ಕ್ಯಾರವಾನ್ ಟೂರಿಸಂ- ನೆರೆ ರಾಜ್ಯಗಳ ಪೈಪೋಟಿಯಲ್ಲಿ ಹಿಂದೆಬಿದ್ದ ಕರ್ನಾಟಕ

ಬೆಂಗಳೂರು, ಮೇ 30: ಕೆಲ ವಿದೇಶಗಳಲ್ಲಿ ಹೆಚ್ಚು ಆಕರ್ಷಣೀಯವಾಗಿರುವ ಕ್ಯಾರವಾನ್ ಪ್ರವಾಸೋದ್ಯಮ (Caravan Tourism) ಈಗ ಭಾರತದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಸಮಗ್ರ ಮೂಲ ಸೌಲಭ್ಯಗಳಿರುವ ವಾಹನಗಳಲ್ಲಿ ಪ್ರವಾಸ ಹೋಗುವ ಕ್ಯಾರವಾನ್ ವಾಹನಗಳಿಗೆ (Caravan Vehicles) ಬೇಡಿಕೆ ಹೆಚ್ಚುತ್ತಿದೆ. ಗೋವಾ, ಕೇರಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಈಗಾಗಲೇ ಕ್ಯಾರವಾನ್ ಪ್ರವಾಸೋದ್ಯಮದ ಶಕ್ತಿಯನ್ನು ಗುರುತಿಸಿ ಸಾಕಷ್ಟು ಪ್ರಯೋಗ ಮತ್ತು ವ್ಯವಸ್ಥೆಯನ್ನು ಮಾಡುತ್ತಿವೆ. ಆದರೆ, ಕರ್ನಾಟಕ ಮಾತ್ರ ಈ ವಿಚಾರದಲ್ಲಿ ಹಿಂದುಳಿದಿರುವಂತೆ.

ಆಸ್ಟ್ರೇಲಿಯಾ, ಅಮೆರಿಕ, ಯುಎಇ ಮೊದಲಾದ ಸಿರಿವಂತ ದೇಶಗಳಲ್ಲಿ ಕ್ಯಾರವಾನ್ ಟೂರಿಸಂಗೆ ಸಖತ್ ಬೇಡಿಕೆ ಇದೆ. ಭಾರತದಲ್ಲಿ ಇನ್ನು ಕೆಲ ವರ್ಷಗಳಲ್ಲಿ ಇದರ ಬೇಡಿಕೆ ಸಾಕಷ್ಟು ಹೆಚ್ಚಾಗಲಿದೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಪ್ರವಾಸಕ್ಕೆ ಆದ್ಯತೆ ನೀಡುತ್ತಿದ್ದಾರೆ.

 ಏನಿದು ಕ್ಯಾರವಾನ್ ಟೂರಿಸಂ?

ಏನಿದು ಕ್ಯಾರವಾನ್ ಟೂರಿಸಂ?

ಕ್ಯಾರವಾನ್ ಎನ್ನುವುದು ಕ್ಯಾಂಪರ್ ವ್ಯಾನ್ (Camper Van) ಎಂದರ್ಥ. ಪ್ರವಾಸ ಹೋಗಿ ಕ್ಯಾಂಪ್ ಹಾಕುವವರ ವಾಹನ ಎಂಬುದು ಮೂಲ ಅರ್ಥ. ಪ್ರವಾಸದ ವೇಳೆಯಲ್ಲಿ ಉದ್ಭವಿಸುವ ಎಲ್ಲಾ ಅಗತ್ಯಗಳನ್ನೂ ಒಂದು ವಾಹನದಲ್ಲಿ ಒದಗಿಸಲಾಗುತ್ತದೆ. ಉದಾಹರಣೆಗೆ ಅಡುಗೆ ಮಾಡಿಕೊಳ್ಳುವ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್, ಮ್ಯೂಸಿಕ್ ಸಿಸ್ಟಂ ಇತ್ಯಾದಿ ಅನೇಕ ಅಗತ್ಯ ಮತ್ತು ರಂಜನೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅವರವರ ಅಗತ್ಯತೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ಯಾರವಾನ್ ವಾಹನಗಳನ್ನು ಟ್ರಾವೆಲ್ ಏಜೆನ್ಸಿಗಳು ಬಾಡಿಗೆಗೆ ನೀಡುತ್ತವೆ.

