Irpu Falls: ಲಕ್ಷ್ಮಣ ಸೃಷ್ಟಿಸಿದ "ಇರ್ಪು" ಜಲಪಾತದ ವೈಭವ ಸವಿಯಲು ಇದು ಸೂಕ್ತ ಸಮಯ, ತುಲುಪುವುದೇಗೆ?, ಇಲ್ಲಿದೆ ವಿವರ
ಮಡಿಕೇರಿ, ಜುಲೈ, 28: ಕೊಡಗಿನಲ್ಲಿ ಸುರಿದ ಮಳೆಗೆ ಬೆಟ್ಟಗುಡ್ಡಗಳ ನಡುವೆ ಹೆಬ್ಬಂಡೆಗಳ ಮೇಲೆ ಸೊರಗಿ ಹೋದ ಜಲಪಾತಗಳೆಲ್ಲವೂ ಹಠಕ್ಕೆ ಬಿದ್ದಂತೆ ಧುಮ್ಮಿಕ್ಕಲಾರಂಭಿಸಿವೆ. ಇಂತಹ ಜಲಧಾರೆಗಳ ಪೈಕಿ ಪ್ರವಾಸಿಗರ ಅಚ್ಚುಮೆಚ್ಚಿನ ಇರ್ಪು ಜಲಪಾತ ಈಗ ಪ್ರವಾಸಿಗರ ಕೇಂದ್ರ ಬಿಂದುವಾಗಿ ಗಮನಸೆಳೆಯುತ್ತಿದೆ.
ಇತರೆ ದಿನಗಳಲ್ಲಿ ಈ ಜಲಪಾತದತ್ತ ಬಂದು ಹೋದವರು ಇದೀಗ ಇಲ್ಲಿಗೆ ಬಂದರೆ ಮಳೆಯ ನಡುವೆ ಇದರ ವೈಭವ ನೋಡಿ ಮೈಮರೆಯುತ್ತಾರೆ. ದಟ್ಟವಾದ ಪ್ರಾಕೃತಿಕ ಸೌಂದರ್ಯದ ನಡುವೆ ಜಲಪಾತದತ್ತ ಹೆಜ್ಜೆ ಹಾಕುವುದೇ ಒಂಥರಾ ಮಜಾ.. ಎಲ್ಲೆಂದರಲ್ಲಿ ಚೀರುವ ಜೀರುಂಡೆ.. ಭೋರ್ಗರೆಯುವ ಜಲಧಾರೆ ಸದ್ದು ಜಲಪಾತದ ಕಡೆಗೆ ಹೆಜ್ಜೆ ಹಾಕುವಂತೆ ಮಾಡುತ್ತದೆ.

ಹಾಗೆ ನೋಡಿದರೆ ಧಾರಾಕಾರ ಮಳೆಗೆ ಮೈಕೈ ತುಂಬಿಕೊಂಡು ಹೆಬ್ಬಂಡೆಗಳ ಮೇಲೆ ಹಾಲ್ನೊರೆಯುಕ್ಕಿಸುತ್ತಾ ಭೋರ್ಗರೆಯುವ ಜಲಧಾರೆಗಳನ್ನು ವೀಕ್ಷಿಸಲು ಬಹಳಷ್ಟು ಪ್ರವಾಸಿಗರು ಇಷ್ಟಪಡುತ್ತಾರೆ. ಅಲ್ಲದೆ, ಈ ಜಲಪಾತವು ಅಪಾಯಕಾರಿಯಾಗಿರದೆ, ಉತ್ತಮವಾದ ರಸ್ತೆ ಸಂಪರ್ಕವಿರುವುದರಿಂದ ಹೆಚ್ಚಿನವರು ಇದರತ್ತ ಮುಖ ಮಾಡುತ್ತಾರೆ.
ಕೊಡಗಿನ ವೈಶಿಷ್ಟ್ಯಪೂರ್ಣ ಜಲಪಾತ
ಇನ್ನು ಕೊಡಗಿನಲ್ಲಿರುವ ಜಲಪಾತಗಳಿಗೆ ಹೋಲಿಸಿದರೆ 'ಇರ್ಪು ಜಲಪಾತ' ತನ್ನದೇ ಆದ ವೈಶಿಷ್ಟ್ಯತೆಯಿಂದ ಗಮನಸೆಳೆಯುತ್ತದೆ. ಈ ಜಲಪಾತ ಕಾಡಿನ ನಡುವೆ ಅತಿ ಎತ್ತರದ ಹೆಬ್ಬಂಡೆಗಳ ಮೇಲಿನಿಂದ ಎರಡು ಹಂತದಲ್ಲಿ ಧುಮುಕುತ್ತದೆ. ಅಷ್ಟೇ ಅಲ್ಲದೆ ಅಲ್ಲಿಂದ ಚಿಕ್ಕಾತಿ ಚಿಕ್ಕ ಜಲಪಾತಗಳಾಗಿ ಧುಮುಕುತ್ತಾ ಬಳಿಕ ನದಿಯಾಗಿ ಹರಿದು ಹೋಗುತ್ತದೆ. ಜಲಪಾತದ ಬಗ್ಗೆ ಹೇಳಬೇಕೆಂದರೆ ಇದು ಬರೀ ಜಲಪಾತವಲ್ಲ. ಕೊಡವರ ಪಾಲಿಗೆ ಪವಿತ್ರ ತಾಣವೂ ಹೌದು. ಇಲ್ಲಿನ ಜಲಧಾರೆಗೆ ತಲೆಕೊಟ್ಟು ಸ್ನಾನ ಮಾಡಿದರೆ ಇಷ್ಟಾರ್ಥಗಳು ನೆರವೇರುವ ನಂಬಿಕೆಯಿದೆ. ಹಾಗೆಂದು ಈಗ ಆ ಪ್ರಯತ್ನ ಯಾರೂ ಮಾಡಬಾರದು.
