5 ಜ್ಯೋತಿರ್ಲಿಂಗಗಳ ದರ್ಶನಕ್ಕೆ ವಿಶೇಷ ಭಾರತ್ ಗೌರವ್ ರೈಲು ಸಂಚಾರ, ದಿನಾಂಕ, ದರಗಳನ್ನು ತಿಳಿಯಿರಿ
ನವದೆಹಲಿ, ಏಪ್ರಿಲ್, 03: ಐಆರ್‌ಸಿಟಿಸಿಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಅದೇ ರೀತಿ ಇದೀಗ ಮೇ ತಿಂಗಳಲ್ಲಿ ಕೋಲ್ಕತ್ತಾದಿಂದ ಭಾರತ್ ಗೌರವ್ ವಿಶೇಷ ಪ್ರವಾಸಿ ರೈಲು ಓಡಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ. ಐದು ಜ್ಯೋತಿರ್ಲಿಂಗಗಳ ದರ್ಶನಕ್ಕಾಗಿ ರೈಲು ಬಿಡಲು ನಿರ್ಧಿಸಿದ್ದು, ಈ ರೈಲು ಇದೇ ಮೇ 20ರಂದು ಕೋಲ್ಕತ್ತಾದಿಂದ ಹೊರಡಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ರೈಲಿನಲ್ಲಿ ಪ್ರವಾಸಕ್ಕಾಗಿ 700 ಆಸನಗಳನ್ನು ಕಲ್ಪಿಸಲಾಗಿದೆ ಎಂದು ಪೂರ್ವ ರೈಲ್ವೆ ಜನರಲ್ ಮ್ಯಾನೇಜರ್ ಅರುಣ್ ಅರೋರಾ ಅವರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಯಾತ್ರೆಯಲ್ಲಿ ಓಂಕಾರೇಶ್ವರ, ಮಹಾಕಾಳೇಶ್ವರ, ಸೋಮನಾಥ, ನಾಗೇಶ್ವರ ಮತ್ತು ತ್ರಯಂಬಕೇಶ್ವರಕ್ಕೆ ಭೇಟಿ ನೀಡಬಹುದಾಗಿದೆ. ಇದು 11 ರಾತ್ರಿ ಮತ್ತು 12 ಹಗಲುಗಳ ಕಾಲ ಪ್ರವಾಸ ಆಗಿದೆ.

ಜ್ಯೋತಿರ್ಲಿಂಗಗಳ ದರ್ಶನಕ್ಕೆ ಪ್ಯಾಕೇಜ್ ಘೋಷಣೆ
ಇನ್ನೊಬ್ಬ ಐಆರ್‌ಸಿಟಿಸಿಯ ಹಿರಿಯ ಅಧಿಕಾರಿಯ ಪ್ರಕಾರ, ಈ ಪ್ಯಾಕೇಜ್ ಅನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ರೈಲಿನಲ್ಲಿ 315 ಸ್ಲೀಪರ್ ಕ್ಲಾಸ್ ಆಸನಗಳು ಇರಲಿದ್ದು, ಇದರಲ್ಲಿ 297 ಸ್ಟ್ಯಾಂಡರ್ಡ್ ಸೀಟ್ (3 ಎಸಿ) ಮತ್ತು 44 ಕಂಫರ್ಟ್ ಸೀಟ್‌ಗಳು (2 ಎಸಿ) ಇರಲಿವೆ.
ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸಬೇಕೆಂದರೆ ಒಬ್ಬರಿಗೆ 20,060 ರೂಪಾಯಿ, 3 ಎಸಿ 31,800 ರೂಪಾಯಿ ಮತ್ತು 2 ಎಸಿಗೆ 41,600 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಹೋಟೆಲ್, ವಸತಿಗಳು, ಸಸ್ಯಾಹಾರಿ ಆಹಾರ ಮತ್ತು ರಸ್ತೆ ಸಾರಿಗೆ ಸೇರಿದಂತೆ ಇತರ ಸೌಕರ್ಯಗಳು ಒಳಗೊಂಡಿವೆ.
ಪುರಿ-ಕಾಶಿ-ಅಯೋಧ್ಯೆಗೆ ಪ್ರವಾಸ ಬೆಳೆಸಿ
ಇನ್ನು ಪುರಿ-ಕಾಶಿ-ಅಯೋಧ್ಯೆ ಪ್ರವಾಸಕ್ಕಾಗಿ ಭಾರತ್ ಗೌರವ್ ಟೂರಿಸ್ಟ್ ರೈಲನ್ನು ಪರಿಚಯಯಿಸಲಾಗಿತ್ತು. ಈ ರೈಲು ಪ್ರವಾಸ ಪ್ಯಾಕೇಜ್ ಸಿಕಂದರಾಬಾದ್‌ನಿಂದ ಏಪ್ರಿಲ್ 18 ರಂದು ಪ್ರಾರಂಭವಾಗುತ್ತದೆ. ಏಳು ರಾತ್ರಿಗಳು ಮತ್ತು ಎಂಟು ಹಗಲುಗಳ ಈ ಪ್ರವಾಸವು ಏಪ್ರಿಲ್ 25ರಂದು ಸಿಕಂದರಾಬಾದ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರಯಾಣದ ಸಮಯದಲ್ಲಿ ಸಿಕಂದರಾಬಾದ್, ಕಾಜಿಪೇಟ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ಸಮಲ್ಕೋಟ್, ವಿಶಾಖಪಟ್ಟಣಂ ಮತ್ತು ವಿಜಯನಗರಂ ನಿಲ್ದಾಣಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಊಟಿಗೆ ಪ್ರವಾಸ ಪ್ಯಾಕೇಜ್ ಘೋಷಣೆ
ಹಾಗೆಯೇ ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಕೈಗೆಟಕುವ ದರದಲ್ಲಿ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಬಂದಿದೆ. ಹೈದರಾಬಾದ್‌ನಿಂದ ಸ್ವರ್ಗದಂತಿರುವ ಊಟಿಯ ಗಿರಿಧಾಮಕ್ಕೆ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿತ್ತು. ಈ ಪ್ಯಾಕೇಜ್ ಪ್ರವಾಸಿಗರಿಗೆ ಊಟಿ ಮತ್ತು ಅಲ್ಲಿನ ಸುತ್ತಮುತ್ತಲಿನ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವನ್ನು ಕಲ್ಪಿಸಿತ್ತು.
ಹಾಗೆಯೇ ಪ್ರಯಾಣಿಕರು ಆರಾಮದಾಯಕವಾಗಿ ಯಾವುದೇ ತೊಂದರೆಯಿಲ್ಲದ ಪ್ರಯಾಣದ ಅನುಭವವನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ. ಮಾರ್ಚ್ 28 ರಂದು ಈ ಪ್ರವಾಸ ಆರಂಭವಾಗಿದ್ದು, ಇದು 6 ಹಗಲು ಮತ್ತು 5 ರಾತ್ರಿಯ ಪ್ರವಾಸವಾಗಿದೆ. ಪ್ರತಿ ವ್ಯಕ್ತಿಗೆ 9,280 ರೂಪಾಯಿ ವೆಚ್ಚ ಆಗಿದೆ.
ರೈಲಿನ ಮೂಲಕ ಪ್ರಯಾಣ ಆರಂಭವಾಗಿದ್ದು, ಇಲ್ಲಿ ಹೋಟೆಲ್, ವಸತಿ, ಕ್ಯಾಬ್ ಸೌಲಭ್ಯ, ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇದರೊಂದಿಗೆ ಊಟಿ ಮತ್ತು ಅದರ ಸುತ್ತಮುತ್ತಲಿನ ಆಕರ್ಷಣೀಯ ಪ್ರವಾಸಿ ತಾಣಗಳಿಗೂ ಸಹ ಭೇಟಿ ನೀಡಬಹುದಾಗಿದೆ.
ಇನ್ನು ಪ್ರಸಿದ್ಧ ಊಟಿ ಸರೋವರಕ್ಕೆ ಭೇಟಿ ನೀಡಿ ಆನಂದಿಸಬಹುದಾಗಿದೆ. ಪ್ರವಾಸಿಗರು ಅಲ್ಲಿ ಬೋಟಿಂಗ್ ಸೇರಿದಂತೆ ಇತರ ಜಲ ಕ್ರೀಡೆಗಳನ್ನು ಸಹ ಆನಂದಿಸಬಹುದಾಗಿದೆ. ಜೊತೆಗೆ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿರುವ ಬೆರಗುಗೊಳಿಸುವ ಬೊಟಾನಿಕಲ್ ಗಾರ್ಡನ್‌ಗಳಿಗೂ ತೆರಳಬಹುದಾಗಿದೆ.
ಇದರೊಂದಿಗೆ ದೊಡ್ಡಬೆಟ್ಟ ಶಿಖರಕ್ಕೆ ಭೇಟಿ ನೀಡುವುದು, ನೀಲಗಿರಿ ಬೆಟ್ಟಗಳಲ್ಲಿನ ಅತೀ ಎತ್ತರದ ಪ್ರದೇಶ ಮತ್ತು ಸುಂದರವಾದ ಪೈಕಾರ ಜಲಪಾತದ ಸೊಬಗನ್ನು ಸವಿಯಬಹುದಾಗಿದೆ.












Click it and Unblock the Notifications