Year End Travel: ಇದು ಕೊಡಗಿಗೆ ಪ್ರವಾಸಿಗರು ಲಗ್ಗೆಯಿಡುವ ಕಾಲ: ಯಾಕೆ ಗೊತ್ತಾ?
ಮಡಿಕೇರಿ, ಡಿಸೆಂಬರ್ 06: ವರ್ಷದ ಕೊನೆಯ ಡಿಸೆಂಬರ್ ಮತ್ತು ಹೊಸವರ್ಷಾರಂಭದ ಜನವರಿ ತಿಂಗಳಲ್ಲಿ ಕೊಡಗಿನತ್ತ ಮುಖ ಮಾಡುವ ಪ್ರವಾಸಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿರುತ್ತದೆ. ಈ ವೇಳೆ ರಾಜ್ಯ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸಿ, ಇಲ್ಲಿನ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಲ್ಲಿ ವಾಸ್ತವ್ಯ ಹೂಡಿ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಇದೊಂದು ಸುಂದರ ಅನುಭವವಾಗಿದ್ದು, ಈ ಕ್ಷಣಕ್ಕೆ ಸಾಕ್ಷಿಯಾಗಲು ಕಾತರದಿಂದ ಕಾಯುತ್ತಿರುತ್ತಾರೆ. ಆ ಕ್ಷಣಕ್ಕೆ ದಿನಗಣನೆ ಇದೀಗ ಆರಂಭವಾಗಿದೆ.
ಈ ಬಾರಿ ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ತಮಿಳುನಾಡು, ಪುದುಚೇರಿ, ಕೇರಳ ಮೊದಲಾದ ಕಡೆಗಳಲ್ಲಿ ಫೆಂಗಲ್ ಚಂಡ ಮಾರುತ ಕಾಣಿಸಿಕೊಂಡು ಸಾಕಷ್ಟು ಕಷ್ಟನಷ್ಟಗಳನ್ನುಂಟು ಮಾಡಿದೆ. ಬೀಚ್ ಕಡೆಗೆ ಹೋಗಲು ಪ್ರವಾಸಿಗರು ಭಯಪಡುವಂತಾಗಿದೆ. ಹೀಗಾಗಿ ಹೆಚ್ಚಿನ ಪ್ರವಾಸಿಗರು ಮಲೆನಾಡಿನ ಕಡೆಗೆ ಅದರಲ್ಲೂ ಕೊಡಗಿನ ಕಡೆಗೆ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಹಲವರು ಕೊಡಗಿನಲ್ಲಿ ವರ್ಷಾಚರಣೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

ಮೊದಲೆಲ್ಲ ಹೊಸವರ್ಷಾಚರಣೆಯನ್ನು ಸಮುದ್ರತೀರಗಳಲ್ಲಿ ಆಚರಿಸಬೇಕೆಂದು ಬಯಸುತ್ತಿದ್ದರು. ಅಷ್ಟೇ ಅಲ್ಲದೆ ಸಮುದ್ರತೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ತೆರಳುತ್ತಿದ್ದರು. ಆದರೆ ಒಂದೆರಡು ದಶಕಗಳ ಹಿಂದೆ ಸಂಭವಿಸಿದ ಸುನಾಮಿಯ ನಂತರ ಜನ ಭಯಪಡುವಂತಾಯಿತು. ಹೆಚ್ಚಿನವರು ಮಲೆನಾಡು ಕಡೆಗೆ ಬರಲಾರಂಭಿಸಿದರು. ಇದರಿಂದ ಮಲೆನಾಡು ಕಡೆ ಪ್ರವಾಸೋದ್ಯಮ ಬೆಳೆಯಲಾರಂಭಿಸಿತು. ಮೊದಲೆಲ್ಲ ಹೋಂಸ್ಟೇ ಕಲ್ಪನೆ ಇರಲಿಲ್ಲ. ಆದ್ದರಿಂದ ದೂರದಿಂದ ಬರುವ ಪ್ರವಾಸಿಗರಿಗೆ ವಾಸ್ತವ್ಯದ ಸಮಸ್ಯೆ ಕಾಣಿಸುತ್ತಿತ್ತು.
