Namma metro: ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ಮೆಟ್ರೋ: 2025ರ ವೇಳೆಗೆ ಕಾಮಗಾರಿ ಪೂರ್ಣ
ಬೆಂಗಳೂರು, ಏಪ್ರಿಲ್, 10: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಲೇ ಇದೆ. ಜನದಟ್ಟಣೆ ತಡೆಯುವ ಹಿನ್ನೆಲೆಯಲ್ಲಿ, ನಗರದಲ್ಲಿ ಮೆಟ್ರೋ ಸಂಚಾರವನ್ನು ವಿಸ್ತರಣೆ ಮಾಡುತ್ತಲೇ ಇದ್ದಾರೆ. ಪ್ರತಿನಿತ್ಯವೂ ಸಮಯ ಉಳಿಯತಾಯ ಮಾಡಲು ಹೆಚ್ಚಿನ ಜನರು ಮೆಟ್ರೋದಲ್ಲಿಯೇ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಆದ್ದರಿಂದ ಬಿಎಂಆರ್‌ಸಿಎಲ್ ಮೆಟ್ರೋ ಮಾರ್ಗವನ್ನು ವಿಸ್ತರಣೆ ಮಾಡುತ್ತಲೇ ಬಂದಿದ್ದು, ಇದೀಗ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ.
ನಗರದ ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕಾಮಗಾರಿಯು ಈಗಾಗಲೇ ಶೇಕಡಾ 25ರಷ್ಟು ಮುಕ್ತಾಯ ಆಗಿದೆ. ಇನ್ನು 2025ರ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಈ ಮಾರ್ಗವು ಮುಕ್ತವಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ತಲೆ ಎತ್ತಲಿರುವ 30 ನಿಲ್ದಾಣಗಳು
58.19 ಕಿಲೋ ಮೀಟರ್ ಮಾರ್ಗದಲ್ಲಿ ಒಟ್ಟು 30 ನಿಲ್ದಾಣಗಳು ತಲೆ ಎತ್ತಲಿವೆ. ಈ ಎಲ್ಲಾ ನಿಲ್ದಾಣಗಳು ಎತ್ತರಿಸಿದ ನಿಲ್ದಾಣ ಆಗಿರುವುದರಿಂದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಶೇಕಡಾ 25ರಷ್ಟು ಕಾಮಗಾರಿ ಮುಕ್ತಯ ಆಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಮಗಾರಿಯು ಎರಡು ಹಂತದಲ್ಲಿ ನಡೆಯುತ್ತಿದ್ದು, ಮೊದಲ ಹಂತದಲ್ಲಿ ರೇಷ್ಮೆ ಸಂಸ್ಥೆಯಿಂದ-ಕೆ.ಆರ್. ಪುರವರೆಗೆ 13 ನಿಲ್ದಾಣ, ಎರಡನೇ ಹಂತದಲ್ಲಿ ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ 17 ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ.
ಕಾಮಗಾರಿ ವಿವರ ಇಲ್ಲಿದೆ
ರೇಷ್ಮೆ ಸಂಸ್ಥೆಯಿಂದ -ಕೋಡಿ ಬೀಸನಹಳ್ಳಿವರೆಗೆ (ದೇವರಬೀಸನಹಳ್ಳಿ) ಶೇಕಡಾ 40ರಷ್ಟು ಪಿಲ್ಲರ್ ಕಾಮಗಾರಿ ಪೂರ್ಣಗೊಂಡಿದ್ದು, ಶೇಕಡಾ 14 ಯು-ಗರ್ಡರ್ ಅಳವಡಿಕೆ ಮಾಡಲಾಗಿದೆ. ಕೋಡಿಬೀಸನಹಳ್ಳಿಯಿಂದ ಕೆ.ಆರ್.ಪುರದವರೆಗೆ ಶೇಕಡಾ 80ರಷ್ಟು ಪಿಲ್ಲರ್ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, ಶೇಕಡಾ 32ರಷ್ಟು ಯು ಗರ್ಡರ್ ಕೂಡ ಅಳವಡಿಕೆ ಮಾಡಲಾಗಿದೆ. ಶೇಕಡಾ 60ರಷ್ಟು ಪಿಲ್ಲರ್ ಕ್ಯಾಪ್ ಅಳವಡಿಕೆ ಕಾಮಗಾರಿ ಮುಗಿದಿದ್ದು, ಇನ್ನು ಆರು ತಿಂಗಳಿನಲ್ಲಿ ಈ ಮಾರ್ಗದ ಕಾಮಗಾರಿ ಮುಕ್ತಾಯವಾಗಲಿದೆ.
ಮತ್ತೊಂದೆಡೆ ಕೆ.ಆರ್.ಪುರದಿಂದ ಕೆಂಪಾಪುರದವರೆಗೆ ಕಾಮಗಾರಿ ತೀರಾ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ತಿರುವುಗಳಿವೆ. ಆದ್ದರಿಂದ ಕಾಮಗಾರಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಈ ಮಾರ್ಗದ ಶೇಕಡಾ 22ರಷ್ಟು ಪಿಲ್ಲರ್ ಕಾಮಗಾರಿ ಮುಗಿದಿದ್ದು, ಒಂದೂ ಯು-ಗರ್ಡರ್ ಅಳವಡಿಸಿಲ್ಲ. ಇದೇ ವೇಳೆ ಕೆಂಪಾಪುರದಿಂದ ಯಲಹಂಕ ವಾಯುನೆಲೆಯವರೆಗೆ ಹಾಗೂ ಯಲಹಂಕ ವಾಯುನೆಲೆಯಿಂದ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಶೇಕಡಾ 30ರಷ್ಟು ಪಿಲ್ಲರ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಯು-ಗರ್ಡರ್ ಅಳವಡಿಕೆ ಆಗಿಲ್ಲ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಹೃದಯ ಭಾಗದಿಂದ 35 ರಿಂದ 40 ಕಿಲೋ ಮೀಟರ್ ದೂರದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾಣ ನಿಲ್ದಾಣ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ರೇಷ್ಮೆ ಸಂಸ್ಥೆಯಿಂದ- ವಿಮಾನ ನಿಲ್ದಾಣದವರೆಗೆ ಮೆಟ್ರೊ ಮಾರ್ಗಕ್ಕೆ ಅಂದಾಜು 14,788 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ.
ಕಾಮಗಾರಿ ವಿಳಂಬ ಆಗಿದ್ದೇಕೆ?
ಜನವರಿಯಲ್ಲಿ ನಾಗವಾರ ರಿಂಗ್ ರೋಡ್‌ನ ಎಚ್‌ಬಿಆರ್ ಲೇಔಟ್ ಬಳಿ ಮೆಟ್ರೊ ಪಿಲ್ಲರ್‌ನ ಕಬ್ಬಿಣದ ಸರಳುಗಳ ಗುಚ್ಛ ದಿಢೀರ್ ಕುಸಿದು ಬಿದ್ದ ಪರಿಣಾಮ 35 ವರ್ಷದ ತೇಜಸ್ವಿನಿ ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂರು ತಿಂಗಳು ಇಲ್ಲಿನ ಕಾಮಗಾರಿ ಸ್ಥಗಿತವಾಗಿತ್ತು.
ದೊಡ್ಡಜಾಲದಲ್ಲಿ ರೈಲ್ವೆ ಕ್ರಾಸಿಂಗ್ ಅನುಮತಿ ವಿಳಂಬ, ವಾಯುನೆಲೆ ಬಳಿ ಗೇಲ್ ಗ್ಯಾಸ್ ಪೈಪ್‌ಲೈನ್ ಸ್ಥಳಾಂತರ, ಯಲಹಂಕ ವಾಯು ನೆಲೆಯಿಂದ ಭೂಮಿ ಹಸ್ತಾಂತರಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡಿರುವುದು, ಜಕ್ಕೂರು ಪ್ಲಾಂಟೇಶನ್ ಸಮೀಪ ಹಲವು ತಿಂಗಳ ಕಾಮಗಾರಿ ಸ್ಥಗಿತ, ಹೆಬ್ಬಾಳದ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಈ ಎಲ್ಲಾ ಕಾರಣದಿಂದ ಕಾಮಗಾರಿ ನಿಧಾನಗತಿಗೆ ಕಾರಣವಾಗಿವೆ.
30 ಮೆಟ್ರೋ ನಿಲ್ದಾಣಗಳಿವು
1. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ
2. ದೊಡ್ಡಜಾಲ
3. ಬೆಟ್ಟಹಲಸೂರು
4. ಬಾಗಲೂರು ಅಡ್ಡರಸ್ತೆ
5. ಯಲಹಂಕ
6. ಜಕ್ಕೂರು ಅಡ್ಡರಸ್ತೆ
7. ಕೊಡಿಗೇಹಳ್ಳಿ
8. ಹೆಬ್ಬಾಳ
9. ಕೆಂಪಾಪುರ
10. ವೀರಣ್ಣ ಪಾಳ್ಯ
11. ನಾಗವಾರ
12. ಎಚ್‌ಬಿಆರ್ ಬಡಾವಣೆ
13. ಕಲ್ಯಾಣ ನಗರ
14. ಎಚ್‌ಆರ್‌ಬಿಆರ್ ಬಡಾವಣೆ
15. ಹೊರಮಾವು
16. ಚನ್ನಸಂದ್ರ
17. ಕಸ್ತೂರಿ ನಗರ
18. ಕೆ.ಆರ್.ಪುರ
19. ಮಹದೇವಪುರ
20. ಡಿಆರ್‌ಡಿಒ ಸಂಕೀರ್ಣ
21. ದೊಡ್ಡನೆಕ್ಕುಂದಿ
22. ಇಸ್ರೋ
23. ಮಾರತ್ತಹಳ್ಳಿ
24. ದೇವರಬೀಸನಹಳ್ಳಿ
25. ಕಾಡುಬೀಸನಹಳ್ಳಿ
26. ಬೆಳ್ಳಂದೂರು
27. ಇಬ್ಬಲೂರು
28. ಅಗರ
29. ಎಚ್‌ಎಸ್‌ಆರ್ ಲೇಔಟ್
30. ಸಿಲ್ಕ್ ಬೋರ್ಡ್
ಹೀಗೆ 30 ಕಡೆಗಳಲ್ಲಿ ಮೆಟ್ರೋ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದ್ದು, ಇದು 2025ರ ವೇಳೆಗೆ ಪೂರ್ಣವಾಗಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications