ಕರ್ನಾಟಕದಲ್ಲಿ ಹೋಂ ಸ್ಟೇಗಳಿಗೆ ಬರಲಿದೆ ನೂತನ ನೀತಿ
ಮಡಿಕೇರಿ, ಅಕ್ಟೋಬರ್ 26: "ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ಒಂದು ನೀತಿ ಬೇಕಿದೆ ಎಂದು ಹಲವು ದಶಕಗಳಿಂದ ಬೇಡಿಕೆ ಕೇಳಿ ಬರುತ್ತಿದೆ. ಈ ಹಿನ್ನೆಲೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಹೋಂಸ್ಟೇಗಳಿಗೆ ಹೊಸ ನೀತಿಯನ್ನು ಸರ್ಕಾರ ಘೋಷಿಸಲಿದೆ" ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಡಾ. ಕೆ. ವಿ. ರಾಜೇಂದ್ರ ಹೇಳಿದ್ದಾರೆ. ಹೋಂಸ್ಟೇಗಳಿಗೆ ಸಹಕಾರ, ಪ್ರೋತ್ಸಾಹ ನೀಡಲಾಗುವುದು. ಆ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೂ ಸರ್ಕಾರ ಉತ್ತೇಜನ ನೀಡಲಿದೆ.
ಮಡಿಕೇರಿ ನಗರದ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ನಡೆದ 'ಕನೆಕ್ಟ್ ಕರ್ನಾಟಕ-2024'ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಕೆ. ವಿ. ರಾಜೇಂದ್ರ ಮಾತನಾಡಿದರು. "ರಾಜ್ಯದಲ್ಲಿ ಹೋಂ ಸ್ಟೇ ನಿರ್ವಹಣೆ ಸಂಬಂಧ ನೂತನ ನೀತಿಯನ್ನು ಮುಂದಿನ ಜನವರಿ-ಫೆಬ್ರವರಿಯಲ್ಲಿ ಪ್ರಕಟಿಸಲಾಗುತ್ತದೆ. ಮಾಲೀಕರು ವಾಸಿಸುವ ಸ್ಥಳದಲ್ಲಿಯೇ ಹೋಂಸ್ಟೇಗಳು ಇರುವುದರಿಂದ ಅವುಗಳ ನಿರ್ವಹಣೆ, ನೋಂದಣಿ ಪ್ರಕ್ರಿಯೆ, ಎನ್‍ಒಸಿ ಪಡೆಯುವುದು ಮತ್ತಿತರ ಮಾರ್ಗಸೂಚಿಯನ್ನು ಹೊಸ ಹೋಸ್ಟೇ ನೀತಿಯಲ್ಲಿ ಪ್ರಕಟಿಸಲಾಗುವುದು" ಎಂದು ಹೇಳಿದರು.

"ಹೋಂಸ್ಟೇಗಳನ್ನು ನೋಂದಣಿ ಮಾಡಿಕೊಂಡು ಪ್ರವಾಸಿಗರಿಗೆ ಉತ್ತಮ ಮೂಲ ಸೌಲಭ್ಯ ಕಲ್ಪಿಸಬೇಕು. ಅಂತಹ ಹೋಂಸ್ಟೇಗಳಿಗೆ ಆದಷ್ಟು ಸಹಕಾರ, ಪ್ರೋತ್ಸಾಹ ನೀಡಲಾಗುವುದು. ಆ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಲ್ಲಿ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಯುವಜನರಿಗೆ ಉದ್ಯೋಗ ಕಲ್ಪಿಸಲು ಸಹ ಒತ್ತು ನೀಡಲಾಗುತ್ತದೆ" ಎಂದು ತಿಳಿಸಿದರು.
ಉದ್ಯೋಗ ಕಲ್ಪಿಸುವಲ್ಲಿ ಪ್ರಮುಖ ಪಾತ್ರ: ಡಾ. ಕೆ. ವಿ. ರಾಜೇಂದ್ರ ಮಾತನಾಡಿ, "ಸ್ಥಳೀಯವಾಗಿ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಪ್ರವಾಸೋದ್ಯಮ ಸಾಕಷ್ಟು ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪ್ರತಿ ಜಿಲ್ಲೆಯಲ್ಲೂ ಆಯೋಜಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸರ್ಕಾರಕ್ಕೂ ಆದಾಯ ಬರಲಿದ್ದು, ತೆರಿಗೆ ಸಂಗ್ರಹವಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ. ಆ ನಿಟ್ಟಿನಲ್ಲಿ ಯುವಜನರಿಗೆ ಅವಕಾಶಗಳು ಸಿಗಲಿವೆ" ಎಂದರು.
"ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆಗಳು, ಪ್ರವಾಸೋದ್ಯಮ ನೀತಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರಚಾರಾಂದೋಲನ, ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಪ್ರವಾಸಿ ಕ್ಷೇತ್ರದಲ್ಲಿ ತೊಡಗಿರುವ ಪಾಲುಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಸ್ತುತ ರಾಜ್ಯದಲ್ಲಿನ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಿ ರಾಜ್ಯದ ಎಲ್ಲಾ ಪ್ರವಾಸಿ ಸಹಭಾಗಿದಾರರನ್ನು ಒಗ್ಗೂಡಿಸುವ ಸಂಬಂಧ ಕನೆಕ್ಟ್ ಕರ್ನಾಟಕ-2024' ನಡೆಸಲಾಗುತ್ತಿದೆ" ಎಂದು ಹೇಳಿದರು.
ಸಂವಾದದಲ್ಲಿ ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಪ್ರತಿನಿಧಿಯೊಬ್ಬರು ಮಾತನಾಡಿ, "ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಲ್ಲಿ ಹಲವು ಉತ್ತೇಜನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಸರು ನೋಂದಾಯಿಸಲು ಮುಂದಾಗಬೇಕಿದೆ. ಕೊಡಗು ಜಿಲ್ಲೆಯಲ್ಲಿ 2003ರಲ್ಲಿ ಹೋಂಸ್ಟೇಗಳ ಪರಿಕಲ್ಪನೆ ಆರಂಭವಾಯಿತು. ಜಿಲ್ಲೆಯಲ್ಲಿ 2200ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿದ್ದು, ಹೋಂಸ್ಟೇಗಳಿಗೆ ಒಂದು ನೀತಿ ಜಾರಿಗೊಳಿಸಬೇಕು" ಎಂದು ಸಲಹೆ ನೀಡಿದರು.
"ಅನಧಿಕೃತ ಹೋಂಸ್ಟೇಗಳು ಹೆಸರು ನೋಂದಣಿಗೆ ಮುಂದಾಗಲು ಹೆಚ್ಚಿನ ಉತ್ತೇಜನ ನೀಡಬೇಕು. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನೆಹರು ಮಂಟಪ, ಗದ್ದಿಗೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕಿದೆ. ಜೊತೆಗೆ ವ್ಯೂ ಪಾಯಿಂಟ್‍ಗಳನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕು. ರಸ್ತೆ ಬದಿ ಕಸ ಬಿಸಾಡುವುದನ್ನು ತಡೆಯಬೇಕಿದೆ. ಮಾಂದಲ್ ಪಟ್ಟಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಬೇಕಿದೆ. ಮಲ್ಲಳ್ಳಿ ಮತ್ತು ಇರ್ಪು ಜಲಪಾತವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ" ಎಂದು ತಿಳಿಸಿದರು.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, "ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ಕಾಫಿ ಟೇಬಲ್ ಬುಕ್ ಅನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು. ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಸರುವಾಸಿಯಾಗಿದೆ. ಇಲ್ಲಿನ ರಾಜಾಸೀಟು, ಮಾಂದಲ್ ಪಟ್ಟಿ ಪ್ರವಾಸಿ ಸ್ಥಳಗಳು ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಜಲಪಾತಗಳು, ಕಾಫಿ, ಆನೆ ಶಿಬಿರ, ನಗರದ ಕೋಟೆ ಸಹ ಪ್ರಸಿದ್ಧ ತಾಣವಾಗಿದೆ" ಎಂದರು.












Click it and Unblock the Notifications