Chiklihole Dam: ಕೊಡಗಿನಲ್ಲಿ ಧಾರಾಕಾರ ಮಳೆ: ಬತ್ತಿದ ಚಿಕ್ಲಿಹೊಳೆ ಜಲಾಶಯಕ್ಕೆ ಜೀವಕಳೆ
ಮಡಿಕೇರಿ, ಜುಲೈ 04: ಕಳೆದ ವರ್ಷ ವಾಡಿಕೆಯ ಮಳೆ ಸುರಿಯದ ಕಾರಣದಿಂದಾಗಿ ಬೇಸಿಗೆಗೆ ಮುನ್ನವೇ ಖಾಲಿಯಾಗಿದ್ದ ಕೊಡಗಿನ ಚಿಕ್ಲಿಹೊಳೆ ಜಲಾಶಯ ಇದೀಗ ಭರ್ತಿಯಾಗಿರುವುದು ಜಿಲ್ಲೆಯ ಜನರಲ್ಲಿ ಖುಷಿ ತಂದಿದೆ. ಪ್ರತಿವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈ ಪುಟ್ಟ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಅರ್ಧ ಚಂದ್ರಾಕೃತಿಯ ತೂಬಿನಲ್ಲಿ ಧುಮ್ಮಿಕ್ಕುವ ದೃಶ್ಯ ನಯನ ಮನೋಹರವಾಗಿರುತ್ತದೆ.
ಸದ್ಯ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನೀರು ಹರಿದು ಬರುತ್ತಿದ್ದು 0.18 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸಿಡುವುದು ಕಷ್ಟವಾಗಿರುವ ಕಾರಣ ಹೆಚ್ಚುವರಿ ನೀರು ಹರಿದು ನದಿಯನ್ನು ಸೇರುತ್ತದೆ. ಈ ನೀರನ್ನು ನಂಬಿ ರೈತರು ಭತ್ತ ಬೆಳೆಯುತ್ತಾರೆ. ಈ ಬಾರಿ ಮಳೆ ಉತ್ತಮವಾಗಿರುವುದರಿಂದ ಭತ್ತ ಬೆಳೆಯುವ ವಿರುಪಾಕ್ಷಪುರ, ರಸೂಲ್ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರ ಮುಖದಲ್ಲಿ ನೆಮ್ಮದಿ ಮನೆ ಮಾಡಿದೆ.

ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಈಗಾಗಲೇ ಶಾಸಕ ಮಂಥರಗೌಡ ಅವರು ಬಾಗಿನ ಅರ್ಪಿಸಿದ್ದಾರೆ. ಆದರೆ ಈ ಜಲಾಶಯ ಎಷ್ಟು ಬೇಗ ಭರ್ತಿಯಾಗುತ್ತೋ ಅಷ್ಟೇ ಬೇಗ ಖಾಲಿಯಾಗಿ ಬಿಡುತ್ತದೆ. ಅದರಲ್ಲೂ 2023ರ ವರ್ಷಾಂತ್ಯದಲ್ಲಿ ಸಂಪೂರ್ಣ ಖಾಲಿಯಾಗಿತ್ತು. ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿದರೆ ಜಲಾಶಯದಲ್ಲಿ ನೀರು ಖಾಲಿಯಾಗದೆ ಉಳಿಯಲಿದೆ. ಇನ್ನು ಈ ಜಲಾಶಯ ಭರ್ತಿಯಾದರೂ, ಖಾಲಿಯಾದರೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ.
ಚಿಕ್ಲಿಹೊಳೆ ಜಲಾಶಯಕ್ಕೆ ಹೋಗುವುದು ಹೇಗೆ?
ಮಳೆಗಾಲದಲ್ಲಿ ಜಲಾಶಯ ಭರ್ತಿಯಾಗಿ ನೀರು ಧುಮುಕುವ ದೃಶ್ಯ ನೋಡಲು ಪ್ರವಾಸಿಗರು ಬಂದರೆ ಬೇಸಿಗೆಯಲ್ಲಿ ನೀರು ಬರಿದಾಗಿ ಇಲ್ಲಿ ಮುಳುಗಡೆಯಾದ ಊರು, ದೇಗುಲಗಳ ಅವಶೇಷಗಳನ್ನು ನೋಡಲು ಬರುತ್ತಾರೆ. ಇನ್ನು ಚಿಕ್ಲಿ ಹೊಳೆ ಜಲಾಶಯವಿರುವ ನಿಸರ್ಗ ನಿರ್ಮಿತ ಸುಂದರತಾಣವಾಗಿದ್ದು, ಬೇಸಿಗೆಗಿಂತ ಮಳೆಗಾಲದಲ್ಲಿಯೇ ಇಲ್ಲಿಗೆ ಪ್ರವಾಸಿಗರು ಹೆಚ್ಚು ಹೆಚ್ಚಾಗಿ ಬರುತ್ತಾರೆ.
ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಚಿಕ್ಲಿಹೊಳೆ ಜಲಾಶಯಕ್ಕೆ ಯಾವುದೇ ಬಸ್ ಸೌಲಭ್ಯವಿಲ್ಲ. ಹಾಗಾಗಿ ಸ್ವಂತ ವಾಹನಗಳಲ್ಲಿ ಅಥವಾ ಮಡಿಕೇರಿಯಿಂದ ಸುಂಟಿಕೊಪ್ಪದವರೆಗೆ ಬಸ್ನಲ್ಲಿ ತೆರಳಿ ಅಲ್ಲಿಂದ ಕಂಬಿಬಾಣೆಗೆ ಆಟೋ ಅಥವಾ ಜೀಪಿನಲ್ಲಿ ತೆರಳಬಹುದು. ಎರಡು ಗುಡ್ಡದ ನಡುವೆ ಹರಿಯುತ್ತಿದ್ದ ಚಿಕ್ಲಿಹೊಳೆಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿ ಜಲಾಶಯವನ್ನು ನಿರ್ಮಿಸಲಾಗಿದೆ. ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12ಕೋಟಿ ವೆಚ್ಚದಲ್ಲಿ ಜಲಾಶಯ ನಿರ್ಮಿಸಲಾಗಿದೆ.

1982ರಲ್ಲಿ ನಿರ್ಮಾಣವಾದ ಜಲಾಶಯ
ಕೆಲವು ಮೂಲಗಳ ಪ್ರಕಾರ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಆ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣವಾಯಿತು. ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾ ಬರುತ್ತಿದೆ. ಅವತ್ತು ಈ ಜಲಾಶಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದ್ದರೆ ಬಹುಶಃ ಇದೊಂದು ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಾಶಯ ಅಭಿವೃದ್ಧಿ ಕಾಣುವ ಬದಲು ಅಧೋಗತಿಯತ್ತ ಸಾಗತೊಡಗಿತು.
ಈ ಜಲಾಶಯವನ್ನು ಕಾಯಲು ಕಾವಲುಗಾರರನ್ನು ನೇಮಿಸದ ಕಾರಣ ಜಲಾಶಯದ ಉದ್ದಕ್ಕೂ ನಿರ್ಮಿಸಲಾಗಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳು ಕಳ್ಳರ ಪಾಲಾಗಿದೆ. ಅಷ್ಟೇ ಅಲ್ಲ ನಿರ್ಜನ ಪ್ರದೇಶವಾದುದರಿಂದ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ.

ಹೀಗಾಗಿ ದೂರದಿಂದ ಬರುವ ಪ್ರವಾಸಿಗರು ಕೆಲವೊಮ್ಮೆ ಮುಜುಗರಕ್ಕೊಳಗಾಗುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಮನಮೋಹಕ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ತಂಡೋಪತಂಡವಾಗಿ ಇತ್ತ ಬರುತ್ತಿರುತ್ತಾರೆ. ಜಲಾಶಯದ ಸುತ್ತಲೂ ತಂತಿಬೇಲಿ ನಿರ್ಮಿಸಿ ಉದ್ಯಾನವನ ಮಾಡಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ. ಆದರೆ ಅದ್ಯಾಕೋ ಗೊತ್ತಿಲ್ಲ ಸಂಬಂಧಿಸಿದವರು ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.












Click it and Unblock the Notifications