ಮಡಿಕೇರಿ - ಸೋಮವಾರಪೇಟೆ - ಬೆಂಗಳೂರು ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ
ಮಡಿಕೇರಿ, ಜೂನ್. 14: ರಾಜ್ಯ ಸರ್ಕಾರ ರಾಜ್ಯದಲ್ಲಿ 100 ನಾನ್ ಎಸಿ ಅಶ್ವಮೇಧ ಕ್ಲಾಸಿಕ್ ಬಸ್‌ಗಳನ್ನು ರಸ್ತೆಗಿಳಿಸಿದೆ. 800 ಅಶ್ವಮೇಧ ಕ್ಲಾಸಿಕ್ ಬಸ್‌ಗಳನ್ನು ಬಿಡುವ ಸಾರಿಗೆ ಇಲಾಖೆಯ ಈ ಯೋಜನೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಹಲವು ಬಸ್‌ಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಇದರ ಜೊತೆಗೆ ಮಡಿಕೇರಿಯಿಂದ ಬೆಂಗಳೂರಿಗೆ ಅಶ್ವಮೇಧ ಬಸ್‌ಗಳನ್ನು ಬಿಡಲಾಗಿದೆ.
ಕರ್ನಾಟಕ ಸರ್ಕಾರದ ಬಸ್ ಸೇವೆಗಳಲ್ಲಿ ಒಂದಾದ ನೂತನ 'ಅಶ್ವಮೇಧ' ಬಸ್‌ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಗುರುವಾರ ಚಾಲನೆ ನೀಡಿದ್ದಾರೆ. ಈ ಬಸ್ ಮಡಿಕೇರಿ - ಸೋಮವಾರಪೇಟೆ - ಅರಕಲಗೋಡು - ಚೆನ್ನರಾಯಪಟ್ಟಣದ ಮೂಲಕ ಬೆಂಗಳೂರು ತಲುಪಲಿದೆ.

ಮಡಿಕೇರಿ- ಬೆಂಗಳೂರು ಅಶ್ವಮೇಧ ಬಸ್ ಶೆಡ್ಯೂಲ್
ಮಡಿಕೇರಿ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಿಂದ ಅಶ್ವಮೇಧ ಕ್ಲಾಸಿಕ್ ಬಸ್ ಮಡಿಕೇರಿ - ಸೋಮವಾರಪೇಟೆ - ಅರಕಲಗೋಡು - ಚೆನ್ನರಾಯಪಟ್ಟಣ ಮಾರ್ಗದ ಮೂಲಕ ಪ್ರತಿ ದಿನ ಬೆಳಗ್ಗೆ 10.15 ಗಂಟೆಗೆ ಹೊರಟು ಸಂಜೆ 4.45 ಗಂಟೆಗೆ ಬೆಂಗಳೂರು ತಲುಪಲಿದೆ. ಈ ಬಗ್ಗೆ ಶಾಸಕ ಡಾ.ಮಂತರ್ ಗೌಡ ಮಾಹಿತಿ ನೀಡಿದ್ದಾರೆ.
ಮಡಿಕೇರಿ - ಸೋಮವಾರಪೇಟೆ ಮಾರ್ಗದಲ್ಲಿ ಬೆಂಗಳೂರಿಗೆ ತೆರಳಲು ಸಾರ್ವಜನಿಕರು ಕಷ್ಟ ಪಡುತ್ತಿದ್ದರು. ಹೀಗಾಗಿ ಇಲ್ಲಿ ಬಸ್ ಬಿಡಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು,ಈ ಬೇಡಿಕೆಯನ್ನು ಈಡೇರಿಸಲಾಗಿದೆ. ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದಿಂದ ಸೋಮವಾರಪೇಟೆ ಮಾರ್ಗದಲ್ಲಿ 3 ಬಸ್ಸುಗಳು, ಕುಶಾಲನಗರದಿಂದ 2 ಬಸ್ಸುಗಳು ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.
ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದಲ್ಲಿ 97 ಬಸ್ಸುಗಳು ವಿವಿಧ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆ. ಕುಶಾಲನಗರ ಕೆಎಸ್‍ಆರ್‍ಟಿಸಿ ಆರಂಭವಾದ ನಂತರ ಮತ್ತಷ್ಟು ಬಸ್ಸುಗಳು ಸಂಚರಿಸಲಿವೆ ಎಂದು ಡಾ. ಮಂತರ್ ಗೌಡ ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ವೀರಭದ್ರಸ್ವಾಮಿ, ಸಂಚಾರಿ ನಿಯಂತ್ರಕರು ಇತರರು ಕಾರ್ಯಕ್ರಮದಲ್ಲಿ ಇದ್ದರು.

100 ಅಶ್ವಮೇಧ ಬಸ್‌ಗಳ ಲೋಕಾರ್ಪಣೆ
ರಾಜ್ಯಾದ್ಯಂತ ಜನರಿಗೆ ಸುವ್ಯವಸ್ಥಿತ ಸಾರಿಗೆ ಸೇವೆ ನೀಡಲು ಸಾರಿಗೆ ನಿಗಮವು 100 ಅಶ್ವಮೇಧ ಬಸ್‌ಗಳನ್ನು ಲೋಕಾರ್ಪಣೆ ಮಾಡಿದೆ. ಅದಾದ ಮರುದಿನ ಬೆಂಗಳೂರಿನಿಂದ ಹಾಸನಕ್ಕೆ 10 ಬಸ್ ಕಾರ್ಯಾಚರಣೆಗೆ ನಿಯೋಜಿಸಿತ್ತು. ಬಳಿಕ 15 'ಅಶ್ವಮೇಧ' ಬಸ್‌ಗಳು ಮೈಸೂರಿನಿಂದ ಬೆಂಗಳೂರು, ಹುಣಸೂರಿನಿಂದ ಬೆಂಗಳೂರಿಗೆ ಹಾಗೂ ಕೆ.ಆರ್. ನಗರದಿಂದ ಬೆಂಗಳೂರಿಗೆ ಪ್ರತಿನಿತ್ಯ ಕಾರ್ಯಾಚರಣೆ ನಡೆಸುತ್ತಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ವಿಭಾಗಕ್ಕೂ 35 ಹೊಸ ಅಶ್ವಮೇಧ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಈ ಹೊಸ ಬಸ್‌ಗಳನ್ನು ಬೆಂಗಳೂರು ನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ ಮಾರ್ಗಗಳಿಗೆ ಬಿಡಲಾಗುತ್ತಿದೆ. ಈಗ ಮಡಿಕೇರಿಯಿಂದ ಬೆಂಗಳೂರಿಗೆ ಅಶ್ವಮೇಧ ಬಸ್‌ಗಳನ್ನು ಬಿಡಲಾಗಿದೆ.












Click it and Unblock the Notifications