ಇರ್ಪುಗೆ ಬಂದರೆ ಇಲ್ಲಿರುವ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿ ಜಲಪಾತವಿದೆ. ಅದರತ್ತ ಹೆಜ್ಜೆ ಹಾಕುತ್ತಾ ಹೋದರೆ ಸುತ್ತಲ ನಿಸರ್ಗದ ಹಸಿರ ಮೋಹಕತೆ, ಹರಿದು ಹೋಗುವ ಲಕ್ಷ್ಮಣ ತೀರ್ಥ ನದಿಯ ಕುಲುಕುಲು ಸೌಂದರ್ಯ, ಜುಳುಜುಳು ನಿನಾದ ಹುಮ್ಮಸ್ಸು ನೀಡುತ್ತದೆ. ಪ್ರವೇಶದ್ವಾರದ ಮೂಲಕ ಮುನ್ನಡೆದರೆ ಪುಟ್ಟದಾದ ಸೇತುವೆ ಸಿಗುತ್ತದೆ. ಅದನ್ನು ದಾಟಿ ಏರು ಹಾದಿಯಲ್ಲಿ ಸಾಗಿದರೆ ದೂರದಿಂದಲೇ ಇರ್ಪು ಜಲಧಾರೆಯ ವೈಭವ ಕಾಣಿಸುತ್ತದೆ.
ಎರಡು ಹಂತದಲ್ಲಿ ಧುಮ್ಮಿಕ್ಕುವ ಜಲಧಾರೆ
ಸುಮಾರು 70 ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಬಳಿಕ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳಾಗುವ ಸುಂದರ ದೃಶ್ಯ ಕಣ್ಮನ ಸೆಳೆಯುತ್ತದೆ. ಸುಮಾರು 200 ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುವ ಜಲಧಾರೆಯ ಸೊಬಗನ್ನು ಸಮೀಪದಿಂದ ನೋಡುವುದೇ ಕಣ್ಣಿಗೆ ಹಬ್ಬ.
ಬೇರೆ ಜಲಪಾತಗಳು ಎಲ್ಲೋ ಒಂದು ಕಡೆ ಹುಟ್ಟಿ ಮತ್ತೆಲ್ಲೋ ಹರಿದು ಜಲಪಾತವನ್ನು ಸೃಷ್ಟಿಸಿದ್ದರೆ, ಆದರೆ ಇರ್ಪು ಜಲಪಾತ ಹಾಗಿಲ್ಲ. ಇದಕ್ಕೊಂದು ಪೌರಾಣಿಕ ಇತಿಹಾಸ ಥಳಕು ಹಾಕಿಕೊಂಡಿದೆ. ಜೊತೆಗೆ ಈ ಸ್ಥಳಕ್ಕೆ ಇರ್ಪು ಎಂಬ ಹೆಸರು ಹೇಗೆ ಬಂತು? ಎಂಬುದನ್ನು ನೋಡುತ್ತಾ ಹೋದರೆ ರಾಮಾಯಣ ಕಾಲದ ಕಥೆಯೊಂದು ಇಲ್ಲಿ ತೆರೆದುಕೊಳ್ಳುತ್ತದೆ.
ಇರ್ಪು ಜಲಪಾತ ಸೃಷ್ಟಿಯಾಗಿದ್ದು ಹೇಗೆ?
ಸೀತೆಯನ್ನು ಅರಸುತ್ತಾ ವಾನರರ ಸಹಿತ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಇದುವರೆಗೆ ಕೋಪ ಮಾಡಿಕೊಳ್ಳದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ "ಇರ್ಪು" ಹುಟ್ಟಿತೆಂದು ಹೇಳಲಾಗುತ್ತಿದೆ.
ಬಳಿಕ ಕೋಪ ತಣಿದು ಶಾಂತನಾದ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದನಂತೆ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು (ನಂದಿಸಲು) ಬಾಣಬಿಟ್ಟನಂತೆ. ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರು ಎಂಬ ಕಥೆಯೂ ಇದೆ.
ಜಲಪಾತಕ್ಕೆ ತಲುಪುವುದೇಗೆ?
ಇರ್ಪುವಿಗೆ ತೆರಳುವವರಿಗೆ ರಸ್ತೆ ಅಭಿವೃದ್ಧಿಯಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಿಲ್ಲ. ನಿಗದಿತ ಸಮಯಕ್ಕೆ ಬೆಳಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ಸು ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ. ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು.
ಮಡಿಕೇರಿಯಿಂದ 85 ಕಿಲೋ ಮೀಟರ್ ದೂರದಲ್ಲಿರುವ ಇರ್ಪು ಜಲಪಾತಕ್ಕೆ ಮಡಿಕೇರಿ ಕಡೆಯಿಂದ ಬರುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಲ್ಲದೆ, ಹುಣಸೂರು ನಾಗರಹೊಳೆ ಕುಟ್ಟದ ಮೂಲಕವೂ ಬರಬಹುದಾಗಿದೆ.












Click it and Unblock the Notifications