Yash Dayal: ಆರ್‌ಸಿಬಿ ನನ್ನನ್ನ ಕೈಬಿಟ್ಟಿಲ್ಲ: ಐಪಿಎಲ್ ಕ್ಲಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಯಶ್ ದಯಾಳ್ ಅಚ್ಚರಿ ಹೇಳಿಕೆ
Yash Dayal: ಐಪಿಎಲ್ 2026ರ ಸೀಸನ್ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಮಂಗಳವಾರ (ಮೇ 26) ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆರ್‌ಸಿಬಿ ಸ್ಟಾರ್ ಆಟಗಾರ ಯಶ್ ದಯಾಳ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಇದೀಗ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಟಾಕ್ ವಿತ್ ಮನ್ವೇಂದ್ರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯಶ್ ದಯಾಳ್ ಅವರು, 'ಈ ಬಾರಿ ಆರ್‌ಸಿಬಿ ಪರವಾಗಿ ಆಡದಿದ್ದರೂ ತಂಡವು ತನ್ನನ್ನು ಕೈಬಿಟ್ಟಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ನನ್ನನ್ನ ತೆಗೆದುಹಾಕಿಲ್ಲ ಮತ್ತು ನನ್ನ ಬದಲಿಗೆ ಬೇರೆ ಯಾವುದೇ ಆಟಗಾರನನ್ನು ಇದುವರೆಗೆ ಘೋಷಿಸಿಲ್ಲ. ಬಹುಶಃ ಅವರು ನನ್ನನ್ನು ಇನ್ನೂ ತಂಡದ ಭಾಗವೆಂದೇ ಪರಿಗಣಿಸುತ್ತಿದ್ದಾರೆ. ಈ ಸೀಸನ್‌ನಿಂದ ಹೊರಗುಳಿಯುವುದು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ,' ಎಂದು ಹೇಳಿದ್ದಾರೆ.

'ಮ್ಯಾನೇಜ್‌ಮೆಂಟ್‌ನೊಂದಿಗೆ ನಿರಂತರ ಸಂಪರ್ಕ'
'ತಾನು ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ತಂಡದ ನಿರ್ದೇಶಕರ ಜೊತೆ ಮತ್ತು ಕೋಚ್ ದಿನೇಶ್ ಕಾರ್ತಿಕ್ ಅವರೊಂದಿಗೆ ನಾನು ಮಾತನಾಡುತ್ತಿರುತ್ತೇನೆ. ತಂಡದ ಮ್ಯಾನೇಜ್‌ಮೆಂಟ್ ನನ್ನ ಜೊತೆ ಫೋನ್ ಮೂಲಕ ಸಂಪರ್ಕದಲ್ಲಿದೆ,' ಎಂದು ತಿಳಿಸಿದ್ದಾರೆ.
ಮೊ ಬೊಬಾಟ್ ಹೇಳಿದ್ದೇನು?
ಈ ಹಿಂದೆ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು 'ಯಶ್ ದಯಾಳ್ ಅವರು ವೈಯಕ್ತಿಕ ಕಾರಣಗಳಿಂದಾಗಿ 2026ರ ಸೀಸನ್‌ನಲ್ಲಿ ತಂಡವನ್ನು ಸೇರಿಕೊಳ್ಳುತ್ತಿಲ್ಲ,' ಎಂದು ತಿಳಿಸಿದ್ದರು. ಯಶ್ ದಯಾಳ್ ಅವರ ಮೇಲೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಈ ಬಾರಿ ಮೈದಾನದಿಂದ ದೂರ ಉಳಿಯಬೇಕಾಯಿತು.
ಯಶ್ ದಯಾಳ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 5 ಕೋಟಿ ರೂಪಾಯಿಗಳಿಗೆ ರಿಟೈನ್ ಮಾಡಿಕೊಂಡಿತ್ತು. ಅವರು ತಂಡದೊಂದಿಗೆ ಒಪ್ಪಂದದಲ್ಲಿದ್ದರೂ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಸೇರದಿರುವುದು ಒಳ್ಳೆಯದು ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿತ್ತು. 2024 ಮತ್ತು 2025ರ ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಯಶ್ ದಯಾಳ್, ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದರು. ಆದರೆ ಈಗ ಎದುರಾಗಿರುವ ಆರೋಪಗಳಿಂದಾಗಿ ಅವರು 2026ರ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.
ಪ್ರಸ್ತುತ ಆರ್‌ಸಿಬಿ ತಂಡವು ಅವರ ಅನುಪಸ್ಥಿತಿಯ ನಡುವೆಯೂ ಪ್ಲೇ-ಆಫ್ ತಲುಪಿದ್ದು, ಮಂಗಳವಾರ (ಮೇ 26) ಗುಜರಾತ್ ಟೈಟಾನ್ಸ್ ವಿರುದ್ಧ ಕ್ವಾಲಿಫೈಯರ್ 1 ಪಂದ್ಯವನ್ನು ಆಡಲಿದೆ. ಈ ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ದಯಾಳ್ ವಿರುದ್ಧ ಗಂಭೀರ ಆರೋಪಗಳು
ಗಾಜಿಯಾಬಾದ್‌ನಲ್ಲಿ 5 ವರ್ಷಗಳ ಕಾಲ ಮದುವೆಯಾಗುವುದಾಗಿ ನಂಬಿಸಿ ಶೋಷಣೆ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ. (ಇಲ್ಲಿ ಅಲಹಾಬಾದ್ ಹೈಕೋರ್ಟ್ ಬಂಧನಕ್ಕೆ ತಡೆ ನೀಡಿದೆ). ಮತ್ತೊಂದೆಡೆ ಜೈಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. 2025ರ ಐಪಿಎಲ್ ವೇಳೆ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಜೈಪುರ ನ್ಯಾಯಾಲಯವು ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ.












Click it and Unblock the Notifications