ಪ್ರವಾಸಿಗರ ಸೆಳೆಯುತ್ತಿರುವ ಹೋಂಸ್ಟೇಗಳು
ಕೊಡಗಿನಲ್ಲಂತೂ ಪಟ್ಟಣ ಪ್ರದೇಶ ಹೊರತಾಗಿ ವಾಸ್ತವ್ಯಕ್ಕಾಗಲೀ, ತೆರಳು ರಸ್ತೆಯಾಗಲೀ ಹಿಂದೆ ಇರಲಿಲ್ಲ. ಆದರೆ ಹೋಂಸ್ಟೇ ಕಲ್ಪನೆ ಬಂದ ನಂತರ ಬೆಟ್ಟಗುಡ್ಡ, ತೋಟಗಳ ನಡುವೆಯೂ ಕಾಫಿಬೆಳೆಗಾರರು ಹೋಂಸ್ಟೇ ನಡೆಸುತ್ತಿರುವುದರಿಂದಾಗಿ ಪ್ರವಾಸಿಗರು ಇತ್ತ ತೆರಳಿ ವಾಸ್ತವ್ಯ ಹೂಡಲು ಅನುಕೂಲವಾಗಿದೆ. ಆದ್ದರಿಂದ ದೂರದ ನಗರವಾಸಿಗರು ನಿಸರ್ಗದ ನಡುವೆ ಹಾಯಾಗಿ ಕಾಲ ಕಳೆದು ಹೊಸವರ್ಷಾಚರಣೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಈಗಾಗಲೇ ಕೊಡಗಿನಲ್ಲಿ ಬಹುತೇಕ ಹೋಂಸ್ಟೇಗಳು ಭರ್ತಿಯಾಗಿವೆ. ಕೆಲವು ಹೋಂಸ್ಟೇಗಳಿಗೆ ಖಾಯಂ ಪ್ರವಾಸಿಗರಿದ್ದು, ಉಳಿದಂತೆ ಹೋಟೆಲ್, ರೆಸಾರ್ಟ್ ಗಳೆಲ್ಲವೂ ಭರ್ತಿಯಾಗಲಿವೆ. ಫೆಂಗಲ್ ಚಂಡಮಾರುತ ಕೊಡಗಿನಲ್ಲಿಯೂ ಪರಿಣಾಮ ಬೀರಿದೆ. ಆದರೆ ಮುಂದಿನ ದಿನಗಳಲ್ಲಿ ಬಿಸಿಲು ಕಾಣಿಸಿಕೊಳ್ಳಲಿದೆ. ಜತೆಗೆ ಸಣ್ಣಗೆ ನಡುಕ ಹುಟ್ಟಿಸುವ ಚಳಿಯೂ ಶುರುವಾಗುವುದರಿಂದ ಹೊಸ ಅನುಭವ ನೀಡಲಿದೆ. ಈ ಸುಂದರ ವಾತಾವರಣದಲ್ಲಿ ಕಾಲ ಕಳೆಯುವುದು ಪ್ರವಾಸಿಗರಿಗೂ ಇಷ್ಟವಾಗುತ್ತಿದೆ.
