ಪಂಚಗಂಗಾ ಎಕ್ಸ್‌ಪ್ರೆಸ್; ಹೆಚ್ಚುವರಿ ಬೋಗಿ ಬದಲು ಹೊಸ ರೈಲಿಗೆ ಬೇಡಿಕೆ
ಬೆಂಗಳೂರು, ಆಗಸ್ಟ್ 21: ಬೆಂಗಳೂರು ನಗರ ಮತ್ತು ಕರಾವಳಿ ಸಂಪರ್ಕಿಸುವ ಯಶವಂತಪುರ-ಕಾರವಾರ ನಡುವಿನ ಪ್ರತಿ ದಿನದ ರೈಲು ಪಂಚಗಂಗಾ ಎಕ್ಸ್‌ಪ್ರೆಸ್. ಕರಾವಳಿ ಭಾಗದ ಜನರ ಜೀವನಾಡಿಯಾದ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸುವ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಅಳವಡಿಸುವ ಬದಲು ಹೊಸ ರೈಲನ್ನು ಓಡಿಸಬೇಕು ಎಂದು ರೈಲ್ವೆ ಪ್ರಯಾಣಿಕರು ರೈಲ್ವೆ ಇಲಾಖೆ ಮುಂದೆ ಬೇಡಿಕೆ ಇಟ್ಟಿದ್ದಾರೆ. ಏಕೆ ಹೆಚ್ಚುವರಿ ಬೋಗಿಗಳು ಬೇಡ? ಎಂದು ವಿವರಣೆಯನ್ನು ನೀಡಿದ್ದಾರೆ.

ಕುಂದಾಪುರ ಹಾಗೂ ಉತ್ತರ ಕನ್ನಡ ಭಾಗದ ರೈಲು ಪ್ರಯಾಣಿಕರ ಸಮಿತಿ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಬೇಡ ಎಂದು ಮತ್ತೊಮ್ಮೆ ಹೇಳಿದೆ. ರೈಲು ಪ್ರಯಾಣಿಕರ ದಟ್ಟಣೆ ತಪ್ಪಿಸಲು ಹೊಸ ರೈಲು ಓಡಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಇಲಾಖೆ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಹೆಚ್ಚುವರಿ ಬೋಗಿ ಬೇಡ; ಪಂಚಗಂಗಾ ಎಕ್ಸ್‌ಪ್ರೆಸ್‌ಗೆ 14 ಬೋಗಿಗಳಿವೆ. ಇದಕ್ಕೆ ಹೆಚ್ಚುವರಿ ಬೋಗಿಯನ್ನು ಅಳವಡಿಕೆ ಮಾಡಿದರೆ ಘಾಟ್ ಪ್ರದೇಶದಲ್ಲಿ ನಿಧಾನವಾಗಿ ಸಂಚಾರ ನಡೆಸುತ್ತದೆ. ಇದರಿಂದಾಗಿ ಕ್ರಾಸಿಂಗ್ ಮಾಡಲು ರೈಲು ಸುಮಾರು 2 ರಿಂದ 3 ಗಂಟೆ ಬೇಗ ಹೊರಡಬೇಕಾಗುತ್ತದೆ ಎಂದು ಪ್ರಯಾಣಿಕರ ಸಮಿತಿ ವಿವರಣೆ ನೀಡಿದೆ.
ಹೆಚ್ಚುವರಿ ಬೋಗಿ ಅಳವಡಿಕೆ ಮಾಡಿದ ಬಳಿಕ ರೈಲು ಬೇಗ ಹೊರಟು ಮುಂಜಾನೆ ಬೆಂಗಳೂರು ನಗರವನ್ನು ತಡವಾಗಿ ತಲುಪಲಿದೆ. ಇದರಿಂದಾಗಿ ಜನರು ಕಛೇರಿ ಕೆಲಸಕ್ಕೆ ಹೋಗಲು ತೊಂದರೆ ಉಂಟಾಗಲಿದೆ. ಆದ್ದರಿಂದ ಹೆಚ್ಚುವರಿ ಬೋಗಿ ಬೇಡ ಎಂಬುದು ಸಮಿತಿ ಅಭಿಪ್ರಾಯವಾಗಿದೆ.
ಬೆಂಗಳೂರು ನಗರದಿಂದ ತಡವಾಗಿ ಹೊರಟು ಕರಾವಳಿಯನ್ನು ಬೇಗ ತಲುಪುವ ಹೊಸ ರೈಲಿಗಾಗಿ ಮೊದಲಿನಿಂದಲೂ ಬೇಡಿಕೆ ಇಡಲಾಗಿದೆ. ಆದ್ದರಿಂದ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಬೋಗಿ ಜೋಡಣೆ ಮಾಡುವ ಬದಲು ಹೊಸ ರೈಲು ಓಡಿಸಬೇಕು ಎಂದು ಸಮಿತಿ ಒತ್ತಾಯ ಮಾಡಿದೆ.
ಈ ಹಿಂದೆ ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಸುರತ್ಕಲ್, ಉಡುಪಿ ಮತ್ತು ಮುರುಡೇಶ್ವರ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಇಲ್ಲದೇ ಹೊಸ ರೈಲು ಓಡಿಸಿ ಎಂದು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಈಗ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಬೋಗಿ ಅಳವಡಿಕೆ ಮಾಡುವ ಬದಲು ಹೊಸ ರೈಲು ಓಡಿಸಿ ಎಂದು ಸಮಿತಿ ಇಲಾಖೆ ಮುಂದೆ ಬೇಡಿಕೆ ಇಟ್ಟಿದೆ.
ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಈ ಕುರಿತು ಮಾತನಾಡಿದ್ದು, 'ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಜನಪ್ರಿಯ, ಪ್ರಯಾಣಿಕ ಸ್ನೇಹಿ ಆಗಿರುವುದು ವೇಳಾಪಟ್ಟಿಯ ಕಾರಣಕ್ಕೆ. ಹೆಚ್ಚುವರಿ ಬೋಗಿ ಅಳವಡಿಕೆ ಮಾಡಿದರೆ 2 ರಿಂದ 3 ಗಂಟೆ ವಿಳಂಬವಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ವಿರೋಧಿಸುತ್ತಾರೆ. ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇರುವುದರಿಂದ ಹೊಸ ರೈಲು ಓಡಿಸುವುದು ಸೂಕ್ತ" ಎಂದು ಹೇಳಿದರು.
ಹೊಸ ರೈಲಿಗೆ ಬೇಡಿಕೆ; ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಬದಲು ಹೊಸ ರೈಲು ಓಡಿಸುವ ಜೊತೆಗೆ ಮಂಗಳೂರು ಸೆಂಟ್ರಲ್-ಬೆಂಗಳೂರು ಸಂಪರ್ಕಿಸಲು ಹೊಸ ರೈಲು ಬೇಕು ಎಂದು ಸಹ ಬೇಡಿಕೆ ಇಡಲಾಗಿದೆ. ಈಗಿರುವ ರೈಲುಗಳು ಪ್ರಯಾಣಿಕರ ದಟ್ಟಣೆಯಿಂದ ತುಂಬಿ ಹೋಗಿದ್ದು, ಹೊಸ ರೈಲು ಓಡಿಸುವ ಅನಿವಾರ್ಯತೆ ಇದೆ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.
ಹಬ್ಬ, ಸಾಲು-ಸಾಲು ರಜೆಗಳು, ಸರ್ಕಾರಿ ರಜೆಗಳ ಸಮಯದಲ್ಲಿ ನೂರಾರು ಜನರು ರೈಲಿನಲ್ಲಿ ಸಂಚಾರ ನಡೆಸುತ್ತಾರೆ. ಆದ್ದರಿಂದ ಮಂಗಳೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಎಲ್ಲಾ ರೈಲುಗಳು ಭರ್ತಿಯಾಗುತ್ತಿವೆ. ಆದ್ದರಿಂದ ಹೊಸ ರೈಲಿನ ಅಗತ್ಯವಿದೆ ಎಂದು ಪ್ರಯಾಣಿಕರು ವಿವರಣೆ ನೀಡಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ನೇರವಾಗಿ ಸುಮಾರು 30 ಸಾವಿರ ಜನರು ಎರಡು ತಿಂಗಳಿನಲ್ಲಿ ಸಂಚಾರ ನಡೆಸಿದ್ದಾರೆ ಎಂದು ಶ್ರೀಕರ ಪುತ್ತೂರು ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು, ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು ಏಕೆ ಬೇಕು? ಎಂದು ಇಲಾಖೆಗೆ ಅಂಕಿ-ಅಂಶಗಳ ಸಮೇತ ಮನವಿ ಮಾಡಿದ್ದಾರೆ.












Click it and Unblock the Notifications