ಪ್ರವಾಸಿಗರಿಗೆ ಸಿಹಿಸುದ್ದಿ; ಹುಬ್ಬಳ್ಳಿ-ಜೋಗ ನಡುವೆ ವಿಶೇಷ ಬಸ್, ದರ
ಹುಬ್ಬಳ್ಳಿ, ಜುಲೈ 09; ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಪ್ರವಾಸಿ ತಾಣಗಳಿಗೆ ಜೀವಕಳೆ ಬಂದಿದೆ. ಮಳೆಗಾಲದಲ್ಲಿ ಪ್ರವಾಸ ಹೋಗುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ಪ್ರವಾಸಿಗರ ಅನುಕೂಲಕ್ಕಾಗಿ ಹುಬ್ಬಳ್ಳಿ-ಜೋಗ ಜಲಪಾತ ನಡುವೆ ವಿಶೇಷ ಬಸ್ ಓಡಿಸುತ್ತಿದೆ. ಜುಲೈ 9ರ ಭಾನುವಾರದಿಂದ ಈ ಸೇವೆ ಆರಂಭಿಸಲಾಗಿದೆ.

ಹುಬ್ಬಳ್ಳಿ ಮತ್ತು ಶಿವಮೊಗ್ಗದ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತದ ನಡುವೆ ವಿಶೇಷ ಐಷಾರಾಮಿ ಬಸ್ ಸಂಚಾರ ನಡೆಸಲಿದೆ. ಪ್ರತಿ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ಜೋಗಕ್ಕೆ ರಾಜಹಂಸ ಹಾಗೂ ಐರಾವತ ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಸಮಯ ಮತ್ತು ದರ ಪಟ್ಟಿ; ಹುಬ್ಳಳ್ಳಿ-ಜೋಗ ಫಾಲ್ಸ್ ನಡುವಿನ ವೋಲ್ವೋ ಮಲ್ಟಿ ಆಕ್ಸೆಲ್ ಸಾರಿಗೆ ಸೇವೆಗೆ 'ಶ್ರೀ ಶಿರಸಿ ಮಾರಿಕಾಂಬ ದೇವಿ ದರ್ಶನ' ಎಂದು ಹೆಸರಿಡಲಾಗಿದೆ. ಪ್ರತಿ ಭಾನುವಾರ ಹುಬ್ಬಳ್ಳಿಯಿಂದ ಜೋಗಕ್ಕೆ ವಿಶೇಷ ಬಸ್ ಸಂಚಾರ ನಡೆಸುತ್ತದೆ. ಪ್ರಯಾಣ ದರ 600 ರೂ.ಗಳು.
ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಬಸ್ 12 ಗಂಟೆಗೆ ಜೋಗ ಜಲಪಾತ ತಲುಪುತ್ತದೆ. ಜೋಗದಿಂದ 5 ಗಂಟೆಗೆ ಹೊರಡುವ ಬಸ್ 9 ಗಂಟೆಗೆ ಹುಬ್ಬಳ್ಳಿಗೆ ತಲುಪಲಿದೆ. ಪ್ರವಾಸ ಹೋಗುವ ಆಸಕ್ತರು ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 7760991682/ 7760991674 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಪ್ರತಿ ಭಾನುವಾರ ಹುಬ್ಬಳ್ಳಿಯಿಂದ 'ಶ್ರೀ ಶಿರಸಿ ಮಾರಿಕಾಂಬಾ ದೇವಿ ದರ್ಶನ' ಎಂಬ ಹೆಸರಿನಲ್ಲಿ ರಾಜಹಂಸ ಬಸ್ ಸೇವೆ ಆರಂಭಿಸಲಾಗಿದೆ. ಹುಬ್ಬಳ್ಳಿ-ಜೋಗ ಜಲಪಾತವನ್ನು ಈ ಬಸ್ ಸಂಪರ್ಕಿಸಲಿದೆ. ಈ ಬಸ್ ಪ್ರಯಾಣ ದರ 450 ರೂ.ಗಳು ಎಂದು ನಿಗದಿ ಮಾಡಲಾಗಿದೆ.
ಈ ಬಸ್ ಹುಬ್ಬಳ್ಳಿಯಿಂದ ಬೆಳಗ್ಗೆ 7.45ಕ್ಕೆ ಹೊರಡುತ್ತದೆ. ಜೋಗ ಫಾಲ್ಸ್ ಅನ್ನು 12 ಗಂಟೆಗೆ ತಲುಪುತ್ತದೆ. 17:00 ಗಂಟೆಗೆ ಜೋಗದಿಂದ ಹೊರಟು 21:30ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕರ್ನಾಟಕದಲ್ಲಿ 'ಶಕ್ತಿ' ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವಿದೆ. ಆದರೆ ಐಷಾರಾಮಿ ಬಸ್‌ಗಳಿಗೆ ಇದು ಅನ್ವಯವಾಗುವುದಿಲ್ಲ. ಆದ್ದರಿಂದ ಮಹಿಳೆಯರು ಸಂಪೂರ್ಣ ದರ ನೀಡಿ ಈ ಬಸ್‌ಗಳಲ್ಲಿ ಸಂಚಾರ ನಡೆಸಬೇಕು.
ಕಳೆದ ಮುಂಗಾರು ಋತುವಿನಲ್ಲಿಯೂ ಸಹ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಿಂದ ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ಪ್ರವಾಸಿ ಪ್ಯಾಕೇಜ್ ಅಡಿ ಬಸ್ ಸಂಚಾರ ನಡೆಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ದರಿಂದ ಈ ಬಾರಿಯೂ ಬಸ್ ಓಡಿಸಲಾಗುತ್ತಿದೆ.












Click it and Unblock the Notifications