ಹಲವು ಸ್ಥಳಗಳಲ್ಲಿ ಕ್ಯಾರವಾನ್ ವೆಕೇಶನ್ (Caravan Vacation) ಸೌಲಭ್ಯ ನೀಡಲಾಗುತ್ತದೆ. ಪ್ರೇಕ್ಷಣೀಯ ಸ್ಥಳಗಳಲ್ಲಿ ಜನರು ಆರಾಮವಾಗಿ ಇರಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಇಲ್ಲಿ ಕ್ಯಾಂಪ್ ಫೈರ್‌ನಿಂದ ಹಿಡಿದು ಪ್ರತಿಯೊಂದು ಸೌಲಭ್ಯವನ್ನೂ ಒದಗಿಸಲಾಗುತ್ತದೆ.

 ಎಲ್ಲಿ ಉಪಯುಕ್ತ ಕ್ಯಾರವಾನ್?

ಎಲ್ಲಿ ಉಪಯುಕ್ತ ಕ್ಯಾರವಾನ್?

ಪ್ರವಾಸೀ ತಾಣಗಳಲ್ಲಿ ಖಾಯಂ ಆಗಿ ಸೌಲಭ್ಯಗಳನ್ನು ಒದಗಿಸಲು ಆಗುವುದಿಲ್ಲ. ಹೊಟೇಲು, ಲಾಡ್ಜಿಂಗು, ಚಾರ್ಜಿಂಗ್ ಇತ್ಯಾದಿ ಇರದ ಸ್ಥಳಗಳಿಗೆ ಹೋಗಲು ಪ್ರವಾಸಿಗರು ಹಿಂದೇಟು ಹಾಕುತ್ತಾರೆ. ಅಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗದೇ ಬೇರೆ ಸಮೀಪದ ಪಟ್ಟಣಗಳಿಗೆ ಹೋಗಿ ರಾತ್ರಿ ಲಾಡ್ಜ್‌ನಲ್ಲಿ ಇರಬೇಕಾಗುತ್ತದೆ. ಇಂಥ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲು ಕ್ಯಾರವಾನ್ ವಾಹನಗಳು ಉಪಯುಕ್ತ ಎನಿಸುತ್ತವೆ. ಅಡುಗೆ, ಕ್ಯಾಂಪ್, ಚಾರ್ಜಿಂಗ್ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನೂ ಕ್ಯಾರವಾನ್ ವಾಹನಗಳಲ್ಲಿ ಒದಗಿಸಲಾಗುತ್ತದೆ.

ನೆರೆ ರಾಜ್ಯಗಳ ನಾಗಾಲೋಟ

ನೆರೆ ರಾಜ್ಯಗಳ ನಾಗಾಲೋಟ

ಬೇಡಿಕೆಯ ಪ್ರವಾಸೀ ತಾಣಗಳಿರುವ ಹಿಮಾಚಲಪ್ರದೇಶ, ರಾಜಸ್ಥಾನ ರಾಜ್ಯಗಳು ಬಹಳ ಬೇಗ ಇದರ ವಾಣಿಜ್ಯಾತ್ಮಕ ಲಾಭವನ್ನು ಗುರುತಿಸಿ ಕ್ಯಾರವಾನ್ ಟೂರಿಸಂ ಅಭಿವೃದ್ಧಿಪಡಿಸಿವೆ. ಮಹಾರಾಷ್ಟ್ರ, ಗೋವಾ ಮತ್ತು ಕೇರಳ ರಾಜ್ಯಗಳೂ ಕೂಡ ಇದರತ್ತ ಗಮನ ಹರಿಸುತ್ತಿವೆ. ಈ ಉದ್ಯಮ ಪರಿಣಿತರ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಕೇರಳ ಮತ್ತು ಗೋವಾದಲ್ಲಿ ನೂರಕ್ಕೂ ಹೆಚ್ಚು ಕ್ಯಾರವಾನ್ ವಾಹನಗಳ ಅಗತ್ಯತೆ ಬೀಳುವ ನಿರೀಕ್ಷೆ ಇದೆ.

"ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಗ್ರಾಹಕರ ಅಗತ್ಯತೆಗಳ ಅನುಸಾರ ಐದು ಕ್ಯಾರವಾನ್‌ಗಳನ್ನು ವಿನ್ಯಾಸಗೊಳಿಸಿದ್ದೇವೆ. ಮುಂದಿನ 10 ತಿಂಗಳಲ್ಲಿ ಕೇರಳದ ನಮ್ಮ ಗ್ರಾಹಕರಿಗೆ ಇಂಥ 12 ವಾಹನಗಳನ್ನು ನಿರ್ಮಿಸಿ ಕೊಡಬೇಕಿದೆ. ಗೋವಾದಲ್ಲಿರುವ ಐಷಾರಾಮಿ ಹೊಟೇಲ್‌ಗಳಿಂದಲೂ ಕ್ಯಾರವಾನ್‌ಗಳಿಗೆ ಸಾಕಷ್ಟು ಮನವಿ ಬರುತ್ತಿವೆ," ಎಂದು ಉತ್ತರ ಕರ್ನಾಟಕದ ಕ್ಯಾರವಾನ್ ತಯಾರಕ ಕಂಪನಿ ಏಬಲ್ ಡಿಸೈನ್‌ನ (Able Design) ಎಂಡಿ ಜಗದೀಶ್ ಹಿರೇಮಠ್ ಹೇಳುತ್ತಾರೆ. ಹಿರೇಮಠ್ ಪ್ರಕಾರ ಕ್ಯಾರವಾನ್ ಟೂರಿಸಂ ಎಂಬುದು ಮುಂದಿನ ದಿನಗಳಲ್ಲಿ ಬಹಳಷ್ಟು ಬೆಳವಣಿಗೆ ಸಾಧಿಸುವ ಸಾಮರ್ಥ್ಯ ಹೊಂದಿದೆ.

 ಹಿಂದುಳಿದ ಕರ್ನಾಟಕ:

ಹಿಂದುಳಿದ ಕರ್ನಾಟಕ:

ವಿಚಿತ್ರವೆಂದರೆ ಹಿರೇಮಠ್ ಅವರ ಕಂಪನಿಗೆ ಕರ್ನಾಟಕದಿಂದ ಯಾವ ಆರ್ಡರ್ ಕೂಡ ಬಂದಿಲ್ಲವಂತೆ. ನೆರೆ ರಾಜ್ಯಗಳು ಮುಂದೋಡುತ್ತಿದ್ದರೆ ಕರ್ನಾಟಕ ಮೀನಮೇಷ ಎಣಿಸಿಕೊಂಡು ಸುಮ್ಮನಿದೆ. ಲಕ್ಸೆಕ್ಯಾಂಪರ್ (LuxeCamper) ಎಂಬ ಪ್ರವಾಸೀ ಸಂಸ್ಥೆಯ ಎಂಡಿ 'ಟೈಗರ್' ರಮೇಶ್ ಗೋವಿಂದನ್ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕರ್ನಾಟಕ ಸರಕಾರ ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಅನುಕೂಲ ಆಗುವ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಹೇಳುತ್ತಾರೆ.

ಗೋವಾಕ್ಕೆ ಬರುವ ಪ್ರೇಕ್ಷಕರು ಸಾಮಾನ್ಯವಾಗಿ ಕರ್ನಾಟಕದ ದಾಂಡೇಲಿ, ಬಾದಾಮಿ, ಹಂಪಿ, ಐಹೊಳೆ ಮೊದಲಾದ ಜನಪ್ರಿಯ ಸ್ಥಳಗಳಿಗೂ ಬಂದು ಹೋಗುತ್ತಾರೆ. ಹೀಗಾಗಿ, ಈ ಸ್ಥಳಗಳಿಗೆ ಕ್ಯಾರವಾನ್ ಸೇವೆ ಬೇಕು ಎಂದು ವಿದೇಶೀ ಪ್ರವಾಸಿಗರು ಬೇಡಿಕೊಳ್ಳುತ್ತಿದ್ದಾರೆ.ಕ್ಯಾರವಾನ್ ವಾಹನಗಳು ಈ ಸ್ಥಳಗಳಿಗೆ ಬಂದರೂ ಪ್ರವಾಸಿ ಸ್ಥಳಗಳಲ್ಲಿ ಕೆಲವೊಂದಿಷ್ಟು ಸೌಲಭ್ಯಗಳನ್ನು ಸರಕಾರ ವ್ಯವಸ್ಥೆ ಮಾಡಬೇಕು. ಆದರೆ, ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂಬ ಟೀಕೆ ಇದೆ.

ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡುವ ಪ್ರಯತ್ನ ಆಗಿತ್ತು. ಹಂಪಿ, ಬಂಡೀಪುರ, ಕಬಿನಿ, ಸಕಲೇಶಪುರ, ಕುದರೆಮುಖ, ಸಕ್ಕರೆಬೈಲು ಇತ್ಯಾದಿ ಸ್ಥಳಗಳಲ್ಲಿ ಕ್ಯಾರವಾನ್ ಪ್ರವಾಸ ಸೌಲಭ್ಯ ಒದಗಿಸುವ ಪ್ರಯತ್ನವಾಗಿತ್ತು. ಆದರೆ, ಆ ಕಾರ್ಯ ಸರಿಯಾದ ನಿಟ್ಟಿನಲ್ಲಿ ಜಾರಿಯಾಗಿಲ್ಲ ಎಂದು ಹೇಳಲಾಗುತ್ತಿದೆ.

