ಬೆಳಗಾವಿ-ಪಣಜಿ ಹೆದ್ದಾರಿ ಕಾಮಗಾರಿ ಮುಗಿಸಲು ಖಡಕ್ ಸೂಚನೆ!
ಬೆಳಗಾವಿ, ಜನವರಿ 01; ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಪೂರ್ಣಗೊಳಿಸಲು ಎನ್‌ಹೆಚ್‌ಎಐ ಮೂರು ತಿಂಗಳ ಗಡುವು ನೀಡಿದೆ. ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಉತ್ತರ ಕನ್ನಡದ ಅನ್ಮೋಡ್ ಮೂಲಕ ಸಾಗುವ ಬೆಳಗಾವಿ-ಪಣಜಿ ರಸ್ತೆಯ ಕಾಮಗಾರಿಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಡುವು ನೀಡಿದೆ.

ಕೇಂದ್ರ ಭೂ ಸಾರಿಗೆ ಸಚಿವಾಲಯದ ಸೂಚನೆಯಂತೆ ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಭುವನೇಶ್ವರ್ ಕುಮಾರ್ ಬೆಳಗಾವಿ-ಪಣಜಿ ವಯಾ ಅನ್ಮೋಡ್ ರಸ್ತೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ತಮ್ಮ ಕಛೇರಿಯಲ್ಲಿ ಅಧಿಕಾರಿಗಳಿಂದ ಭುವನೇಶ್ವರ್ ಕುಮಾರ್ ಬೆಳಗಾವಿಯ ಖಾನಾಪುರದ ಹೊನಕಲ್ ಮತ್ತು ಉತ್ತರ ಕನ್ನಡದ ಅನ್ಮೋಡ್ ನಡುವೆ ನಡೆಯುತ್ತಿರುವ ಕಾಮಗಾರಿಯ ಕುರಿತು ಮಾಹಿತಿ ಪಡೆದರು. ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಪಡೆದವರಿಗೆ ಗಡುವು ನೀಡಲು ಸೂಚಿಸಿದರು.
ಸಚಿವರಿಗೆ ಮನವಿ; ಬೆಳಗಾವಿ-ಪಣಜಿ ವಯಾ ಅನ್ಮೋಡ್ ರಸ್ತೆಯ ಕಾಮಗಾರಿ ವಿಳಂಬದ ಕುರಿತು ಮಹಾರಾಷ್ಟ್ರದ ಶಾಸಕರು, ಚೇಂಬರ್ ಆಫ್ ಕಾಮರ್ಸ್ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗಮನ ಸೆಳೆದಿದ್ದರು. ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದರು.
ಬೆಳಗಾವಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಕ್ಕೆ ಪ್ರಮುಖ ಕೇಂದ್ರವಾಗಿದೆ. ಆದರೆ ಮೂರು ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ವಿನ್ಯಾಸ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಿಳಂಬವಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದರು.
ಈ ಹಿಂದೆ ಅಧಿಕಾರಿಗಳು ನೀಡಿದ್ದ ಮಾಹಿತಿ ಪ್ರಕಾರ ಈ ರಸ್ತೆ ಕಾಮಗಾರಿ 2024ರ ಮೇ ನಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಅಪೂರ್ಣ ಕಾಮಗಾರಿಯ ಕಾರಣ ಒಂದು ಮಾರ್ಗದಲ್ಲಿ ಮಾತ್ರ ವಾಹನ ಸಂಚಾರ ನಡೆಸುತ್ತಿವೆ. ಇದರಿಂದಾಗಿ ತೊಂದರೆಯಾಗುತ್ತಿದೆ.
ಬೆಳಗಾವಿಯ ಖಾನಾಪುರದಿಂದ ರಾಮನಗರ ಮಾರ್ಗವಾಗಿ ಅನ್ಮೋಡ್ ಮೂಲಕ ದ್ವಿಪಥ ನಿರ್ಮಾಣ ಮಾಡುವ ಕಾಮಗಾರಿ ಆರಂಭವಾಗಿದ್ದು, ನಾಲ್ಕೂವರೆ ವರ್ಷಗಳ ಹಿಂದೆ. 52 ಕಿ. ಮೀ. ಮಾರ್ಗ ಇನ್ನೂ ಸಹ ಪೂರ್ಣಗೊಂಡಿಲ್ಲ. ಕಾಮಗಾರಿಗೆ ಹಲವು ಅಡೆತಡೆಗಳು ಎದುರಾದವು ಎಂದು ಟೆಂಡರ್ ಪಡೆದ ಸಂಸ್ಥೆ ನೆಪಗಳನ್ನು ಹೇಳುತ್ತಿದೆ.
2023ರ ಫೆಬ್ರವರಿಯಲ್ಲಿ ಸಚಿವ ನಿತಿನ್ ಗಡ್ಕರಿ ಬೆಳಗಾವಿ-ಪಣಜಿ ವಯಾ ಅನ್ಮೋಡ್ ರಸ್ತೆಯ ಕಾಮಗಾರಿಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದರು. ಆದರೆ ಕಾಮಗಾರಿ ಆಮೆಗತಿಯಲ್ಲಿಯೇ ಸಾಗುತ್ತಿದೆ. ಇದಕ್ಕೆ ಗೋವಾ ರಾಜ್ಯ ಸಹ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಖಾನಾಪುರ ತಾಲೂಕಿನಲ್ಲಿ ಬರುವ ಅರಣ್ಯ ಪ್ರದೇಶದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗುತ್ತಿಗೆ ಪಡೆದ ಕಂಪನಿ ಹೇಳಿತ್ತು. ಅರಣ್ಯ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕುರಿತು ಪರಿಸರವಾದಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಕಾನೂನು ಸಮಸ್ಯೆಗಳು ನಿವಾರಣೆಯಾಗಿದ್ದು, ಕಾಮಗಾರಿ ಚುರುಕಾಗಬೇಕಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಈ ರಸ್ತೆ ಯೋಜನೆ ಬಗ್ಗೆ ಚರ್ಚೆ ನಡೆದಿತ್ತು. ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಯೋಜನೆ ಬಗ್ಗೆ ಮಾತನಾಡಿದ್ದರು. ಹಳೆಯ ಗುತ್ತಿಗೆದಾರರನ್ನು ಬದಲಾಯಿಸಿ ಹೊಸ ಗುತ್ತಿಗೆದಾರರಿಗೆ ಯೋಜನೆಯನ್ನು ನೀಡಲಾಗಿದೆ, ಜೊತೆ ನಿರಂತರವಾಗಿ ಸಭೆಯನ್ನು ನಡೆಸುತ್ತಾ ಯೋಜನೆಯ ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದ್ದರು.












Click it and Unblock the Notifications