ಜುಲೈ 10ರಿಂದ ಆಗಸ್ಟ್ 9ರವರೆಗೆ ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ, ಸಮಯದ ವಿವರ ತಿಳಿಯಿರಿ
ಬೆಂಗಳೂರು, ಜುಲೈ, 07: ಜುಲೈ 10ರಿಂದ ಆಗಸ್ಟ್ 9ರವರೆಗೆ ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ ಆಗಲಿದೆ. ಹಾಗಾದರೆ ಯಾವ ಭಾಗದಲ್ಲಿ ಯಾವ ಸಮಯದಲ್ಲಿ ಮತ್ತು ಏಕೆ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ನೇರಳೆ ಮಾರ್ಗದಲ್ಲಿನ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ಸಂಪರ್ಕವನ್ನು ಕಲ್ಪಿಸಲು ಸಿಗ್ನಲಿಂಗ್ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಜುಲೈ 10ರಿಂದ ಆಗಸ್ಟ್ 09ರ ಬೆಳಗ್ಗೆ 5ರಿಂದ 7 ಗಂಟೆಯವರೆಗೆ ಬೈಯಪ್ಪನಹಳ್ಳಿ ಮತ್ತು ಎಸ್‌ವಿ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆಯ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ ಪ್ರಕಟಣೆ ಹೊರಡಿಸಿದೆ.

ಆದಾಗ್ಯೂ ಸ್ವಾಮಿ ವಿವೇಕಾನಂದ ಅಂದರೆ ಬೈಯಪ್ಪನಹಳ್ಳಿ ನಿಲ್ದಾಣದ ಮೊದಲು ಒಂದು ನಿಲ್ದಾಣ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ರೈಲು ಸೇವೆಗಳು ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಲಭ್ಯವಿರುತ್ತದೆ ಎಂದು ತಿಳಿಸಿದೆ.
ಬೆಳಗ್ಗೆ 7 ಗಂಟೆಯ ನಂತರ ಬೈಯ್ಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್ ಫೀಲ್ಟ್ ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ರೈಲು ಸೇವೆಗಳು ಎಂದಿನಂತೆ ರಾತ್ರಿ 11 ಗಂಟೆಯವರೆಗೆ ಲಭ್ಯವಿರಲಿದೆ. ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ನೀಡಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿರುವ 12 ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ಆರಂಭಿಸಿತ್ತು. ಈ ಮಾರ್ಗದಲ್ಲಿ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದಾಮಂಗಲ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ ಮಾರ್ಗಗಳಿವೆ.
ಹಾಗೆಯೇ ಕೆಂಗೇರಿಯಿಂದ ಬೈಯಪ್ಪನಹಳ್ಳಿಗೆ ಸಂಪರ್ಕ ವಿರುವ ರೈಲು ಸೇವೆಯನ್ನು ಕೆಆರ್ ಪುರಂವರೆಗೆ ಸಂಪರ್ಕ ಮಾಡಲು ಇನ್ನೂ ಮೂರ್ನಾಲ್ಕು ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು BMRCL ತಿಳಿಸಿತ್ತು. ಅದರಂತೆಯೇ ಈಗ ಕೆಆರ್‌ಪುರ ಮತ್ತು ಬೈಯಪ್ಪನಹಳ್ಳಿ ನಡುವೆ 2-3 ಕಿಲೋ ಮೀಟರ್ ಮಾರ್ಗದ ಸಿಗ್ನಲಿಂಗ್ ಕಾಮಗಾರಿ ಮಾಡಲು ಮುಂದಾಗಿದ್ದು, ಈ ಎರಡೂ ಮಾರ್ಗಗಳನ್ನು ಸಂಪರ್ಕ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications