Vande Bharat Express: ಅತಿ ಉದ್ದದ ಮಾರ್ಗದ ವಂದೇ ಭಾರತ್ ರೈಲು ಸೇವೆ ವಿಸ್ತರಣೆ
ಬೆಂಗಳೂರು, ನವೆಂಬರ್ 12: ಭಾರತೀಯ ರೈಲ್ವೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೆಹಲಿ-ಪಾಟ್ನಾ ಮಾರ್ಗದಲ್ಲಿ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆರಂಭಿಸಿತ್ತು. ದೀಪಾವಳಿ ಮತ್ತು ಛತ್ ಪೂಜೆಯ ಅಂಗವಾಗಿ ಈ ರೈಲು ಸೇವೆಗೆ ಚಾಲನೆ ನೀಡಲಾಗಿತ್ತು. ಇದು ದೇಶದ ಅತಿ ಉದ್ದವಾದ ಮಾರ್ಗದ ವಂದೇ ಭಾರತ್ ರೈಲಾಗಿದೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನಲೆಯಲ್ಲಿ ಈ ರೈಲು ಸೇವೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ನವೆಂಬರ್ 30ರ ತನಕ ನವದೆಹಲಿ-ಪಾಟ್ನಾ ನಡುವಿನ ವಂದೇ ಭಾರತ್ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಹಬ್ಬದ ಅಂಗವಾಗಿ ಮಾತ್ರ ಈ ಸೇವೆಯನ್ನು ಆರಂಭಿಸಲಾಗಿತ್ತು. ಈಗ ರೈಲ್ವೆ ಇಲಾಖೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ.

ಈ ಮಾರ್ಗದಲ್ಲಿ ರೈಲು ನಂಬರ್ 02252/ 02251 ರೈಲುಗಳು ಸಂಚಾರವನ್ನು ನಡೆಸುತ್ತವೆ. ದೆಹಲಿ-ಪಾಟ್ನಾ ಮಾರ್ಗ ದೇಶದಲ್ಲೇ ವಂದೇ ಭಾರತ್ ರೈಲು ಸಂಚಾರ ನಡೆಸುವ ಅತಿ ದೂರದ ಮಾರ್ಗವಾಗಿದೆ. ಒಟ್ಟು 994 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರವನ್ನು ನಡೆಸುತ್ತದೆ. ಈ ದೂರವನ್ನು ರೈಲು 11 ಗಂಟೆ 35 ನಿಮಿಷಗಳಲ್ಲಿ ಕ್ರಮಿಸಲಿದೆ.
ವೇಳಾಪಟ್ಟಿ ದರ: ದೆಹಲಿ-ಪಾಟ್ನಾ ವಂದೇ ಭಾರತ್ ರೈಲಿನ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ. ಆದರೆ ರೈಲಿನ ವೇಳಾಪಟ್ಟಿ, ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ದೆಹಲಿ-ಪಾಟ್ನಾ ನಡುವೆ ವಿಶೇಷ ವಂದೇ ಭಾರತ್ ರೈಲು ಬುಧವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ. ಪಾಟ್ನಾ-ದೆಹಲಿ ನಡುವೆ ರೈಲು ಸೋಮವಾರ, ಗುರುವಾರ ಮತ್ತು ಶನಿವಾರ ಸಂಚಾರವನ್ನು ಮಾಡಲಿದೆ.
ರಾಷ್ಟ್ರದ ರಾಜಧಾನಿ ದೆಹಲಿ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸಂಪರ್ಕಿಸುವ ಪ್ರಾಯೋಗಿಕ ರೈಲನ್ನು ಕಾಯಂಗೊಳಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಈಗ ದೆಹಲಿ-ಪಾಟ್ನಾ ಮಾರ್ಗದ ವಂದೇ ಭಾರತ್ ರೈಲು ಸಂಚಾರವನ್ನು ನವೆಂಬರ್ 30ರ ತನಕ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.
ಇಲಾಖೆಯ ಮಾಹಿತಿ ಪ್ರಕಾರ ದೆಹಲಿಯಿಂದ ವಿಶೇಷ ವಂದೇ ಭಾರತ್ ರೈಲು ಬೆಳಗ್ಗೆ 8.25ಕ್ಕೆ ಹೊರಟು ರಾತ್ರಿ 8 ಗಂಟೆಗೆ ಪಾಟ್ನಾವನ್ನು ತಲುಪಲಿದೆ. ಪಾಟ್ನಾದಿಂದ ಬೆಳಗ್ಗೆ 7.30ಕ್ಕೆ ಹೊರಟು ಸಂಜೆ 7 ಗಂಟೆಗೆ ದೆಹಲಿಗೆ ತಲುಪುತ್ತದೆ.
ದೇಶದ ಅತಿ ಉದ್ದದ ಮಾರ್ಗದ ವಂದೇ ಭಾರತ್ ರೈಲಿನ ದರ ಹೀಗಿದೆ. ದೆಹಲಿ-ಪಾಟ್ನಾ ಮಾರ್ಗದಲ್ಲಿ ಎಸಿ ಚೇರ್ ಕಾರ್‌ಗೆ 2,575 ರೂ. ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ಗೆ 4,655 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ಈ ರೈಲಿನ ನಿಲುಗಡೆಗಳಲ್ಲಿ ಸಹ ಯಾವುದೇ ಬದಲಾವಣೆ ಮಾಡಿಲ್ಲ. ರೈಲು ಆರಾ, ಬಕ್ಸರ್, ದೀನ್‌ದಯಾಳ್ ಉಪಾಧ್ಯಾಯ ನಿಲ್ದಾಣ, ಪ್ರಯಾಗ್ ರಾಜ್ ಮತ್ತು ಕಾನ್ಪುರದಲ್ಲಿ ನಿಲುಗಡೆಯನ್ನು ಹೊಂದಿದೆ. ನವೆಂಬರ್ 30ರ ಬಳಿಕ ಮತ್ತೆ ರೈಲು ಸೇವೆ ವಿಸ್ತರಣೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications