ಕರ್ನಾಟಕ ಭಾರತ್ ಗೌರವ್ ದ್ವಾರಕಾ ಯಾತ್ರಾ: ಸ್ಥಳ, ಪ್ಯಾಕೇಜ್ ವಿವರಗಳು
ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕದ ಧಾರ್ಮಿಕ ದತ್ತಿ ಇಲಾಖೆ 'ಕರ್ನಾಟಕ ಭಾರತ್ ಗೌರವ್' ಪ್ಯಾಕೇಜ್ ಅಡಿ ಮಾತ್ತೊಂದು ದೇವಾಲಯ ದರ್ಶನದ ಪ್ಯಾಕೇಜ್ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರ ಸಬ್ಸಿಡಿಯನ್ನು ಸಹ ನೀಡುತ್ತದೆ. ಈಗ 'ದ್ವಾರಕಾ ಯಾತ್ರೆ' ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಪ್ರವಾಸ ಪ್ಯಾಕೇಜ್ ಒಟ್ಟು ಮೊತ್ತ 30,000 ರೂ.ಗಳು.
ಈ ಪ್ಯಾಕೇಜ್‌ಗೆ 'ಕರ್ನಾಟಕ-ಭಾರತ್ ಗೌರವ್ ದ್ವಾರಕಾ ಯಾತ್ರಾ' ಎಂದು ಹೆಸರಿಡಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳ ಭೇಟಿಗೆ ಅವಕಾಶವನ್ನು ನೀಡಲಾಗಿದೆ. ಈ ಪ್ರವಾಸದ ಪ್ಯಾಕೇಜ್ ಮೊತ್ತ 30,000 ರೂ.ಗಳು. ಸರ್ಕಾರ ಪಾವತಿಸುವ ಮೊತ್ತ 15,000 ರೂ.ಗಳು ಮತ್ತು ಯಾತ್ರಾರ್ಥಿಗಳು ಪಾವತಿಸಬೇಕಾದ ಮೊತ್ತ 15,000 ರೂ.ಗಳು.

ಪ್ಯಾಕೇಜ್ ವಿವರ, ಸೌಲಭ್ಯಗಳು: 'ಕರ್ನಾಟಕ-ಭಾರತ್ ಗೌರವ್ ದ್ವಾರಕಾ ಯಾತ್ರಾ' ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳು ಬೆಂಗಳೂರು (SMVT), ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ. ವಿಶೇಷ ರೈಲು ಹೊರಡಲಿರುವ ದಿನಾಂಕಗಳು ನಿರ್ಗಮನ 28.09.2024, ಆಗಮನ 05.10.2024.
ಈ ಪ್ಯಾಕೇಜ್‌ನಲ್ಲಿ 3 ಟೈರ್ ಎ.ಸಿ. ರೈಲಿನಲ್ಲಿ ಪ್ರಯಾಣ ಮಾಡಬಹುದು, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇದೆ. ಪ್ರಯಾಣಿಸುವಾಗ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ಅಲ್ಲದೇ ಪ್ರವರ್ಗ 'ಸಿ' ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ ನೌಕರರು ಭಾರತ್ ಗೌರವ್ ದ್ವಾರಕಾ ಯಾತ್ರೆ ತೆರಳಲು ಇಚ್ಚಿಸಿದ್ದಲ್ಲಿ ದಾಖಲೆಗಳೊಂದಿಗೆ ಆಯುಕ್ತರ ಕಚೇರಿಗೆ ನೇರವಾಗಿ ಸೆಪ್ಟೆಂಬರ್ 20ರ ಒಳಗಾಗಿ ಮನವಿ ಸಲ್ಲಿಸಬಹುದಾಗಿದೆ ಎಂದು ಸಹ ಮಾಹಿತಿ ನೀಡಲಾಗಿದೆ.
ಕೇಂದ್ರ ಸರ್ಕಾರ ರೈಲ್ವೆ ಸಚಿವಾಲಯದ ಮೂಲಕ ದೇಶದ ಪ್ರಮುಖ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ರೈಲಿನ ಮೂಲಕ ಸಂಪರ್ಕಿಸಲು ಈ ಮಾದರಿ ಪ್ಯಾಕೇಜ್ ಆರಂಭಿಸಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು 'ಭಾರತ್ ಗೌರವ್ ರೈಲುಗಳನ್ನು' ಪರಿಚಯಿಸಲಾಗಿದೆ.
ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಐಆರ್‌ಸಿಟಿಸಿ ಜೊತೆ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಕರ್ನಾಟಕ-ಭಾರತ್ ಗೌರವ್ ಹೆಸರಿನಲ್ಲಿ ವಿವಿಧ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಅಲ್ಲದೇ ಈ ಪ್ಯಾಕೇಜ್‌ನಲ್ಲಿ ಸಂಚಾರ ನಡೆಸುವ ಯಾತ್ರಾರ್ಥಿಗಳಿಗೆ ಸಬ್ಸಿಡಿಯನ್ನು ಸಹ ಘೋಷಣೆ ಮಾಡಲಾಗಿದೆ.
ಈ ಪ್ಯಾಕೇಜ್‌ನಲ್ಲಿ ರೈಲು ಪ್ರಯಾಣಿಕರಿಗೆ ಎಲ್ಲಾ ಪ್ರಯಾಣ ಸಂಬಂಧಿತ ಅಗತ್ಯಗಳನ್ನು ನೋಡಿಕೊಳ್ಳುವ ಮೂಲಕ ರೈಲಿನ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲಾಗುತ್ತದೆ. ಪ್ರವಾಸದ ಪ್ಯಾಕೇಜ್ ಎಲ್ಲಾ ಪ್ರಯಾಣ ಸೌಲಭ್ಯಗಳನ್ನು (ರೈಲು ಮತ್ತು ರಸ್ತೆ ಸಾರಿಗೆ ಸೇರಿದಂತೆ), ವಸತಿ ಸೌಲಭ್ಯ, ಅಡುಗೆ ವ್ಯವಸ್ಥೆ ಸೇವೆಗಳನ್ನು ಒಳಗೊಂಡಿದೆ. ವೃತ್ತಿಪರ ಮತ್ತು ಸೌಹಾರ್ದ ಪ್ರವಾಸಿ ಗೈಡ್‌ಗಳು, ರೈಲಿನಲ್ಲಿ ಅಗತ್ಯ ಭದ್ರತೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.












Click it and Unblock the Notifications