ಕೊಡಗಿನತ್ತ ಹರಿದು ಬರುವ ಪ್ರವಾಸಿಗರು
ಸಾಮಾನ್ಯವಾಗಿ ಡಿಸೆಂಬರ್ ತಿಂಗಳು ಕೊಡಗಿನ ವಾತಾವರಣ ತಂಪು ತಂಪಾಗಿರುತ್ತದೆ. ಸಣ್ಣಗೆ ಮೈನಡುಗಿಸುವ ಚಳಿ, ಗಿಡಮರ ಬೆಟ್ಟಗುಡ್ಡಗಳನ್ನು ಆವರಿಸಿ ಕೇಕೆ ಹಾಕುವ ಮಂಜು, ಬೀಸುವ ತಂಗಾಳಿ.. ಇದೆಲ್ಲವೂ ದೂರದಿಂದ ಬರುವ ಪ್ರವಾಸಿಗರಿಗೆ ಆಹ್ಲಾದಕರವಾಗಿರುತ್ತದೆ. ಕೊಡಗಿನಲ್ಲಿ ಹೊಸವರ್ಷವನ್ನು ಆಚರಿಸಿಕೊಳ್ಳುವ ಸಂಪ್ರದಾಯ ಒಂದೆರಡು ದಶಕಗಳಿಂದೀಚೆಗೆ ದೊಡ್ಡಮಟ್ಟದಲ್ಲಿ ಬೆಳೆದಿದೆ. ದೂರದ ಬಹಳಷ್ಟು ಜನಕ್ಕೆ ಕೊಡಗಿನಲ್ಲಿ ಹೊಸವರ್ಷಾಚರಣೆ ಮಾಡುವುದೊಂದು ಬಯಕೆಯಾಗಿದೆ. ಹೀಗಾಗಿ ಪ್ರವಾಸಿಗರ ದಂಡು ಕಾಣಿಸಿಕೊಳ್ಳುತ್ತದೆ.

ಇವತ್ತು ಕೊಡಗಿನಲ್ಲಿ ವರ್ಷದ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಪೂರಕವಾದ ಉದ್ಯಮಗಳು ಆರಂಭವಾಗಿವೆ. ಹೊರಗಿನಿಂದ ಬಂದ ಕೆಲವು ಕಂಪನಿಗಳು ಇಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ಸುರಿದು ಐಷಾರಾಮಿ ಹೋಟೆಲ್, ರೆಸಾರ್ಟ್ ಗಳನ್ನು ನಿರ್ಮಿಸಿವೆ. ಇದರ ಜತೆಗೆ ಕಾಫಿ ಬೆಳೆಗಾರರು ಕೂಡ ತಮ್ಮ ತೋಟಗಳಲ್ಲಿ ಹೋಂಸ್ಟೇ ನಿರ್ಮಿಸಿ ಒಂದಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ಕಳೆದೊಂದು ವರ್ಷದಿಂದ ಕಾಫಿಯ ಬೆಲೆ ಏರಿಕೆಯಾಗುತ್ತಿರುವುದರಿಂದ ಆರ್ಥಿಕ ಬದಲಾವಣೆ ಕಾಣಿಸಿಕೊಳ್ಳುತ್ತಿದೆ.
ಪ್ರವಾಸಿ ತಾಣಗಳಲ್ಲಿ ಸೌಲಭ್ಯದ ಕೊರತೆ
ಹೊರ ಜಿಲ್ಲೆ, ಹೊರ ರಾಜ್ಯ ಮಾತ್ರವಲ್ಲದೆ ವಿದೇಶಿಗರು ಕೂಡ ಕೊಡಗಿನತ್ತ ಬರಲಾರಂಭಿಸಿದ್ದು, ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸದ್ಯ ಹೋಟೆಲ್, ರೆಸಾರ್ಟ್. ಹೋಂಸ್ಟೇ ಪ್ರಮಾಣಗಳು ಹೆಚ್ಚಾಗುತ್ತಿವೆ. ಆದರೆ ಪ್ರವಾಸಿ ತಾಣಗಳ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ ಅಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಕೆಲಸ ನಡೆಯುತ್ತಿಲ್ಲ. ಜತೆಗೆ ಕೆಲವು ಪ್ರವಾಸಿ ತಾಣಗಳಿಗೆ ಸಮರ್ಪಕ ರಸ್ತೆಯೇ ಇಲ್ಲದಾಗಿದೆ.
ವರ್ಷಾಂತ್ಯದಲ್ಲಿ ಒಮ್ಮೆಲೆ ಪ್ರವಾಸಿಗರು ದಂಡು ದಂಡಾಗಿ ಬರುವುದರಿಂದ ಹಲವು ಸಮಸ್ಯೆಗಳಾಗುತ್ತಿವೆ. ಇಲ್ಲಿನ ರಸ್ತೆಗಳು ವಿಶಾಲವಾಗಿಲ್ಲದೆ, ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ನಗರಗಳಲ್ಲಿ ವಾಹನ ನಿಲುಗಡೆಗೆ ಸ್ಥಳವಿಲ್ಲದೆ ಪರದಾಡುವಂತಾಗುತ್ತದೆ. ದೂರದಿಂದ ಬರುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳಿಗೆ ತೆರಳಲು ಸೂಕ್ತ ನಾಮಫಲಕಗಳಿಲ್ಲದೆ ಅಡ್ಡಾದಿಡ್ಡಿ ತೆರಳಿ ಸಮಸ್ಯೆಗಳಾಗುತ್ತಿವೆ. ಇಲ್ಲಿನ ರಸ್ತೆಗಳು ತಿರುವುಗಳಿಂದ ಕೂಡಿ ಚಿಕ್ಕದಾಗಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಪ್ರವಾಸಿಗರು ನಿಯಮ ಮೀರದಂತೆ ವರ್ತಿಸಿ
ಒಟ್ಟಾರೆಯಾಗಿ ಹೇಳಬೇಕೆಂದರೆ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನತ್ತ ಬರುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಗಮನಹರಿಸಿ ಸಮಸ್ಯೆಗಳಾಗದಂತೆ ಮುಂಜಾಗ್ರತೆ ವಹಿಸುವುದು ಅಗತ್ಯವಿದೆ. ಹಾಗೆಯೇ ಕೊಡಗಿನತ್ತ ಆಗಮಿಸುವ ಪ್ರವಾಸಿಗರು ಕೂಡ ವಾಹನ ಚಾಲನೆ ಮಾಡುವಾಗ ಅತಿವೇಗಕ್ಕೆ ಕಡಿವಾಣ ಹಾಕಿ ಎಚ್ಚರಿಕೆ ವಹಿಸುವುದು ಬಹುಮುಖ್ಯವಾಗಿದೆ. ಅಲ್ಲದೆ ತಾವು ತೆರಳಬೇಕಾದ ಸ್ಥಳದ ಬಗ್ಗೆ ಮಾರ್ಗದರ್ಶನ ಪಡೆದುಕೊಂಡು ಬಂದರೆ ಅನಗತ್ಯ ಕಿರಿಕಿರಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಹೊಸವರ್ಷಾಚರಣೆಗೆಂದು ಬರುವವರಲ್ಲಿ ಹೆಚ್ಚಿನವರು ಮೋಜು ಮಸ್ತಿ ಗುಂಗಿನಲ್ಲಿರುತ್ತಾರೆ. ಹೀಗಾಗಿ ಹುಚ್ಚಾಟವಾಡಿದರೆ ಅಪಾಯ ತಪ್ಪಿದಲ್ಲ. ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟಿರುವುದರಿಂದ ಅನುಚಿತವಾಗಿ ವರ್ತಿಸುವುದು, ವೇಗದ ವಾಹನ ಚಾಲನೆ, ಮಾದಕ ವಸ್ತು ಸೇವನೆ, ಮದ್ಯಸೇವನೆ ಮಾಡಿ ವಾಹನ ಚಾಲನೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಪಾರ್ಟಿ ಮಾಡುವುದು ಹೀಗೆ ನಿಯಮ ಉಲ್ಲಂಘಿಸಿದರೆ ಕ್ರಮ ಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ನಿಯಮ ಮೀರದಂತೆ ವರ್ತಿಸಿದರೆ ಒಳ್ಳೆಯದು.












Click it and Unblock the Notifications