ಉತ್ತರ ಕರ್ನಾಟಕ-ಎಲೆಕ್ಟ್ರಾನಿಕ್ ಸಿಟಿ ಪಲ್ಲಕ್ಕಿ ಬಸ್; ವೇಳಾಪಟ್ಟಿ, ದರ
ಬೆಂಗಳೂರು, ಜನವರಿ 24: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸಲು ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.
ಇದೇ ಮೊದಲ ಬಾರಿಗೆ ವಾ.ಕ.ರ.ಸಾ.ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗ ರಾಮದುರ್ಗ-ಬೆಂಗಳೂರು-ಎಲೆಕ್ಟ್ರಾನಿಕ್ ಸಿಟಿ ನಡುವೆ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದ್ದು, ದರ, ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಪ್ರಥಮ ಬಾರಿಗೆ ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ತನಕ ನಾನ್ ಎಸಿ ಸ್ಲೀಪರ್ ನೂತನ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬಸ್ ವೇಳಾಪಟ್ಟಿ, ದರ: ರಾಮದುರ್ಗ-ಬೆಂಗಳೂರು-ಎಲೆಕ್ಟ್ರಾನಿಕ್ ಸಿಟಿ ನಡುವಿನ ಬಸ್ ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮೂಲಕ ಸಂಚಾರ ನಡೆಸಲಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಸ್ ರಾಮದುರ್ಗವನ್ನು 20:00ಕ್ಕೆ ಬಿಡಲಿದೆ. ಬೆಂಗಳೂರಿಗೆ 07:00ಗೆ ತಲುಪಲಿದೆ. ಎಲೆಕ್ಟ್ರಾನಿಕ್ ಸಿಟಿಗೆ 07:30ಕ್ಕೆ ತಲುಪಲಿದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.
ಎಲೆಕ್ಟ್ರಾನಿಕ್ ಸಿಟಿ ಇಂದ 20:45ಕ್ಕೆ ಹೊರಡುವ ಬಸ್, ಬೆಂಗಳೂರು 21:15 ಮತ್ತು ರಾಮದುರ್ಗಕ್ಕೆ 07:30ಕ್ಕೆ ತಲುಪಲಿದೆ. ಈ ಮಾರ್ಗದ ಪ್ರಯಾಣ ದರ 1,100 ರೂ. ಪ್ರಯಾಣದರ ನಿಗದಿ ಮಾಡಲಾಗಿದೆ.
ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರು ನಗರ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ನಡೆಸುವ ಜನರು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಹುಬ್ಬಳ್ಳಿ-ಶಿರಡಿ ನಡುವೆ ಪಲ್ಲಕ್ಕಿ ನಿವಾಸ; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ-ಶಿರಡಿ ನಡುವೆ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮೂಲಕ ಶಿರಡಿಯನ್ನು ತಲುಪಲಿದೆ. 1280 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ಈ ಬಸ್ ಹುಬ್ಬಳ್ಳಿಯನ್ನು 20:88ಕ್ಕೆ ಬಿಡಲಿದ್ದು, ಶಿರಡಿಯನ್ನು 08:44ಕ್ಕೆ ತಲುಪಲಿದೆ. ಶಿರಡಿಯಿಂದ 20:00ಕ್ಕೆ ಹೊರಡಲಿದ್ದು, ಹುಬ್ಬಳ್ಳಿಗೆ 07;00ಕ್ಕೆ ತಲುಪಲಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ 7760991682/ 7760991688 ಸಂಖ್ಯೆಗೆ ಕರೆ ಮಾಡಬಹುದು.
ಕರ್ನಾಟಕ ಸರ್ಕಾರ 2023ರ ಅಕ್ಟೋಬರ್‌ನಲ್ಲಿ 'ಪಲ್ಲಕ್ಕಿ' ಮಾದರಿಯ ನೂತನ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 10 ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ವಿವಿಧ ಮಾರ್ಗದಲ್ಲಿ ಈ ಬಸ್‌ಗಳನ್ನು ಓಡಿಲಾಗುತ್ತದೆ.
ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಈ ಬಸ್‌ಗಳಿಗೆ 'ಪಲ್ಲಕ್ಕಿ' ಎಂಬ ಹೆಸರು ನೀಡಿದ್ದಾರೆ. 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್‌ಲೈನ್ ಅನ್ನು ಇದಕ್ಕೆ ನೀಡಲಾಗಿದೆ. 30 ಸೀಟುಗಳ ಈ ಬಸ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.












Click it and Unblock the Notifications