 ಕೇರಳದಲ್ಲಿ 100 ಕ್ಯಾರವಾನ್ ಪಾರ್ಕ್‌ಗಳು

ಕೇರಳದಲ್ಲಿ 100 ಕ್ಯಾರವಾನ್ ಪಾರ್ಕ್‌ಗಳು

ಕೇರಳದ ಪ್ರವಾಸಿ ಸ್ಥಳಗಳಲ್ಲಿ ನೂರು ಕ್ಯಾರವಾನ್ ಪಾರ್ಕ್‌ಗಳನ್ನು ನಿರ್ಮಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ. ಇಲ್ಲಿ ಬಹಳ ಕಡಿಮೆ ಬೆಲೆಗೆ ವಿದ್ಯುತ್ ಸೌಲಭ್ಯ, ಚರಂಡಿ ಇತ್ಯಾದಿ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿನ ಸರಕಾರ ಬಹಳ ತ್ವರಿತಗತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದು ಟೈಗರ್ ರಮೇಶ್ ಅನಿಸಿಕೆ.

ತಮ್ಮ ಕಂಪನಿಯನ್ನು ಕ್ಯಾರವಾನ್ ಟೂರ್ ಆಪರೇಟರ್ ಆಗಿ ಗುರುತಿಸುವಂತೆ ಕರ್ನಾಟಕ ಸರಕಾರಕ್ಕೆ ಮನವಿ ಮಾಡಿ ಮೂರು ವರ್ಷಗಳ ಹಿಂದೆ ಟೈಗರ್ ರಮೇಶ್ ಸಲ್ಲಿಸಿದ್ದ ಅರ್ಜಿ ಇನ್ನೂ ಧೂಳಿಡಿದು ಕುಳಿತಿದೆಯಂತೆ. ಆದರೆ, ಕೇರಳ ರಾಜ್ಯ ಕೇವಲ 45 ದಿನಗಳಲ್ಲೇ ಅನುಮತಿ ನೀಡಿತಂತೆ. ಕರ್ನಾಟಕ ಸರಕಾರಕ್ಕೆ ಕ್ಯಾರವಾನ್ ಪ್ರವಾಸೋದ್ಯಮದ ಮಹತ್ವ ಇನ್ನೂ ಗೊತ್ತಾದಂತಿಲ್ಲ ಎಂದು ಟೈಗರ್ ಹೇಳುತ್ತಾರೆ. ಬೇಸರ ಎಂದರೆ ಕರ್ನಾಟಕದಲ್ಲಿ ಕ್ಯಾರವಾನ್ ಪ್ರವಾಸೋದ್ಯಮ ಇಲ್ಲದೇ ಇರುವುದರಿಂದ ಟೈಗರ್ ರಮೇಶ್ ಗೋವಿಂದನ್ ತಮ್ಮ ಕಂಪನಿಯನ್ನು ಕೇರಳಕ್ಕೇ ವರ್ಗಾಯಿಸುತ್ತಿದ್ದಾರೆ.

 ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ?

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ?

ಗ್ರಾಮೀಣ ಭಾಗದಲ್ಲಿರುವ ಪ್ರವಾಸೀ ಸ್ಥಳಗಳು ಕ್ಯಾರವಾನ್ ಪ್ರವಾಸಗಳಿಗೆ ಹೇಳಿಮಾಡಿಸಿರುತ್ತವೆ. ಇದರಿಂದ ಇಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶ ಇವೆ. ಪ್ರವಾಸೀ ಸ್ಥಳಗಳ ಅಭಿವೃದ್ಧಿಗೂ ಅನುಕೂಲವಾಗುತ್ತದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಅದ್ಭುತವಾಗಿರುವ ಪ್ರವಾಸೀ ಸ್ಥಳಗಳು ಇವೆಯಾದರೂ ಸರಿಯಾದ ಸೌಕರ್ಯ ಇಲ್ಲದ ಕಾರಣ ಜನರು ಭೇಟಿ ನೀಡುವುದು ವಿರಳವಾಗಿದೆ. ಇಂಥ ಸ್ಥಳಗಳಲ್ಲಿ ಸರಕಾರ ಸೂಕ್ತ ವ್ಯವಸ್ಥೆ ಮಾಡಿದರೆ ಕ್ಯಾರವಾನ್ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಪ್ರೇಕ್ಷಕರನ್ನೂ ಸುಲಭವಾಗಿ ಆಕರ್ಷಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+