾಪ್ತಿಗೆ ಒಳಪಡುವುದರಿಂದ ಈ ಭಾಗದ ಸಾರ್ವಜನಿಕರಿಗೆ ಹೊಸ ರೈಲು ಮಾರ್ಗದ ಪ್ರಯೋಜನ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ಪತ್ರದ ವಿವರ: ಕರ್ನಾಟಕದ ಮಂಡ್ಯ ಜಿಲ್ಲೆಯ ಬಿ. ಜಿ. ನಗರ ಒಂದು ಮುಖ್ಯವಾದ ಶೈಕ್ಷಣಿಕ ಕ್ಷೇತ್ರ. ಇಂಜಿನಿಯರಿಂಗ್, ಮೆಡಿಕಲ್ ಮತ್ತು ಫಾರ್ಮಸಿ ಕಾಲೇಜುಗಳಿವೆ. ಅಲ್ಲದೇ ಇದೊಂದು ಯಾತ್ರಾ ಸ್ಥಳವಾಗಿದೆ. ಸಾವಿರಾರು ವಿದ್ಯಾರ್ಥಿಗಳು/ ವಾಣಿಜ್ಯೋದ್ಯಮಿಗಳು/ ರೈತರು/ ಭಕ್ತರು ಪ್ರತಿದಿನ ಮೈಸೂರು-ತುಮಕೂರು ನಡುವೆ ಬಿ. ಜಿ. ನಗರ ಮೂಲಕ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಪತ್ರದಲ್ಲಿ ವಿವರಿಸಿದ್ದಾರೆ.
ಸದ್ಯ ಮೈಸೂರು-ತುಮಕೂರು ನಡುವೆ ವಯಾ ಪಾಂಡವಪುರ, ಮೇಲುಕೋಟೆ, ಬಿ. ಜಿ. ನಗರ ಮೂಲಕ ಯಾವುದೇ ರೈಲು ಮಾರ್ಗವಿಲ್ಲ. ಆದರೆ ಪಾಂಡವಪುರ-ಮೈಸೂರು ನಡುವೆ ರೈಲು ಮಾರ್ಗವಿದೆ. ಪಾಂಡವಪುರ. ಬಿ. ಜಿ. ನಗರದಲ್ಲಿ ರೈಲು ನಿಲ್ದಾಣವೂ ಇದೆ. ಪಾಂಡವಪುರ-ತುಮಕೂರು ವಯಾ ಬಿ. ಜಿ. ನಗರ ನಡುವೆ ಸುಮಾರು 120 ಕಿ. ಮೀ. ರೈಲು ಮಾರ್ಗ ನಿರ್ಮಾಣ ಮಾಡಿದರೆ ತುಮಕೂರು-ಮೈಸೂರು ನಡುವೆ ವಯಾ ಬಿ. ಜಿ. ನಗರ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಚಿವರು ಪತ್ರದಲ್ಲಿ ಪಾಂಡವಪುರ-ತುಮಕೂರು ವಯಾ ಬಿ. ಜಿ. ನಗರ ನಡುವಿನ ರೈಲು ಮಾರ್ಗ 2 ಪ್ರಸಿದ್ಧ ಯಾತ್ರಾ ಸ್ಥಳ, 4 ಪ್ರಮುಖ ತಾಲೂಕುಗಳ ಮೂಲಕ ಹಾದು ಹೋಗಲಿದೆ. ನೂತನ ರೈಲು ಮಾರ್ಗ ನಿರ್ಮಾಣ ಮಾಡುವ ಕುರಿತು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications